ಮಂಡ್ಯ: ಕೆನರಾ ಬ್ಯಾಂಕ್ ಚಲನ್‌ನಲ್ಲಿ ಕನ್ನಡ ಭಾಷೆ ಇಲ್ಲ; ಬ್ಯಾಂಕ್ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ವಕೀಲರು

ಇದಕ್ಕೆ ಪ್ರತಿಯಾಗಿ ಕಚೇರಿ ಸಿಬ್ಬಂದಿ, ಬೇರೆ ರಾಜ್ಯಕ್ಕೆ ಹೋಗಬೇಕಿದ್ದ ಚಲನ್ ಮಿಸ್ ಆಗಿ ಇಲ್ಲಿಗೆ ಬಂದಿದೆ. ಆದಷ್ಟು ಬೇಗ ಕನ್ನಡದಲ್ಲಿ ಮುದ್ರಿಸಿದ ಚಲನ್‌‌ ತರಿಸುತ್ತೇವೆ ಎಂದು ತಿಳಿಸಿದ್ದಾರೆ.

ಮಂಡ್ಯ: ಕೆನರಾ ಬ್ಯಾಂಕ್ ಚಲನ್‌ನಲ್ಲಿ ಕನ್ನಡ ಭಾಷೆ ಇಲ್ಲ; ಬ್ಯಾಂಕ್ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ವಕೀಲರು
ಸಾಂದರ್ಭಿಕ ಚಿತ್ರ

ಮಂಡ್ಯ: ಕೆನರಾ ಬ್ಯಾಂಕ್ ಚಲನ್‌ನಲ್ಲಿ ಕನ್ನಡ ಭಾಷೆ ಬಳಸದ ಕಾರಣ ಕೆನರಾ ಬ್ಯಾಂಕ್ ಸಿಬ್ಬಂದಿಗೆ ವಕೀಲರು ತರಾಟೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆನರಾ ಬ್ಯಾಂಕ್​ನಲ್ಲಿ ನಡೆದಿದೆ. ವಕೀಲರಾದ ಶೋಭಾ, ಬಾಲರಾಜು ಎಂಬವರು ಚಲನ್‌ನಲ್ಲಿ ಕನ್ನಡ ಬಿಟ್ಟು ಒಡಿಶಾ, ಬೆಂಗಾಳಿ ಭಾಷೆ ಬಳಕೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಚೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಕನ್ನಡದಲ್ಲಿ ಚಲನ್ ಮುದ್ರಿಸುವಂತೆ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಚೇರಿ ಸಿಬ್ಬಂದಿ, ಬೇರೆ ರಾಜ್ಯಕ್ಕೆ ಹೋಗಬೇಕಿದ್ದ ಚಲನ್ ಮಿಸ್ ಆಗಿ ಇಲ್ಲಿಗೆ ಬಂದಿದೆ. ಆದಷ್ಟು ಬೇಗ ಕನ್ನಡದಲ್ಲಿ ಮುದ್ರಿಸಿದ ಚಲನ್‌‌ ತರಿಸುತ್ತೇವೆ ಎಂದು ತಿಳಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯಿಂದ ಬೇಜವಬ್ದಾರಿಯಾಗಿ ಸಮರ್ಥನೆ ಕೇಳಿಬಂದಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಕನ್ನಡದಲ್ಲಿ ಸೇವೆ, ಕನ್ನಡದ ಕಲಿಕೆ ಇಂಥಾ ವಿಚಾರಗಳ ಬಗ್ಗೆ ಆಗಾಗ ಕೆಲವಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ. ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಗೆ ಸೂಕ್ತ ಗೌರವ ತೋರಬೇಕು ಎಂಬ ನೆಲೆಯಲ್ಲಿ ವಾದ-ವಿವಾದ, ಹೋರಾಟಗಳು ಆಗುತ್ತಿರುತ್ತವೆ. ಇತ್ತೀಚೆಗೆ ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕೆಯ ಬಗ್ಗೆ ಗೊಂದಲ ಉಂಟಾಗಿತ್ತು. ಅದಕ್ಕೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸ್ಪಷ್ಟನೆ ನೀಡಿದ್ದರು.

ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಮೊಟಕುಗೊಳಿಸುವ ಯಾವುದೇ ಚಿಂತನೆ ಅಥವಾ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದರು. ಗುರುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ಥಳೀಯ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮನ್ನಣೆ ನೀಡಿ ಆ ಭಾಷೆಗಳಲ್ಲೇ ವೃತ್ತಿಪರ ಶಿಕ್ಷಣ ಸೇರಿ ಎಲ್ಲ ವಿಭಾಗದ ಉನ್ನತ ಶಿಕ್ಷಣವನ್ನು ಬೋಧಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಈ ಅಂಶಕ್ಕೆ ಶಿಕ್ಷಣ ನೀತಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದ್ದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಪದವಿ ಶಿಕ್ಷಣ ಸಂರಚನೆ ಹೀಗಿರುತ್ತದೆ. ಮೂರು ವರ್ಷ ವ್ಯಾಸಂಗ ಮಾಡಿದರೆ ಪದವಿ ಮುಗಿಯುತ್ತದೆ. ನಾಲ್ಕು ವರ್ಷ ಓದಿದರೆ ಅದನ್ನು ಡಿಗ್ರಿ ಆನರ್ಸ್‌ ಎಂದು ಪರಿಗಣಿಸಲಾಗುತ್ತದೆ, ಮತ್ತೂ ಐದು ವರ್ಷ ವ್ಯಾಸಂಗ ಮಾಡಿದರೆ ಸ್ನಾತಕೋತ್ತರ ಪದವಿಯೇ ಪೂರ್ಣಗೊಳಿಸಿದಂತೆ ಆಗುತ್ತದೆ. ಇದು ಪೂರ್ವ ವ್ಯವಸ್ಥೆಯ ಸುಧಾರಣಾ ಕ್ರಮವಷ್ಟೇ ಎಂದು ಡಿಸಿಎಂ ವಿವರಿಸಿದ್ದರು.

ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಜನ್ಮದಿನಕ್ಕೆ ಕನ್ನಡದಲ್ಲೇ ಪತ್ರ ಬರೆದು ಹಾರೈಸಿದ ಪ್ರಧಾನಿ ಮೋದಿ

ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಮೊಟಕುಗೊಳಿಸುವುದಿಲ್ಲ: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ ಸ್ಪಷ್ಟನೆ