ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇಯಲ್ಲಿ ಕೆಲವಡೆ ಪ್ರವೇಶ, ನಿರ್ಗಮನ ಸಮಸ್ಯೆ ಇರುವುದು ನಿಜ, ಸರಿಪಡಿಸುತ್ತೇವೆ; ಪ್ರತಾಪ್ ಸಿಂಹ

|

Updated on: Jun 29, 2023 | 8:50 PM

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಪ್ರದೇಶದಲ್ಲಿ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಒಪ್ಪಿಕೊಂಡಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇಯಲ್ಲಿ ಕೆಲವಡೆ ಪ್ರವೇಶ, ನಿರ್ಗಮನ ಸಮಸ್ಯೆ ಇರುವುದು ನಿಜ, ಸರಿಪಡಿಸುತ್ತೇವೆ; ಪ್ರತಾಪ್ ಸಿಂಹ
ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇ
Follow us on

ಮೈಸೂರು: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ (Mysuru Bengaluru Expressway) ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಪ್ರದೇಶದಲ್ಲಿ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿವೆ. ಇದಕ್ಕೆ ದೋಷಯುಕ್ತ (DPR) ಕಾರಣ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಒಪ್ಪಿಕೊಂಡಿದ್ದಾರೆ. ಎಕ್ಸ್‌ಪ್ರೆಸ್‌ ವೇಗೆ ಸಂಬಂಧಿಸಿದ ಈ ಎಲ್ಲಾ ಸಮಸ್ಯೆಗಳನ್ನು ಎಂಟರಿಂದ 10 ತಿಂಗಳಲ್ಲಿ ಸರಿಪಡಿಸಲಿದ್ದೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) 480 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನೂ ಕೆಲವೆಡೆ ಭೂಸ್ವಾಧೀನಪಡಿಸಿಕೊಳ್ಳುತ್ತಿದೆ. ಎಕ್ಸ್‌ಪ್ರೆಸ್‌ ವೇ ಸಂಬಂಧಿತ ಇನ್ನೂ ಕೆಲವು ಕಾಮಗಾರಿಗಳಿಗೆ 1,800 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಎಲ್ಲಾ ಪಟ್ಟಣಗಳ ಬಳಿ ಸರಿಯಾದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲಿದೆ. ವಿಶ್ರಾಂತಿ ಪ್ರದೇಶ, ಮೈಸೂರು ರಿಂಗ್ ರಸ್ತೆ (ಮಣಿಪಾಲ್ ಆಸ್ಪತ್ರೆ ಜಂಕ್ಷನ್) ಬಳಿ ಫ್ಲೈಓವರ್, ಕುಂಬಳಗೋಡು ಬಳಿ ಅಂಡರ್‌ಪಾಸ್ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಕ್ಸ್​ಪ್ರೆಸ್ ವೇ ರೇಸಿಂಗ್ ಟ್ರ್ಯಾಕ್ ಅಲ್ಲ, ನಿರ್ಲಕ್ಷ್ಯದಿಂದ ಅಪಘಾತ; ಪ್ರತಾಪ್ ಸಿಂಹ

ಎಕ್ಸ್‌ಪ್ರೆಸ್‌ ವೇಯಲ್ಲಿ ಕಡಿಮೆ ಅಪಘಾತಗಳಾಗಿವೆ. ಮಧ್ಯಮ ಗಾತ್ರದ ವಾಹನಗಳನ್ನು ಚಾಲನೆ ಮಾಡುವವರು ಅತಿವೇದ ಅಥವಾ ಅಜಾಗರೂಕತೆಯ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡುವುದರಿಂದ ಮಾತ್ರ ಅಪಘಾತಗಳು ಸಂಭವಿಸುತ್ತವೆ. ಇದು ಅವೈಜ್ಞಾನಿಕ ರಸ್ತೆಯಿಂದಲ್ಲ. ಈ ಎಕ್ಸ್‌ಪ್ರೆಸ್‌ ವೇ ರೇಸಿಂಗ್ ಟ್ರ್ಯಾಕ್ ಅಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಆದರೆ ತಡೆರಹಿತ ಪ್ರಯಾಣಕ್ಕಾಗಿ ನಿರ್ಮಾಣ ಮಾಡಲಿದೆ ಎಂಬ ಅರಿವು ಇರಬೇಕು ಎಂದು ಅವರು ಹೇಳಿದ್ದಾರೆ.

ಎಕ್ಸ್‌ಪ್ರೆಸ್‌ ವೇಯನ್ನು ವಾಹನಗಳು ಗಂಟೆಗೆ 120 ಕಿಮೀ ಗರಿಷ್ಠ ವೇಗದ ಮಿತಿಯೊಂದಿಗೆ ಚಲಿಸಲು ವಿನ್ಯಾಸಗೊಳಿಸಲಾಗಿದೆ. 80 ಕಿಮೀ ನಿಂದ 100 ಕಿಮೀ ವೇಗದಲ್ಲಿ ಪ್ರಯಾಣಿಸುವಾಗ ಅಪಘಾತಗಳು ಸಂಭವಿಸುವುದಿಲ್ಲ. ಇಷ್ಟು ವೇಗದಲ್ಲಿ ಪ್ರಯಾಣಿಸಿದರೂ ಒಂದೂವರೆ ಗಂಟೆಯಲ್ಲಿ ಬೆಂಗಳೂರು ತಲುಪಬಹುದು. ಜನರು 10-15 ನಿಮಿಷಗಳನ್ನು ಉಳಿಸುವುದಕ್ಕಾಗಿ ವೇಗದ ಮಿತಿಯನ್ನು ದಾಟಬಾರದು. ಐಷಾರಾಮಿ ಕಾರಿನಲ್ಲಿ, ಕೆಲವರು 140-150 ಕಿಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದರೆ ಅದನ್ನು ಹೇಗೆ ನಿಯಂತ್ರಿಸಬಹುದು? ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Bengaluru-Mysore Expressway: ಅಪಘಾತಕ್ಕೆ ಕಾರಣಗಳ ಕುರಿತು ಎನ್​​ಹೆಚ್​ಎಐಗೆ ವರದಿ ಸಲ್ಲಿಸಿದ 2 ಜಿಲ್ಲಾಡಳಿತ

ಎಕ್ಸ್‌ಪ್ರೆಸ್‌ ವೇಯ ರಸ್ತೆ ವಿನ್ಯಾಸವು ಎಲ್ಲಿ ಅವೈಜ್ಞಾನಿಕವಾಗಿದೆ ಎಂಬುದನ್ನು ತೋರಿಸಲು ರಾಜ್ಯ ಸರ್ಕಾರ ಅಥವಾ ಯಾರಾದರೂ ಕ್ರಮಕೈಗೊಂಡರೆ, ಅವುಗಳನ್ನು ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಕ್ತವಾಗಿದೆ ಎಂದೂ ಅವರು ಹೇಳಿದ್ದಾರೆ.

ಎಕ್ಸ್‌ಪ್ರೆಸ್‌ ವೇಯಲ್ಲಿ ಪ್ರತಿ 30 ಕಿಮೀ ದೂರದಲ್ಲಿ ಟೋಯಿಂಗ್, ಆಂಬುಲೆನ್ಸ್ ಮತ್ತು ಪೆಟ್ರೋಲ್ ಬಂಕ್‌ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯವಸ್ಥೆ ಮಾಡುತ್ತದೆ ಎಂದು ಸಿಂಹ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ