ಬೆಂಗಳೂರು: ವಿಧಾನಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರಗಳ (MLC Election) ಚುನಾವಣೆ ಹಿನ್ನಲೆ ಬಿಜೆಪಿ (BJP) ಜವಾಬ್ದಾರಿ ಹಂಚಿಕೆ ಕರ್ನಾಟಕದ7 ಸಚಿವರು, 3 ಶಾಸಕರು, 12 ಎಂಎಲ್ಸಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ. ಸಚಿವರಾದ ಗೋವಿಂದ ಕಾರಜೋಳ, ಡಾ. ಅಶ್ವಥ್ ನಾರಾಯಣ, ಎಸ್.ಟಿ. ಸೋಮಶೇಖರ್, ವಿ. ಸೋಮಣ್ಣ, ಕೆ.ಸಿ. ನಾರಾಯಣ ಗೌಡ, ಕೆ. ಗೋಪಾಲಯ್ಯ, ಬಿ.ಸಿ. ನಾಗೇಶ್ ಅವರಿಗೆ ವಿಧಾನ ಪರಿಷತ್ ಚುನಾವಣೆಯ ಜವಾಬ್ದಾರಿಯನ್ನು ನೀಡಲಾಗಿದೆ.
ಶಾಸಕರಾದ ಪಿ. ರಾಜೀವ್, ಅಭಯ್ ಪಾಟೀಲ್, ಪ್ರೀತಂ ಗೌಡ ಅವರಿಗು ಕೂಡಾ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಎಂಎಲ್ಸಿ ಗಳಾದ ಲಕ್ಷ್ಮಣ ಸವದಿ, ವೈ.ಎ. ನಾರಾಯಣಸ್ವಾಮಿ, ಶಶೀಲ್ ನಮೋಶಿ, ಚಿದಾನಂದ ಗೌಡ, ಪ್ರತಾಪಸಿಂಹ ನಾಯಕ್, ಎಂ.ವೈ. ಸತೀಶ್, ಪ್ರದೀಪ್ ಶೆಟ್ಟರ್, ಡಿ.ಎಸ್. ಅರುಣ್, ಹೆಚ್.ಎಸ್. ಗೋಪಿನಾಥ್ ರೆಡ್ಡಿ, ಎಂ.ಕೆ. ಪ್ರಾಣೇಶ್, ಪುಟ್ಟಣ್ಣ, ಅ. ದೇವೇಗೌಡ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. 4 ಕ್ಷೇತ್ರಗಳಿಗೆ ನಾಲ್ವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಸಂಯೋಜಕರಾಗಿ ನೇಮಕಗೊಂಡಿದ್ದಾರೆ.
ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಪದವೀಧರ ಕ್ಷೇತ್ರಗಳ ಎರಡು ಮತ್ತು ಶಿಕ್ಷಕರ ಕ್ಷೇತ್ರಗಳ ಎರಡು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯವ್ಯ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 19ರಂದು ಪರಿಷತ್ ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಮೇ 26 ಕೊನೆಯ ದಿನ. ಜೂನ್ 13ರಂದು ಮತದಾನ ಮತ್ತು ಜೂನ್ 15ರಂದು ಮತ ಎಣಿಕೆ ನಡೆಯಲಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹನುಮಂತ ನಿರಾಣಿ, ಶ್ರೀಕಂಠೇಗೌಡ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಸವರಾಜ ಹೊರಟ್ಟಿ, ಅರುಣ ಶಹಾಪುರ ಅವಧಿ ಜುಲೈ 7ಕ್ಕೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ.
ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ
4 ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ , ಪಕ್ಷಗಳು ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿವೆ. ಈ ಸಂಬಂಧ ಭಾರತೀಯ ಜನತಾ ಪಕ್ಷ- ಬಿಜೆಪಿ (BJP) ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅರುಣ್ ಶಹಾಪುರ್ ಬಿಜೆಪಿ ಟಿಕೆಟ್ ಪಡೆಯುವ ನಿರೀಕ್ಷೆ ಇದೆ. ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ ಹೆಸರು ಘೋಷಿಸುವ ನಿರೀಕ್ಷೆ ಇದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೋ.ಮಧುಸೂದನ್ ಹಾಗೂ ಕಳೆದ ಬಾರಿ ಸೋತಿದ್ದ ಮೈ.ವಿ.ರವಿಶಂಕರ ಹೆಸರುಗಳು ರೇಸ್ನಲ್ಲಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ