ಮಂಡ್ಯ: ಶೋಕಿಗಾಗಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡ ಖತರ್ನಾಕ್ ಕಳ್ಳರು ಅಂದರ್!
ಮಂಡ್ಯದ ಕಿರುಗಾವಲು ಪೊಲೀಸರು ಕುಖ್ಯಾತ ಸರಗಳ್ಳರು ಹಾಗೂ ಮನೆಗಳ್ಳರನ್ನು ಬಂಧಿಸಿದ್ದಾರೆ. ಕೂಲಿಕಾರರೆಂದು ನಟಿಸಿ, ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇವರು, 30ಕ್ಕೂ ಹೆಚ್ಚು ಕಳ್ಳತನದ ಪ್ರಕರಣದಡಿ ಜೈಲಿಗರ ಹೋಗಿ ಬಂದಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ಲಕ್ಷಗಟ್ಟಲೆ ಬೆಲೆಬಾಳುವ ಚಿನ್ನ, ಬೆಳ್ಳಿ ಹಾಗೂ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಡ್ಯ, ಜನವರಿ 12: ಜಿಲ್ಲೆಯ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ತಾವು ಕೂಲಿ ಕೆಲಸದವರೆಂದು ಹೇಳಿಕೊಂಡು ತಿರುಗುತ್ತಿದ್ದ ಬಂಧಿತರು, ಈ ಹಿಂದೆ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದರು. ಶಿಕ್ಷೆ ಪಡೆದು ಹೊರಬಂದರೂ ಬುದ್ಧಿ ಕಲಿಯದ ಇವರು ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದರು.
ಕೂಲಿಕಾರರೆಂದು ಹೇಳಿಕೊಂಡು ಕಳ್ಳತನ
ಮೈಸೂರಿನ ಸದ್ಧಾಂ ಹುಸೇನ್ ಹಾಗೂ ಸೈಯದ್ ಅಯೂಬ್ ಬಂಧಿತ ಆರೋಪಿಗಳಾಗಿದ್ದು, ಇವರ ಕಳ್ಳತನ ಹಿಸ್ಟರಿ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಬಂಧಿತ ಆರೋಪಿಗಳು ಕೂಲಿ ಕೆಲಸ ಮಾಡುವುದಾಗಿ ಹೇಳಿಕೊಂಡು ಸಂಚರಿಸುತ್ತಿದ್ದರೂ, ವಾಸ್ತವದಲ್ಲಿ ಶೋಕಿಗಾಗಿ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದರು. ಇತ್ತೀಚೆಗೆ ಕಿರುಗಾವಲು ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ್ದರು. ಇದೇ ಪ್ರಕರಣದ ತನಿಖೆ ವೇಳೆ ಕೆಲ ಮಹತ್ವದ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದು, ವಿಚಾರಣೆ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗಿವೆ.
ಒಂಟಿ ಮಹಿಳೆಯರೇ ಟಾರ್ಗೆಟ್!
ಈ ಹಿಂದೆ ಬರೋಬ್ಬರಿ 38 ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿ ಹೊರಬಂದಿದ್ದರೂ ಬುದ್ಧಿ ಕಲಿಯದೇ ಮತ್ತೆ ಕಳ್ಳತನಕ್ಕೆ ಇಳಿದಿರುವುದು ಬೆಳಕಿಗೆ ಬಂದಿದೆ. 2025ರಲ್ಲಿಯೇ 8 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಮಂಡ್ಯ ಮಾತ್ರವಲ್ಲದೇ ಮೈಸೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿಯೂ ಕಳ್ಳತನ ನಡೆಸಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ವಿಶೇಷವಾಗಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಇವರು, ಮಹಿಳೆಯರ ಕುತ್ತಿಗೆಯಿಂದ ಸರ ಎಗರಿಸುವುದರೊಂದಿಗೆ ಮನೆಗಳಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆಗಳ್ಳತನ ಮಾಡುತ್ತಿದ್ದರು. ಇದೀಗ ಕಳ್ಳರನ್ನು ಬಂಧಿಸಿರುವ ಪೊಲೀಸರು ಅವರಿಂದ 31.98 ಲಕ್ಷ ರೂ. ಮೌಲ್ಯದ 253 ಗ್ರಾಂ ಚಿನ್ನ, 17 ಗ್ರಾಂ ಬೆಳ್ಳಿ ಹಾಗೂ ಪಲ್ಸರ್ ಮತ್ತು ಆಕ್ಸಿಸ್ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.