ಮಂಡ್ಯ ಮನೆಯಲ್ಲಿ ನೆತ್ತರ ಕಲೆಯ ಪ್ರಕರಣ; ಲ್ಯಾಬ್ ವರದಿ ಬಹಿರಂಗ
ಮಂಡ್ಯದ ಮದ್ದೂರು ತಾಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ಸತೀಶ್ ದಂಪತಿ ಮನೆಯಲ್ಲಿ ನಿಗೂಢವಾಗಿ ಕಾಣಿಸಿಕೊಂಡ ರಕ್ತದ ಕಲೆಗಳು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ. ಲ್ಯಾಬ್ ವರದಿಯಲ್ಲಿ ಅವು ಮನುಷ್ಯನ ರಕ್ತ ಎಂದು ದೃಢಪಟ್ಟಿದೆ. ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಹಾಲ್, ಬಾತ್‌ರೂಂ ಸೇರಿದಂತೆ ಮನೆಯ ಹಲವೆಡೆ ರಕ್ತದ ಕಲೆಗಳು ಕಂಡುಬಂದಿದ್ದು, ಇದು ಯಾರ ರಕ್ತ, ಹೇಗೆ ಬಂತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಮಂಡ್ಯ, ನವೆಂಬರ್ 1: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ಸತೀಶ್ ದಂಪತಿಯ ಮನೆಯಲ್ಲಿ ನಿಗೂಢ ರಕ್ತದ ಕಲೆಗಳು (Blood Stains) ಕಾಣಿಸಿಕೊಂಡಿರುವುದು ಗ್ರಾಮದೆಲ್ಲೆಡೆ ಆತಂಕ ಮೂಡಿಸಿತ್ತು. ರಕ್ತದ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಲ್ಯಾಬ್ ರಿಪೋರ್ಟ್ ಬಂದಿದ್ದು, ಮನೆಯ ತುಂಬಾ ಚೆಲ್ಲಾಡಿದ್ದು ಮನುಷ್ಯನ ರಕ್ತವೆಂದು ದೃಢಪಟ್ಟಿದೆ.
ಪ್ರಯೋಗಾಲಯದಿಂದ ಆಘಾತಕಾರಿ ಮಾಹಿತಿ
ದಂಪತಿ ಮನೆಯ ಹಾಲ್, ಬಾತ್‌ರೂಂ, ಟಿವಿ, ಫ್ಯಾನ್ ಎಲ್ಲೆಡೆ ರಕ್ತದ ಕಲೆಗಳು ಕಂಡುಬಂದಿದ್ದು, ಪೊಲೀಸರು ಮತ್ತು ಎಫ್‌ಎಸ್‌ಎಲ್ ಶ್ವಾನದಳ ಸ್ಥಳ ಪರಿಶೀಲನೆ ನಡೆಸಿದ್ದರು. ರಕ್ತದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಅದು ಮನುಷ್ಯನ ರಕ್ತವಾಗಿರುವುದು ದೃಢಪಟ್ಟಿದೆ. ಅಂತಿಮ ದೃಢೀಕರಣಕ್ಕಾಗಿ ಎಫ್‌ಎಸ್ಎಲ್ ವರದಿ ನಿರೀಕ್ಷಿಸಲಾಗುತ್ತಿದೆ. ಈ ವರದಿಯೀಗ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ರಕ್ತ ಮನೆಯಲ್ಲಿ ಹೇಗೆ ಹರಿಯಿತು, ಅದು ಯಾರ ರಕ್ತ ಎಂಬೆಲ್ಲಾ ಪ್ರಶ್ನೆಗಳು ಪೊಲೀಸರಿಗೆ ಕಾಡಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಗ್ರಾಮಸ್ಥರಲ್ಲಿ ಭಯ ಮತ್ತು ಕುತೂಹಲ ಮೂಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ನಿಜವಾದ ಸಂಗತಿ ಹೊರಬರುವುದು ಇನ್ನೂ ಕೆಲವು ದಿನಗಳು ಹಿಡಿಯುವ ನಿರೀಕ್ಷೆಯಿದೆ.
ಮಂಡ್ಯದ ಮನೆಯಲ್ಲಿ ರಕ್ತದ ಕಲೆ ಪ್ರಕರಣ ಹಿನ್ನೆಲೆ
ಸತೀಶ್ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಸೇರಿಸಿ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಸೋಮವಾರ ಬೆಳಿಗ್ಗೆ ಸತೀಶ್ ಅವರ ಪತ್ನಿ ಮನೆ ಸ್ವಚ್ಛಗೊಳಿಸಿ, ಉಪಹಾರ ತಯಾರಿಸಲು ಅಡುಗೆಮನೆಗೆ ತೆರಳಿದ್ದರು. ಕೆಲವೇ ಕ್ಷಣಗಳಲ್ಲಿ ಮನೆ ಹಾಲ್, ಬಾತ್‌ರೂಂ, ಟಿವಿ ಹಾಗೂ ಫ್ಯಾನ್‌ಗಳ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡವು. ಬೆಚ್ಚಿಬಿದ್ದ ದಂಪತಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ ಮಂಡ್ಯ: ನೆತ್ತರ ನಿಗೂಢತೆಗೆ ನಡುಗಿದ ದಂಪತಿ, ಮನೆಯಲ್ಲಿ ಎಲ್ಲಿ ನೋಡಿದರೂ ರಕ್ತದ ಕಲೆ!
ಘಟನೆಯ ಮಾಹಿತಿ ಆಧರಿಸಿ ಬೆಸಗರಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಎಫ್‌ಎಸ್‌ಎಲ್ ಹಾಗೂ ಶ್ವಾನದಳದ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಮನೆಯಲ್ಲಿ ಕಂಡುಬಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:37 am, Sat, 1 November 25



