ಇಟ್ಟಿಗೆ ಫ್ಯಾಕ್ಟರಿಯಿಂದ ಪರಿಸರ ಮಾಲಿನ್ಯ; ಕಡಿವಾಣ ಹಾಕಲು ಚಾಮರಾಜನಗರ ಜನತೆಯ ಒತ್ತಾಯ

ಜಿಲ್ಲೆಯಲ್ಲಿರುವ ಇಟ್ಟಿಗೆ ಕಾರ್ಖಾನೆಗಳು ಅನುಮತಿ ಪಡೆದು ಬ್ರಿಕ್ಸ್ ಫ್ಯಾಕ್ಟರಿ ನಡೆಸುತ್ತಿಲ್ಲ. ಬದಲಿಗೆ ಅಧಿಕಾರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಇಟ್ಟಿಗೆ ಫ್ಯಾಕ್ಟರಿ ನಡಸುತ್ತಾ ಬಂದಿದ್ದಾರೆ. ಈ ಬ್ರಿಕ್ಸ್ ಫ್ಯಾಕ್ಟರಿಗಳನ್ನ ಇಂದು ನಿನ್ನೆಯಿಂದ ನಡೆಸಿಕೊಂಡು ಬಂದಿಲ್ಲ. 15-20 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.

ಇಟ್ಟಿಗೆ ಫ್ಯಾಕ್ಟರಿಯಿಂದ ಪರಿಸರ ಮಾಲಿನ್ಯ; ಕಡಿವಾಣ ಹಾಕಲು ಚಾಮರಾಜನಗರ ಜನತೆಯ ಒತ್ತಾಯ
ಇಟ್ಟಿಗೆ ಫ್ಯಾಕ್ಟರಿ
Follow us
|

Updated on: Mar 21, 2021 | 11:57 AM

ಚಾಮರಾಜನಗರ: ಒಂದು ಕಡೆ ಅಕ್ರಮಗಳಿಗೆ ಕಡಿವಾಣ ಹಾಕಿ ಎಂದು ಸರ್ಕಾರ ಅಧಿಕಾರಿಗಳಿಗೆ ಹೇಳುತ್ತಿದೆ. ಮತ್ತೊಂದು ಕಡೆ ಅಧಿಕಾರಿಗಳು ಹಗಲು ಕುರುಡರ ರೀತಿ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷಗೆ ಪ್ರತಿನಿತ್ಯ ನೂರಾರು ಮರಗಳು ಬೆಂಕಿಗೆ ಆಹುತಿಯಾಗುತ್ತಿವೆ. ಜೊತೆಗೆ ಪರಿಸರ ಮಾಲಿನ್ಯ ಕೂಡ ಆಗುತ್ತಿದೆ. ಇಷ್ಟೇಲ್ಲಾ ಪರಿಸರ ಮತ್ತು ವಾಯು ಮಾಲಿನ್ಯ ಆಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿರುವ ಇಟ್ಟಿಗೆ ಕಾರ್ಖಾನೆಗಳು ಅನುಮತಿ ಪಡೆದು ಬ್ರಿಕ್ಸ್ ಫ್ಯಾಕ್ಟರಿ ನಡೆಸುತ್ತಿಲ್ಲ. ಬದಲಿಗೆ ಅಧಿಕಾರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಇಟ್ಟಿಗೆ ಫ್ಯಾಕ್ಟರಿ ನಡಸುತ್ತಾ ಬಂದಿದ್ದಾರೆ. ಈ ಬ್ರಿಕ್ಸ್ ಫ್ಯಾಕ್ಟರಿಗಳನ್ನ ಇಂದು ನಿನ್ನೆಯಿಂದ ನಡೆಸಿಕೊಂಡು ಬಂದಿಲ್ಲ. 15-20 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಇಟ್ಟಿಗೆ ಬಳಕೆ ಮಾಡಿ ಸುಂದರ ಮನೆ ನಿರ್ಮಾಣ ಮಾಡಿಕೊಂಡು ಜನರೇನೋ ಆರಾಮವಾಗಿ ಇದ್ದಾರೆ. ಆದರೆ ಇದರಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ಜೋರಾಗಿಯೇ ಇದೆ. ಚಾಮರಾಜನಗರ ತಾಲೂಕಿನ ಅಮಚವಾಡಿ, ಹೊನ್ನಹಳ್ಲಿ, ಕೆಲ್ಲಂಬಳ್ಳಿ, ಬಸವನಪುರ, ಮರಿಯಾಲ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ನೂರಾರು ಬ್ರಿಕ್ಸ್ ಫ್ಯಾಕ್ಟರಿ ನಿರ್ಮಾಣ ಮಾಡಿದ್ದಾರೆ. ಒಮ್ಮೆ ಒಂದು ಬ್ರಿಕ್ಸ್ ಫ್ಯಾಕ್ಟರಿಯಲ್ಲಿ ಮೂವತ್ತು ಸಾವಿರದ ಇಟ್ಟಿಗೆ ಗೂಡು ಬೇಯಿಸೋಕೆ ಸುಮಾರು 20 ಟನ್ ಸೌದೆ ಬೇಕು. ಪ್ರತಿಯೊಬ್ಬ ಮಾಲೀಕ ಕೂಡ ತಿಂಗಳಿಗೆ ಕನಿಷ್ಠ ಎರಡು ಬಾರಿ ಇಟ್ಟಿಗೆ ಗೂಡು ಹಾಕಿ ಬೇಯಿಸುತ್ತಾನೆ. ಒಬ್ಬ ವ್ಯಕ್ತಿ ತಿಂಗಳಿಗೆ 40 ಟನ್ ಸೌದೆಯನ್ನ ಬಳಕೆ ಮಾಡುತ್ತಾನೆ. ಒಬ್ಬ ವ್ಯಕ್ತಿ 40 ಟನ್ ಸೌದೆ ಬಳಕೆ ಮಾಡಿದರೆ ನೂರಾರು ವ್ಯಕ್ತಿಗಳು ಇಟ್ಟಿಗೆ ಬೇಯಿಸುವುದರಿಂದ ತಿಂಗಳಿಗೆ ನಾಲ್ಕು ಸಾವಿರ ಟನ್ ಸೌದೆ ಸುಟ್ಟು ಭಸ್ಮವಾಗುತ್ತಿದೆ. ವರ್ಷಕ್ಕೆ 50 ಸಾವಿರ ಟನ್ ಸೌದೆಗಾಗಿ ಸಾವಿರಾರು ಮರಗಳ ಮಾರಣ ಹೋಮವೇ ನಡೆದು ಹೋಗುತ್ತಿದೆ. ಇಟ್ಟಿಗೆ ಸುಟ್ಟ ನಂತರ ಬಂದ ಬೂದಿಯನ್ನ ಎಲ್ಲೆಂದರಲ್ಲಿ ರಾಶಿ ಮಾಡುತ್ತಿದ್ದಾರೆ. ಜೋರಾಗಿ ಗಾಳಿ ಬೀಸಿದರೆ ಬ್ರಿಕ್ಸ್ ಫ್ಯಾಕ್ಟರಿ ಸುತ್ತಮುತ್ತಲ ಬೆಳೆಗಳ ಮೇಲೆ ಬಿದ್ದು ಇಳುವರಿ ಕುಂಠಿತವಾಗುವುದರ ಜೊತೆಗೆ ಪರಿಸರ ಮಾಲಿನ್ಯ ಹೇರಳವಾಗುತ್ತಿದೆ. ಅಭಿವೃದ್ಧಿಗಾಗಿ ಒಂದಿಷ್ಟು ಮರಗಳನ್ನ ಕತ್ತರಿಸಲು ಅವಕಾಶ ಕೊಡದ ಅರಣ್ಯ ಇಲಾಖೆ ಪರಿಸರವಾದಿಗಳು, ಸ್ಲೋ ಪಾಯ್ಸನ್ ರೀತಿ ತಿಂಗಳಲ್ಲಿ ನೂರಾರು ಮರಗಳು ನಾಶವಾಗುತ್ತಿದ್ದರು ಕಣ್ಮುಚ್ಚಿ ಕುಳಿತ್ತಿದ್ದಾರೆ.

ಇಟ್ಟಿಗೆ ಸುಡಲು ಕಟ್ಟಿಗೆಯನ್ನು ಕಡಿದು ಹಾಕಲಾಗಿದೆ

ಜೋಡಿಸಿಟ್ಟಿರುವ ಇಟ್ಟಿಗೆಗಳು

ನಾಗರಿಕರ ಆಗ್ರಹ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಫ್ಯಾಕ್ಟರಿ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನ ಕೇಳಿದರೆ, ಬ್ರಿಕ್ಸ್ ಫ್ಯಾಕ್ಟರಿ ನಡೆಸುವ ಬಗ್ಗೆ ಇಲ್ಲಿಯವರೆಗೆ ನಮ್ಮ ಬಳಿ ಯಾವುದೇ ಮಾಲೀಕರು ಬಂದು ಅನುಮತಿ ನೀಡುವಂತೆ ಕೇಳಿಲ್ಲ. ಹೀಗಾಗಿ ನಾವು ಅನುಮತಿಯನ್ನ ನೀಡಿಲ್ಲ. ಗ್ರಾಮ ಪಂಚಾಯತಿ ಎಲ್ಲೆಯಿಂದ ಹೊರಗೆ ಕಂದಾಯ ಇಲಾಖೆಯ ಭೂಮಿಯಲ್ಲಿ ಬ್ರಿಕ್ಸ್ ಫ್ಯಾಕ್ಟರಿ ನಡೆಯುತ್ತಿವೆ. ಫ್ಯಾಕ್ಟರಿಗಳ ವಿರುದ್ಧ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪಿಡಿಓ ಹೇಳಿದ್ದಾರೆ.

ಮರದ ತುಂಡುಗಳು

ಇಟ್ಟಿಗೆಗಳನ್ನು ಜೋಡಿಸಿ ಇಡಲಾಗಿದೆ

ಇಟ್ಟಿಗೆ ನಿರ್ಮಾಣ ಮಾಡುವುದು ತಪ್ಪಲ್ಲ. ಆದರೆ ಸೌದೆಗಾಗಿ ಮರಗಳ ಮಾರಣ ಹೋಮ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಭತ್ತದ ಹೊಟ್ಟಿನಿಂದ ಇಟ್ಟಿಗೆ ಬೇಯಿಸಿದರೆ ಮರಗಳ ಮಾರಣ ಹೋಮ ತಪ್ಪುವುದರ ಜೊತೆಗೆ ವಾಯು ಮಾಲಿನ್ಯದ ಪ್ರಮಾಣ ಕೂಡ ಕಡಿಮೆಯಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ ಆಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಡೆಯುತ್ತಿರುವ ಬ್ರಿಕ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ ದಂಡ ವಿಧಿಸುವ ಮೂಲಕ ಸರ್ಕಾರದ ಖಜಾನೆ ತುಂಬಿಸಬೇಕಾಗಿದೆ. ಜೊತೆಗೆ ಅನುಮತಿ ಪಡೆದು ಫ್ಯಾಕ್ಟರಿ ನಡೆಸಿದರೆ ಪ್ರತಿ ವರ್ಷ ಸರ್ಕಾರಕ್ಕೆ ಆದಾಯ ಹರಿದು ಬರಲಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.

ಇದನ್ನೂ ಓದಿ

ಪಬ್​ಗಳಲ್ಲಿ ಕನ್ನಡ ಹಾಡು ಹಾಕಿ ಅಂದಿದ್ದಕ್ಕೆ ಸಪೋರ್ಟ್​ ಮಾಡಿದ್ದು ಎಷ್ಟು ಸಾವಿರ ಜನ? ಪಕ್ಕಾ ಲೆಕ್ಕ ಇಲ್ಲಿದೆ!

ಬಾಗಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಹೋದರೆ ಬೇರೆ ವ್ಯವಸ್ಥೆಯಿಲ್ಲ.. ಕಂಗಾಲಾದ ಜನರು!