ಬೆಂಗಳೂರು: ಚರ್ಮಗಂಟು ಕಾಯಿಲೆಯು ಕರ್ನಾಟಕದಲ್ಲಿಯೂ ರಾಸುಗಳನ್ನು ತೀವ್ರವಾಗಿ ಕಾಡುತ್ತಿದೆ. 2020ರಿಂದೀಚೆಗೆ ಸುಮಾರು 2 ಲಕ್ಷ ರಾಸುಗಳು ಈ ಕಾಯಿಲೆಯಿಂದ ಸಾವನ್ನಪ್ಪಿವೆ. ಈ ಕಾಯಿಲೆಯನ್ನು ಭಾರತೀಯ ಕೃಷಿ ಸಂಶೋಧನಾ ಪ್ರತಿಷ್ಠಾನ (Indian Council for Agricultural Research – ICAR), ಪಶುಆರೋಗ್ಯ ಸಂಶೋಧನಾ ಸಂಸ್ಥೆ (Indian Veterinary Research Institute – IVRI), ಗೊರಸು ಪ್ರಾಣಿಗಳ ಸಂಶೋಧನಾ ಸಂಸ್ಥೆ (National Research Centre on Equines – NRCE) ಅಭಿವೃದ್ಧಿಪಡಿಸಿರುವ ಲಸಿಕೆಯಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಪಶುಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ ಬಿ.ಆರ್.ಗುಲಾಟಿ, ದೇಶೀಯ ಲಸಿಕೆಗಳ ಬಳಕೆಯಿಂದ ಚರ್ಮಗಂಟು ರೋಗವನ್ನು ನೂರಕ್ಕೆ ನೂರರಷ್ಟು ತಡೆಗಟ್ಟಲು ಸಾಧ್ಯವಿದೆ. ಕರ್ನಾಟಕದ ಮಾಲೂರು ಮತ್ತು ಗುಜರಾತ್ನ ಅಹಮದಾಬಾದ್ನಲ್ಲಿರುವ ಔಷಧ ತಯಾರಿಕಾ ಕಂಪನಿಗಳು ಈ ಲಸಿಕೆಗಳ ಉತ್ಪಾದನೆಗಾಗಿ ಒಪ್ಪಂದ ಮಾಡಿಕೊಂಡಿವೆ. ಮಾಲೂರಿನ ಬಯೊವೆಟ್ ಕಂಪನಿಯು ಪ್ರಾಯೋಗಿಕ ಲಸಿಕೆಗಳನ್ನೂ ಒದಗಿಸಿದೆ. ಪಶು ಆರೋಗ್ಯ ಕೇಂದ್ರದ ಅನುಮೋದನೆಯ ನಂತರ ಈ ಲಸಿಕೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಕುರಿ ಮತ್ತು ಮೇಕೆಗಳನ್ನು ಬಾಧಿಸುವ ವರ್ಗಕ್ಕೆ ಚರ್ಮಗಂಟು ಹರಡುವ ಎಲ್ಎಸ್ಡಿ ವೈರಸ್ ಸಹ ಸೇರುತ್ತದೆ. ಮೇಕೆಗೆ ಕೊಡುವ ಲಸಿಕೆಯನ್ನು ಹಸುಗಳಿಗೂ ಕೊಡುವ ಮೂಲಕ ಚರ್ಮಗಂಟು ರೋಗ ತಡೆಗೆ ಪ್ರಯತ್ನಿಸಲಾಗುತ್ತಿದೆ. ಆದರೆ ಈ ಲಸಿಕೆಯು ರೋಗದ ಸಾಧ್ಯತೆಯನ್ನು ಶೇ 70ರಿಂದ 80ರಷ್ಟು ಮಾತ್ರವೇ ಕಡಿಮೆ ಮಾಡುತ್ತಿತ್ತು. ಇದೀಗ ಹಸುಗಳಿಗೆ ಪ್ರತ್ಯೇಕ ಲಸಿಕೆ ತಯಾರಾಗಿರುವುದು ರೋಗ ನಿಯಂತ್ರಣದ ಅವಕಾಶವನ್ನು ಹೆಚ್ಚಿಸಿದೆ.
ಕರ್ನಾಟಕದಲ್ಲಿ ಈವರೆಗೆ 3 ಲಕ್ಷಕ್ಕೂ ಹೆಚ್ಚು ಚರ್ಮಗಂಟು ಕಾಯಿಲೆ ಪ್ರಕರಣಗಳು ವರದಿಯಾಗಿವೆ. 27,000 ರಾಸುಗಳು ಸಾವನ್ನಪ್ಪಿವೆ. ಈ ಕಾಯಿಲೆ ಮನುಷ್ಯರಿಗೆ ಬರುವುದಿಲ್ಲ. ಆದರೆ ಇಂಥ ಹಸುಗಳಿಂದ ಕರೆದ ಹಾಲನ್ನು ಸೇವಿಸುವ ಮೊದಲು ಚೆನ್ನಾಗಿ ಕುದಿಸಬೇಕು ಎಂದು ಪಶುವೈದ್ಯರು ಸಲಹೆ ಮಾಡುತ್ತಾರೆ.
ಇದನ್ನೂ ಓದಿ: ಚರ್ಮಗಂಟು ರೋಗ: ಹಾಸನದ ಐತಿಹಾಸಿಕ ಬೂಕನಬೆಟ್ಟದ ರಂಗನಾಥ ಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ ರದ್ದು
ಚರ್ಮಗಂಟು ಕಾಯಿಲೆಯ ಬಗ್ಗೆ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Tue, 17 January 23