Karnataka Budget 2021: ಹಸಿವುಮುಕ್ತ ಕರ್ನಾಟಕಕ್ಕೆ ಪಣ, ಹಣ ಪೋಲು ತಪ್ಪಿಸಲು ಸಿಎಂ ಡ್ಯಾಶ್ಬೋರ್ಡ್
ಕರ್ನಾಟಕ ಬಜೆಟ್ 2021ಕ್ಕೆ ಏನು ಆದ್ಯತೆ ಆಗಬೇಕು ಹಾಗೂ ಹಣದ ಪೋಲು- ದುಂದು ವೆಚ್ಚವನ್ನು ಹೇಗೆ ತಡೆಯಬೇಕು ಎಂಬ ಬಗ್ಗೆ ಯೋಜನಾ ಆಯೋಗ ಶಿಫಾರಸು ಮಾಡಿದೆ. ಈ ಕುರಿತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ.
‘ವಿಶ್ವಸಂಸ್ಥೆಯಿಂದ ಹದಿನೇಳು ಅಂಶಗಳ ಅನುಷ್ಠಾನದ ಬಗ್ಗೆ ಸೂಚನೆ ನೀಡಿದೆ. ಅದರ ಆಧಾರದಲ್ಲಿ ನೀತಿ ಆಯೋಗವು ರಾಜ್ಯಗಳಿಗೆ ಶ್ರೇಯಾಂಕವನ್ನು ನೀಡಿದ್ದು, ಇದರಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಆಂಧ್ರಪ್ರದೇಶ ಎರಡು ಹಾಗೂ ಗುಜರಾತ್ ಮೂರನೇ ಸ್ಥಾನದಲ್ಲಿದ್ದರೆ ಕರ್ನಾಟಕವು ಆರನೇ ಸ್ಥಾನದಲ್ಲಿದೆ. ಕೆಲವು ಅಂಶಗಳಲ್ಲಿ ನಾವು ಹಿಂದುಳಿದಿದ್ದೇವೆ. ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಅವುಗಳ ಅನುಷ್ಠಾನದ ಕಡೆಗೆ ಹೆಚ್ಚು ಒತ್ತು ನೀಡ್ತೇವೆ’ ಎಂದರು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಜೆ.ಪುಟ್ಟಸ್ವಾಮಿ. ಕರ್ನಾಟಕ ಬಜೆಟ್ 2021ಮಂಡನೆ ಹಿನ್ನೆಲೆಯಲ್ಲಿ ಅವರನ್ನು ಟಿವಿ9 ವೆಬ್ನಿಂದ ಮಾತನಾಡಿಸಲಾಯಿತು. ಈ ವೇಳೆ ಅವರು ತಿಳಿಸಿದ ಪ್ರಮುಖಾಂಶಗಳು ಹೀಗಿವೆ:
ಗುಜರಾತ್ನಲ್ಲಿ ಇರುವಂತೆ ಕರ್ನಾಟಕದಲ್ಲೂ ಡ್ಯಾಶ್ಬೋರ್ಡ್ ಪರಿಚಯಿಸಲಾಗುತ್ತದೆ. ಅದರ ಅಡಿಯಲ್ಲಿ ಎಲ್ಲ ಇಲಾಖೆ ಬರುತ್ತದೆ. ಯಾವುದೇ ಇಲಾಖೆಯ ಯಾವುದೇ ಯೋಜನೆ ಸದ್ಯಕ್ಕೆ ಯಾವ ಹಂತದಲ್ಲಿದೆ, ಅದಕ್ಕೆ ಬಿಡುಗಡೆ ಆಗಿರುವ ಹಣ ಎಷ್ಟು, ಆ ಕೆಲಸ ಶುರುವಾಗಿದ್ದು ಯಾವಾಗ, ಮುಗಿಯಬೇಕಾದದ್ದು ಯಾವಾಗ ಎಲ್ಲ ಮಾಹಿತಿಯೂ ಅಲ್ಲಿ ಅಪ್ಡೇಟ್ ಆಗುತ್ತದೆ. ಇದರಿಂದ ವಿಳಂಬ ಧೋರಣೆ ಹಾಗೂ ಯೋಜನೆ ವೆಚ್ಚದಲ್ಲಿನ ಅಶಿಸ್ತು ಇಲ್ಲದಂತಾಗುತ್ತದೆ.
ಬಜೆಟ್ ಅಂದರೆ ಮಂಡನೆ ಆಗುತ್ತದೆ. ಆ ನಂತರ ಮರೆತು ಹೋಗುತ್ತದೆ ಅಂತಲ್ಲ. ಆ ಕಾರಣಕ್ಕೆ ಅಂತಲೇ ಕೆಡಿಪಿ ಸಭೆ ನಡೆಸಬೇಕು. ಅನೇಕ ಸಚಿವರು ಅದನ್ನು ನಡೆಸಲ್ಲ. ಇನ್ನು ಬಜೆಟ್ನಲ್ಲಿ ಮೀಸಲಿಟ್ಟ ಹಣವೇ ಒಂದಿರುತ್ತದೆ ಹಾಗೂ ಆಗುವ ಖರ್ಚು ಇನ್ನೊಂದಿರುತ್ತದೆ. ಇದನ್ನು ಆರ್ಥಿಕ ಅಶಿಸ್ತು ಎನ್ನಬಹುದು. ನಾವೀಗ ಗುಜರಾತ್ ಮಾದರಿಯಲ್ಲಿ ಸಿಎಂ (ಮುಖ್ಯಮಂತ್ರಿ) ಡ್ಯಾಶ್ಬೋರ್ಡ್ ಪರಿಚಯಿಸಲು ಮುಂದಾಗಿದ್ದೇವೆ. ಇದರಿಂದ ಅಶಿಸ್ತಿಗೆ ತಡೆ ಹಾಕಬಹುದು.
368 ಅನಗತ್ಯವಾದ ‘ಹೆಡ್ಸ್’ಗಳಿಗೆ ಕತ್ತರಿ ಇನ್ನು 368 ಅನಗತ್ಯವಾದ ‘ಹೆಡ್ಸ್’ಗಳಿದ್ದವು. ಉದಾಹರಣೆಗೆ ಉಜ್ವಲ. ಅದಕ್ಕೆ ಕೇಂದ್ರದಿಂದಲೂ ಹಣ ಬರುತ್ತದೆ. ರಾಜ್ಯದಿಂದಲೂ ನೀಡಲಾಗುತ್ತದೆ. ಮತ್ತೆ ಕೆಲವು ಖರ್ಚುಗಳು 50 ಲಕ್ಷ ರೂಪಾಯಿಗಿಂತಲೂ ಕಡಿಮೆ ಮೀಸಲಿಡಲಾಗುತ್ತಿತ್ತು. ಏಕೆಂದರೆ, ಖರ್ಚಿನ ಬಾಬ್ತು ಎಂದು ಅದಕ್ಕಾಗಿ ಪ್ರತ್ಯೇಕ ಮೀಸಲಿಟ್ಟಿದ್ದರಿಂದ ಹಾಗೇ ಮುಂದುವರಿದುಕೊಂಡು ಬಂದಿತ್ತು. ಈಗ ಕನಿಷ್ಠ ಮಿತಿ ಹತ್ತು ಕೋಟಿ ರೂಪಾಯಿ ಮಾಡಿದ್ದೇವೆ. ಕಡಿಮೆ ಖರ್ಚಿನದ್ದೆಲ್ಲ ಒಟ್ಟು ಮಾಡಿ, ಒಂದು ಕಡೆ ತೊರಿಸುತ್ತೇವೆ. ಇದರಿಂದ ಅನಗತ್ಯ ಗೊಂದಲ, ಹಣದ ಪೋಲನ್ನು ತಡೆಯಬಹುದು.
ವಿಶ್ವಸಂಸ್ಥೆಯಿಂದ ಮಾನವ ಅಭಿವೃದ್ಧಿ ಸೂಚ್ಯಂಕ ಎಂದು ಲೆಕ್ಕ ಹಾಕಿ, ಹದಿನೇಳು ಅಂಶಗಳ ಕಾರ್ಯಸೂಚಿ ನೀಡಲಾಗಿದೆ. ಅದರ ಅನುಷ್ಠಾನ ಯಾವ ರಾಜ್ಯದಲ್ಲಿ ಚೆನ್ನಾಗಿ ಆಗಿದೆ ಎಂಬುದಕ್ಕೆ ನೀತಿ ಆಯೋಗದಿಂದ ಶ್ರೇಯಾಂಕ ನೀಡಲಾಗಿದೆ. ಅದರಲ್ಲಿ ಕೇರಳ ಮೊದಲು, ಆಂಧ್ರಪ್ರದೇಶ ಎರಡು, ಗುಜರಾತ್ ಮೂರು ಹಾಗೂ ಕರ್ನಾಟಕ ಆರನೇ ಸ್ಥಾನದಲ್ಲಿ ಇದೆ. ಹಿಂದಿನ ತಿಂಗಳು ಸಭೆ ನಡೆಸಿ, ಕರ್ನಾಟಕ ಯಾವ ಅಂಶಗಳಲ್ಲಿ ಮುಂದಿದೆ ಹಾಗೂ ಬೆಳವಣಿಗೆ ಸಾಧಿಸಬೇಕಾದದ್ದು ಯಾವುದರಲ್ಲಿ ಎಂಬ ಬಗ್ಗೆ ಸೂಚನೆ ನೀಡಲಾಗಿದೆ.
ಕರ್ನಾಟಕ ಉತ್ತಮ ಅಂಕ ಪಡೆದಿರುವ ಅಂಶಗಳು, ಅಂಕ ಹಾಗೂ ಅದರಲ್ಲಿನ ಸ್ಥಾನ ಹೀಗಿದೆ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ- 69 ಅಂಕಗಳು- 3ನೇ ಸ್ಥಾನ ಗುಣಮಟ್ಟದ ಶಿಕ್ಷಣ- 76 ಅಂಕಗಳು- 6ನೇ ಸ್ಥಾನ ಕೈಗೆಟುಕುವ ಹಾಗೂ ಸ್ವಚ್ಛವಾದ ಇಂಧನ- 77- 6ನೇ ಸ್ಥಾನ ಗೌರವಯುತ ದುಡಿಮೆ ಮತ್ತು ಆರ್ಥಿಕ ಬೆಳವಣಿಗೆ- 72 ಅಂಕಗಳು- 2ನೇ ಸ್ಥಾನ ಅಸಮಾನತೆಗಳ ಇಳಿಕೆ- 68 ಅಂಕಗಳು- 8ನೇ ಸ್ಥಾನ ಭೂಮಿ ಮೇಲಿನ ಜೀವಜಾಲ- 88ಅಂಕಗಳು- 10ನೇ ಸ್ಥಾನ ಶಾಂತಿ, ನ್ಯಾಯ ಮತ್ತು ಸದೃಢ ಸಂಸ್ಥೆಗಳು- 74 ಅಂಕಗಳು- 9ನೇ ಸ್ಥಾನ ಹವಾಮಾನ ಕ್ರಮ- 71 ಅಂಕಗಳು- 1ನೇ ಸ್ಥಾನ ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ- 72 ಅಂಕಗಳು- 4ನೇ ಸ್ಥಾನ ಶುದ್ಧ ನೀರು ಮತ್ತು ನೈರ್ಮಲ್ಯ- 88 ಅಂಕಗಳು- 6ನೇ ಸ್ಥಾನ ಜಲ ಜೀವರಾಶಿ- 65 ಅಂಕಗಳು- 1ನೇ ಸ್ಥಾನ
ಕರ್ನಾಟಕ ಉತ್ತಮ ಅಂಕ ಸಾಧಿಸಬೇಕಿರುವ ಅಂಶಗಳು, ಅಂಕ ಹಾಗೂ ಅದರಲ್ಲಿನ ಸ್ಥಾನ ಹೀಗಿದೆ ಬಡತನಮುಕ್ತ- 49 ಅಂಕಗಳು- 13ನೇ ಸ್ಥಾನ ಹಸಿವುಮುಕ್ತ- 37 ಅಂಕಗಳು- 15ನೇ ಸ್ಥಾನ ಲಿಂಗ ಸಮಾನತೆ- 42 ಅಂಕಗಳು- 7ನೇ ಸ್ಥಾನ ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ- 40 ಅಂಕಗಳು- 19ನೇ ಸ್ಥಾನ ಸುಸ್ಥಿರ ನಗರಗಳು ಮತ್ತು ಸಮುದಾಯಗಳು- 48 ಅಂಕಗಳು- 12ನೇ ಸ್ಥಾನ ಒಟ್ಟಾರೆಯಾಗಿ 66 ಅಂಕಿ ಹಾಗೂ 6ನೇ ಸ್ಥಾನ
ರಾಜ್ಯ ಯೋಜನಾ ಆಯೋಗದ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ಇರುತ್ತಾರೆ. ಆ ನಂತರದ ಸ್ಥಾನ ಉಪಾಧ್ಯಕ್ಷರದ್ದು. ಈಗ ಬಿ.ಜೆ. ಪುಟ್ಟಸ್ವಾಮಿ ಉಪಾಧ್ಯಕ್ಷ ಜವಾಬ್ದಾರಿಯಲ್ಲಿದ್ದಾರೆ. ಅಪಾರ ರಾಜಕೀಯ ಅನುಭವ ಇರುವ ಬಿ.ಜೆ. ಪುಟ್ಟಸ್ವಾಮಿ ಅವರಿಗೆ ರಾಜ್ಯ ಯೋಜನಾ ಆಯೋಗದ ಶ್ರಮವನ್ನು ಹಾಗೂ ಅದರ ಪ್ರಯತ್ನಗಳನ್ನು ಗುರುತಿಸಲಿಲ್ಲ ಎಂಬ ಬಗ್ಗೆ ಬೇಸರ ಇದೆ. ತಿಂಗಳುಗಳ ಶ್ರಮ ಹಾಕಿ, ಬದಲಾವಣೆಗೆ ಸಿದ್ಧತೆ ನಡೆಸಿ ಅದನ್ನು ತಿಳಿಸಬೇಕು ಎಂದು ಪತ್ರಿಕಾಗೋಷ್ಠಿ ಕರೆದಾಗ ಯಾರೂ ಬರಲಿಲ್ಲ ಎಂಬ ಬೇಸರ ಅವರಿಗಿದೆ.
(ನಿರೂಪಣೆ: ಶ್ರೀನಿವಾಸ ಮಠ)
ಇದನ್ನೂ ಓದಿ: Karnataka Budget 2021: ಕರ್ನಾಟಕ ಸರ್ಕಾರದ ಬಜೆಟ್ ಆದ್ಯತೆ ಯಾವುದಾಗಿರಬೇಕು?
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಮಾಡದ ಬಜೆಟ್ ಹೇಗೆ ಪರಿಣಾಮಕಾರಿ?
Published On - 3:18 pm, Tue, 2 March 21