ಪ್ರಾಣಿಗಳ ದಾಖಲೆಯ ಸಂತಾನಾಭಿವೃದ್ಧಿ; ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ಸಂತಸದ ವಾತಾವರಣ
ದೇಶದ 17 ಬೃಹತ್ ವಿವಿಧ ಮೃಗಾಲಯದಲ್ಲಿ ಒಂದಾಗಿರುವ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳು ದಾಖಲೆ ಸಂಖ್ಯೆಯ ಸಂತಾನಾಭಿವೃದ್ದಿಯನ್ನು ಮಾಡಿದೆ. ಇಲ್ಲಿನ ರಾಣಿ ಎಂಬ ಹುಲಿ, ಕಾಡು ಶ್ವಾನ ದೋಳ್, ರಿಯಾ ಜಾತಿಯ ಪಕ್ಷಿ, ಲಟಿಕ್ಯುಲೇಚಿಡ್ ಜಾತಿಯ ಹೆಬ್ಬಾವು, ಕಾಳಿಂಗ ಸರ್ಪ ತನ್ನ ಸಂತಾನವನ್ನು ಹೆಚ್ಚು ಮಾಡಿಕೊಂಡಿದೆ.
ದಕ್ಷಿಣ ಕನ್ನಡ: ಕೊರೊನಾ ಪ್ರಾರಂಭವಾದ ದಿನದಿಂದ ಸಾವು- ನೋವಿನ ಸಂಗತಿಗಳ ಬಗ್ಗೆಯೇ ಹೆಚ್ಚು ಸುದ್ದಿಗಳು ಕೇಳಿ ಬರುತ್ತಿದ್ದವು. ಅದರಲ್ಲೂ ಕೊರೊನಾದಿಂದಾಗಿ ಅನೇಕರು ತಮ್ಮ ಕುಟುಂಬದವರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಇನ್ನು ಲಾಕ್ಡೌನ್ನಿಂದಾಗಿ ವ್ಯಾಪಾರ ನಡೆಯದೆ ಹಲವರು ಸಂಕಷ್ಟದಲ್ಲಿದ್ದಾರೆ. ಆದರೆ ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ಸಂತಸದ ಬೆಳವಣಿಗೆಯೊಂದು ನಡೆದಿದ್ದು, ಲಾಕ್‌ಡೌನ್ ಸಮಯದಲ್ಲಿ ಪ್ರಾಣಿಗಳ ಅತೀ ಹೆಚ್ಚಿನ ಸಂತಾನಾಭಿವೃದ್ದಿಯಾಗಿದೆ.
ದೇಶದ 17 ಬೃಹತ್ ವಿವಿಧ ಮೃಗಾಲಯದಲ್ಲಿ ಒಂದಾಗಿರುವ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳು ದಾಖಲೆ ಸಂಖ್ಯೆಯ ಸಂತಾನಾಭಿವೃದ್ದಿಯನ್ನು ಮಾಡಿದೆ. ಇಲ್ಲಿನ ರಾಣಿ ಎಂಬ ಹುಲಿ, ಕಾಡು ಶ್ವಾನ ದೋಳ್, ರಿಯಾ ಜಾತಿಯ ಪಕ್ಷಿ, ಲಟಿಕ್ಯುಲೇಚಿಡ್ ಜಾತಿಯ ಹೆಬ್ಬಾವು, ಕಾಳಿಂಗ ಸರ್ಪ ತನ್ನ ಸಂತಾನವನ್ನು ಹೆಚ್ಚು ಮಾಡಿಕೊಂಡಿದೆ.
10 ವರ್ಷ ಪ್ರಾಯದ ರಾಣಿ ಹೆಸರಿನ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದರೆ, ದೋಳ್ ಜಾತಿಯ ಕಾಡುಶ್ವಾನ ಏಳು ಮರಿಗಳಿಗೆ ಜನ್ಮ ನೀಡಿದೆ. ಇನ್ನು ಉಷ್ಟ್ರ ಪಕ್ಷಿಯ ವರ್ಗಕ್ಕೆ ಸೇರಿದ ರಿಯಾ ಮೊಟ್ಟೆಯಿಟ್ಟಿದ್ದು, ರೆಟಿಕ್ಯುಲೇಟಿಡ್ ಜಾತಿಯ ಹೆಬ್ಬಾವು 20 ಮೊಟ್ಟೆಯಿಟ್ಟು ಕಾವು ಕೊಡುತ್ತಿದೆ. ಕಾಳಿಂಗ ಸರ್ಪ ಆರು ಮೊಟ್ಟೆಯಿಟ್ಟಿದ್ದು ಕೃತಕ ಕಾವು ನೀಡಲಾಗುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಪಿಲಿಕುಳದಲ್ಲಿ ಕೇವಲ ಜೈವಿಕ ಉದ್ಯಾನವನವೇ ಸುಮಾರು 150 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದ್ದು, ವಿವಿಧ ಪ್ರಭೇದದ 1,200ಕ್ಕೂ ಅಧಿಕ ಪ್ರಾಣಿ, ಪಕ್ಷಿ ಉರಗಗಳಿವೆ. ಇಲ್ಲಿ ಪ್ರಾಣಿ, ಪಕ್ಷಿಗಳಿಗೆ ನೈಸರ್ಗಿಕವಾದ ವಾತಾವರಣದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ. ಇದರ ಪರಿಣಾಮ ಇಲ್ಲಿಗೆ ತಂದ ಹೆಚ್ಚಿನ ಪ್ರಾಣಿ, ಪಕ್ಷಿಗಳು ಸಂತಾನಾಭಿವೃದ್ಧಿಯನ್ನು ಮಾಡುತ್ತಿದೆ. ಸದ್ಯ ಈಗೀನ ಸಂತಾನಾಭಿವೃದ್ಧಿಯಿಂದ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಕಾಡುಶ್ವಾನಗಳ ಸಂಖ್ಯೆ 32ಕ್ಕೆ ಏರಿದೆ. ಕಾಳಿಂಗ ಸರ್ಪ 19 ಇದೆ. ಇನ್ನು ಲಾಕ್‌ಡೌನ್ ಮುಗಿದ ಬಳಿಕ ಪ್ರಾಣಿ ವಿನಿಮಯದಲ್ಲಿ ಚೆನ್ನೈಯ ವಂಡಲೂರು ಮೃಗಾಲಯದಿಂದ ಬಿಳಿ ಹುಲಿಯನ್ನು ತರಿಸುವ ನಿರ್ಧಾರವಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ.
ಸದ್ಯ ಅನ್‌ಲಾಕ್ ಆದ ಬಳಿಕ ಸರ್ಕಾರ ಮೃಗಾಲಯಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿದರೆ ಪಿಲಿಕುಳದ ಮೃಗಾಲಯಕ್ಕೂ ಭೇಟಿ ನೀಡಿ ಮತ್ತು ಹೊಸ ಪ್ರಾಣಿಗಳನ್ನು ವಿಕ್ಷಿಸಿ. ಒಟ್ಟಿನಲ್ಲಿ ವಿನಾಶದ ಅಂಚಿನಲ್ಲಿರುವ ಪ್ರಾಣಿಗಳನ್ನು ಇಂತಹ ಉದ್ಯಾನವನಗಳ ಮೂಲಕ ರಕ್ಷಿಸುವ ಕಾರ್ಯ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ:
ಕೊರೊನಾ ಕಾಲದಲ್ಲಿ ಪ್ರಾಣಿಗಳ ನೆರವಿಗೆ ನಿಂತ ಕಾರವಾರದ ಸೇವಾ ಸಂಘ; ಹಸಿದ ಶ್ವಾನಗಳಿಗೆ ಊಟ ನೀಡಿ ಸಹಾಯ
Published On - 11:30 am, Wed, 9 June 21