ಮೈಸೂರು: ಕೇರಳ ರಾಜ್ಯದ ಮಕ್ಕಳಲ್ಲಿ ಟೊಮೆಟೊ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಟೊಮೆಟೊ ಜ್ವರದ ಬಗ್ಗೆ ಭೀತಿ ವ್ಯಕ್ತವಾಗಿದೆ. ಮೈಸೂರು ಜಿಲ್ಲೆ ಬಾವಲಿ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಕೇರಳದಿಂದ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. 5 ವರ್ಷದೊಳಗಿನ ಮಕ್ಕಳ ಆರೋಗ್ಯ ಪರೀಕ್ಷಿಸಲಾಗುತ್ತಿದೆ. ಮಕ್ಕಳ ಮೈಮೇಲೆ ಕೆಂಪು ಗುಳ್ಳೆ, ಉಷ್ಣಾಂಶದ ಹೆಚ್ಚಳ ಸೇರಿದಂತೆ ಚಿಕೂನ್ಗುನ್ಯಾ ಮಾದರಿಯ ರೋಗ ಲಕ್ಷಣಗಳಿರುವ ಮಕ್ಕಳನ್ನು ಮತ್ತು ಅಂಥ ಮಕ್ಕಳನ್ನು ಕರೆತಂದ ಪೋಷಕರನ್ನು ಪ್ರತ್ಯೇಕಗೊಳಿಸಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗಿದೆ. ಎಚ್.ಡಿ.ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ತಪಾಸಣೆ ನಡೆಯುತ್ತಿದೆ.
ಆರೋಗ್ಯ ಇಲಾಖೆಗೆ ಹೊಸ ಟೆನ್ಷನ್
ಬೆಂಗಳೂರು: ಟೊಮೆಟೊ ಫ್ಲೂ ಸಮಸ್ಯೆಯು ಆರೋಗ್ಯ ಇಲಾಖೆಗೆ ಹೊಸ ಟೆನ್ಷನ್ ತಂದಿಟ್ಟಿದೆ. ಟೊಮೆಟೊ ಜ್ವರ ಬಂದವರನ್ನು ನಿರ್ದಿಷ್ಟವಾಗಿ ಗುರುತಿಸುವುದು ಮತ್ತು ಟೆಸ್ಟ್ ಹೇಗೆ ಮಾಡಿಸಬೇಕು ಎನ್ನುವ ಬಗ್ಗೆ ಆರೋಗ್ಯ ಇಲಾಖೆ ಇನ್ನೂ ಪ್ರಚಾರ ನಡೆಸಬೇಕಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯಲ್ಲಿಯೇ ಈ ಬಗ್ಗೆ ಗೊಂದಲಗಳಿವೆ. ಕೇರಳದಲ್ಲಿ ಈವರೆಗೆ 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿಯೂ ಈ ಜ್ವರದ ಬಗ್ಗೆ ಆತಂಕ ಹೆಚ್ಚಾಗಿದೆ.
ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ, ಹೆಚ್ಚು ಒಡನಾಟ ಇರುವ ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮೈಸೂರು ಜಿಲ್ಲೆಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸೂಚಿಸಿದೆ. ಈ ನಡುವೆ ಕೊವಿಡ್ ತಾಂತ್ರಿಕ ಸಮಿತಿಯಿಂದಲೇ ಟೊಮೆಟೊ ಜ್ವರ ನಿರ್ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಸಮಿತಿಯೇ ಆರೋಗ್ಯ ಇಲಾಖೆಗೆ ಅಗತ್ಯ ಮಾಹಿತಿ ಒದಗಿಸುತ್ತಿದ್ದು, ರೋಗ ಹರಡುವ ತೀವ್ರತೆಯನ್ನು ಅಭ್ಯಸಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಮಕ್ಕಳಲ್ಲಿ ಈ ಜ್ವರ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದರೆ ಮುಂದಿನ ದಿನಗಳಲ್ಲಿ ಕೊವಿಡ್ ಐಸೊಲೇಷನ್ ವಾರ್ಡ್ ಮಾದರಿಯಲ್ಲಿಯೇ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.
ಟೊಮೆಟೊ ಜ್ವರದ ಕೆಲವು ಪ್ರಮುಖ ಲಕ್ಷಣಗಳು
ವಿಪರೀತ ಜ್ವರ, ನಿರ್ಜಲೀಕರಣ, ದದ್ದುಗಳು, – ಚರ್ಮದ ತುರಿಕೆ, ಕೈ ಮತ್ತು ಕಾಲುಗಳ ಚರ್ಮದ ಬಣ್ಣವೂ ಬದಲು – ಗುಳ್ಳೆಗಳು, ಕಿಬ್ಬೊಟ್ಟೆಯ ಸೆಳೆತ, ವಾಕರಿಕೆ, ವಾಂತಿ – ಅತಿಸಾರ, ಸ್ರವಿಸುವ ಮೂಗು, ಕೆಮ್ಮು, ಸೀನು, – ಆಯಾಸ ಮತ್ತು ದೇಹದಲ್ಲಿ ನೋವು
ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ
ಟೊಮೆಟೊ ಫ್ಲೂ ಕುರಿತು ಮಾಹಿತಿ ನೀಡಿರುವ ಡಾ.ಅರುಣ, ‘ಇದು ತನ್ನಿಂತಾನೆ ಕಡಿಮೆಯಾಗುವ ಸೋಂಕು. ಯಾವುದೇ ನಿರ್ದಿಷ್ಟ ಔಷಧಿ ಇಲ್ಲ’ ಎಂದು ಹೇಳಿದ್ದಾರೆ. ‘ಇದು ವೇಗವಾಗಿ ಹರಡುವ ಸೋಂಕಾಗಿರುವ ಕಾರಣ ಟೊಮೆಟೊ ಫ್ಲೂ ಬಂದವರನ್ನು ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ. ಸೋಂಕಿನಿಂದ ಉಂಟಾಗುವ ದದ್ದುಗಳನ್ನು ಕೆರೆದುಕೊಳ್ಳಲು ಮಕ್ಕಳಿಗೆ ಬಿಡಬಾರದು. ಸೋಂಕಿತರ ಬಟ್ಟೆ ಮತ್ತು ಅವರು ಬಳಸುವ ಪಾತ್ರೆಗಳನ್ನು ಸರಿಯಾದ ರೀತಿ ಸ್ವಚ್ಛಗೊಳಿಸಬೇಕು. ದ್ರವಾಹಾರ ಸೇವನೆಯಿಂದ ನಿರ್ಜಲೀಕರಣದ ಸಮಸ್ಯೆ ಕಡಿಮೆಯಾಗುತ್ತದೆ. ಸೋಂಕಿನ ಲಕ್ಷಣ ಆಧರಿಸಿ ವೈದ್ಯರು ಚಿಕಿತ್ಸೆ ನಿರ್ಧರಿಸುತ್ತಾರೆ’ ಎಂದು ಹೇಳಿದ್ದಾರೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:28 am, Fri, 13 May 22