ಕರ್ನಾಟಕದ ಇಬ್ಬರು ಶಿಕ್ಷಕರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗರಿ
ಶಿಕ್ಷಕರು, ಮಕ್ಕಳ ಭವಿಷ್ಯವನ್ನು ರೂಪಿಸಲು ತಮ್ಮ ಜೀವನವನ್ನ ಮುಡುಪಾಗಿಟ್ಟವರು. ಅಂತಹ ಶಿಕ್ಷಕರಿಗಾಗಿ 1958 ರಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. ಅದರಂತೆ ಕರ್ನಾಟಕದ ಇಬ್ಬರು ಉಪನ್ಯಾಸಕರಿಗೆ ರಾಷ್ಟ್ರಿಯ ಪ್ರಶಸ್ತಿ ಒಲಿದಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ.
ಮೈಸೂರು, ಆ.27: ಕರ್ನಾಟಕದ ಇಬ್ಬರು ಉಪನ್ಯಾಸಕರಿಗೆ ರಾಷ್ಟ್ರಿಯ ಪ್ರಶಸ್ತಿ ಒಲಿದಿದೆ. ಮೈಸೂರು ಜಿಲ್ಲೆಯ ಹುಣಸೂರು (Hunsur) ಮಹಿಳಾ ಪಿಯು ಕಾಲೇಜಿನ ಉಪನ್ಯಾಸಕರಾಗಿರುವ ಹೆಚ್ಎನ್ ಗಿರೀಶ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಉಪನ್ಯಾಸಕ ನಾರಾಯಣಸ್ವಾಮಿ ಆರ್ ಎಂಬುವವರಿಗೆ ರಾಷ್ಟ್ರಿಯ ಪ್ರಶಸ್ತಿ ಲಭಿಸಿದೆ.
ಎಚ್ ಐ ವಿ ಬಗ್ಗೆ ಜಾಗೃತಿ ಮೂಡಿಸಿದ ಮೊಟ್ಟ ಮೊದಲ ಶಿಕ್ಷಕ ಗಿರೀಶ್
ದಿವಂಗತ ಎಚ್ ಎನ್ ನಿಂಗೇಗೌಡ ಹಾಗೂ ಎಂ ಬಿ ಲಿಲಿತಮ್ಮ ದಂಪತಿ ಪುತ್ರರಾದ ಹೆಚ್ಎನ್ ಗಿರೀಶ್ ಅವರು ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಎಚ್ ಐ ವಿ ಬಗ್ಗೆ ಜಾಗೃತಿ ಮೂಡಿಸಿದ ಮೊಟ್ಟ ಮೊದಲ ಶಿಕ್ಷಕರಾಗಿದ್ದು, ಟಿ ನರಸೀಪುರ ತಾಲ್ಲೂಕಿನ ಬನ್ನೂರು ಗ್ರಾಮದಲ್ಲಿ ಏಡ್ಸ್‌ಮ್ಮ ದೇಗುಲ ಸ್ಥಾಪಿಸಿ ಜಾಗೃತಿ ಮೂಡಿಸಿ ಮೆಚ್ಚುಗೆ ಗಳಿಸಿದ್ದಾರೆ. ಇವರು ಹಿರಿಯ ವಕೀಲರು ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಹೆಚ್ ಎನ್ ವೆಂಕಟೇಶ್ ಅವರ ಸಹೋದರ ಕೂಡ ಹೌದು.
ಇದನ್ನೂ ಓದಿ:‘ಕೆಜಿಎಫ್ 2’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿದ್ದಂತೆ ಬಾಲಿವುಡ್ನಲ್ಲಿ ನಡೆದ ಬೆಳವಣಿಗೆ ಏನು?
ಹೆಚ್ ಎನ್ ಗಿರೀಶ್ ಹಿನ್ನೆಲೆ
ಎಚ್ ಎನ್ ಗಿರೀಶ್ ಮೂಲತಃ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹನಗೋಡು ಹೋಬಳಿಯ ಹಿಂಡಗೂಡ್ಲು ಗ್ರಾಮದವರು. ತಂದೆ ಹೆಚ್ ಎನ್ ನಿಂಗೇಗೌಡ ಶಿಕ್ಷಕರು. ತಾಯಿ ಎಂ ಬಿ ಲಲಿತಮ್ಮ ಗೃಹಿಣಿ. ಗಿರೀಶ್ ಅವರ ತಂದೆ ನಿಂಗೇಗೌಡರ ಹೆಸರು ಹುಣಸೂರು ಹನಗೋಡು ಭಾಗದಲ್ಲಿ ಜನಜನಿತವಾಗಿದೆ. ನಿಂಗೇಗೌಡರು ಸಾವಿರಾರು ಜನರಿಗೆ ಶಿಕ್ಷಣ ನೀಡಿದ್ದು ಮಾತ್ರವಲ್ಲ ತಮ್ಮ ಕೈಲಾದ ಸಹಾಯ ಮಾಡಿ ಅವರ ಭವಿಷ್ಯವನ್ನು ಬೆಳಗಿದ್ದಾರೆ. ಹೀಗಾಗಿ ಇಂದಿಗೂ ನೀವು ಆ ಭಾಗದಲ್ಲಿ ಯಾರನ್ನು ಕೇಳಿದರು ಅವರು ನಮ್ಮ ಪಾಲಿನ ದೇವರು ಅನ್ನೋ ಉದ್ಘಾರ ಗೌರವ ಕಾಣಸಿಗುತ್ತದೆ. ಇನ್ನು ಗಿರೀಶದ ಸಹೋದರ ಎಚ್ ಎನ್ ವೆಂಕಟೇಶ್ ಹಿರಿಯ ವಕೀಲರಾಗಿದ್ದಾರೆ. ಅಷ್ಟೇ ಅಲ್ಲ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಗೌರವ ಸಂಪಾದಕರಾಗಿದ್ದಾರೆ. ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನ್ಯಾಯಾಧೀಶರ ಹಾಗೂ ಸರ್ಕಾರಿ ಅಭಿಯೋಜಕರ ಆಯ್ಕೆ ಪರೀಕ್ಷೆಗಾಗಿ ಉಚಿತ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವೃತ್ತಿ ಬಾಂಧವರಾದ ವಕೀಲರು ಸೇರಿ ಹಲವರಿ ಅಗತ್ಯ ಕಿಟ್ ವಿತರಣೆ ಮಾಡಿ ನೆರವಾಗಿದ್ದಾರೆ. ಅಂತಹ ಕುಟುಂಬದ ಹಿನ್ನೆಲೆಯಲ್ಲಿ ಬಂದ ಹೆಚ್ ಎನ್ ಗಿರೀಶ್ ಕನ್ನಡಿಗರು ಮೈಸೂರಿಗರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ನಡೆದು ಬಂದ ದಾರಿ!
ಹೆಚ್ ಎನ್ ಗಿರೀಶ್ ತುಂಬು ಕುಟುಂಬದಲ್ಲಿ ಜನಿಸಿದವರು. ಅವರದ್ದು ರೈತ ಕುಟುಂಬ. ತಂದೆ ಶಿಕ್ಷಕರಾಗಿ ಜನಮೆಚ್ಚಿದ ಶಿಕ್ಷಕರಾಗಿದ್ದರು. ತಮ್ಮ ಮಕ್ಕಳಿಗೆ ಅವರು ಎಂದು ಯಾವುದಕ್ಕೂ ಕಡಿಮೆಯಾಗದಂತೆ ನೋಡಿಕೊಂಡರು. ಗಿರೀಶ್ ಸ್ವಗ್ರಾಮದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಆರಂಭಿಸಿದರು. ಹನಗೋಡಿನಲ್ಲಿ ಪಿಯುಸಿ ಮುಗಿಸಿ ನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ ಎಸ್ಸಿ ಪದವಿ ಪಡೆದು. ತಮ್ಮ ತಂದೆಯ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು ಶಿಕ್ಷಣ ನೀಡುವ ಉಪನ್ಯಾಸಕರಾದರು. ಉಪನ್ಯಾಸಕರಾಗಿ ಬರಿ ಸಾಂಪ್ರದಾಯಿಕ ಪಾಠ ಮಾಡುವುದಕ್ಕೆ ಮಾತ್ರ ಅವರು ಸೀಮಿತರಾಗಿರಲಿಲ್ಲ. ಕಲಿಕೆ ನಿರಂತರ ಎನ್ನುವ ಮಾತನ್ನು ಅರಿತಿದ್ದ ಗಿರೀಶ್, ಕಲಿಸುವುದರ ಜೊತೆಗೆ ಕಲಿಯುವುದನ್ನು ನಿಲ್ಲಿಸಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಹೊಸದನ್ನು ಕಲಿತು ಅದನ್ನೇ ಎಲ್ಲರಿಗೂ ಕಲಿಸಿದರು.
ಗಿರೀಶ್ ಸೇವೆ ಕಲಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ಸಾಮಾಜಿಕ ಕ್ಷೇತ್ರದಲ್ಲೂ ಮುಂದುವರಿಯಿತು. ಸಮಾಜದ ಬದಲಾವಣೆಯ ಕ್ರಾಂತಿಗೆ ಗಿರೀಶ್ ಮುನ್ನುಡಿ ಬರೆದರು. ಎಚ್ ಐ ವಿ ಪೀಡಿತರನ್ನು ಸಮಾಜ ಅಸ್ಪಶ್ಯರಂತೆ ಕಾಣುತ್ತಿದ್ದ ಸಂದರ್ಬದಲ್ಲಿ ಅವರ ಬೆನ್ನಿಗೆ ನಿಂತ ಗಿರೀಶ್ ಈ ಬಗ್ಗೆ ಜನರ ಮನಸಿನಲ್ಲಿ ನಂಜಿನಂತ ಆವರಿಸಿದ್ದ ಮಡಿವಂತಿಕೆಯನ್ನು ತೊಡೆಯುವಲ್ಲಿ ಯಶಸ್ವಿಯಾಗದರೂ. ಎಚ್ ಐ ವಿ ಬಗ್ಗೆ ಜನರಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸಲು ಅವರು ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕು ಬನ್ನೂರು ಗ್ರಾಮದಲ್ಲಿ ನಿರ್ಮಿಸಿದ ಏಡ್ಸ್‌ಮ್ಮ ದೇಗುಲದ ಪರಿಕಲ್ಪನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಕಲಿಸುವ ಜೊತೆಗೆ ತಮ್ಮ ಸುದೀರ್ಘ ಅನುಭವಕ್ಕೆ ಗಿರೀಶ್ ಅಕ್ಷರ ರೂಪ ಸಹಾ ನೀಡಿದರು. 10ಕ್ಕೂ ಹೆಚ್ಚು ಮಾಹಿತಿಯ ಕಣಜಗಳನ್ನೊಳಗೊಂಡ ಪುಸ್ತಕಗಳನ್ನು ಗಿರೀಶ್ ಹೊರತಂದಿದ್ದಾರೆ. ಈ ಪುಸ್ತಕಗಳು ಒಂದಕ್ಕಿಂತ ಒಂದು ಉಪಯುಕ್ತ ಮಾಹಿತಿಗಳ ಭಂಡಾರಗಳಾಗಿವೆ. ಇವರ ಸೇವೆಗೆ ಇವರಿಗೆ ಹತ್ತು ಹಲವು ಪ್ರಶಸ್ತಿ ಸನ್ಮಾನ ಗೌರವಗಳು ಅರಸಿ ಬಂದಿವೆ. ಅದರಲ್ಲಿ ಪ್ರಮುಖವಾದವು ನೋಯ್ಡಾದ ಜಿ 20 ಶೃಂಗ ಸಭೆಯ ನ್ಯಾಷನಲ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ ಹಾಗೂ ಕಳೆದ ವರ್ಷ ರಾಜ್ಯ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿ. ಇದೀಗ ಸಿಕ್ಕಿರುವ ಕೇಂದ್ರ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ.
ರಾಷ್ಟ್ರೀಯ ಪುರಸ್ಕಾರ ಆಯ್ಕೆ ಪ್ರಕ್ರಿಯೆ
ರಾಷ್ಟ್ರೀಯ ಪುರಸ್ಕಾರ ಸುಲಭದ ಮಾತಲ್ಲ. ದೇಶದಾದ್ಯಂತ ಇರುವ ಕೋಟ್ಯಾಂತರ ಶಿಕ್ಷಕರಲ್ಲಿ ಈ ಗೌರವಕ್ಕೆ ಆಯ್ಕೆಯಾಗಿರುವುದು 50 ಶಿಕ್ಷಕರು ಮಾತ್ರ. ಅದರಲ್ಲಿ ರಾಜ್ಯ ಇಬ್ಬರು ಶಿಕ್ಷಕರು ಹಾಗೂ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ಹೆಚ್ ಎನ್ ಗಿರೀಶ್. ಈ ಆಯ್ಕೆ ಸಂಪೂರ್ಣ ಆನ್‌ಲೈನ್ ಮೂಲಕವೇ ಆಗುವುದು ಯಾವುದೇ ಅರ್ಜಿ ಹಾಕಿ, ಶಿಫಾರಸ್ಸು ಮಾಡಿಸಿ ಅಥವಾ ಬೇರೆ ರೀತಿಯ ಬ್ಯಾಕ್ ಡೋರ್ ಎಂಟ್ರಿಗೆ ಅವಕಾಶವೇ ಇಲ್ಲ. ಕೇಂದ್ರ ಶಿಕ್ಷಣ ಸಚಿವಾಲಯದ ವೆಬ್‌ನಲ್ಲಿ ಅರ್ಹ ಶಿಕ್ಷಕರು ತಮ್ಮ ಸೇವೆ ಸಾಧನೆ ಬಗ್ಗೆ ಪೋಟೋ, ಶೈಕ್ಷಣಿಕ ಚಟುವಟಿಕೆ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಇದಾದ ನಂತರ ಅಸಲಿ ಆಟ ಶುರುವಾಗುತ್ತದೆ. ಮೊದಲು ಇದನ್ನು ಜಿಲ್ಲಾ ಮಟ್ಟದ ಸಮಿತಿ ಪರಿಶೀಲನೆ ಮಾಡಿ ಅದರಲ್ಲಿ ಕೆಲವರನ್ನು ಆಯ್ಕೆ ಮಾಡಿ ರಾಜ್ಯ ಸಮಿತಿಗೆ ಕಳುಹಿಸುತ್ತಾರೆ. ಈ ರೀತಿ ಫಿಲ್ಟರ್ ಆಗಿ ಬಂದ ಹೆಸರಗಳನ್ನು ರಾಜ್ಯ ಸಮಿತಿಯವರು ಜರಡಿ ಹಿಡಿದು ಅಳೆದು ತೂಗಿ ರಾಷ್ಟ್ರೀಯ ಸಮಿತಿಗೆ ಕಳುಹಿಸಲಾಗುತ್ತದೆ. ಈ ಬಾರಿ ರಾಜ್ಯ ಸಮಿತಿ ಕೇಂದ್ರ ಸಮಿತಿಗೆ ಒಟ್ಟು 6 ಜನರ ಹೆಸರನ್ನು ಕಳುಹಿಸಿತ್ತು. ಇದೇ ರೀತಿ ದೇಶದಾದ್ಯಂತ ಬಂದಿದ್ದು 150 ಶಿಕ್ಷಕರ ಹೆಸರು. ಅದರಲ್ಲಿ ಅಂತಿಮವಾಗಿ ಕೇಂದ್ರ ಸಮಿತಿ ದೇಶದ 50 ಶಿಕ್ಷಕರನ್ನು ಆಯ್ಕೆ ಮಾಡಿದೆ. ಅದರಲ್ಲಿ ಹೆಚ್ ಎನ್ ಗಿರೀಶ್ ಸಹಾ ಒಬ್ಬರು.
ಕ್ರಿಯೆಟಿವಿಟಿ ಸಮಾಜಮುಖಿ ತುಡಿತಕ್ಕೆ ಒಲಿದ ಪ್ರಶಸ್ತಿ
ಹೆಚ್ ಎನ್ ಗಿರೀಶ್ ಅವರು ರಾಷ್ಡ್ರೀಯ ಪುರಸ್ಕಾರ ಪಡೆದ ಹಾದಿ ಅಷ್ಟೇನು ಸುಲಭವಾಗಿರಲಿಲ್ಲ. ಕಠಿಣ ದಾರಿಯನ್ನು ಸೆವೆಸಿ ಸವಾಲುಗಳನ್ನು ಸ್ವೀಕರಿಸಿ, ನೋವು ಅವಮಾನಗಳನ್ನು ನುಂಗಿಕೊಂಡು ಇಂದು ಕೋಟ್ಯಾಂತರ ಜನರ ಮುಂದೆ ಸಾಧಕರಾಗಿ ನಿಂತಿದ್ದಾರೆ. ಮೂರು ದಶಕಗಳಿಂದ ಶಿಕ್ಷಣವನ್ನೇ ಊಟ ಮಾಡುತ್ತಾ ಉಸಿರಾಡುತ್ತಾ ಶಿಕ್ಷಣ ಕ್ಷೇತ್ರದಲ್ಲೇ ಕಳೆದು ಹೋಗಿದ್ದಾರೆ. ತಾವು ಹೋದ ಕಾಲೇಜಿನ ಶಿಕ್ಷಣ ಗುಣಮಟ್ಟ ಮಾತ್ರವಲ್ಲ ಆ ಕಾಲೇಜಿನ ಸರ್ವಾಂಗಿಣ ಅಭಿವೃದ್ಧಿಗೆ ಗಿರೀಶ್ ಶ್ರಮಿಸಿದ್ದಾರೆ ಅಷ್ಟೇ ಅಲ್ಲ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅತ್ಯಾಧುನಿಕ ಲ್ಯಾಬ್ ಇಂಟರ್‌ನೆಟ್ ವೈಫೈ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ.
ಸಿಎಸ್‌ಆರ ಫಂಡ್ ಕೆಲವೊಮ್ಮೆ ತಮ್ಮ ಸಂಬಳದ ಹಣದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ತಾವು ಬರೆದ ಪುಸ್ತಕಗಳು ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಪಾಲಿಗೆ ಜ್ಞಾನದ ಬುತ್ತಿಯಾಗಿದೆ. ಇವರ ಈ ಎಲ್ಲಾ ಕಾರ್ಯಗಳು ಅವರು ಕೆಲಸ ಮಾಡುವ ಕಾಲೇಜಿನ ಫಲಿತಾಂಶದಲ್ಲಿ ಕಾಣಸಿಗುತ್ತದೆ. ಇವರು ಕರ್ತವ್ಯ ನಿರ್ವಹಿಸಿಸುವ ಕಾಲೇಜು ಶೇಕಡ 100 ಫಲಿತಾಂಶದ ಸಾಧನೆ ಮಾಡಿದೆ. ಇದೆಲ್ಲವನ್ನೂ ಪರಿಗಣಿಸಿದ ತಜ್ಜರ ಸಮಿತಿ ಇವರನ್ನು ಈ ಗೌರವಕ್ಕೆ ಆಯ್ಕೆ ಮಾಡಿದೆ. ರಾಷ್ಟ್ರೀಯ ಗೌರವಕ್ಕೆ ಪಾತ್ರರಾದರೂ ಹಿಗ್ಗದ ಹೆಚ್ ಎನ್ ಗಿರೀಶ್ ಇದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಇದು ನನ್ನ ತಂದೆ, ತಾಯಿ, ಸಹೋದರ, ವೃತ್ತಿಭಾಂದವರು ಹಾಗೂ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಸಲ್ಲಬೇಕೆಂದಿದ್ದಾರೆ. ಸರಳ ಸಜ್ಜನ ಪ್ರತಿಭಾವಂತ್ ಎಚ್ ಎನ್ ಗಿರೀಶ್ ಅವರ ಭವಿಷ್ಯ ಮತ್ತಷ್ಟು ಪ್ರಜ್ವಲಿಸುವಂತಾಗಲಿ. ಅವರಿಂದ ಮತ್ತಷ್ಟು ಸಮಾಜಮುಖಿ ಕೆಲಸಗಳಾಗಲಿ ಅವರಿಗೆ ಅಂತರಾಷ್ಟ್ರೀಯ ಮನ್ನಣೆ ಸಿಗುವಂತಾಗಲಿ ಅನ್ನೋದೆ ನಮ್ಮ ಶುಭ ಹಾರೈಕೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Tue, 27 August 24