ಮೈಸೂರು: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದ ಕರಿಚಿರತೆ ಇದೀಗ ಮತ್ತೆ ಪ್ರವಾಸಿಗರ ಹೃದಯ ಕದ್ದಿದ್ದಾನೆ. ಕರಿ ಚಿರತೆ ಮರ ಏರುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಜಿಲ್ಲೆಯ ಹೆಚ್.ಡಿ.ಕೋಟೆಯ ನಾಗರಹೊಳೆಯ ದಮ್ಮನ ಕಟ್ಟೆಯಲ್ಲಿ ಸಫಾರಿ ಮಾಡಿದ ಪ್ರವಾಸಿಗರಿಗೆ, ಕರಿಚಿರತೆ ಕಾಣಿಸಿಕೊಂಡು ಮುದ ನೀಡುತ್ತಿದೆ. ಇತ್ತೀಚೆಗಂತೂ ಪ್ರವಾಸಿಗರು ಈ ಕರಿಚಿರತೆ ನೋಡುವುದಕ್ಕೆ ನಾಗರಹೊಳೆಯ ಕಬಿನಿ ಕಡೆ ಮುಖ ಮಾಡುತ್ತಿದ್ದಾರೆ.
ಅದರಲ್ಲೂ ವಿಶೇಷವೆಂದರೆ, ಕರಿಚಿರತೆಯ ಫೋಟೋ ತೆಗೆಯುವ ಸಲುವಾಗಿ ದೇಶ ವಿದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ನಾಗರಹೊಳೆಯ ದಮ್ಮನ ಕಟ್ಟೆಯಲ್ಲಿ ಸಫಾರಿ ಮಾಡಲು ಬರುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಪ್ರವಾಸಿಗರು ಕಾಡಲ್ಲಿ ಸಫಾರಿ ಮಾಡುವ ವೇಳೆ ಕರಿಚಿರತೆ ಕಾಣಿಸಿಕೊಂಡಿದೆ. ಈ ವೇಳೆ ಕೆಲ ಸಮಯ ಅಲ್ಲೇ ಓಡಾಡಿದ ‘ಕರಿಯ’ ಸರ ಸರನೇ ಮರವೇರಿದ್ದಾನೆ. ಈ ರೀತಿ ಕರಿಚಿರತೆ ಮರ ಏರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಅಪರೂಪದ ಚಿರತೆ
ಸಾಮಾನ್ಯವಾಗಿ ಚಿರತೆ ಹಳದಿ ಬಣ್ಣದಿಂದಲೆ ಇರುತ್ತದೆ. ಆದರೆ ಈ ಚಿರತೆ ಕಪ್ಪಾಗಿರಲು ಕಾರಣ ಎಂದರೆ ಚಿರತೆ ದೇಹದಲ್ಲಿ ಮೆಲನಿಸ್ಟಿಕ್ ಜೀನ್ ಹೆಚ್ಚಾದರೆ ಈ ರೀತಿ ಹಳದಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಇದರ ಮರಿಗಳು ಕಪ್ಪಾಗಿಯೆ ಹುಟ್ಟುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ತನ್ನ ಮರಿಗಳು ಹಳದಿ ಬಣ್ಣದಲ್ಲೆ ಹುಟ್ಟುತ್ತವೆ. ಈ ರೀತಿ ಈ ಹಿಂದೆಯು ಕೂಡ ಕಪ್ಪು ಹೆಣ್ಣು ಚಿರತೆ ಮರಿಗಳು ಹಳದಿ ಬಣ್ಣದಲ್ಲೆ ಹುಟ್ಟಿರುವ ಉದಾಹರಣೆಗೆ ಇದೆ. ಈ ಕರಿಚಿರತೆ ಸಫಾರಿ ಜಾಗದಲ್ಲಿ ತನ್ನ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡಿರುವ ಕಾರಣ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿದೆ.
ವೇಗವಾಗಿ ಮರವೇರಿದ್ದೇಕೆ?
ಚಿರತೆ ಮರ ಹತ್ತುವ ಕಲೆ ಗೊತ್ತಿರುವ ಪ್ರಾಣಿ. ಇದರಿಂದ ಚಿರತೆಗಳು ಮರಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಬೇರೆ ಪ್ರಾಣಿಗಳನ್ನು ಚಿರತೆ ಭೇಟೆಯಾಡಿ ತನ್ನ ಆಹಾರವನ್ನು ಮರದ ಮೇಲೆ ಹೊತ್ತೊಯ್ದು ಸೇವನೆ ಮಾಡುತ್ತವೆ. ಯಾಕೆಂದರೆ ತನಗಿಂತ ಬಲಿಷ್ಠವಾದ ಹುಲಿ, ಗುಂಪಾಗಿರುವ ಕಾಡು ನಾಯಿಗಳು ಇದರ ಬೇಟೆಯನ್ನು ಕಿತ್ತುಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಯಾವುದಾದರು ಪ್ರಾಣಿಯನ್ನು ಬೇಟೆಯಾಡಿದ ನಂತರ ಅದನ್ನು ಮರಗಳ ಮೇಲೆ ಇಟ್ಟುಕೊಂಡು ತನಗೆ ಬೇಕಾದಾಗ ಆಹಾರ ಸೇವನೆ ಮಾಡುತ್ತವೆ. ಮರದ ಮೇಲೆ ಇರುವುದರಿಂದ ಇವುಗಳು ಸುಲಭವಾಗಿ ತನ್ನ ಬೇಟೆಯನ್ನು ಹುಡುಕಲು ಸಹಾಯವಾಗುತ್ತವೆ. ಮರದ ಮೇಲೆ ಇರುವಂತಹ ಸಂದರ್ಭದಲ್ಲಿ ಜಿಂಕೆ, ಕಡವೆಗಳಿಗೆ ಇವುಗಳ ಇರುವಿಕೆ ಗಮನಕ್ಕೆ ಬಾರದೆ ಮರದ ಬಳಿಯೇ ಆಹಾರ ಹುಡುತ್ತವೆ. ಈ ಸಂದರ್ಭದಲ್ಲಿ ಚಿರತೆ ಮೇಲಿಂದ ಎಗರಿ ಜಿಂಕೆಯಂತಹ ಪ್ರಾಣಿಗಳನ್ನ ಸುಲಭವಾಗಿ ಬೇಟೆಯಾಡುತ್ತವೆ. ಆದರೆ ನಾಗರಹೊಳೆಯಲ್ಲಿ ವೈರಲ್ಲಾಗಿರುವ ವೀಡಿಯೋದಲ್ಲಿ ಚಿರತೆ ಮಾತ್ರ ಅಷ್ಟು ವೇಗವಾಗಿ ಮರ ಹತ್ತಿದ್ದು, ಇನ್ನೊಂದು ಚಿರತೆ ಜೊತೆ ಕಾಳಗ ನಡೆಸುವ ಸಲುವಾಗಿ.
ಮತ್ತೊಂದು ಚಿರತೆ ಜೊತೆ ನಡೆಯಿತು ಕಾಳಗ
ಚಿರತೆ, ಹುಲಿಯಂತ ಪ್ರಾಣಿಗಳು ತನ್ನದೆಯಾದ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿಕೊಂಡಿರುತ್ತವೆ. ಇಂತಹ ಸಾಮ್ರಾಜ್ಯದಲ್ಲಿ ಮತ್ತೊಂದು ಗಂಡು ಚಿರತೆ ಕಾಣಿಸಿಕೊಂಡರೆ ಮತ್ತೊಂದು ಚಿರತೆ ಜೊತೆ ಕಾಳಗ ನಡೆಸುತ್ತವೆ. ಈ ರೀತಿ ಕಾಳಗ ನಡೆಸಿ ಕರಿ ಚಿರತೆ ದೊಡ್ಡಗಾಯ ಮಾಡಿಕೊಂಡಿತ್ತು. ಈ ವೇಳೆ ಬಲಿಷ್ಠವಾಗಿ ಇರುವಂತ ಪ್ರಾಣಿ ಸಾಮ್ರಾಜ್ಯವನ್ನು ಉಳಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಇನ್ನೊಂದು ಬಲಿಷ್ಠ ಚಿರತೆಗೆ ಅದರ ಸಾಮ್ರಾಜ್ಯ ಬಿಟ್ಟುಕೊಟ್ಟು ಹೋಗಬೇಕಾಗುತ್ತದೆ. ಇಲ್ಲಿಯು ಕೂಡ ಕರಿಚಿರತೆ ಒಂದು ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡಿತ್ತು. ಆದರೆ ಇದರ ಟೆರಿಟರಿ ಸ್ಥಾನಕ್ಕೆ ಮತ್ತೊಂದು ಚಿರತೆ ಬಂದು ಮರದಲ್ಲಿ ಕುಳಿತಿತ್ತು. ಇದರಿಂದ ಕೋಪಗೊಂಡ ಕರಿಚಿರತೆ ಜಾಗ ಆಕ್ರಮಿಸಿಕೊಂಡ ಚಿರತೆ ಜೊತೆ ಕಾಳಗ ನಡೆಸಲು ಮರವೇರಿದೆ.
ಕಾಡಿನಲ್ಲಿ ಹುಲಿ ಮತ್ತು ಚಿರತೆಯಂತ ಪ್ರಾಣಿಗಳಲ್ಲಿ ಟೆರಿಟರಿ ಪೈಟ್ಗಳು ನಡೆಯುತ್ತಿರುತ್ತದೆ. ಈ ಹಿಂದೆ ಕೂಡ ಕರಿಚಿರತೆ ಮತ್ತೊಂದು ಚಿರತೆ ಜೊತೆ ಕಾಳಗ ನಡೆಸಿ ಗಾಯ ಮಾಡಿಕೊಂಡಿತ್ತು. ಈ ವೇಳೆ ಚಿರತೆ ಟೆರಿಟರಿ ಸ್ಥಳದಲ್ಲಿ ಸಫಾರಿಯನ್ನು ನಿಷೇಧ ಮಾಡಲಾಗಿತ್ತು. ಇದೀಗ ಕರಿಚಿರತೆ ಇರುವ ಸ್ಥಳದಲ್ಲಿ ಮತ್ತೊಂದು ಗಂಡು ಚಿರತೆ ಕಾಣಿಸಿಕೊಂಡಿದ್ದರಿಂದ ಆ ರೀತಿ ಮರವೇರಿದೆ. ಇದು ಕಾಡಿನಲ್ಲಿ ನಡೆಯುವ ಸಾಮಾನ್ಯ ಕ್ರಿಯೆಯಾಗಿದೆ ಎಂದು ಅಂತರಸಂತೆ ವಲಯದ ಆರ್ಎಫ್ಒ ಸಿದ್ದರಾಜು ತಿಳಿಸಿದ್ದಾರೆ.
ಇದನ್ನೂ ಓದಿ
Nagarhole National Park: ಕರಿ ಚಿರತೆ ಮರವೇರುವ ಅಪರೂಪದ ದೃಶ್ಯ ನಾಗರಹೊಳೆ ಕಬಿನಿಯಲ್ಲಿ ಕ್ಯಾಮೆರಾದಲ್ಲಿ ಸೆರೆ..
ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಇತರರಿರೂ ಮಾದರಿಯಾದ ಹಾವೇರಿಯ ಕಾಗಿನೆಲೆ ಪಿಎಸ್ಐ