ನನ್ನ ಅವಧಿಯ ದಾಖಲೆ ತರುವಂತೆ ಬಿಜೆಪಿ ಒತ್ತಡ ಹಾಕುತ್ತಿದೆ, ನಾವು ತಪ್ಪು ಮಾಡಿದ್ದರೆ ನಾವೇ ಹಗ್ಗ ಸಹಾ ಕಳುಹಿಸಿಕೊಡುತ್ತೇವೆ -ಡಿಕೆ ಶಿವಕುಮಾರ್
ಇಂಧನ ಇಲಾಖೆ ಅಧಿಕಾರಿಗಳಿಗೆ ದಾಖಲೆ ತರುವಂತೆ ಹೆದರಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಕೆಲ ಅಧಿಕಾರಿಗಳು ನನಗೆ ಕರೆ ಮಾಡಿದ್ದರು. ನನ್ನ ಅವಧಿಯ ದಾಖಲೆ ತರುವಂತೆ ಒತ್ತಡ ಹಾಕಲಾಗುತ್ತಿದೆ.

ಮೈಸೂರು: ಅ.2ರಂದು ಬದನವಾಳು ಗ್ರಾಮಕ್ಕೆ ರಾಹುಲ್ ಗಾಂಧಿ(Rahul Gandhi) ಆಗಮನ ಹಿನ್ನೆಲೆ ಇಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲು ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಇಂಧನ ಇಲಾಖೆ ಅಧಿಕಾರಿಗಳಿಗೆ ದಾಖಲೆ ತರುವಂತೆ ಹೆದರಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಕೆಲ ಅಧಿಕಾರಿಗಳು ನನಗೆ ಕರೆ ಮಾಡಿದ್ದರು. ನನ್ನ ಅವಧಿಯ ದಾಖಲೆ ತರುವಂತೆ ಒತ್ತಡ ಹಾಕಲಾಗುತ್ತಿದೆ. ನಾನು ಎಲ್ಲಾ ದಾಖಲೆಗಳನ್ನು ಕೊಡಿ ಎಂದು ಹೇಳಿದ್ದೇನೆ. ತಪ್ಪು ಮಾಡಿದ್ದರೆ ನಾವೇ ಹಗ್ಗ ಸಹಾ ಕಳುಹಿಸಿಕೊಡುತ್ತೇವೆ. ಈ ಮೂಲಕ ಕಾಂಗ್ರೆಸ್ ಮತ್ತು ನನ್ನನ್ನು ಹೆದರಿಸಲು ಬಿಜೆಪಿ ಮುಂದಾಗಿದೆ. ನಾನು ಯಾವುದಕ್ಕೂ ಹೆದರುವವನಲ್ಲ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ ಎಂದರು.
ಇನ್ನು ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ಹೇಳಿಕೆಗೆ ವ್ಯಂಗ್ಯವಾಡಿದ್ರು. ಚಡ್ಡಿ, ಪ್ಯಾಂಟು, ಹಾಸಿಗೆ, ಮೊಟ್ಟೆ ಇತ್ಯಾದಿ ಇತ್ಯಾದಿ ಎಲ್ಲಾ ತನಿಖೆ ಮಾಡಲಿ. ನಾನು ಎಲ್ಲದಕ್ಕೂ ಸಿದ್ದನಾಗಿದ್ದೇನೆ. ಮೂರು ವರ್ಷ ಬೇಕಿತ್ತಾ ತನಿಖೆ ಆರಂಭಿಸಲು? ಎಂದು ಪ್ರಶ್ನಿಸಿದರು. ಇಂದು ಪರಿಷತ್‌ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಡಿಕೆಶಿ ರಾಜ್ಯದಲ್ಲಿ ಎಲ್ಲಿ ಮತಾಂತರ ನಡೆಯುತ್ತಿದೆ ? ಪ್ರಚಾರಕ್ಕಾಗಿ ಬಿಜೆಪಿ ಮಂಡನೆ ಮಾಡುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸಲು ಕಾಯ್ದೆ ಮಂಡಿಸಲಾಗುತ್ತಿದೆ. ಭಾವನಾತ್ಮಕ ವಿಚಾರವನ್ನು ಕೆರಳಿಸಲು ಮಂಡನೆ ಮಾಡಲಾಗುತ್ತಿದೆ. ಕಾಯ್ದೆ ಈ ಹಿಂದೆಯೇ ಇತ್ತು. ದೇಶ ರಾಜ್ಯ ವಿಭಜನೆ ಮಾಡಲು ಬಿಜೆಪಿ ಮುಂದಾಗಿದೆ. ಜಾತಿ ಧರ್ಮವನ್ನು ಒಡೆಯಲು ಹುನ್ನಾರ ನಡೆಸುತ್ತಿದೆ. ಹಿಂದೂ ಧರ್ಮದ ಓಲೈಕೆ ಹಾಗೂ ಹೈ ಕಮಾಂಡ್ ಮೆಚ್ಚಿಸಲು ಈ ಕಾಯ್ದೆ ಮಂಡನೆ ಮಾಡಲಾಗುತ್ತಿದೆ ಎಂದರು.
ನಾವು ಸೋತಿರಬಹುದು ಆದರೆ ನಮ್ಮಲ್ಲಿ ಬಿರುಕಿಲ್ಲ
ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ವ್ಯಂಗ್ಯ ಮಾಡಿದೆ. ಇದಕ್ಕೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಮಗೆ ಬಿಜೆಪಿ ಮಾರ್ಗದರ್ಶನ ಬೇಕಾಗಿಲ್ಲ. ನಾವು ಸೋತಿರಬಹುದು ಆದರೆ ನಮ್ಮಲ್ಲಿ ಬಿರುಕಿಲ್ಲ. ಕಾಂಗ್ರೆಸ್ ನ ಅಂತರಾಳ ಬಿಜೆಪಿಗೆ ಏನೂ ಗೊತ್ತು? ಗಾಂಧಿ ಹೆಸರು ನಮಗೆ ಸದಾ ಶಕ್ತಿ. ಕಾಂಗ್ರೆಸ್‌ನ್ನು ಜೋಡಿಸುವಂತಹದು ಏನಾಗಿದೆ? ಭಾರತ್ ಜೋಡೋ ಯಾತ್ರೆ ರಾಜ್ಯದ ಮಟ್ಟಿಗೆ ಬಹಳ ಪ್ರಾಮುಖ್ಯತೆ ಇದೆ. ಯಾರು ಬೇಕಾದರೂ ಎಷ್ಟು ಬೇಕಾದರೂ ಟೀಕೆ ಮಾಡಬಹುದು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇರುತ್ತಾನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:45 am, Thu, 15 September 22