ಸಫಾರಿ ಆಯ್ತು ದುಬಾರಿ; ಬಡ ಮಧ್ಯಮ ವರ್ಗಕ್ಕೆ ಮೈಸೂರಿನಲ್ಲಿ ಸಫಾರಿ ಹುಳಿ ದ್ರಾಕ್ಷಿಯಾಗಲಿದೆಯಾ?

ನಾಲ್ಕು ಚಕ್ರದ ವಾಹನಕ್ಕೆ 50 ರೂಪಾಯಿ, ಟೆಂಪೋ ಟ್ರ್ಯಾವಲರ್‌ಗೆ 100 ರೂಪಾಯಿ ಹಾಗೂ ಬಸ್‌ಗಳಿಗೆ 150 ರೂಪಾಯಿ ನಿಗದಿ ಮಾಡಲಾಗಿದೆ. ಎಸ್‌ಎಲ್‌ಆರ್ ಕ್ಯಾಮೆರಾ ಬಳಕೆಯ ಶುಲ್ಕವನ್ನು 500 ರಿಂದ 1500 ರೂಪಾಯಿಗೆ ಹೆಚ್ಚಿಸಲಾಗಿದೆ. ಇದು ನಾಗರಹೊಳೆ ಸೇರಿದಂತೆ ಬೇರೆ ಬೇರೆ ಸಫಾರಿಗಳಲ್ಲೂ ಹಿಂದೆ ಇದ್ದ ದರಗಳಲ್ಲಿ ಏರಿಕೆ ಮಾಡಲಾಗಿದೆ.

  • ರಾಮ್ ಮೈಸೂರು
  • Published On - 10:44 AM, 6 Apr 2021
ಸಫಾರಿ ಆಯ್ತು ದುಬಾರಿ; ಬಡ ಮಧ್ಯಮ ವರ್ಗಕ್ಕೆ ಮೈಸೂರಿನಲ್ಲಿ ಸಫಾರಿ ಹುಳಿ ದ್ರಾಕ್ಷಿಯಾಗಲಿದೆಯಾ?
ಸಫಾರಿ ಚಿತ್ರಣ

ಮೈಸೂರು: ಕಾಡು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ? ಕಾಂಕ್ರೀಟ್ ಲೋಕದ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಸಿಲುಕಿದ ಪ್ರತಿಯೊಂದು ಮನಸ್ಸು ಇದರಿಂದ ಯಾವಾಗ ಮುಕ್ತಿ ಎಂದು ಚಡಪಡಿಸುತ್ತಿರುತ್ತದೆ. ಮೊಬೈಲ್ ನೆಟ್‌ವರ್ಕ್ ಇಲ್ಲದ, ಯಾವ ವಾಹನದ ಶಬ್ದವೂ ಕೇಳಿಸದ, ಜನರೇ ಇಲ್ಲದ ಜಾಗಕ್ಕೆ ಹೋಗಿ ಇರಬೇಕು ಅನಿಸುತ್ತದೆ. ಹೀಗೆ ಕೆಲಸದ ಒತ್ತದ ಮಾನಸಿಕ‌ ತೊಳಲಾಟಕ್ಕೆ ಸಿಲುಕಿದಾಗ ಅದರಿಂದ ಹೊರ ಬರಲು ಹೊಸ ಚೈತನ್ಯ ನೀಡುವುದು ಅರಣ್ಯ ಇಲಾಖೆಯ ಸಫಾರಿ. ರಾಜ್ಯದ ವಿವಿಧ ಅರಣ್ಯಗಳಲ್ಲಿ ಇಲಾಖೆ ವತಿಯಿಂದ ಸಫಾರಿ ವ್ಯವಸ್ಥೆ ಇದೆ. ನಾಡಿನ ಒತ್ತಡದ ಬದುಕಿನಿಂದ ಕೊಂಚ ನಿರಾಳತೆ ಪಡೆಯಲು ಜನರು ಕಾಡಿನತ್ತ ಮುಖ‌ ಮಾಡಿ ಅಲ್ಲಿನ ಪರಿಸರ ಪ್ರಾಣಿಗಳ ಮಧ್ಯೆ ವಿಶ್ರಾಂತಿ ಪಡೆಯುತ್ತಾರೆ. ಇದಕ್ಕೆ ಬಡವರು ಮಧ್ಯಮ ವರ್ಗ ಶ್ರೀಮಂತರೆಂಬ ಭೇದವಿಲ್ಲ. ಆದರೆ ಇದೀಗ ಅರಣ್ಯ ಇಲಾಖೆ ಸಫಾರಿ ದರ ಹೆಚ್ಚಿಸಿರುವುದರಿಂದ ಬಡ ಮಧ್ಯಮ ವರ್ಗದವರಿಗೆ ಕಾಡಿನ ಸಫಾರಿ ಕೊಂಚ ಕಷ್ಟವಾಗಲಿದೆ.

ಏಪ್ರಿಲ್ 1 ರಿಂದ ಸಫಾರಿ ನೂತನ ದರ ಜಾರಿ
ಇದೇ ಏಪ್ರಿಲ್ 1 ರಿಂದ ಅರಣ್ಯ ಇಲಾಖೆ ರಾಜ್ಯದ ಎಲ್ಲಾ ಅರಣ್ಯದ ಸಫಾರಿಯ ದರ ಹೆಚ್ಚಿಸಿದೆ. ಹೊಸ ದರದ ಪ್ರಕಾರ ಬಸ್‌ನಲ್ಲಿ ದೊಡ್ಡವರಿಗೆ 300, ಮಕ್ಕಳಿಗೆ 150, ವಿದೇಶಿಗರಿಗೆ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಅರಣ್ಯ ಪ್ರದೇಶದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಸಫಾರಿ ಕೇಂದ್ರದಿಂದ ಹೊರಡುವ ಸಫಾರಿ ವಾಹನ ಸುಮಾರು 1 ವರೆ ಗಂಟೆಗಳ ಕಾಲ ಕಾಡಿನಲ್ಲಿ ಸುತ್ತು ಹಾಕಿಸಿಕೊಂಡು ಬರಲಾಗುತ್ತದೆ. ಈ ವೇಳೆ ಅದೃಷ್ಟ ಇದ್ದರೆ ಮಾತ್ರ ವನ್ಯ ಜೀವಿಗಳ ದರ್ಶನವಾಗುತ್ತದೆ. ಇಲ್ಲವಾದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಇದೀಗ ಸಫಾರಿ ದರ ಹೆಚ್ಚಿಸಿರುವುದು ಪ್ರಾಣಿ ಪ್ರಿಯರು ಹಾಗೂ ವನ್ಯ ಜೀವಿ ಛಾಯಾಗ್ರಾಹಕರ ಬೇಸರಕ್ಕೆ ಕಾರಣವಾಗಿದೆ.

ಪರಿಷ್ಕೃತ ದರ ಎಷ್ಟು ?
ಇನ್ನು ಕೇವಲ ಸಫಾರಿ ದರವನ್ನು ಮಾತ್ರ ಅರಣ್ಯ ಇಲಾಖೆ ಹೆಚ್ಚು ಮಾಡಿಲ್ಲ. ಇದರ ಜೊತೆಗೆ ಬೇರೆ ಬೇರೆ ದರವನ್ನು ಸಹ ಹೆಚ್ಚು ಮಾಡಲಾಗಿದೆ. ಸಫಾರಿಗೆ ಮಾತ್ರವಲ್ಲ ಬೇರೆ ಬೇರೆ ದರಗಳಲ್ಲೂ ಏರಿಕೆ ಮಾಡಲಾಗಿದೆ. ವಾಹನ ನಿಲುಗಡೆಗೆ ಬೇರೆ ಶುಲ್ಕ ಜಿಪ್ಸಿಯ ಸಫಾರಿ 3000ರೂಪಾಯಿಂದ 3500 ರೂಪಾಯಿಗೆ ಹೆಚ್ಚಳ, ವಿದೇಶಿಗರಿಗೆ 5000 ರೂಪಾಯಿ, 9 ಆಸನದ ಕ್ಯಾಂಪರ್ ವಾಹನ ಶುಲ್ಕ 5000ರೂಪಾಯಿಂದ 7000ಕ್ಕೆ ಹೆಚ್ಚಳ.

mysuru safari

ಏಪ್ರಿಲ್ 1 ರಿಂದ ಸಫಾರಿಯ ನೂತನ ದರ ಜಾರಿ

ಗಜೇಂದ್ರ ವಸತಿಗೃಹಕ್ಕೆ 2,500 ರೂಪಾಯಿ ನಿಗದಿ ಮಾಡಲಾಗಿದೆ ವಿದೇಶಿಗರಿಗೆ 4,000 ರೂಪಾಯಿ ನಿಗದಿ ಮಾಡಲಾಗಿದೆ. ವಿಐಪಿ ಕೊಠಡಿಗೆ 3,000 ರೂಪಾಯಿ, ವಿದೇಶಿಗರಿಗೆ 6,000ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು 10 ಹಾಸಿಗೆಗೆಳ ಡಾಮೆಟ್ರಿಗೆ ಈ ಹಿಂದೆ ಇದ್ದ 2,000 ರೂಪಾಯಿಗೆ ಬದಲು 2,500 ರೂಪಾಯಿ, ವಿದೇಶಿಗರಿಗೆ 5,000 ರೂಪಾಯಿ ನಿಗದಿ ಮಾಡಲಾಗಿದೆ. 20 ಹಾಸಿಗೆಗಳ ಡಾಮೆಟ್ರಿಗೆ 4,000ದಿಂದ 5,000 ರೂಪಾಯಿಗೆ ಹೆಚ್ಚಿಸಲಾಗಿದೆ. ವಿದೇಶಿಗರಿಗೆ ಬರೋಬ್ಬರಿ 10,000 ನಿಗದಿ ಮಾಡಲಾಗಿದೆ. ಇಷ್ಟೇ ಅಲ್ಲ ವಾಹನ ನಿಲುಗಡೆ ಶುಲ್ಕ ಕ್ಯಾಮೆರಾ ಬಳಕೆಯ ಶುಲ್ಕದಲ್ಲೂ ಬದಲಾವಣೆ ಮಾಡಲಾಗಿದೆ.

ನಾಲ್ಕು ಚಕ್ರದ ವಾಹನಕ್ಕೆ 50 ರೂಪಾಯಿ, ಟೆಂಪೋ ಟ್ರ್ಯಾವಲರ್‌ಗೆ 100 ರೂಪಾಯಿ ಹಾಗೂ ಬಸ್‌ಗಳಿಗೆ 150 ರೂಪಾಯಿ ನಿಗದಿ ಮಾಡಲಾಗಿದೆ. ಎಸ್‌ಎಲ್‌ಆರ್ ಕ್ಯಾಮೆರಾ ಬಳಕೆಯ ಶುಲ್ಕವನ್ನು 500 ರಿಂದ 1,500 ರೂಪಾಯಿಗೆ ಹೆಚ್ಚಿಸಲಾಗಿದೆ. ಇದು ನಾಗರಹೊಳೆ ಸೇರಿದಂತೆ ಬೇರೆ ಬೇರೆ ಸಫಾರಿಗಳಲ್ಲೂ ಹಿಂದೆ ಇದ್ದ ದರಗಳಲ್ಲಿ ಏರಿಕೆ ಮಾಡಲಾಗಿದೆ.

mysuru safari

ಕ್ಯಾಮೆರಾ ಬಳಕೆಯ ಶುಲ್ಕದಲ್ಲೂ ಬದಲಾವಣೆ ಮಾಡಲಾಗಿದೆ

ದರ ಏರಿಕೆ ಸರ್ಕಾರದ ಆಡಳಿತಾತ್ಮಕ ನಿರ್ಧಾರ. ಕಳೆದ ನಾಲ್ಕು ವರ್ಷಗಳಿಂದ ದರದಲ್ಲಿ ಯಾವುದೇ ಏರಿಕೆಯಾಗಿರಲಿಲ್ಲ. ಈಗ ಆಗಿದೆ. ಇದರಿಂದ ಯಾರಿಗೂ ಸಫಾರಿಯನ್ನು ತಪ್ಪಿಸುವ ಉದ್ದೇಶ ಇಲ್ಲ. ಪ್ರತಿಯೊಬ್ಬರಿಗೂ ಕಾಡಿಗೆ ಬರುವ ಹಕ್ಕಿದೆ. ಕಾನೂನಿನ ನಿಯಮಗಳನ್ನು ಪಾಲಿಸಿ ಕಾಡಿನ ಸೌಂದರ್ಯವನ್ನು ಆಸ್ವಾದಿಸುವ, ವನ್ಯಜೀವಿಗಳನ್ನು ನೋಡಿ ಖುಷಿಪಡಬಹುದಾಗಿದೆ. ಇನ್ನು ದರ ಏರಿಕೆಗೆ ತಕ್ಕಂತೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಎಲ್ಲಾ ರೀತಿ ಸೌಕರ್ಯಕ್ಕೆ ವ್ಯವಸ್ಥೆ ಮಾಡಲಾಗುವುದು. ಕಾಡಿಗೆ ಬಂದ ಯಾರು ನಿರಾಶರಾಗಬಾರದು. ಎಲ್ಲರೂ ಖುಷಿಯಿಂದ ಕಾಡಿನಿಂದ ವಾಪಸ್ಸು ಹೋಗಬೇಕು. ಮತ್ತೆ ಇಲ್ಲಿಗೆ ಖುಷಿಯಿಂದ ಬರಬೇಕು. ತಮ್ಮ ಸ್ನೇಹಿತರು ಹಾಗೂ ಬಂಧುಗಳಿಗೂ ಹೇಳಿ ಅವರನ್ನಹ ಕರೆ ತರಬೇಕು ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಐಎಫ್‌ಎಸ್ ಅರಣ್ಯ ಸಂರಕ್ಷಕರು ಹಾಗೂ ನಿರ್ದೇಶಕರಾದ ನಟೇಶ್ ಎಸ್. ಆರ್ ಹೇಳಿದ್ದಾರೆ.

natesh

ಐಎಫ್‌ಎಸ್ ಅರಣ್ಯ ಸಂರಕ್ಷಕರು ಹಾಗೂ ನಿರ್ದೇಶಕರಾದ ನಟೇಶ್ ಎಸ್. ಆರ್

ಸಫಾರಿ ದರ ಏರಿಕೆ ವಿಚಾರ ಅದು ಆಡಳಿತಾತ್ಮಕ ನಿರ್ಧಾರ. ಇಲಾಖೆ ಇದರ ಸಾಧಕ‌ ಬಾಧಕಗಳನ್ನು ಚರ್ಚೆ ಮಾಡಿ ನಿರ್ಧಾರ ಮಾಡಿರುತ್ತಾರೆ. ಇದರ ಜೊತೆಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಾರೆ. ಇದು ದುಬಾರಿ ಆಯ್ತು. ಬಡವರಿಗೆ ಮಧ್ಯಮ ವರ್ಗದವರಿಗೆ ಸಫಾರಿ ಕಷ್ಟ ಅನ್ನೋದು ಬೇರೆ ಚರ್ಚೆ. ಆದರೆ ಒಬ್ಬ ವನ್ಯಜೀವಿ ತಜ್ಞನಾಗಿ ನನ್ನ ಕಳಕಳಿಯಿರುವುದು, ಇದು ವನ್ಯಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ಯಾಕಂದ್ರೆ ಎಲ್ಲರಿಗೂ ಗೊತ್ತಿರುವಂತೆ ಸಫಾರಿಗೆ ಬಂದವರಿಗೆಲ್ಲಾ ಪ್ರಾಣಿಗಳು ಕಾಣಿಸುವುದಿಲ್ಲ. ಹೀಗಾಗಿ ಹೆಚ್ಚಿನ ಹಣ ನೀಡಿದ್ದೇವೆ ಹೆಚ್ಚು ಕಾಲ ಸಫಾರಿ ಮಾಡಿಸಿ, ಇನ್ನು ಸ್ವಲ್ಪ ಕಾಡಿನ ಒಳಗೆ ಹೋಗಿ ಈ ರೀತಿಯಾದ ಬೇಡಿಕೆಗಳು ಸಹಜವಾಗಿ ಬರುತ್ತದೆ. ಇದನ್ನು ಅಧಿಕಾರಿಗಳೂ ಸ್ಪಷ್ಟವಾಗಿ ನಿರಾಕರಿಸಬೇಕು. ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕು. ಯಾಕೆಂದರೆ ನಮಗೆ ಇರುವಂತೆ ಪ್ರಾಣಿಗಳಿಗೂ ಒತ್ತಡ, ವೈಯಕ್ತಿಕ ಬದುಕು ಇರುತ್ತದೆ. ಯಾವುದೇ ಕಾರಣಕ್ಕೂ ಇದು ವನ್ಯ ಜೀವಿಗಳ ಮೇಲೆ ಪರಿಣಾಮ ಬೀರಬಾರದು‌. ಸಾಧ್ಯವಾದರೆ ವಿದ್ಯಾರ್ಥಿಗಳಿಗೆ ಪ್ರಾಣಿ ಅಧ್ಯಯನಕ್ಕಾಗಿ ಬರುವವರಿಗೆ ಸಂಬಂಧಪಟ್ಟ ಸಂಸ್ಥೆಗಳ ಗುರುತಿನ ಚೀಟಿ ಪಡೆದು ರಿಯಾಯಿತಿ ನೀಡಬಹುದು ಎನ್ನುವುದನ್ನು ಪರಿಶೀಲಿಸಬಹುದು ಎಂದು ವನ್ಯಜೀವಿ ತಜ್ಞರಾದ ರಾಜ್‌ಕುಮಾರ್ ದೇವರಾಜ್ ಅರಸ್ ತಿಳಿಸಿದ್ದಾರೆ.

rajkumar

ವನ್ಯಜೀವಿ ತಜ್ಞರಾದ ರಾಜ್‌ಕುಮಾರ್ ದೇವರಾಜ್ ಅರಸ್

ಸಾರ್ವಜನಿಕ ವಲಯದಲ್ಲಿ ಚರ್ಚೆ
ಸದ್ಯ ಸಫಾರಿ ದರ ಹೆಚ್ಚಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೊದಲೇ ಕೊರೊನಾ ಸಂಕಷ್ಟದಿಂದ ಜನರು ತೊಂದರೆಗೆ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ರಾಕೆಟ್ ವೇಗ ಪಡೆದಿದೆ. ಹೀಗಿರುವಾಗ ಸಫಾರಿ ಬೆಲೆ ಜಾಸ್ತಿಯಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಚಿವರು ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಈ ನಿರ್ಧಾರವನ್ನು ಮತ್ತೆ ಪರಿಶೀಲಿಸಬೇಕು ಎನ್ನವುದು ಎಲ್ಲರ ಮನವಿ. ಇದೆಲ್ಲಾ ಏನೇ ಇರಲಿ ನಮ್ಮ ರಾಷ್ಟ್ರೀಯ ಸಂಪತ್ತಾದ ಅರಣ್ಯ ಹಾಗೂ ವನ್ಯ ಜೀವಿಗಳಿಗೆ ಇದರಿಂದ ಯಾವುದೇ ಸಮಸ್ಯೆ ಆಗದಿರಲಿ. ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಲು ನಾಂದಿಹಾಡದಿರಲಿ ಎನ್ನವುದೇ ಟಿವಿ9 ಡಿಜಿಟಲ್‌ನ ಆಶಯ.

(ಚಿತ್ರಕೃಪೆ: ಸಫಾರಿ ಚಿತ್ರಗಳು ಎಂ.ಎನ್ ಲಕ್ಚ್ಮೀ ನಾರಾಯಣ್ ಯಾದವ್ ಮೈಸೂರು)

(ವರದಿ: ರಾಮ್ ಮೈಸೂರು- 9980914168)

ಇದನ್ನೂ ಓದಿ: ಸಿನಿಮಾ ಹೀರೋಗಾಗಿ ಬಂಡೀಪುರದಲ್ಲಿ ರಾತ್ರಿ ಸಫಾರಿ! ಕಾನೂನುಬಾಹಿರ ವಿಡಿಯೋ ವೈರಲ್

(Safari becomes more expensive in Mysore as all the prices got hiked and tourists suffers)