ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ: BJP, JDS ಮೈತ್ರಿ ಬಹುತೇಕ ಖಚಿತ

ಮೈಸೂರು ಮೇಯರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಸಿದ್ದು ತವರು ಜಿಲ್ಲೆಯಲ್ಲಿ ಬಿಜೆಪಿ ಚೊಚ್ಚಲ ಬಾರಿಗೆ ಅಧಿಕಾರ ಹಿಡಿಯಲು ಮುಂದಾಗಿದ್ರೆ, ಕಾಂಗ್ರೆಸ್‌ನವರು ಕೊನೆ ಕ್ಷಣದ ಮ್ಯಾಜಿಕ್‌ಗೆ ಕಾದು‌ ಕುಳಿತಿದ್ದಾರೆ. ಇತ್ತ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಮುಖಂಡರು ಕುಮಾರಸ್ವಾಮಿ ಹಿಂದೆ‌ ಬಿದ್ದಿದ್ದಾರೆ.

  • TV9 Web Team
  • Published On - 7:14 AM, 24 Feb 2021
Mysuru City Corporation
ಮೈಸೂರು ಮಹಾನಗರ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ. ರಾಜ್ಯದ ಪ್ರಮುಖ ಪಾಲಿಕೆಗಳಲ್ಲಿ‌ ಒಂದು. ಮಾಜಿ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಾದ ಕಾರಣ, ಅಧಿಕಾರದ ಚುಕ್ಕಾಣಿ‌ ಹಿಡಿಯೋದು ಸದಾ ಪ್ರತಿಷ್ಠೆಯ ವಿಷಯ. ಇದೇ ಕಾರಣಕ್ಕೆ ಇದುವರೆಗೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮಾತ್ರ ಅಧಿಕಾರದ ಗದ್ದುಗೆಗೆ ಏರಿವೆ. ಇವತ್ತು ಮೈಸೂರು ಮಹಾನಗರ ಪಾಲಿಕೆಗೆ ಎಲೆಕ್ಷನ್‌ ನಡೆಯಲಿದೆ. ಬಿಜೆಪಿ, ಪಾಲಿಕೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ರೂ, ಅಧಿಕಾರ ಮಾತ್ರ ಮರಿಚಿಕೆಯಾಗಿ ಉಳಿದಿತ್ತು. ಮೈಸೂರು ಮಹಾನಗರ ಪಾಲಿಕೆಯಲ್ಲಿ ಇದುವರೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯದ್ದೇ ಕಾರುಬಾರಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ‌ ಕನಸು ಕಾಣುತ್ತಿದೆ. ಇದಕ್ಕೆ ಕಾರಣ ಜೆಡಿಎಸ್ ನಡೆ.

ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ ಜೊತೆ ಹೋಗಲ್ಲ ಅಂತಾ ಕಡ್ಡಿ ತುಂಡಾದಂತೆ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಕಾರಣ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ನವರು ಯಾರು ಸಹಕಾರ ಕೇಳಿಲ್ಲ. ಆದ್ರೆ, ಖುದ್ದು ಸಿಎಂ ಯಡಿಯೂರಪ್ಪ ನನ್ನ ಬಳಿ ಈ ಬಗ್ಗೆ ಮಾತಾಡಿದ್ದಾರೆ ಅಂತಾ ಕುಮಾರಸ್ವಾಮಿ ಹೇಳಿದ್ರು. ಯಾವಾಗ ಕುಮಾರಸ್ವಾಮಿ ಮೈಸೂರು ಮೇಯರ್ ಚುನಾವಣಾ ಅಖಾಡಕ್ಕೆ ಎಂಟ್ರಿ‌ ಕೊಟ್ರೋ, ಬಿಜೆಪಿ-ಕಾಂಗ್ರೆಸ್ ಮುಖಂಡರು ನಾ ಮುಂದು ತಾ ಮುಂದು ಅಂತಾ ಹೆಚ್‌ಡಿ‌ಕೆ ಭೇಟಿ‌ ಮಾಡಿ ಮಾತನಾಡಿದ್ರು.

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ರೆಸಾರ್ಟ್‌ಗೆ ಆಗಮಿಸಿದ್ರೂ ಅವರಿಗೆ ಕುಮಾರಸ್ವಾಮಿ ಸಿಗಲಿಲ್ಲ. ತನ್ವೀರ್ ಕುಮಾರಸ್ವಾಮಿಗಾಗಿ ಕಾದು ಕುಳಿತಿದ್ರು. ಆದ್ರೆ, ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್‌ಸಿಂಹ, ಶಾಸಕ ರಾಮದಾಸ್ ಆಗಮಿಸಿದಾಕ್ಷಣ ಕುಮಾರಸ್ವಾಮಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಮಾತನಾಡಿದ್ರು. ಇಷ್ಟಾದ್ರೂ ಬಿಜೆಪಿ-ಜೆಡಿಎಸ್ ಮುಖಂಡರು ಮೈತ್ರಿ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈ ಬೆಳವಣಿಗೆಗಳನ್ನ ಗಮನಿಸಿದ್ರೆ ಬಿಜೆಪಿ-ಜೆಡಿಎಸ್ ಮೈತ್ರಿ ಬಹುತೇಕ ಖಚಿತವಾಗಿದೆ. ಮತ್ತೊಂದು ಮೂಲಗಳ ಪ್ರಕಾರ ಈ ಬಾರಿ ಮೇಯರ್ ಸ್ಥಾನ ಬಹುತೇಕ ಬಿಜೆಪಿಗೆ ಖಚಿತವಾಗಿದೆ. ಈ ಮೂಲಕ ಜೆಡಿಎಸ್ ಇಲ್ಲ ಅನ್ನೋ ಅರ್ಥದಲ್ಲಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ತವರು ಜಿಲ್ಲೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಅಂತಾ ತೋರಿಸಲು ಹೆಚ್.ಡಿ.ಕುಮಾರಸ್ವಾಮಿ ರೆಡಿಯಾಗಿದ್ದಾರೆ.

ಇದನ್ನೂ ಓದಿ: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ JDS ನಡೆಯತ್ತ ಕುತೂಹಲ !