Nandi Hills ropeway: ನಂದಿ ಬೆಟ್ಟ ರೋಪ್ ವೇಗೆ ಕೇಂದ್ರ ಅರಣ್ಯ ಇಲಾಖೆಯಿಂದ ಸಿಕ್ತು ಗ್ರೀನ್ ಸಿಗ್ನಲ್
ನಂದಿ ಬೆಟ್ಟ ರೋಪ್ ವೇ: ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾವಕ್ಕೆ ಕೇಂದ್ರ ಅರಣ್ಯ ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದು ವರದಿಯಾಗಿದೆ. ಮುಂದಿನ ತಿಂಗಳಲ್ಲೇ ರೋಪ್ ವೇ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರುವ ನಿರೀಕ್ಷೆ ಇದೆ. ವಿವರಗಳು ಇಲ್ಲಿವೆ.

ಬೆಂಗಳೂರು, ಏಪ್ರಿಲ್ 11: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ನಂದಿ ಬೆಟ್ಟದಲ್ಲಿ (Nandi Hills) ರೋಪ್ ವೇ ನಿರ್ಮಾಣ ಮಾಡುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಕೊನೆಗೂ ಪರಿಸರ ಸಚಿವಾಲಯದಿಂದ ಷರತ್ತುಬದ್ಧ ಅನುಮೋದನೆ ದೊರೆತಿದೆ. ಮೇ ತಿಂಗಳಿನಲ್ಲಿಯೇ ರೋಪ್ ವೇ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. ಇದರೊಂದಿಗೆ, ದೀರ್ಘ ಅವಧಿಯಿಂದ ನನೆಗುದಿಯಲ್ಲಿದ್ದ ಯೋಜನೆ ಚುರುಕು ಪಡೆಯಲಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEFCC) ಅಂತಿಮ ಅನುಮೋದನೆಗಾಗಿ ಕಾಯುತ್ತಿದ್ದು, ಮೇ ಒಳಗಾಗಿ ಅಂತಿಮ ಅನುಮೋದನೆ ಪಡೆಯುವ ನಿರೀಕ್ಷೆಯಲ್ಲಿದೆ.
ಕನಿಷ್ಠ ಪರಿಸರ ಅಡಚಣೆಯನ್ನು ಖಾತರಿಪಡಿಸಿಕೊಂಡ ನಂತರ ಅರಣ್ಯ ಇಲಾಖೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿದ ನಂತರ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದದ ಪರಿವೇಶ್ ಪೋರ್ಟಲ್ ಮೂಲಕ ಅನುಮೋದನೆ ನೀಡಲಾಗಿದೆ.
ನಂದಿ ಬೆಟ್ಟ ರೋಪ್ ವೇಗೆ ಅರಣ್ಯ ಇಲಾಖೆ ಷರತ್ತುಗಳು ಏನೇನು?
ಚಿಕ್ಕಬಳ್ಳಾಪುರ ಜಿಲ್ಲೆಯ ‘ನಂದಿ ಸ್ಟೇಟ್ ಫಾರೆಸ್ಟ್ ಲಿಮಿಟ್ಸ್’ ವ್ಯಾಪ್ತಿಯಲ್ಲಿ ಬರುವ ರೋಪ್ ವೇ ಯೋಜನಾ ಸ್ಥಳದಲ್ಲಿ, ಮರ ಕಡಿಯುವುದನ್ನು ನಿಷೇಧಿಸುವುದು (ನೀಲಗಿರಿ ಮರವನ್ನು ಹೊರತುಪಡಿಸಿ), ಬ್ಲಾಸ್ಟಿಂಗ್ ಅಥವಾ ಡ್ರಿಲ್ಲಿಂಗ್ ನಿಷೇಧಿಸುವುದು ಮತ್ತು ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುಬೇಕೆಂಬ ಷರತ್ತುಗಳನ್ನು ವಿಧಿಸಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಯಾವುದೇ ರಸ್ತೆಗಳನ್ನು ನಿರ್ಮಿಸಲಾಗುವುದಿಲ್ಲ ಮತ್ತು ಅರಣ್ಯ ಪ್ರದೇಶದಲ್ಲಿ ಜೆಸಿಬಿಗಳನ್ನು ಬಳಸುವುದಿಲ್ಲ ಎಂಬ ಬಗ್ಗೆ ಖಾತರಿ ನೀಡಬೇಕು ಎಂದೂ ಹೇಳಲಾಗಿದೆ.
ನಂದಿ ಬೆಟ್ಟ ರೋಪ್ ವೇ ಯೋಜನೆಯ ವಿವರ
ನಂದಿ ಬೆಟ್ಟವು ಕರ್ನಾಟಕದ, ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರಿಯ ಗಿರಿಧಾಮವಾಗಿದೆ. ಆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಅನಿಯಂತ್ರಿತ ಪ್ರವಾಸೋದ್ಯಮಕ್ಕೆ ಪರಿಹಾರವಾಗಿ 2.93 ಕಿ.ಮೀ ಉದ್ದದ ರೋಪ್‌ವೇ ಯೋಜನೆಯ ಪ್ರಸ್ತಾಪ ಮಾಡಲಾಗಿತ್ತು. ವಾಹನ ದಟ್ಟಣೆಯಿಂದ ಉಂಟಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶವೂ ಈ ಯೋಜನೆಯ ಹಿಂದಿದೆ. ಒಟ್ಟು 93.40 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಎಲ್ಲಾ ರೀತಿಯ ಅನುಮೋದನೆಗಳು ದೊರೆತ ಬಂದ ನಂತರ ಒಂದು ವರ್ಷದೊಳಗೆ ರೋಪ್ ವೇ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ನಂದಿ ಬೆಟ್ಟ ಕುಸಿಯುವ ಆತಂಕ: ರೂಪ್ ವೇ ಕಾಮಗಾರಿ, ರೆಸಾರ್ಟ್ಗಳನ್ನು ಬಂದ್ ಮಾಡಿ; ಪರಿಸರವಾದಿಗಳು
ನಂದಿ ಬೆಟ್ಟದ ಬುಡದಿಂದ ರೋಪ್‌ವೇ ಪ್ರಾರಂಭವಾಗಲಿದ್ದು, ಸುಮಾರು ಏಳು ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿರಲಿದೆ. ಅದರಲ್ಲಿ 86 ಗುಂಟೆ ಅರಣ್ಯ ಭೂಮಿಯಾಗಿದ್ದು, ನಂದಿ ಬೆಟ್ಟದ ತುದಿಯ ಭೂಮಿಯಾಗಿದೆ. ಇನ್ನೂ 2 ಎಕರೆ ಭೂಮಿ ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ, ನಿಗದಿತ ಸಮಯಕ್ಕೆ ಪೂರ್ಣಗೊಂಡರೆ ಇದು ಕರ್ನಾಟಕದ ಮೊದಲ ರೋಪ್‌ವೇ ಯೋಜನೆಯಾಗಿ ಹೊರಹೊಮ್ಮಲಿದೆ ಎಂದು ವರದಿ ತಿಳಿಸಿದೆ.