ಶಾಸಕ ನಾಗೇಂದ್ರ ಅವರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ಶಾಸಕ ಪ್ರೀತಮ್ ಗೌಡ
ಶಾಸಕ ನಾಗೇಂದ್ರ ಅವರಿಗೆ ಹಾಸನಾಂಬ ದೇವಿಯ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆ ಶಾಸಕ ಪ್ರೀತಮ್ ಗೌಡ ಅವರು ನಾಗೇಂದ್ರ ಅವರ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

ಹಾಸನ: ಭಾನುವಾರದಂದು ಹಾಸನಾಂಬ ದೇವಿಯ ದರ್ಶನಕ್ಕೆ ಮೈಸೂರಿನಿಂದ ಆಗಮಿಸಿದ್ದ ಶಾಸಕ ನಾಗೇಂದ್ರ ಅವರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಈ ಬಗ್ಗೆ ಶಾಸಕರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ ಶಾಸಕ ಪ್ರೀತಮ್ ಗೌಡ, ಕೆಲಸದ ಒತ್ತಡದಿಂದ ಅದಿಕಾರಿಗಳು ಒತ್ತಡ ತಡೆಯಲಾಗಿಲ್ಲ. ಯಾವುದೇ ಪಕ್ಷದ ಚುನಾಯಿತ ಪ್ರತಿನಿದಿ ಬಂದರೂ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತ ನೀಡಿದೆ. ನಿನ್ನೆ ಸಮನ್ವಯದ ಕೊರತೆಯಿಂದ ಸಮಸ್ಯೆ ಆಗಿದೆ. ನನ್ನ ಹಿರಿಯರು ಸಹೋದರ ಸಮಾನರಾದ ಅವರಿಗೆ ನಾನು ಎಲ್ಲರ ಮುಖೆನ ನಾನು ಕ್ಷಮೆ ಕೇಳುತ್ತೇನೆ. ನನಗೆ ಯಾವುದೇ ಈಗೋ ಇಲ್ಲ. ಯಾರು ಕೂಡ ತಪ್ಪು ಮಾಡಬೇಕೆಂದು ಮಾಡಲ್ಲ, ಆಕಸ್ಮಿಕವಾಗಿ ಈ ಘಟನೆ ಆಗಿದೆ. ಇದನ್ನ ಇಲ್ಲಿಗೆ ಮುಗಿಸೋಣ ಎಂದು ಹೇಳಿದರು.
ನಿನ್ನೆಯ ಘಟನೆಯಿಂದ ಕೆರಳಿದ ಶಾಸಕ ನಾಗೇಂದ್ರ ಅವರು ಎಎಸ್ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಯ ನಡುವೆ ಶಾಸಕ ಪ್ರೀತಮ್ ಗೌಡ ಅವರು ಶಾಸಕ ನಾಗೇಂದ್ರ ಅವರಿಗೆ ಹಾಸನಾಂಬ ದೇವಿಯ ದರ್ಶನವನ್ನು ಮಾಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಸಕ ನಾಗೇಂದ್ರ, ಕಾರ್ತಿಕ ಮಾಸದ ಅಮಾವಾಸ್ಯೆ ದಿನ ದೇವಿ ದರ್ಶನ ಚೆನ್ನಾಗಿ ಆಗಿದೆ, ಇದು ನಮ್ಮ ಸೌಭಾಗ್ಯ. ನನ್ನ ಆತ್ಮೀಯ ಸ್ನೇಹಿತ ಶಾಸಕ ಪ್ರೀತಂಗೌಡ ಅವರು ನನಗೆ ದೇವಿಯ ದರ್ಶನ ಮಾಡಿಸಿದ್ದಾರೆ ಎಂದರು.
ತಾಯಿ ಚಾಮುಂಡೇಶ್ವರಿಯಂತೆ ಹಾಸನಾಂಬೆ ನೋಡಲು ಹೆಚ್ಚಿನ ಭಕ್ತರು ಬರುತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ನಿನ್ನೆ ನಾನು ತಡವಾಗಿ ಬಂದಿದ್ದೆ, ಸಮಯ ನನಗೆ ಗೊತ್ತಾಗಲಿಲ್ಲ. ಪ್ರೀತಂಗೌಡ ಅವರಿಗೂ ನಾನು ಫೋನ್ ಮಾಡಿರಲಿಲ್ಲ. ಹಾಗಾಗಿ ಸಮಸ್ಯೆ ಆಯ್ತು. ನಾನು ಬಂದಾಗ ಐವತ್ತು ಜನ ಹೊರಗೆ ಇದ್ದರು, ಅವರನ್ನು ನನ್ನೊಟ್ಟಿಗೆ ಬಿಡಿ ಎಂದು ಕೇಳಿದೆ. ಅವರನ್ನು ಬಿಡದ ಕಾರಣ ನಾನೂ ಕೂಡ ವಾಪಸ್ ಹೋಗಿದ್ದೆ ಎಂದು ಹೇಳಿದ ಶಾಸಕ ನಾಗೇಂದ್ರ, ನಿನ್ನೆಯ ಘಟನೆಗೆ ವಿಷಾದ ವ್ಯಕ್ತಪಡಿಸಿದರು.
ಪ್ರೀತಂಗೌಡ ನನಗೆ ಸಹೋದರನ ಸಮಾನ, ನನಗೆ ತಮ್ಮ ಇದ್ದ ಹಾಗೆ. ನಾನು ಅವರಿಗೆ ವಿಭಾಗ ಪ್ರಭಾರಿ ಆಗಿದ್ದೆ. ನಾನು ಬಂದಾಗಲೆಲ್ಲಾ ನನಗೆ ಊಟ ಕೊಡಿಸುತ್ತಿದ್ದ ಗೆಳೆಯ. ಹಾಗಾಗಿ ಆತ್ಮೀಯತೆ ಇದೆ. ಅಣ್ಣ-ತಮ್ಮರಂತೆ ಹೆಚ್ಚು ಸಲುಗೆ ಇದೆ. ಹಾಗಾಗಿ ನಾನು ಅವನಿಗೆ ನಾನು ಏನು ಬೇಕಿದ್ದರೂ ಮಾತಾಡಬಹುದು, ಏನು ಬೇಕಾದರೂ ಕೇಳಬಹುದು. ಅವನಿಗು ನನಗೂ ಬೇರೆ ಏನು ವಿಚಾರಗಳು ಇಲ್ಲ. ನಮ್ಮ ರಾಜ್ಯ ಬಿಜೆಪಿಯಲ್ಲಿ ಇದೇ ರೀತಿಯ ಒಂದು ಒಳ್ಳೆ ತಂಡ ಇದೆ. ಅವನು ಶಾಸಕನಾಗಲು ಕೂಡ ನನ್ನ ಕೊಡುಗೆ ಇದೆ, ಇದನ್ನ ಅವರ ಎದುರೆ ನೇರವಾಗಿ ಹೇಳುತ್ತೇನೆ, ಅವನಿಗೆ ಟಿಕೇಟ್ ಕೊಡುವ ವಿಚಾರದಲ್ಲೂ ನಾನು ಹೋರಾಟ ಮಾಡಿದ್ದೇನೆ ಎಂದರು.
ನಿನ್ನೆ ದರ್ಶನಕ್ಕೆ ಬಂದಾಗ ಎಎಸ್ಪಿ ತಡೆದ ಬಗ್ಗೆ ಗೃಹ ಕಛೇರಿಗೆ ಮಾಹಿತಿ ನೀಡಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಅಧಿಕಾರಿಗಳು ಒತ್ತಡದಲ್ಲಿ ಇದ್ದರು, ಅವರಿಗೆ ಶಾಸಕರು ಯಾರು ಎಂದು ಗೊತ್ತಾಗಿಲ್ಲ. ಸಮನ್ವಯದ ಕೊರತೆಯಿಂದ ಹೀಗಾಯ್ತು. ಅದನ್ನ ಅಲ್ಲಿಗೇ ಬಿಡೋಣ, ಅವರೂ ಕೂಡ ನಮ್ಮ ಸರ್ಕಾರದ ಓರ್ವ ಅಧಿಕಾರಿ ಎಂದ ಶಾಸಕ ನಾಗೇಂದ್ರ ಹೇಳಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ