ಮೂರೇ ದಿನಕ್ಕೆ ಮದುವೆ ಮುರಿದ ಪೊಲೀಸ್: ತವರು ಮನೆಗೆ ಹೋದ ಯುವತಿ ಮರಳಿ ಬರಲೇ ಇಲ್ಲ

ಮನೆಗೆ ಮರಳಿದ ಯುವತಿ ಪೋನ್​ನಲ್ಲಿ ತೇಜಸ್ ಜೊತೆಗೆ ಮಾತನಾಡಿದ್ದು, ತಾನು ಹೆತ್ತವರಿಂದ ಅನುಭವಿಸುತ್ತಿರುವ ನೋವನ್ನ ಹೇಳಿಕೊಂಡಿದ್ದಾಳೆ. ಅಲ್ಲದೆ, ಹೇಗಾದರೂ ಮಾಡಿ ತನ್ನನ್ನ ಕರೆದುಕೊಂಡು ಹೋಗು ಎಂದು ಗಂಡ ತೇಜಸ್‌ಗೆ ಮನವಿ ಮಾಡಿದ್ದಾಳೆ.

  • TV9 Web Team
  • Published On - 17:38 PM, 27 Feb 2021
ಮೂರೇ ದಿನಕ್ಕೆ ಮದುವೆ ಮುರಿದ ಪೊಲೀಸ್: ತವರು ಮನೆಗೆ ಹೋದ ಯುವತಿ ಮರಳಿ ಬರಲೇ ಇಲ್ಲ
ತೇಜಸ್ ಮತ್ತು ಚೈತನ್ಯ

ಮಂಡ್ಯ: ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಈಗ ಮಂಡ್ಯದ ಪೊಲೀಸರೇ ವಿಲನ್‌ ಆಗಿದ್ದಾರಾ ಎನ್ನುವ ಅನುಮಾನ ಕೇಳಿ ಬಂದಿದೆ. ಜಿಲ್ಲೆಯ ಕಲ್ಲಹಳ್ಳಿ ಬಡಾವಣೆಯ 14 ನೇ ಕ್ರಾಸ್ ನಿವಾಸಿ ತೇಜಸ್ ಲಕ್ಷ್ಮೀನಾರಾಯಣರಾವ್ ಹಾಗೂ ಪದ್ಮಾವತಿ ಎಂಬ ದಂಪತಿಯ ಒಬ್ಬನೇ ಮಗ. ಈತ ಕಳೆದ ಎರಡು ವರ್ಷಗಳಿಂದ ಕುಣಿಗಲ್‍ ಬಳಿಯ ವಾನಗೆರೆ ಗ್ರಾಮದ ಚೈತನ್ಯ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ.

ಬೇರೆ ಬೇರೆ ಜಾತಿಗೆ ಸೇರಿದ ಇಬ್ಬರ ಪ್ರೀತಿಗೆ ತೇಜಸ್ ಮನೆಯಲ್ಲಿ ಒಪ್ಪಿದ್ದರೂ, ಯುವತಿಯ ಮನೆಯವರು ಒಪ್ಪಿಗೆ ಸೂಚಿಸಿರಲಿಲ್ಲ. ಇದಕ್ಕೆ ಕಾರಣ ತೇಜಸ್ ಬ್ರಾಹ್ಮಣ ಸಮುದಾಯದವನಾದ್ರೆ, ಚೈತನ್ಯ ಒಕ್ಕಲಿಗ ಸಮುದಾಯದವಳು. ಇಷ್ಟೇ ಅಲ್ಲ ಚೈತನ್ಯಳ ಮನೆಯವರು ಆಕೆಗೆ ಬೇರೆ ಕಡೆ ಸಂಬಂಧ ಕೂಡ ನೋಡಿದ್ದು, ಇದೇ ತಿಂಗಳ 15 ರಂದು ನಿಶ್ಚಿತಾರ್ಥ ಏರ್ಪಡಿಸಿದ್ದರು.ಈ ವಿಚಾರ ತಿಳಿದ ಚೈತನ್ಯ ಫೆಬ್ರವರಿ 14 ರ ರಾತ್ರಿಯೇ ಮಂಡ್ಯಗೆ ಬಂದು, ಫೆಬ್ರವರಿ 15 ರಂದು ಮಂಡ್ಯದ ಚಾಮುಂಡೇಶ್ವರಿ ದೇವಾಲಯದಲ್ಲಿ ಸರಳವಾಗಿ ತೇಜಸ್‌ನೊಂದಿಗೆ ಮದುವೆಯಾಗಿದ್ದಳು.

ನಂತರ ಫೆಬ್ರವರಿ 16 ರಂದು ಮದುವೆಯನ್ನ ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರಾರ್ ಮಾಡಿಸಿಕೊಂಡಿದ್ದರು. ಇದಾದ ನಂತರ ಹೊಸ ಬಾಳಿನ ಹೊಸ ಹೊಸ ಕನಸುಗಳೊಂದಿಗೆ ಜೀವನ ನಡೆಸುತ್ತಿದ್ದ ಈ ಪ್ರೇಮಪಕ್ಷಿಗಳ ಬಾಳಲ್ಲಿ ಅಡ್ಡವಾಗಿ ಬಂದಿದ್ದು, ಮಂಡ್ಯ ಪಶ್ಚಿಮ ಠಾಣಾ ಪೊಲೀಸ್‌ರು. ಫೆಬ್ರವರಿ 18 ರಂದು ಚೈತನ್ಯಳ ಹೆತ್ತವರು ಮಂಡ್ಯದ ಪಶ್ಚಿಮ ಠಾಣೆಯ ಪೊಲೀಸರ ಮೊರೆ ಹೋಗಿದ್ದರು. ಆ ವೇಳೆ ಇಬ್ಬರನ್ನೂ ಠಾಣೆಗೆ ಕರೆಯಿಸಿದ ಪೊಲೀಸರು ಯುವತಿಗೆ ಇಷ್ಟವಿಲ್ಲದಿದ್ದರೂ ಆಕೆಯ ಹೆತ್ತವರ ಜೊತೆಗೆ ಕಳಿಸಿದ್ದಾರೆ.

Mandya marriage

ಮೂರು ದಿನದಲ್ಲಿ ದೂರವಾದ ಜೋಡಿ ಹಕ್ಕಿಗಳು

ಇಷ್ಟೇ ಅಲ್ಲ ಒಂದು ವಾರ ನಮ್ಮ ಮನೆಗೆ ಕರೆದೊಯ್ದು ನಾವೇ ಮುಂದೆ ನಿಂತು ಇಬ್ಬರ ಮದುವೆ ಮಾಡುತ್ತೇವೆ ಎಂದು ನಂಬಿಸಿದ್ದಾರೆ. ಆಗಲೂ ಯುವತಿ ಒಪ್ಪದಿದ್ದಾಗ ಮಂಡ್ಯದ ಪಶ್ಚಿಮ ಠಾಣೆ ಸಬ್ ಇನ್ಸ್ ಪೆಕ್ಟರ್ ವೆಂಕಟೇಶ್, ಏನೂ ಆಗಲ್ಲ ಹೋಗಮ್ಮ ಎಂದು ಆಕೆಯನ್ನ ನಂಬಿಸಿ ಆಕೆಯ ಹೆತ್ತವರ ಜೊತೆ ಕಳುಹಿಸಿಕೊಟ್ಟಿದ್ದಾರೆ. ಹೀಗೆ ಚೈತನ್ಯಳನ್ನ ನಂಬಿಸಿ ಕರೆದುಕೊಂಡು ಹೋದ ಆಕೆಯ ಹೆತ್ತವರು ಎರಡೇ ದಿನಗಳಲ್ಲಿ ತಮ್ಮ ನಿಜ ಸ್ವರೂಪ ತೋರಿಸಿದ್ದಾರೆ.

ಅಂದು ಯುವತಿಗೆ ಇಷ್ಟವಿಲ್ಲದಿದ್ದರೂ ಆಕೆಯನ್ನ ಹೆತ್ತವರ ಜೊತೆಗೆ ಪೊಲೀಸರೇ ಕಳುಹಿಸಿಕೊಟ್ಟಿದ್ದಾರೆ. ಒಂದು ವಾರದಲ್ಲಿ ನಾವೇ ಮದುವೆ ಮಾಡುತ್ತೇವೆ ಎಂದು ನಂಬಿಸಿ ಕರೆದೊಯ್ದ, ಚೈತನ್ಯಳ ತಂದೆ ಗಂಗಾಬೈರಯ್ಯ ಹಾಗೂ ತಾಯಿ ರತ್ನ, ಎರಡು ದಿನವಷ್ಟೇ ತೇಜಸ್ ಜೊತೆಗೆ ಮಾತನಾಡಲು ಚೈತನ್ಯಳಿಗೆ ಅವಕಾಶ ನೀಡಿದ್ದಾರೆ. ನಂತರ ಚೈತನ್ಯಳ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೆ ತೇಜಸ್ ಕಟ್ಟಿದ್ದ ತಾಳಿ ಕಿತ್ತು ಹಾಕಿ ಇನ್ನೊಂದು ಮದುವೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನೆಗೆ ಮರಳಿದ ಯುವತಿ ಪೋನ್​ನಲ್ಲಿ ತೇಜಸ್ ಜೊತೆಗೆ ಮಾತನಾಡಿದ್ದು, ತಾನು ಹೆತ್ತವರಿಂದ ಅನುಭವಿಸುತ್ತಿರುವ ನೋವನ್ನ ಹೇಳಿಕೊಂಡಿದ್ದಾಳೆ. ಅಲ್ಲದೆ, ಹೇಗಾದರೂ ಮಾಡಿ ತನ್ನನ್ನ ಕರೆದುಕೊಂಡು ಹೋಗು ಎಂದು ಗಂಡ ತೇಜಸ್‌ಗೆ ಮನವಿ ಮಾಡಿದ್ದಾಳೆ. ಹೀಗಾಗಿ ತೇಜಸ್ ತನ್ನ ಹೆಂಡತಿಯೊಂದಿಗೆ ಮಾತನಾಡಲು ಮುಂದಾದಾಗ ಆಕೆಯ ಹೆತ್ತವರು ತೇಜಸ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ನಡುವೆ ಮಂಡ್ಯ ಪಶ್ಚಿಮ ಠಾಣಾ ಪೊಲೀಸರ ವಿರುದ್ಧ ದೂರು ನೀಡಲು ಮಂಡ್ಯ ಎಸ್‌ಪಿ ಕಚೇರಿಗೆ ಬಂದ ತೇಜಸ್ ಹಾಗೂ ತಂದೆ ಲಕ್ಷ್ಮಿನಾರಾಯಣರನ್ನ, ಮಂಡ್ಯದ ಪಶ್ಚಿಮ ಠಾಣೆ ಸಬ್‌ ಇನ್ಸ್‌ಪೆಕ್ಟರ್ ವೆಂಕಟೇಶ್​ ಗದರಿಸಿದ್ದಾರೆ ಎಂದು ತೇಜಸ್​ ಹೇಳಿದ್ದಾರೆ.

ಈ ಘಟನೆ ಬಗ್ಗೆ ಮಾತನಾಡಿದ ಮಂಡ್ಯದ ಪಶ್ಚಿಮ ಠಾಣೆ ಪಿಎಸ್​ಐ ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಹುಡುಗಿ ಇಚ್ಛೆಯಂತೆ ಅವಳ ಕುಟುಂಬದವರ ಜೊತೆಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ.

ಕಾನೂನಾತ್ಮಕವಾಗಿ ತಾನು ಪ್ರೀತಿಸಿದ ಯುವಕನ ಜೊತೆ ಮದುವೆಯಾಗಿದ್ದ ಯುವತಿಯನ್ನ, ಮಂಡ್ಯ ಪೊಲೀಸರು ಆಕೆಯ ಹೆತ್ತವರ ಜೊತೆ ಕಳುಹಿಸಿದ್ದು, ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಈಗ ಮಂಡ್ಯದ ಪೊಲೀಸರ ಬಗ್ಗೆಯೇ ಜಿಲ್ಲೆಯ ಜನರು ಹಗುರವಾಗಿ ಮಾತನಾಡುವಂತಾಗಿದೆ. ರಕ್ಷಕರಾಗಬೇಕಿದ್ದ ಮಂಡ್ಯದ ಪೊಲೀಸರು ಹೀಗೆ ತನಗೆ ಹಾಗೂ ತನ್ನ ಹೆಂಡತಿಗೆ ಅನ್ಯಾಯ ಮಾಡುತ್ತಿದ್ದಾರೆ. ನನಗೆ ನ್ಯಾಯ ಕೊಡಿ ಎಂದು ತೇಜಸ್‌ ಅಂಗಲಾಚುತ್ತಿದ್ದಾನೆ.

ಇದನ್ನೂ ಓದಿ: ಮಗಳ Love Marriageಗೆ ವಿರೋಧ; ಕೋಪದಿಂದ ಅಳಿಯನಿಗೆ ಸೇರಿದ 250 ಅಡಿಕೆ ಮರ ಕಡಿದು ಬಿಸಾಕಿದ ಪೋಷಕರು!