ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಮುಸ್ತಫಾ ಪ್ಯಾಟಿ ಕೌರವ ಸಿನಿಮಾ ಖ್ಯಾತಿಯ ಬಿ.ಸಿ.ಪಾಟೀಲ್ರ ಅಪ್ಪಟ ಅಭಿಮಾನಿಯಾಗಿದ್ದು, ಬಿ.ಸಿ.ಪಾಟೀಲ್ರಿಗೆ ಸಚಿವ ಸ್ಥಾನ ಸಿಗಲಿ ಎಂದು ಗ್ರಾಮದಲ್ಲಿರುವ ಉಸ್ಮಾನ್ ಚಾವಲಿ ದರ್ಗಾಗೆ ಹರಕೆ ಹೊತ್ತಿದ್ದರು. ಹರಕೆ ತೀರಿದರೆ ಸಚಿವರಿಗೆ ಸಕ್ಕರೆಯಿಂದ ತುಲಾಭಾರ ಮಾಡುವುದಾಗಿ ಉಸ್ಮಾನ ಚಾವಲಿ ದರ್ಗಾದಲ್ಲಿ ಬೇಡಿಕೊಂಡಿದ್ದು, ಅದರಂತೆ ಬಿ.ಸಿ.ಪಾಟೀಲ್ರಿಗೆ ಸಚಿವ ಸ್ಥಾನ ಸಿಕ್ಕಿದೆ. ಕೃಷಿ ಖಾತೆ ಅಲಂಕರಿಸಿರುವ ಬಿ.ಸಿ ಪಾಟೀಲ್ರಿಗೆ ಆರತಿ ಬೆಳಗಿ, ತಲೆಗೆ ಪೇಟ ಹಾಕಿದ್ದು, ಮನೆಗೆ ಕರೆಸಿಕೊಂಡ ಅಭಿಮಾನಿ ಮುಸ್ತಫಾ ದೊಡ್ಡದಾದ ತಕ್ಕಡಿಯಲ್ಲಿ ಒಂದೆಡೆ ಸಕ್ಕರೆ ಚೀಲವಿಟ್ಟು, ಮತ್ತೊಂದೆಡೆ ಸಚಿವರನ್ನ ಕೂರಿಸಿ ತುಲಾಭಾರ ಮಾಡಿ ಹರಕೆ ತೀರಿಸಿದ್ದಾರೆ.
ಅಭಿಮಾನಿ ಮುಸ್ತಫಾ ಪ್ಯಾಟಿ ,ಬಿ.ಸಿ ಪಾಟೀಲ್ರ ಜೊತೆಗಿನ ಚಿತ್ರಣ
ಹಿರೇಕೆರೂರು ಕ್ಷೇತ್ರದಲ್ಲಿ ಒಮ್ಮೆಯೂ ನಿರಂತರವಾಗಿ ಎರಡು ಬಾರಿ ಶಾಸಕರಾದ ಉದಾಹರಣೆಗಳು ಇರಲಿಲ್ಲ. ಆದರೆ ಬಿ.ಸಿ.ಪಾಟೀಲ್ರು ಸತತವಾಗಿ ಎರಡು ಬಾರಿ ಶಾಸಕರಾದರೆ ಸಕ್ಕರೆ ತುಲಾಭಾರ ಮಾಡುವ ಹರಕೆ ಹೊತ್ತಿದ್ದೆ. ಅದರಲ್ಲೂ ಪಾಟೀಲ್ರು ಜಯ ಗಳಿಸಿದ್ದು, ಸತತ ಎರಡು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಇನ್ನು ಹಿರೇಕೆರೂರು ಕ್ಷೇತ್ರ ಸುಮಾರು ವರ್ಷಗಳಿಂದ ಸಚಿವ ಸ್ಥಾನದಿಂದ ವಂಚಿತವಾಗಿತ್ತು. ಹೀಗಾಗಿ ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕರೆ ಸಕ್ಕರೆಯಿಂದ ತುಲಾಭಾರ ಮಾಡುವುದಾಗಿ ದರ್ಗಾದಲ್ಲಿ ಹರಕೆ ಹೊತ್ತಿದ್ದೆ ಎಂದು ಪಾಟೀಲ್ರ ಅಭಿಮಾನಿ ಮುಸ್ತಫಾ ಪ್ಯಾಟಿ ಹೇಳಿದ್ದಾರೆ.
ಸಕ್ಕರೆ ತುಲಾಭಾರ
ಬಿ.ಸಿ.ಪಾಟೀಲ್ ಈಗ ಒಂದು ಕ್ವಿಂಟಲ್ ಐದು ಕೆ.ಜಿ. ಸಕ್ಕರೆ ತೂಕದಷ್ಟಿದ್ದಾರೆ!
ಬಿ.ಸಿ.ಪಾಟೀಲ್ರು ಈಗ ಒಂದು ಕ್ವಿಂಟಲ್ ಐದು ಕೆ.ಜಿ ತೂಕವಿದ್ದಾರೆ (105 KG). ಹೀಗಾಗಿ ಅವರ ತೂಕಕ್ಕೆ ಸಮನಾಗಿ ಒಂದು ಕ್ವಿಂಟಲ್ ಐದು ಕೆ.ಜಿ ಸಕ್ಕರೆಯಿಟ್ಟು ತುಲಾಭಾರ ಮಾಡಿದ್ದು, ಸಚಿವರು ಮನೆಗೆ ಬರುತ್ತಿದ್ದಂತೆ ಕುಟುಂಬದ ಮುಸ್ಲಿಂ ಸಂಪ್ರದಾಯದಂತೆ ಮಹಿಳೆಯರು ಆರತಿ ಬೆಳಗಿದ್ದಾರೆ. ನಂತರ ತಲೆಗೆ ಪೇಠ ತೊಡಿಸಿ, ಮಾಲೆ ಹಾಕಿ ತುಲಾಭಾರ ನೆರವೇರಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಬಿ.ಸಿ. ಪಾಟೀಲ್ರು ಅಭಿಮಾನಿ ತೋರಿಸಿದ ಪ್ರೀತಿಗೆ ನಾನು ಋಣಿ, ಜನರ ಪ್ರೀತಿ ಹೆಚ್ಚಾಗಿದೆ. ಇದರಿಂದ ಮೊದಲಿಗಿಂತ ಈಗ ತೂಕ ಹೆಚ್ಚಾಗಿದೆ ಎಂದು ಹೇಳಿದರು.
ರಾಜಕೀಯ ನಾಯಕರಿಗಾಗಿ ಅವರವರ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಹರಕೆ ಹೊತ್ತು, ಹರಕೆ ತೀರಿಸಿದರೆ ಸಚಿವ ಬಿ.ಸಿ.ಪಾಟೀಲ್ರ ಅಭಿಮಾನಿ ಸಕ್ಕರೆಯಿಂದ ತುಲಾಭಾರ ಮಾಡಿ ಹರಕೆ ತೀರಿಸಿದ್ದಾರೆ. ಸಕ್ಕರೆಗೆ ಸಮನಾಗಿ ತಕ್ಕಡಿಯಲ್ಲಿ ಕುಳಿತು ತುಲಾಭಾರ ಮಾಡಿಸಿಕೊಂಡ ಸಚಿವ ಪಾಟೀಲ್ ಅಭಿಮಾನಿಯ ಪ್ರೀತಿಗೆ ಸಂತಸ ವ್ಯಕ್ತಪಡಿಸಿದ್ದು, ಅಭಿಮಾನಿಯ ಕುಟುಂಬದವರು ಸಹ ತಮ್ಮ ನಾಯಕನಿಗೆ ಸಕ್ಕರೆ ತುಲಾಭಾರ ಮಾಡಿ ಖುಷಿ ಅನುಭವಿಸಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳಲ್ಲದೇ ಮತ್ತಿನ್ನೇನು? BC ಪಾಟೀಲ್ ಪರ ಮಗಳ ಬ್ಯಾಟಿಂಗ್