ಮಣ್ಣಿನ ಮಡಿಕೆಗೆ ಹೆಚ್ಚಿದ ಬೇಡಿಕೆ; ಕೊರೊನಾ ನಂತರ ಮತ್ತೆ ತಲೆ ಎತ್ತಿದೆ ಕುಂಬಾರರ ವ್ಯಾಪಾರ
ಕಾಲ ಬದಲಾದಂತೆ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಂಡಿದ್ದು, ಇತ್ತೀಚಿನ ದೇಸಿ ಟ್ರಂಡ್ಗೆ ತಕ್ಕಂತೆ ಮಣ್ಣಿನಿಂದ ನೀರಿನ ಬಾಟಲ್, ಜಗ್, ಗ್ಲಾಸ್, ಟ್ಯಾಪ್ ಇರುವ ಮಡಿಕೆ, ತವಾ, ಹೀಗೆ ಹತ್ತು ಹಲವು ಮಣ್ಣಿನ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ.
ಕೋಲಾರ: ಇತ್ತೀಚಿನ ದಿನಗಳಲ್ಲಿ ಮತ್ತೆ ದೇಸಿ ವಸ್ತುಗಳ ಬಳಕೆ ಹೆಚ್ಚಾಗಿದ್ದು, ಬೇಸಿಗೆ ಆರಂಭವಾಗುತ್ತಿರುವ ಈ ಸಮಯದಲ್ಲಂತೂ ಈ ನಡುವೆ ಜನರ ಆರೋಗ್ಯದ ದೃಷ್ಟಿಯಿಂದ ಪ್ರಿಡ್ಜ್ಗಿಂತ ಮಣ್ಣಿನ ಮಡಿಕೆಯ ನೀರೇ ತಂಪು ಎಂದು ಜನರು ಬಾವಿಸುತ್ತಾರೆ ಮತ್ತು ಅವುಗಳ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಕೋಲಾರ ತಾಲ್ಲೂಕು ಮಡೇರಹಳ್ಳಿ ಗ್ರಾಮದ ಬಳಿ ಈ ಬಾರಿಯ ಬಿಸಿಲ ಬೇಗೆ ಆರಂಭದಲ್ಲೇ ಜನರ ನೆತ್ತಿ ಸುಡುತ್ತಿದೆ, ಹಾಗಾಗಿ ಇಲ್ಲಿನ ಕುಂಬಾರರ ಹಟ್ಟಿಯ ಮಣ್ಣಿನ ಮಡಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಣವಂತರೂ ಆಧುನಿಕವಾಗಿ ರೆಪ್ರಿಜರೇಟರ್ಗಳ ಮೊರೆ ಹೋದರೆ, ಮಧ್ಯಮ ವರ್ಗದ ಹಾಗೂ ಕೆಳವರ್ಗದ ಜನರಂತೂ ದೇಸಿ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ.
ಇಪ್ಪತ್ನಾಲ್ಕು ಗಂಟೆ ತಣ್ಣನೆಯ ನೀರು ಸಿಗುವ ಈ ಮಣ್ಣಿನ ಮಡಿಕೆಗೆ ತನ್ನದೆ ಆದ ಹಿನ್ನಲೆ ಇದ್ದು, ಒಂದು ಕಾಲದಲ್ಲಿ ಮಣ್ಣಿನ ಮಡಿಕೆಯ ಬೇಡಿಕೆ ಕಡಿಮೆಯಾಗಿತ್ತು. ಆದರೆ ಸಾವಿರಾರು ವರ್ಷಗಳಿಂದಲೂ ತನ್ನದೆ ಆದ ಆರೋಗ್ಯಕರ ಇತಿಹಾಸ ಹೊಂದಿರುವ ಮಡಿಕೆಗೆ ಈಗ ಬೇಡಿಕೆ ಶುರುವಾಗಿದೆ. ಅದರಲ್ಲೂ ಕೊರೊನಾ ನಂತರದಲ್ಲಿ ಜನರಿಗೆ ಆರೋಗ್ಯದ ಕಾಳಜಿ ಹೆಚ್ಚಾಗಿರುವ ಕಾರಣ ಈಗ ಬಡವರು ಶ್ರೀಮಂತರು ಎನ್ನುವ ಬೇಧವಿಲ್ಲದೆ ಹೆಚ್ಚಿನ ಜನ ಮಡಿಕೆಗೆ ಮಾರು ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ಮಣ್ಣಿನ ಮಡಿಕೆ ಬಳಸುವುದು ಬಡ ಜನರು, ಅದರಲ್ಲೂ ಕೂಲಿ ನಾಲಿ ಮಾಡಿ ಜೀವನ ಸಾಗಿಸುವವರು. ಇನ್ನು ಈ ಹಿಂದೆ ಮಣ್ಣಿನ ಮಡಕೆಗಳಿಂದಲೇ ಆಹಾರ ತಯಾರಿ ಮಾಡಿಕೊಳ್ಳುತ್ತಾ ಇದ್ದಿದ್ದರಿಂದ ಬಳಕೆ ಕೂಡ ಹೆಚ್ಚಾಗಿಯೇ ಇತ್ತು. ಕಾಲ ಬದಲಾದಂತೆ ಅಲ್ಯೂಮಿನಿಯಂ ಸೇರಿದಂತೆ ಇನ್ನಿತರ ಪಾತ್ರೆಗಳು ಲಗ್ಗೆ ಇಟ್ಟ ಹಿನ್ನೆಲೆ ಮಡಿಕೆ ಬಳಕೆ ಹಿಂದಕ್ಕೆ ಸರಿದಿದೆ.
ಈಗ ಮತ್ತೆ ಮಣ್ಣಿನ ಮಡಿಕೆಯ ಬೇಡಿಕೆ ಹೆಚ್ಚಾಗಿದ್ದು, ಜೊತೆಗೆ ಮಣ್ಣಿನ ಮಡಕೆಗಳ ಬೆಲೆಯೂ ಕೂಡ ಹೆಚ್ಚಾಗಿದೆ. ಈ ಹಿಂದೆ ಒಂದು ಮಣ್ಣಿನ ಮಡಿಕೆಯ ಬೆಲೆ 50 ರಿಂದ 100 ಇತ್ತು ಆದರೆ ಈಗ 100 ರಿಂದ 200 ರೂಪಾಯಿ ಕಡಿಮೆ ಮಾರುಕಟ್ಟೆಗಳಲ್ಲಿ ಮಡಿಕೆ ಸಿಗುವುದಿಲ್ಲ. ಇನ್ನು ಈ ಗ ವಿವಿಧ ಆಕಾರಗಳಲ್ಲಿ ಮಡಿಕೆಗಳು ಸಾರ್ವಜನಿಕರ ಬಳಕೆಗೆ ಲಭ್ಯವಿದೆ ಎನ್ನುವುದು ವಿಶೇಷ.
ಕಾಲ ಬದಲಾದಂತೆ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಂಡಿದ್ದು, ಇತ್ತೀಚಿನ ದೇಸಿ ಟ್ರಂಡ್ಗೆ ತಕ್ಕಂತೆ ಮಣ್ಣಿನಿಂದ ನೀರಿನ ಬಾಟಲ್, ಜಗ್, ಗ್ಲಾಸ್, ಟ್ಯಾಪ್ ಇರುವ ಮಡಿಕೆ, ತವಾ, ಹೀಗೆ ಹತ್ತು ಹಲವು ಮಣ್ಣಿನ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ.
ಕಳೆದ ವರ್ಷ ಕೊರೊನಾದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವು. ಈಗ ಬೇಸಿಗೆ ಆರಂಭವಾದ ಮೇಲೆ ವ್ಯಾಪಾರ ಸ್ವಲ್ಪ ಸುಧಾರಿಸಿದೆ. ಜೊತೆಗೆ ಸರ್ಕಾರವೂ ಹೊಸ ಪ್ರಯೋಗಗಳನ್ನು ಮಾಡಲು ನಮಗೆ ಸಾಲ ಸೌಲಭ್ಯ, ಅಥವಾ ನೆರವನ್ನು ನೀಡಬೇಕು ಎಂದು ಮಡಿಕೆ ತಯಾರು ಮಾಡುವವರಾದ ಶ್ರೀನಿವಾಸ ಹೇಳಿದ್ದಾರೆ.
ಒಟ್ಟಾರೆ ಅವನತಿ ಹಾದಿ ಹಿಡಿದಿದ್ದ ಕುಂಬಾರಿಕೆಗೆ ಹಾಗೂ ಮಡಿಕೆಗೆ ಒಳ್ಳೆ ಬೇಡಿಕೆ ಬಂದಿದೆ. ಇದಕ್ಕೆ ಒಂದೆಡೆ ಬಿರುಬಿಸಿಲು ಕಾರಣವಾದರೆ ಇನ್ನೊಂದೆಡೆ ಕೊರೊನಾ ನಂತರದಲ್ಲಿ ಜನರಿಗೆ ಹೆಚ್ಚಾಗಿರುವ ತಮ್ಮ ಆರೋಗ್ಯದ ಮೇಲಿನ ಕಾಳಜಿ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ.
ಇದನ್ನೂ ಓದಿ: ಬೇಸಿಗೆಯ ಬಾಯಾರಿಕೆಯನ್ನು ತಣಿಸಲಿದೆ ಯಾದಗಿರಿಯ ಆಧುನಿಕ ಶೈಲಿಯ ಮಣ್ಣಿನ ಮಡಿಕೆ