ಕಾವೇರಿ ಕಣಿವೆಯಲ್ಲಿ ಮಳೆಯಾದರೂ ನೀರು ಬಿಡದಿರಲು ನಿರ್ಧರಿಸಿದ ಸರ್ಕಾರ! ಸಚಿವರ ಶಾಕಿಂಗ್ ಹೇಳಿಕೆಯಿಂದ ರೈತರು ಕಂಗಾಲು

| Updated By: Ganapathi Sharma

Updated on: Jul 02, 2024 | 9:46 AM

ಈ ವರ್ಷ ಕರ್ನಾಟಕದಲ್ಲಿ ಉತ್ತಮವಾಗಿ ಮುಂಗಾರು ಮಳೆಯೇನೋ ಸುರಿಯುತ್ತಿದೆ. ಆದರೆ, ಮಂಡ್ಯ ಜಿಲ್ಲೆಯ ರೈತರ ಸಂಕಷ್ಟ ಮಾತ್ರ ತಪ್ಪಿಲ್ಲ. ಇದಕ್ಕೆ ಕಾರಣ ಕೆಆರ್​​ಎಸ್ ಜಲಾಶಯ ನಿರೀಕ್ಷಿತ ಪ್ರಮಾಣದಲ್ಲಿ ಭರ್ತಿಯಾಗದೇ ಇರುವುದು. ಈಗ ಡ್ಯಾಂನಲ್ಲಿ ನೀರು ಎಷ್ಟಿದೆ? ಮಳೆಯಾದರೂ ರೈತರಿಗೆ ನೀರು ಬಿಡದೇ ಇರಲು ಸರ್ಕಾರ ನಿರ್ಧರಿಸಿದ್ದೇಕೆ? ವಿವರ ಇಲ್ಲಿದೆ.

ಕಾವೇರಿ ಕಣಿವೆಯಲ್ಲಿ ಮಳೆಯಾದರೂ ನೀರು ಬಿಡದಿರಲು ನಿರ್ಧರಿಸಿದ ಸರ್ಕಾರ! ಸಚಿವರ ಶಾಕಿಂಗ್ ಹೇಳಿಕೆಯಿಂದ ರೈತರು ಕಂಗಾಲು
ಕೆಆರ್​​ಎಸ್ ಜಲಾಶಯ
Follow us on

ಮಂಡ್ಯ, ಜುಲೈ 2: ಕೆಆರ್​​ಎಸ್ ಜಲಾಶಯ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. ಮಂಡ್ಯದಲ್ಲಿ ಇದೇ ಜಲಾಯಶದ ನೀರನ್ನು ನಾಲೆಗಳಿಗೆ ಹರಿಸಲಾಗುತ್ತದೆ. ಅದನ್ನು ಬಳಿಸಿ ಜಿಲ್ಲೆಯ ಲಕ್ಷಾಂತರ ರೈತರು ಬೆಳೆ ಬೆಳೆಯುತ್ತಾರೆ. ಆದರೆ ಈ ಬಾರಿ ಇದುವರೆಗೂ ನಾಲೆಗಳಿಗೆ ನೀರು ಹರಿಸಿಲ್ಲ. ಜೊತೆಗೆ ಕೆಆರ್​​ಎಸ್ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬರದೇ ಇದ್ದರೆ ನಾಲೆಗೆ ನೀರು ಹರಿಸುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಇದು ಜಿಲ್ಲೆಯ ರೈತರ ಆತಂಕಕ್ಕೂ ಕೂಡ ಕಾರಣವಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಯಶವನ್ನ ನಂಬಿಕೊಂಡು ಜಿಲ್ಲೆಯ ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈ ಬಾರಿ ಜೂನ್ ತಿಂಗಳು ಕಳೆದ ಜುಲೈ ಆರಂಭವಾದರೂ ಕೆಆರ್​​​ಎಸ್ ಜಲಾಶಯ ನೂರು ಅಡಿ ಕೂಡ ಭರ್ತಿಯಾಗಿಲ್ಲ. ಹೀಗಾಗಿ ಜಿಲ್ಲೆಯ ರೈತರಿಗೆ ಆತಂಕ ಕಾಡುತ್ತಿದೆ. ಅಂದಹಾಗೆ ಪ್ರತಿವರ್ಷ ಕೆಆರ್​​​ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಜಿಲ್ಲೆಯ ರೈತರು ಭತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯುತ್ತಾರೆ. ಆದರೆ ಕಳೆದ ಬಾರಿ ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಬೇಸಿಗೆ ಬೆಳೆಗೆ ನೀರು ಕೊಡಲಿಲ್ಲ. ಹೀಗಾಗಿ ಜಿಲ್ಲೆಯ ರೈತರು ಬೇಸಿಗೆ ಬೆಳೆಯನ್ನ ಬೆಳೆದಿಲ್ಲ. ಈ ಬಾರಿ ಜಲಾಶಯ ಭರ್ತಿಯಾಗಿ ನಾಲೆಗಳಿಗೆ ನೀರು ಹರಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಶಾಕ್ ನೀಡಿದೆ.

ಜಲಾಶಯ ನೂರು ಅಡಿ ಭರ್ತಿಯಾದ ನಂತರ ಕುಡಿಯಲು ಮಾತ್ರ ನೀರು ಬಿಡಲಾಗುತ್ತದೆ. 110 ಅಡಿ ಭರ್ತಿಯಾದರೆ ಮಾತ್ರ ಬೆಳೆಗಳನ್ನು ಬೆಳೆಯಲು ನೀರು ಬಿಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಕೆಆರ್​​​ಎಸ್ ಜಲಾಶಯದಲ್ಲಿ ಈಗೆಷ್ಟಿದೆ ನೀರು?

ಅಂದಹಾಗೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​​​ಎಸ್ ಜಲಾಶಯ 124.80 ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ ಜಲಾಶಯದಲ್ಲಿ 95.50 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ನೂರು ಅಡಿ ತಲುಪಲು ಇನ್ನೂ ಕೆಲ ದಿನಗಳು ಬೇಕಾಗಲಿದೆ. ಪ್ರತಿವರ್ಷ 110 ಅಡಿ ಜಲಾಶಯ ತುಂಬಿದ ನಂತರ ರೈತರ ಬೆಳೆಗಳಿಗೆ ನೀರು ಹರಿಸಲಾಗುತ್ತದೆ.

ನೀರು ಬಿಡದೇ ಇರಲು ಕಾರಣವೇನು?

ಈಗಿರುವ ನೀರಿನ ಪ್ರಮಾಣದಲ್ಲಿ ಬೆಳೆಗಳಿಗೆ ನೀರು ಕೊಟ್ಟರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗಬಹುದು ಎಂಬುದು ಸರ್ಕಾರದ ಆತಂಕ. ಹೀಗಾಗಿ ಜಲಾಶಯದ ಭರ್ತಿ, ಒಳಹರಿವು ನೋಡಿಕೊಂಡು ನಾಲೆಗಳಿಗೆ ನೀರು ಹರಿಸಲು ತೀರ್ಮಾನ ಮಾಡಿದೆ. ಇದು ಈ ಬಾರಿ ಕೂಡ ರೈತರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಆದರೆ ವಿರೋಧ ಪಕ್ಷದವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ರಾಜಕಾರಣ ಮಾಡುವುದನ್ನ ಬಿಟ್ಟು ನಾಲೆಗಳಿಗೆ ನೀರು ಹರಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಡೆಂಗ್ಯೂ ಹೆಚ್ಚಳ: ಎರಡು ತಿಂಗಳಲ್ಲಿ 150ಕ್ಕೂ ಹೆಚ್ಚು ಕೇಸ್ ಪತ್ತೆ, ಫ್ರಿಡ್ಜ್​ಗಳಿಂದ ಅಪಾಯ

ಒಟ್ಟಾರೆ ನೀರಿಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಈ ಬಾರಿ ಕೂಡ ಇದುವರೆಗೂ ಜಲಾಶಯ ಭರ್ತಿಯಾಗಿಲ್ಲ. ಹೀಗಾಗಿ ನಾಲೆಗಳಿಗೂ ನೀರು ಹರಿಯದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಬಂದು ನಾಲೆಗಳಿಗೆ ನೀರು ಹರಿದು ರೈತರಿಗೆ ವರದಾನ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 am, Tue, 2 July 24