ಸ್ವರ್ಣ ಸಾಧಕಿಯರಿವರು: ಬಸ್ಸೇ ಬಾರದ ಊರಿಂದ ಬಂದಾಕೆಗೆ 20, ಗಡಿ ಜಿಲ್ಲೆಯ ಅನ್ನದಾತನ ಮಗಳಿಗೆ 10 ಚಿನ್ನದ ಪದಕ
ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಾಧನೆಗೈದ ಇಬ್ಬರು ಸಾಧಕ ವಿದ್ಯಾರ್ಥಿನಿಯರ ಯಶೋಗಾಥೆ ಇಲ್ಲಿದೆ.
ಮೈಸೂರು: ಒಂದಲ್ಲ ಎರಡಲ್ಲ, ಬರೋಬ್ಬರಿ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆದ ಸಾಧಕಿ ಈಕೆ. ಮೈಸೂರು ವಿಶ್ವವಿದ್ಯಾಲಯದ 101ನೇ ಘಟಿಕೋತ್ಸವದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದವರಾದ ರಸಾಯನ ವಿಜ್ಞಾನದ ವಿದ್ಯಾರ್ಥಿನಿ ಚೈತ್ರಾ ನಾರಾಯಣ ಹೆಗಡೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಈ ಬಾರಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ಶ್ರೇಯವನ್ನು ಪಡೆದುಕೊಂಡಿದ್ದಾರೆ. ಚೈತ್ರಾ ಅವರ ಊರು ಶೀಗೆಹಳ್ಳಿಗೆ ಬಸ್ ಸರಿಯಾದ ಬಸ್ ವ್ಯವಸ್ಥೆಯಿಲ್ಲ. ಕಾಲೇಜು ಕೂಡಾ ದೂರ. ಹೀಗಾಗಿ, ಬೇರೆ ಊರಿನಲ್ಲಿ ಇದ್ದುಕೊಂಡೇ ವ್ಯಾಸಂಗ ಮಾಡಿದೆ. ಅಡಿಕೆ ಕೃಷಿಕರಾದ ಅಪ್ಪ-ಅಮ್ಮ ನೀಡಿದ ಉತ್ತೇಜನವೂ ಕೈಹಿಡಿಯಿತು ಎಂದು ಚೈತ್ರಾ ತಮ್ಮ ಸಾಧನೆಯ ಹಾದಿಯನ್ನು ಹಂಚಿಕೊಳ್ಳುತ್ತಾರೆ. ಚೈತ್ರಾ ಶಿರಸಿಯ ಚೈತನ್ಯ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದರು. ತಂದೆ ನಾರಾಯಣ ಹೆಗಡೆ ತಾಯಿ ಸುಮಂಗಳಾ ಹೆಗಡೆ ಅಡಿಕೆ ಕೃಷಿಕರು. ಮೊದಲು ಮಗಳನ್ನು ಆತಂಕದಿಂದಲೇ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಕಳುಹಿಸಿಕೊಟ್ಟರು. ಮೈಸೂರಿನಲ್ಲಿ ಯುವರಾಜ ಕಾಲೇಜಿಗೆ ಸೇರಿದ ಚೈತ್ರಾ ಬಿಎಸ್ಸಿ ಪದವಿ ಪೂರೈಸಿದರು. ನಂತರ ರಸಾಯನ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡ ಚೈತ್ರಾ ಅಪರೂಪದ ಸಾಧನೆ ಮಾಡಿದ್ದಾರೆ.
ಪಿಜಿಯಲ್ಲಿ ವಾಸ, ಕೆಲಸ ಅತಿಥಿ ಉಪನ್ಯಾಸಕಿ ದೂರದ ಊರಿನಿಂದ ಬಂದ ಚೈತ್ರಾಗೆ ಮೈಸೂರಿನಲ್ಲಿ ಯಾರು ಪರಿಚಯದವರಾಗಲಿ ಸಂಬಂಧಿಕರಾಗಿ ಇರಲಿಲ್ಲ. ಹೀಗಾಗಿ ಅವರು ಖಾಸಗಿ ಪಿಜಿಯಲ್ಲೇ ಉಳಿಯಬೇಕಾಗಿತ್ತು. ಆದರೂ ಎದೆಗುಂದದೇ ಒಂದು ಕ್ಷಣವು ವ್ಯರ್ಥ ಮಾಡದೆ ಓದಿದರು. ತಾನಾಯ್ತು ತನ್ನ ಪಿಜಿಯಾಯ್ತು ಅಂತಾ ಪುಸ್ತಕದ ಹುಳುವಾಗಿದ್ದ ಚೈತ್ರಾಗೆ ಅವರ ಪೋಷಕರು ನೀಡಿದ ಸಹಕಾರ ಬೆಂಬಲ ನಿಜಕ್ಕೂ ಶ್ಲಾಘನೀಯ. ಮಗಳ ಓದಿನ ದಾಹ ಅರಿತ ಅಪ್ಪ ಅಮ್ಮ ಚೈತ್ರಾರ ಮೇಲೆ ಯಾವುದೇ ಒತ್ತಡ ಹೇರಲಿಲ್ಲ. ಆಕೆ ಇಷ್ಟಪಟ್ಟ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಸಂಪೂರ್ಣ ಸಹಕಾರ ನೀಡಿದರು. ಹೀಗಾಗಿ ಚೈತ್ರಾ ಅವರು ಪಡೆದ ಪದಕ ಹಾಗೂ ಬಹುಮಾನವನ್ನು ತನ್ನ ತಂದೆ ತಾಯಿಗೆ ಸಮರ್ಪಿಸಿದ್ದಾರೆ. ಸದ್ಯ ತಾನು ಓದಿದ ಯುವರಾಜ ಕಾಲೇಜಿನಲ್ಲೇ ಚೈತ್ರಾ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಚೈತ್ರಾ ಮೆಡಿಸಿನ್ ಕೆಮಿಸ್ಟ್ರಿಯಲ್ಲಿ ಸಂಶೋಧನೆ ಮಾಡುವ ಮಹದಾಸೆಯನ್ನು ಹೊಂದಿದ್ದಾರೆ.
ಅನಿರೀಕ್ಷಿತ ಫಲಿತಾಂಶದಿಂದ ಏಕಕಾಲಕ್ಕೆ ಅಚ್ಚರಿಯೂ ಸಂತೋಷವೂ ಆಗಿದೆ. ಸೌಲಭ್ಯವಿಲ್ಲದ ಊರಿನಿಂದ ಬಂದಿರುವ ಹುಡುಗಿ ನಾನು ಏನಾದರೂ ಸಾಧನೆ ಮಾಡಿ ತೋರಿಸಬೇಕೆಂಬ ಛಲ, ಹಟದಿಂದ ಓದಿದೆ. ಈಗ ಖುಷಿಯಾಗುತ್ತಿದೆ. ಪಿಯು ಓದುತ್ತಿದ್ದಾಗ ನಮ್ಮೂರಿಗೆ ಬೆಳಗ್ಗೆ, ಸಂಜೆ ಮಾತ್ರ ಬಸ್ ಬರುತಿತ್ತು. ಅದು ತಪ್ಪಿದರೆ ಕಾಲೇಜಿಗೆ ಪೋಷಕರೇ ಬಂದು ಕರೆದುಕೊಂಡು ಹೋಗಬೇಕಿತ್ತು. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ. ಇದರ ಜೊತೆಗೆ ಗ್ರಾಮದಲ್ಲಿ ಸರಿಯಾಗಿ ನೆಟ್‌ವರ್ಕ್ ಸಹಾ ಸಿಗುವುದಿಲ್ಲ ಇನ್ನಾದರೂ ಈ ಸಮಸ್ಯೆ ಬಗೆಹರಿದರೆ ಸಾಕು. – ಚೈತ್ರಾ ನಾರಾಯಣ ಹೆಗಡೆ 20 ಪದಕ ವಿಜೇತೆ, ಎಂ.ಎಸ್ಸಿ ರಸಾಯನ ವಿಜ್ಞಾನ, ಮೈಸೂರು ವಿ.ವಿ
ಗಡಿ ಜಿಲ್ಲೆ ಚಾಮರಾಜನಗರ ತಾಲೂಕಿನ ಅನ್ನದಾತನ ಮಗಳಿಗೆ 10 ಚಿನ್ನದ ಪದಕ ಕನಿಷ್ಠ ಸೌಲಭ್ಯವೂ ಇಲ್ಲದ ಕುಗ್ರಾಮದವರಾದ ಗಡಿ ಜಿಲ್ಲೆ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮದ ರೈತನ ಮಗಳು ಸ್ನಾತಕೋತ್ತರ ಪದವಿಯ ಕನ್ನಡದ ವಿಷಯದಲ್ಲಿ 10 ಚಿನ್ನದ ಪದಕ, ನಾಲ್ಕು ನಗದು ಬಹುಮಾನ ಬಹುಮಾನ ಪಡೆದು ಶೈಕ್ಷಣಿಕ ವಲಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ರೈತರಾದ ಟಿ.ಎಂ. ಶಿವಮಲ್ಲಪ್ಪ ಮತ್ತು ನೀಲಾಂಬಿಕಾ ದಂಪತಿ ನಾಲ್ಕನೇ ಪುತ್ರಿಯಾದ ಟಿ.ಎಸ್.ಮಾದಲಾಂಬಿಕೆ ಮೈಸೂರು ಮೈಸೂರು ವಿಶ್ವವಿದ್ಯಾನಿಲಯದ 101 ನೇ ಘಟಿಕೋತ್ಸವದಲ್ಲಿ ಪ್ರಥಮ ಸ್ಥಾನದೊಂದಿಗೆ ಕನ್ನಡ ಎಂಎ ಪದವಿ ಪಡೆದಿದ್ದಾರೆ. ಕೃಷಿಕರಾದ ಇವರ ತಂದೆ 8ನೇ ತರಗತಿ ಓದಿದ್ದರು. ಮಗಳು ಚೆನ್ನಾಗಿ ಓದಲಿ ಎಂದು ಉತ್ತಮ ವ್ಯಾಸಂಗ ಕೊಡಿಸಲು ತೀರ್ಮಾನಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದರು.
ಮಗಳ ಸಾಧನೆ ನೋಡಲು ಅಪ್ಪನೇ ಇಲ್ಲ ಅಪ್ಪನ ನಿರೀಕ್ಷೆಯಂತೆ ಮಾದಲಾಂಬಿಕೆ ಬಿಎಯನ್ನು ಶೇ. 80 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. ನಂತರ ಚಾಮರಾಜನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇಡಿಯನ್ನು ಅತ್ಯುನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾದರು. ಎಂಎ ಪ್ರಥಮ ಸೆಮಿಸ್ಟರ್ ಪರೀಕ್ಷೆ ಶುಲ್ಕ ಪಾವತಿಸಿದ ದಿನವೇ ಅಪ್ಪ ಅಕಾಲಿಕವಾಗಿ ನಿಧನರಾದರು. ನಾಲ್ವರು ಹೆಣ್ಣು ಮಕ್ಕಳಲ್ಲಿ ಇವರೇ ಕೊನೆಯವರಾಗಿದ್ದರು, ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ತಾಯಿ, ಶಿಕ್ಷಕಿಯಾದ ಅಕ್ಕ ರಾಜೇಶ್ವರಿ ಉನ್ನತ ಶಿಕ್ಷಣ ಪಡೆಯಲು ನೆರವಾದರು. ಮನೆಯವರ ಸಹಕಾರ ಸಹಾಯದಿಂದ ಶ್ರದ್ದೆಯಿಂದ ವಿದ್ಯಾಭ್ಯಾಸ ಮುಂದುವರಿಸಿದ ಮಾದಲಾಂಬಿಕೆ ಇಂದು ಸಾಧನೆಯ ಶಿಖರವನ್ನೇರಿದ್ದಾರೆ.
10 ಚಿನ್ನದ ಪದಕಗಳು ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಜತೆಗೆ ನಾಲ್ಕು ನಗದು ಬಹುಮಾನ ಬಂದಿರುವುದು ಅತ್ಯಂತ ಖುಷಿಯಾಗಿದೆ. ಮಾರ್ಗದರ್ಶನ ಮಾಡಿದ ನನ್ನೆಲ್ಲಾ ಅಧ್ಯಾಪಕರಿಗೆ ಇದು ಸಲ್ಲಬೇಕು. ಗುರುಗಳಾದ ಡಾ.ಕೃಷ್ಣಮೂರ್ತಿ ಹನೂರು ಅವರ ಪಾಠ ಕೇಳುವ ಅವಕಾಶ ದೊರೆತದ್ದು ಜೀವನವನ್ನು ಬದಲಾಯಿಸಿತು. ಎನ್ಇಟಿ ಪರೀಕ್ಷೆ ಪಾಸು ಮಾಡಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುವ ಗುರಿ ಹೊಂದಿರುವೆ. – ಮಾದಲಾಂಬಿಕೆ ವಿದ್ಯಾರ್ಥಿನಿ
ವಿಶೇಷ ವರದಿ: ರಾಮ್ ಮೈಸೂರು, ಟಿವಿ9 ಕನ್ನಡ
ಇದನ್ನೂ ಓದಿ:
ಮೈಸೂರು ವಿವಿ 101ನೇ ಘಟಿಕೋತ್ಸವ; ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಹೆಗಡೆ 20 ಚಿನ್ನದ ಪದಕಗಳ ಸಾಧನೆ (Mysore university 101th convocation sirsi chitra hegde sweeps 20 gold medal and Chamarajanagar Madalambike bags 10 gold medals)