ಮೈಸೂರಿನಲ್ಲಿ 71 ಮಂದಿಗೆ ಬ್ಲ್ಯಾಕ್​ ಫಂಗಸ್​ ಸೋಂಕು; ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಒಟ್ಟು 71 ಪ್ರಕರಣಗಳಲ್ಲಿ ಕೆ.ಆರ್ ಆಸ್ಪತ್ರೆಯಲ್ಲಿ 50 ಜನರಿಗೆ ಚಿಕಿತ್ಸೆ ನೀಡಲಾಗಿದ್ದರೆ, ಅಪೋಲೋ ಆಸ್ಪತ್ರೆಯಲ್ಲಿ 07, ಜೆಎಸ್‌ಎಸ್ ಆಸ್ಪತ್ರೆಯಲ್ಲಿ 06, ಕೊಲಂಬಿಯಾ ಏಷಿಯಾಯಲ್ಲಿ 04, ಕಾವೇರಿ ಆಸ್ಪತ್ರೆಯಲ್ಲಿ 02, ನಾರಾಯಣ ಹೃದಯಾಲ ಹಾಗೂ ರೇಡಿಯಂಟಲ್ ಆಸ್ಪತ್ರೆಯಲ್ಲಿ ತಲಾ ಒಬ್ಬರಿಗೆ ಚಿಕಿತ್ಸೆ ನೀಡಲಾಗಿದೆ.

ಮೈಸೂರಿನಲ್ಲಿ 71 ಮಂದಿಗೆ ಬ್ಲ್ಯಾಕ್​ ಫಂಗಸ್​ ಸೋಂಕು; ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ಸಾಂಕೇತಿಕ ಚಿತ್ರ

ಮೈಸೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ನಡುವೆಯೇ ಆರಂಭವಾದ ಬ್ಲ್ಯಾಕ್ ಫಂಗಸ್ ಸೋಂಕು ಜನಸಾಮಾನ್ಯರನ್ನು ಕಾಡುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 71 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ. ಈ ಪೈಕಿ 8 ಜನರು ಗುಣಮುಖರಾಗಿದ್ದು, 9 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ. ಉಳಿದ 54 ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 71 ಪ್ರಕರಣಗಳಲ್ಲಿ ಕೆ.ಆರ್ ಆಸ್ಪತ್ರೆಯಲ್ಲಿ 50 ಜನರಿಗೆ ಚಿಕಿತ್ಸೆ ನೀಡಲಾಗಿದ್ದರೆ, ಅಪೋಲೋ ಆಸ್ಪತ್ರೆಯಲ್ಲಿ 07, ಜೆಎಸ್‌ಎಸ್ ಆಸ್ಪತ್ರೆಯಲ್ಲಿ 06, ಕೊಲಂಬಿಯಾ ಏಷಿಯಾಯಲ್ಲಿ 04, ಕಾವೇರಿ ಆಸ್ಪತ್ರೆಯಲ್ಲಿ 02, ನಾರಾಯಣ ಹೃದಯಾಲ ಹಾಗೂ ರೇಡಿಯಂಟಲ್ ಆಸ್ಪತ್ರೆಯಲ್ಲಿ ತಲಾ ಒಬ್ಬರಿಗೆ ಚಿಕಿತ್ಸೆ ನೀಡಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸದ್ಯ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗಿದ್ದು, ವಾರದಲ್ಲಿ ಎರಡು ದಿನ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಅದರಂತೆ ಇಂದು (ಜೂನ್ 3) ಅಗತ್ಯ ವಸ್ತು ಖರೀದಿ ಮಾಡಲು ಕೊರೊನಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಜನ ಹೊರಗೆ ಬರಬಹುದಾಗಿದೆ. ಆದರೆ, ಕಳೆದ ಸೋಮವಾರ ಲಾಕ್‌ಡೌನ್ ಸಡಿಲಿಕೆ ವೇಳೆ ಅನುಮತಿ ನೀಡಿದ ಅಂಗಡಿಗಳ ಹೊರತಾಗಿ ಉಳಿದವರೂ ಅಂಗಡಿ ತೆರೆದಿದ್ದರಿಂದ ಜನಸಂದಣಿ ಜಾಸ್ತಿಯಾಗಿ ವಾಹನ ದಟ್ಟಣೆಯೂ ಹೆಚ್ಚಾಗಿತ್ತು. ಹೀಗಾಗಿ ಈ ಬಾರಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ಅನುಮತಿ ಇರುವ ಅಂಗಡಿ ಮಾತ್ರ ತೆರೆಯಬೇಕು. ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಬೇರೆ ಅಂಗಡಿ ತೆರೆಯುವಂತಿಲ್ಲ. ಒಂದು ವೇಳೆ ಯಾರಾದರೂ ಬೇರೆ ಅಂಗಡಿಗಳನ್ನು ತೆರೆದರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುವುದು. ನಂತರದ ಒಂದು ತಿಂಗಳು ಅಂಗಡಿ ಲೈಸೆನ್ಸ್ ರದ್ದಾಗಲಿದೆ ಎಂದು ಎಚ್ಚರಿಸಿದ್ದಾರೆ.

ಅಲ್ಲದೇ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಜಪ್ತಿ ಮಾಡಲಾಗುವುದು. ಆದಷ್ಟು ವಾಹನ ಬಳಸದೆ ಖರೀದಿ ಮಾಡುವುದು ಸೂಕ್ತ. ಜನರು ತಮ್ಮ ಹತ್ತಿರದ ಬಡಾವಣೆಗಳಲ್ಲಿ ಖರೀದಿಸುವುದು ಉತ್ತಮ. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ದೊಡ್ಡ ಮಾರುಕಟ್ಟೆಗೆ ಬರಬೇಡಿ. ಬೆಳಗ್ಗೆ 06 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಖರೀದಿಗೆ ಅವಕಾಶ ನೀಡಲಾಗಿದ್ದು, ಗುಂಪು ಸೇರದಂತೆ, ಕೊರೊನಾ ನಿಯಮಗಳು ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ಮೈಸೂರು ನಗರ ಪೊಲೀಸ್ ಆಯಕ್ತ ಡಾ ಚಂದ್ರಗುಪ್ತ ಸೂಚನೆ ನೀಡಿದ್ದಾರೆ.

ಇಂದಿನಿಂದ ಐದು ದಿನ ಚಿಕ್ಕಬಳ್ಳಾಪುರ ಬಂದ್
ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಹಬ್ಬುವಿಕೆ ತಡೆಯಲು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿನಿಂದ 5 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗುತ್ತಿದೆ. ಇಂದು (ಜೂನ್ 3) ಬೆಳಗ್ಗೆ 6 ಗಂಟೆಯಿಂದ ಜೂನ್ 7ರ ಬೆಳಗ್ಗೆ 6ರ ಗಂಟೆ ತನಕ ಲಾಕ್‌ಡೌನ್ ಇರಲಿದೆ. ಈ ವೇಳೆ ಬೆಳಿಗ್ಗೆ 10ಗಂಟೆವರೆಗೂ ಹಾಲಿನ ಬೂತ್ ತೆರೆಯಲು ಅವಕಾಶ ನೀಡಲಾಗಿದ್ದು, ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದ ಪೆಟ್ರೋಲ್ ಬಂಕ್ ಕೂಡಾ ಬಂದ್ ಆಗಿರಲಿದೆ.

ಸರಕು ಸಾಗಾಣಿಕೆ ಹಾಗೂ ವ್ಯಕ್ತಿಗತ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಜೂನ್ 4 ಮತ್ತು 6ರಂದು ಬಾಗೇಪಲ್ಲಿ ಹಾಗೂ ಚಿಂತಾಮಣಿಯಲ್ಲಿನ ಟೊಮೋಟೊ ಮಾರುಕಟ್ಟೆಗಳಿಗೆ ಜಿಲ್ಲಾಧಿಕಾರಿ ಲತಾ.ಆರ್ ಅವಕಾಶ ನೀಡಿದ್ದಾರೆ. ಉಳಿದಂತೆ ಜಿಲ್ಲೆಯಾದ್ಯಂತ ವಾಣಿಜ್ಯ ಚಟುವಟಿಕೆ, ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ಎಲ್ಲವೂ ಬಂದ್​ ಆಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:
ಮೈಸೂರು; ಒಂದು ತಿಂಗಳಲ್ಲಿ ಕೊರೊನಾಗೆ 320 ಸಾವು, ಪೋಷಕರನ್ನು ಕಳೆದುಕೊಂಡು ತಬ್ಬಲಿಯಾದ ಮಕ್ಕಳು 

Black Fungus: ಕರ್ನಾಟಕದಲ್ಲಿ ಒಟ್ಟು 1370 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ; 51 ಮಂದಿ ಸಾವು