ನಮ್ಮ ಇಲಾಖೆ ಹೆಣ್ಣು ಕರು ಮಾತ್ರ ಹುಟ್ಟುವ ಲಸಿಕೆ ತಯಾರಿಸಿದೆ: ಪಶುಸಂಗೋಪನೆ ಇಲಾಖೆ ಸಚಿವ
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಮಸ್ಯೆ ಆಗಿದೆ. ಮುಂದಿನ ಹಂತದಲ್ಲಿ ಪಶು ಭಾಗ್ಯ ಪ್ರಾರಂಭ ಮಾಡಬೇಕು. ಪಶು ಸಂಗೋಪನೆ ಇಲಾಖೆಗೆ 18,000 ಸಿಬ್ಬಂದಿಯ ಅವಶ್ಯಕತೆ ಇದೆ. ಆದರೆ ವಾಸ್ತವವಾಗಿ 9,000 ಸಿಬ್ಬಂದಿ ಮಾತ್ರ ಇದ್ದಾರೆ ಎಂದು ಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಮೈಸೂರು ಸೆ.26: ಹೆಣ್ಣು ಕರು ಮಾತ್ರ ಹುಟ್ಟುವ ಲಸಿಕೆಯನ್ನು ನಮ್ಮ ಇಲಾಖೆ ತಯಾರಿಸಿದೆ. ಶೇ.95ರಷ್ಟು ಹೆಣ್ಣು ಕರು ಮಾತ್ರ ಹುಟ್ಟುತ್ತದೆ. ವೈದ್ಯರ ಸಲಹೆ ಪಡೆದು ಇಂಜೆಕ್ಷನ್ ಹಾಕಿಸಿ. ಒಂದು ಲಸಿಕೆಗೆ 250 ರೂ. ಕೊಟ್ಟು ರೈತರು ಖರೀದಿಸಬೇಕು ಎಂದು ಪಶುಸಂಗೋಪನೆ ಇಲಾಖೆ (Department of Animal Husbandry and Fisheries) ಸಚಿವ ಕೆ.ವೆಂಕಟೇಶ್ (K. Venkatesh) ಹೇಳಿದರು. ಮೈಸೂರಿನ ಉತ್ತನಹಳ್ಳಿಯಲ್ಲಿ ನಡೆದ ಪಶು ಇಲಾಖೆ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 290 ಪಶು ಆಂಬುಲೆನ್ಸ್ ಇವೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಮಸ್ಯೆ ಆಗಿದೆ. ಮುಂದಿನ ಹಂತದಲ್ಲಿ ಪಶು ಭಾಗ್ಯ ಪ್ರಾರಂಭ ಮಾಡಬೇಕು. ಪಶು ಸಂಗೋಪನೆ ಇಲಾಖೆಗೆ 18,000 ಸಿಬ್ಬಂದಿ ಅವಶ್ಯಕತೆ ಇದೆ. ಆದರೆ ವಾಸ್ತವವಾಗಿ 9,000 ಸಿಬ್ಬಂದಿ ಮಾತ್ರ ಇದ್ದಾರೆ. ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದರು.
ಕರ್ನಾಟಕದಲ್ಲಿ 1 ಕೋಟಿ 14 ಲಕ್ಷ ದನಕರುಗಳಿವೆ ಇವೆ: ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ 1 ಕೋಟಿ 14 ಲಕ್ಷ ದನಕರುಗಳಿವೆ ಇವೆ. ಜಾನುವಾರಗಳನ್ನು ರಕ್ಷಣೆ ಮಾಡುವುದು ಪಶು ಇಲಾಖೆ ಕರ್ತವ್ಯ. ನಾನು ಕೂಡ 1985 ರಲ್ಲಿ ಪಶುಸಂಗೋಪನಾ ಇಲಾಖೆ ಸಚಿವನಾಗಿದ್ದೆ. ಎರಡೂವರೆ ವರ್ಷ ಈ ಇಲಾಖೆ ಜವಾಬ್ದಾರಿ ಇತ್ತು. ಪಶುಸಂಗೋಪನೆ ಇಲಾಖೆಯಲ್ಲಿ ಒಳ್ಳೆ ಕೆಲಸ ಮಾಡಿದ್ದ ಕಾರಣ ನಾನು ಈ ಮಟ್ಟಕ್ಕೆ ಬೆಳೆದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಪಶು ವೈದ್ಯಕೀಯ ಇಲಾಖೆಯಲ್ಲಿ ಸಹಾಯಕರ ಹುದ್ದೆಗಳಿಗೆ ನೇರ ನೇಮಕಾತಿ: ಅರ್ಜಿ ಹಾಕಿ
14 ಚುನಾವಣೆ ಎದುರಿಸಿದ್ದೇನೆ ಅದರಲ್ಲಿ ಐದು ಚುನಾವಣೆಯಲ್ಲಿ ಸೋತು, 9 ಚುನಾವಣೆಯಲ್ಲಿ ಗೆದ್ದಿದ್ದೇನೆ. ನನಗೆ ಸೋಲಿನ ಅನುಭವವೂ ಇದೆ, ಗೆಲುವಿನ ಅನುಭವವೂ ಇದೆ. ವರುಣಾ, ಚಾಮುಂಡೇಶ್ವರಿ ಹಾಗೂ ಒಂದು ಬಾರಿ ಬಾದಾಮಿ ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಜನರು ನಮ್ಮಿಂದ ಬಹಳ ನಿರೀಕ್ಷೆ ಇಟ್ಟಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸಬೇಕಿದೆ. ಜನರೇ ನಮ್ಮ ಮಾಲೀಕರು. ರಾಜಕಾರಣಿಗಳು ಮತ್ತು ಅಧಿಕಾರಿಗಳು ಜನರ ಸೇವಕರು ಎಂದರು.
ವೇರಿ ಕೊಳ್ಳದಲ್ಲಿರುವ ನಾಲ್ಕು ಜಲಾಶಯದಲ್ಲಿ ಒಟ್ಟು 50 ಟಿಎಂಸಿ ನೀರು ಇದೆ
ಕರ್ನಾಟಕ ಈಗ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. 1 ಕೋಟಿ ಲೀಟರ್ ಹಾಲು ಉತ್ಪಾದನೆ ಮಾಡುವ ಸಾಮರ್ಥ್ಯ ಕರ್ನಾಟಕಕ್ಕೆ ಇದೆ. ಈಗ ರಾಜ್ಯದಲ್ಲಿ ಬರ ಇದೆ. ಕಳೆದ 123 ವರ್ಷಗಳಲ್ಲೇ ಆಗಸ್ಟ್ ತಿಂಗಳಲ್ಲಿ ಅತಿ ಕಡಿಮೆ ಮಳೆಯಾಗಿದೆ. ನಾವು 177 ಟಿಎಂಸಿ ನೀರು ವಾರ್ಷಿಕವಾಗಿ ತಮಿಳುನಾಡಿಗೆ ಬಿಡಬೇಕು. ಆದರೆ ನಮ್ಮ ಬಳಿ ನೀರಿಲ್ಲ. ಕಾವೇರಿ ಕೊಳ್ಳದಲ್ಲಿರುವ ನಾಲ್ಕು ಜಲಾಶಯದಲ್ಲಿ ಒಟ್ಟು 50 ಟಿಎಂಸಿ ನೀರು ಇದೆ. ನಮಗೆ ಕುಡಿಯುವುದಕ್ಕೆ 30 ಟಿಎಂಸಿ ನೀರು ಬೇಕು, ಬೆಳೆಗೆ 70 ಟಿಎಂಸಿ ನೀರು ಬೇಕು. ಕೈಗಾರಿಕೆಗೆ 20 ಟಿಎಂಸಿ ನೀರು ಬೇಕು. ಒಟ್ಟಾರೆಯಾಗಿ ನಮಗೆ 100 ಟಿಎಂಸಿಗೂ ಹೆಚ್ಚು ನೀರು ಬೇಕಿದೆ ಎಂದು ತಿಳಿಸಿದರು.
ಇಂತಹ ಪರಿಸ್ಥಿತಿಯಲ್ಲಿ ನೀರು ಹೇಗೆ ಬಿಡುವುದು ? ನಮಗೇ ನೀರು ಇಲ್ಲ ಇನ್ನೂ ನಾವು ಎಲ್ಲಿಂದ ಬಿಡುವುದು ? ತಮಿಳುನಾಡಿನವರು ಬೆಳೆ ರಕ್ಷಣೆಗೆ ನೀರು ಕೇಳುತ್ತಿದ್ದಾರೆ. ಆದರೆ ನಾವು ನಮ್ಮ ರೈತರ ರಕ್ಷಣೆಗೆ ಸದಾ ಬದ್ಧರಾಗಿದ್ದೇವೆ. ಕಾವೇರಿ ನಿರ್ವಹಣಾ ಪ್ರಾಧಿಕಾರ ಮಂಡಳಿ ಬಳಿ ಸಮರ್ಪಕವಾಗಿ ವಾದ ಮಂಡನೆ ಮಾಡಿದ್ದೇವೆ. ನಮಗೆ ಕುಡಿಯಲು ನೀರಿಲ್ಲ. ಇಷ್ಟಾದರೂ ತಮಿಳುನಾಡು ಮತ್ತು ನಮ್ಮ ನಡುವೆ ಸಂಘರ್ಷ ನಡೆಯುತ್ತಿದೆ. ಅದೇನೆ ಇರಲಿ ನಮ್ಮ ಸರ್ಕಾರ ರೈತರನ್ನು ರಕ್ಷಣೆ ಮಾಡೇ ಮಾಡುತ್ತದೆ ಎಂದು ಭರವಸೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Tue, 26 September 23