ವಾತಾವರಣದ ಏರುಪೇರು ಹಾಗೂ ಕೀಟಬಾಧೆ; ಕೋಲಾರದ ಮಾವು ಬೆಳೆಗಾರರಲ್ಲಿ ಹೆಚ್ಚಿದ ಆತಂಕ
ಮಾವಿನ ತವರಲ್ಲಿ ಉಂಟಾಗಿರುವ ವಾತಾವರಣದಲ್ಲಿನ ಏರುಪೇರಿನ ಪರಿಣಾಮ ಈ ಬಾರಿ ಮಾವು ಬೆಳೆಗಾರರಿಗೆ ಈ ಬೆಳೆ ಜೂಜಾಟದಂತಾಗಿದೆ. ಅದೃಷ್ಟ ಇದ್ದವರ ತೋಟದಲ್ಲಿ ಹೂ ಬಿಟ್ಟಿದ್ದರೆ ಅದೃಷ್ಟ ಇಲ್ಲದವರ ತೋಟದಲ್ಲಿ ಹೂ ಇನ್ನು ಬಿಟ್ಟಿಲ್ಲ.
ಕೋಲಾರ: ಈಗಷ್ಟೇ ಮಾವಿನ ತವರಲ್ಲಿ ಮಾವಿನ ಶಕೆ ಆರಂಭವಾಗತೊಡಗಿದೆ. ಆದರೆ ವಸಂತಕಾಲದ ಸಂಭ್ರಮ ಆರಂಭದಲ್ಲಿ ಮಾವು ಬೆಳೆಗಾರರಿಗೆ ಸ್ವಲ್ಪ ಆತಂಕ ಶುರುವಾಗಿದೆ. ವಾತಾವರಣದ ಏರುಪೇರು ಹಾಗೂ ಕೀಟಬಾಧೆಯಿಂದ ಮಾವು ಬೆಳೆಗಾರರು ಭಯಗೊಂಡಿದ್ದಾರೆ. ಹೀಗಿದ್ದರೂ ಅಲ್ಲಲ್ಲಿ ಉತ್ತಮ ಹೂವು ಬಿಟ್ಟಿರುವುದು ಸಂತಸ ಮೂಡಿಸಿದೆ.
ಮಾವಿನ ತವರು ಕೋಲಾರದಲ್ಲಿ ಮಾವಿನ ಶಕೆ ಆರಂಭವಾಗತೊಡಗಿದ್ದು, ಭೂತಾಯಿಗೆ ತಳಿರು ತೋರಣಗಳಿಂದ ಸಿಂಗಾರ ಮಾಡಿದಂತೆ ಮಾವಿನ ತೋಟಗಳು ಕಾಣುತ್ತಿವೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಜಡಿಮಳೆ, ವಾತಾವರಣದ ಏರುಪೇರಿನ ಪರಿಣಾಮ ಮಾವಿನ ಮರಗಳು ಹೂ ಬಿಡುವುದು ತಡವಾಗಿದೆ. ಸದ್ಯ ಜಿಲ್ಲೆಯಾದ್ಯಂತ ಶೇ 40 ರಿಂದ 50 ರಷ್ಟು ಹೂ ಬಿಟ್ಟಿದ್ದು, ಕೆಲವು ಮಾವಿನ ಮರಗಳು ಚೆನ್ನಾಗಿ ಹೂವು ಬಿಟ್ಟಿದ್ದರೆ ಕೆಲವು ಮರಗಳಲ್ಲಿ ಇನ್ನೂ ಹೂವು ಬಿಟ್ಟಿಲ್ಲ. ಈ ಮೂಲಕ ಮಾವು ಬೆಳೆಗಾರರಿಗೆ ಆರಂಭದಲ್ಲೇ ಆತಂಕ ಎದುರಾಗಿದೆ. ಕೋಲಾರ ಜಿಲ್ಲೆಯಲ್ಲಿ 53,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಗುಣಮಟ್ಟದ ಮಾವಿನ ಹಣ್ಣುಗಳು ದೇಶದ ಹಾಗೂ ವಿಶ್ವದ ಮೂಲೆ ಮೂಲೆಗೆ ಸರಬರಾಜು ಆಗುತ್ತದೆ. ಇಂತಹ ಗುಣಮಟ್ಟದ ಮಾವು ಬೆಳೆಯುವ ಮಾವಿನ ತವರು ಶ್ರೀನಿವಾಸಪುರದಲ್ಲಿ ಈಗ ಆತಂಕ ಎದುರಾಗಿದ್ದು, ಜಿಗಿಹುಳ ಹಾಗೂ ಬೂದಿ ರೋಗ ಈ ಬಾರಿ ಮಾವನ್ನು ಕಾಡುವ ಆತಂಕ ರೈತರಲ್ಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿದೆ ಎನ್ನುವುದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಗಾಯತ್ರಿ ಅವರ ಅಭಿಪ್ರಾಯವಾಗಿದೆ.
ಒಟ್ಟಾರೆ ಮಾವಿನ ತವರಲ್ಲಿ ಉಂಟಾಗಿರುವ ವಾತಾವರಣದಲ್ಲಿನ ಏರುಪೇರಿನ ಪರಿಣಾಮ ಈ ಬಾರಿ ಮಾವು ಬೆಳೆಗಾರರಿಗೆ ಈ ಬೆಳೆ ಜೂಜಾಟದಂತಾಗಿದೆ. ಅದೃಷ್ಟ ಇದ್ದವರ ತೋಟದಲ್ಲಿ ಹೂ ಬಿಟ್ಟಿದ್ದರೆ ಅದೃಷ್ಟ ಇಲ್ಲದವರ ತೋಟದಲ್ಲಿ ಹೂ ಇನ್ನೂ ಬಿಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೀಟ ಬಾಧೆಯಂತಹ ರೋಗ ಭೀತಿ ಕೂಡ ಮಾವು ಬೆಳೆಗಾರರನ್ನು ಆತಂಕಕ್ಕೀಡು ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ: ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ: ಬೀದರ್ ಜಿಲ್ಲೆಯ ಮಾವಿನ ತೋಟದಲ್ಲಿ ಭರಪೂರ ಹೂವು
Published On - 3:31 pm, Wed, 17 February 21