ನಾಡದೇವತೆ ಆಶೀರ್ವಾದಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಬಂದ ಆಕರ್ಷಕ ಹೋರಿಗಳು; ರೈತರಿಂದ ವಿಶೇಷ ಹರಕೆ ಸಲ್ಲಿಕೆ
ಹೋರಿ ಓಟಕ್ಕಾಗಿಯೇ ವಿಶೇಷ ರೀತಿಯಲ್ಲಿ ಹೋರಿಗಳನ್ನು ತಯಾರು ಮಾಡಲಾಗಿದೆ. ಅತ್ಯುತ್ತಮವಾಗಿ ಪಾಲನೆ ಮಾಡಿರುವ ಹೋರಿಗಳು ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ಮೊದಲು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರೆ ಗೆಲುವು ನಿಶ್ಚಿತ ಎಂಬುವುದು ಇಲ್ಲಿನ ರೈತರ ನಂಬಿಕೆ.
ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟಕ್ಕೆ ತಾಯಿ ಆಶೀರ್ವಾದ ಪಡೆಯಲು ಆಕರ್ಷಕ ಹೋರಿಗಳು (Bulls) ಆಗಮಿಸಿವೆ. ಮೈಸೂರು ತಾಲ್ಲೂಕು ಸಿದ್ದಲಿಂಗಪುರದ ರೈತರು (Farmers) ಇಂದು (ಡಿಸೆಂಬರ್ 10) ಚಾಮುಂಡಿ ಬೆಟ್ಟದಲ್ಲಿ ವಿಶೇಷ ರೀತಿಯಲ್ಲಿ ಹರಕೆ ಸಲ್ಲಿಸಿದ್ದಾರೆ. ಸಲಗ, ಪೈಲ್ವಾನ್ ಹೆಸರಿನ ಹೋರಿಯನ್ನು ಬೆಟ್ಟಕ್ಕೆ ಕರೆ ತಂದ ರೈತರು ಹರಕೆ ಸಲ್ಲಿಸಿದ್ದಾರೆ. ಮಂಡ್ಯ ಮತ್ತು ಹಾಸನದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಹೋರಿಗಳು ಭಾಗವಹಿಸಲಿದ್ದು, ಸ್ಪರ್ಧೆಯ ಗೆಲುವಿಗಾಗಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಹೋರಿ ಓಟಕ್ಕಾಗಿಯೇ ವಿಶೇಷ ರೀತಿಯಲ್ಲಿ ಹೋರಿಗಳನ್ನು ತಯಾರು ಮಾಡಲಾಗಿದೆ. ಅತ್ಯುತ್ತಮವಾಗಿ ಪಾಲನೆ ಮಾಡಿರುವ ಹೋರಿಗಳು ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ಮೊದಲು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರೆ ಗೆಲುವು ನಿಶ್ಚಿತ ಎಂಬುವುದು ಇಲ್ಲಿನ ರೈತರ ನಂಬಿಕೆ.
ಮೈಸೂರಿನ ಸಿದ್ದಲಿಂಗಪುರದ ರೈತ ಮೋಹನ್ ಕುಮಾರ್ ಅವರಿಗೆ ಸೇರಿದ ಹೋರಿಗಳು ಇವು. ಅತ್ಯಂತ ಪ್ರೀತಿಯಿಂದ ಸ್ವಂತ ಮಕ್ಕಳಂತೆ ಈ ಹೋರಿಗಳನ್ನು ಮೋಹನ್ ಕುಮಾರ್ ಪೋಷಣೆ ಮಾಡಿದ್ದಾರೆ. ಒಂದು ಹೋರಿಗೆ ಸಲಗ ಮತ್ತೊಂದು ಹೋರಿಗೆ ಪೈಲ್ವಾನ್ ಅಂತಾ ಹೆಸರಿಟ್ಟಿದ್ದಾರೆ. ಸದ್ಯ ಈ ಹೋರಿಗಳನ್ನು ರಾಜ್ಯ ಮಟ್ಟದ ಹೋರಿ ಓಟದ ಸ್ಪರ್ಧೆಗಾಗಿ ತಯಾರು ಮಾಡುತ್ತಿದ್ದಾರೆ. ಇದೇ ತಿಂಗಳ 12 ರಂದು ಮಂಡ್ಯದಲ್ಲಿ ಹಾಗೂ 19 ರಂದು ಹಾಸನದಲ್ಲಿ ರಾಜ್ಯ ಮಟ್ಟದ ಹೋರಿ ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ತಮ್ಮ ಹೋರಿಗಳಿಗೆ ಗೆಲುವು ಸಿಗಲಿ ಎನ್ನುವ ಕಾರಣಕ್ಕೆ ಮೋಹನ್ ಕುಮಾರ್ ಹೋರಿಗಳನ್ನೇ ಚಾಮುಂಡಿಬೆಟ್ಟಕ್ಕೆ ಕರೆದುಕೊಂಡು ಬಂದಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಹೋರಿಗಳ ಸಮ್ಮುಖದಲ್ಲಿ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಇನ್ನು ಸ್ಪರ್ಧೆಗಾಗಿ ಹೋರಿಗೆ ವಿಶೇಷ ತಯಾರಿ ಮಾಡಿದ್ದಾರೆ. ಹೋರಿಗಳಿಗೆ ಪ್ರತಿದಿನ ಹುಳ್ಳಿ ನುಚ್ಚು, ಮುಸುಕಿನ ಜೋಳ ಮೊಟ್ಟೆ, ರವೆ ಬೂಸಾ, ಹಾಲು ಸೇರಿ ವಿಶೇಷ ಖಾದ್ಯವನ್ನು ಹೋರಿಗಳಿಗೆ ತಿನ್ನಿಸುತ್ತಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 50 ಸಾವಿರದಿಂದ 1 ಲಕ್ಷ ರೂಪಾಯಿ ನಗದು ಬಹುಮಾನ ಜೊತೆಗೆ ಆಳೆತ್ತರದ ಟ್ರೋಫಿ ನೀಡಲಾಗುತ್ತದೆ. ಇಲ್ಲಿ ಬಹುಮಾನಕ್ಕಿಂತ ಗೆಲವೇ ಮುಖ್ಯವಾಗಿರುತ್ತದೆ. ಇನ್ನು ತಾಯಿ ಚಾಮುಂಡಿ ಕೇವಲ ಮನುಷ್ಯರಿಗೆ ಮಾತ್ರವಲ್ಲ ಸಕಲ ಚರಾಚರ ಪ್ರಾಣಿ ಪಕ್ಷಗನ್ನು ಕಾಪಾಡುತ್ತಾಳೆ ಎನ್ನುವುದು ರೈತ ಮೋಹನ್ ಕುಮಾರ್ ಅವರ ನಂಬಿಕೆ.
ವರದಿ: ರಾಮ್
ಇದನ್ನೂ ಓದಿ: ಹಾವೇರಿ: ಕೊಬ್ಬರಿ ಹೋರಿ ಬೆದರಿಸುವ ಹಬ್ಬದಲ್ಲಿ ಅವಗಢ; ಹೋರಿ ದಾಳಿಯಿಂದ 9 ಜನ ಆಸ್ಪತ್ರೆಗೆ ದಾಖಲು
ಬಾಗಲಕೋಟೆ: ಹದಿನೆಂಟು ತಿಂಗಳ ಹೋರಿಗೆ 3.25 ಲಕ್ಷ ರೂಪಾಯಿ; ಕಿಲಾರಿ ತಳಿಯ ವಿಶೇಷತೆ ಏನು ಗೊತ್ತಾ?