ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳಿಗೂ ಬಂಪರ್ ನೀಡಲಿದೆಯಾ ರಾಜ್ಯ ಸರ್ಕಾರ?
ಈ ಬಾರಿ ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಇಲ್ಲದೆಯೇ ಪಾಸ್ ಆಗುವ ಸಾಧ್ಯತೆ ಇದೆ. ಫ್ರೆಶರ್ಸ್ ಅವರನ್ನು ಈಗಾಗಲೇ ತೇರ್ಗಡೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೇ ಮಾದರಿಯಲ್ಲಿ ಪಿಯು ಮರು ಪರೀಕ್ಷೆ ಬರೆಯುವವರನ್ನೂ ಪ್ರಮೋಟ್ ಮಾಡುವ ಸಾಧ್ಯತೆ ಇದೆ ಎಂದು ಟಿವಿ9ಗೆ ಪಿಯು ಬೋರ್ಡ್ ಮೂಲಗಳಿಂದ ಮಾಹಿತಿ.
ಬೆಂಗಳೂರು: ಕೊರೊನಾ ಕಾರಣದಿಂದಾಗಿ ಮೊದಲ ಬಾರಿಗೆ ದ್ವಿತೀಯ ಪಿಯು ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳನ್ನು ಹಿಂದಿನ ತರಗತಿಯ ಅಂಕಗಳನ್ನು ಆಧರಿಸಿ ರಾಜ್ಯ ಸರ್ಕಾರ ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಿತ್ತು. ಆದರೆ ರಿಪೀಟರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು ಎಂದು ಸೂಚಿಸಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಚಾಟಿ ಬೀಸಿದ ಬಳಿಕ ಪಿಯು ಬೋರ್ಡ್ ಸಮಿತಿಯನ್ನು ರಚಿಸಿತ್ತು. ರಿಪೀಟರ್ಸ್ ತೇರ್ಗಡೆಯ ಬಗ್ಗೆ ಸರ್ಕಾರವೂ ಗೊಂದಲದಲ್ಲಿತ್ತು. ಇದೀಗ ರಿಪೀಟರ್ಸ್ಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.
ಪ್ರತಿ ರಿಪೀಟರ್ ವಿದ್ಯಾರ್ಥಿಗೆ ಕನಿಷ್ಠ 35 ಅಂಕ ನೀಡುವ ಸಾಧ್ಯತೆ ಇದೆ. ಜೊತೆಗೆ 5 ಅಂಕ ಗ್ರೇಸ್ ನೀಡಿ ಒಟ್ಟು 40 ಅಂಕ ಕೊಟ್ಟು ಪಾಸ್ ಮಾಡಲು ಬೋರ್ಡ್ ಮುಂದಾಗಿದೆ. ಈ ಕುರಿತು 12 ಜನರ ಸಮಿತಿಯ ವರದಿಯನ್ನು ಸರ್ಕಾರ ಕೋರ್ಟ್ಗೆ ಸಲ್ಲಿಸಿದೆ. ನಾಳೆ ಕೋರ್ಟ್ನಲ್ಲಿ ರಿಪೀಟರ್ಸ್ ಪಾಸ್ ಬಗ್ಗೆ ಪ್ರಸ್ತಾಪವಾಗಲಿದೆ ಎಂದು ಟಿವಿ9ಗೆ ಪಿಯು ಬೋರ್ಡ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಆದರೆ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿ ಲಭಿಸುವುದು ಅನುಮಾನ. ಖಾಸಗಿ ಪಿಯು ವಿದ್ಯಾರ್ಥಿಗಳು ಸೋಂಕು ಕಡಿಮೆಯಾದ ಬಳಿಕ ಪರೀಕ್ಷೆ ಬರೆಯಲೇಬೇಕು ಎಂದು ಹೇಳಲಾಗುತ್ತಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಇನ್ನಷ್ಟೇ ಮಾಹಿತಿ ಬರಬೇಕಿದೆ.
SSLC ಪರೀಕ್ಷೆ ರದ್ದುಗೊಳಿಸಲು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹ
ಮೈಸೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದಾಗಿದೆ. ಅವರಿಗಿಂತ ಚಿಕ್ಕವರಾದ SSLC ಮಕ್ಕಳಿಗೇಕೆ ಪರೀಕ್ಷೆ ಮಾಡುತ್ತೀರಿ? ಮಗುವಿನ ಆರೋಗ್ಯ ಸುರಕ್ಷತೆ ಮುಖ್ಯ ನಂತರ ಶಿಕ್ಷಣ ಎಂದು ಶಿಕ್ಷಣ ಇಲಾಖೆ ಅರ್ಥ ಮಾಡಿಕೊಳ್ಳಬೇಕು. ಇದನ್ನು ಅರ್ಥ ಮಾಡಿಕೊಳ್ಳದಿದ್ರೆ ದೊಡ್ಡ ಅನಾಹುತವಾಗುತ್ತದೆ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳು ಶಾಲೆಗೆ ಹೋಗಿಲ್ಲ. ವಾರದ ಹಿಂದಷ್ಟೇ ಶೇ.40ರಷ್ಟು ಪಾಠ ಆಗಿದೆ ಎಂದು ಸರ್ಕಾರವೇ ಹೇಳಿತ್ತು. ಪಾಠ ಇಲ್ಲದೆ ಪರೀಕ್ಷೆ ಹೇಗೆ ನಡೆಸುವುದು? ಸರ್ಕಾರ ಈಗಾಗಲೇ ನಿರ್ಧರಿಸಿದಂತೆ ದಿನಕ್ಕೆ ಮೂರು ವಿಷಯಗಳು ತಲಾ 40 ಅಂಕಗಳಂತೆ ಒಂದೇ ದಿನದಲ್ಲಿ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳಿಗೆ ಅದನ್ನು ಎದುರಿಸುವ ಸಾಮರ್ಥ್ಯವಿದೆಯೇ? 100 ಅಂಕಕ್ಕೆ ಓದಿ 40 ಅಂಕಕ್ಕೆ ಬರೆಯುವುದು ಸುಲಭವಲ್ಲ, ಅದರಲ್ಲೂ ಕೋರ್ ಸಬ್ಜೆಕ್ಟ್ ಒಂದೇ ದಿನ ಇಟ್ಟರೆ ಅದನ್ನು ವಿದ್ಯಾರ್ಥಿಗಳು ಹೇಗೆ ಎದುರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಪರೀಕ್ಷೆ ವೇಳೆ ಏನಾದರೂ ಅನಾಹುತವಾದರೆ ಸರ್ಕಾರವೇ ನೇರ ಜವಾಬ್ದಾರಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು 8.5 ಲಕ್ಷ ಮಕ್ಕಳಿದ್ದಾರೆ. ಪರೀಕ್ಷೆ ನಡೆಸುವಾಗ ಒಬ್ಬರಿಗೆ 4 ಜನ ಸಂಪರ್ಕಕ್ಕೆ ಬರುತ್ತಾರೆ. ಹೀಗಾಗಿ ಪರೀಕ್ಷೆ ವೇಳೆ ಸುಮಾರು 32 ಲಕ್ಷ ಜನ ಸೇರುತ್ತಾರೆ. ಈಗ ಕೊವಿಡ್ ನೆಗೆಟಿವ್ ಸರ್ಟಿಫಿಕೇಟ್ ಕೇಳುವ ಕಾಲ ಆದರೆ ಮಕ್ಕಳ ಬಳಿ ಯಾವ ಸರ್ಟಿಫಿಕೇಟ್ ಕೇಳುತ್ತೀರಾ ಎಂದು ಅಂಕಿ ಅಂಶಗಳ ಸಮೇತ ವಿಶ್ವನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡೆಲ್ಟಾ ವೈರಸ್ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರೇ ಒಪ್ಪಿಕೊಂಡಿದ್ದಾರೆ. ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆಯ ಸಲಹೆಯನ್ನು ಸರ್ಕಾರ ತೆಗೆದುಕೊಂಡಿದೆಯೇ? ಈ ಕುರಿತು ಶಿಕ್ಷಣ ಸಮಿತಿಯ ವರದಿ ಏನು ಹೇಳುತ್ತದೆ ಎಂದು ಕೇಳಿದ ವಿಶ್ವನಾಥ್ ಇದು ಯಾವುದನ್ನು ಸರ್ಕಾರ ಗಣನೆಗೇ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.
(Pass Criteria for Karnataka’s 2nd pu repeater students Government will submit the report to HighCourt)