Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಲೋತ್ಪಾಟನೆ ಮಾಡಲಾಗದ ಮೀಟರ್ ಬಡ್ಡಿ ನಿಯಂತ್ರಣಕ್ಕೆ ಹೊಸ ಕಾನೂನು-ಖುಷಿಯಾಗದ ಜನ

ಮೈಕ್ರೋ ಫೈನಾನ್ಸ್‌ ಕಿರುಕುಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಕೆಲವರು ಆತ್ಮಹತ್ಯೆ ಹಾದಿ ಹಿಡಿದರೆಮ ಇನ್ನೂ ಕೆಲವರು ಊರನ್ನೇ ಬಿಟ್ಟು ಓಡಾಡುತ್ತಿದ್ದಾರೆ. ನಮ್ಮ ಸಮಾಜದಲ್ಲಿನ ಕೆಲವು ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ಮೀಟರ್ ಬಡ್ಡಿ ಸಮಸ್ಯೆಯಂತ ಕ್ಲಿಷ್ಟ ಸಮಸ್ಯೆಗೆ ಪಕ್ಷಾತೀತವಾಗಿ ಕೆಲಸ ಮಾಡದ ನಮ್ಮ ರಾಜಕೀಯ ವ್ಯವಸ್ಥೆಯಿಂದ ಪರಿಹಾರ ನಿರೀಕ್ಷಿಸುವುದು ತಪ್ಪಾದೀತು.

ಮೂಲೋತ್ಪಾಟನೆ ಮಾಡಲಾಗದ ಮೀಟರ್ ಬಡ್ಡಿ ನಿಯಂತ್ರಣಕ್ಕೆ ಹೊಸ ಕಾನೂನು-ಖುಷಿಯಾಗದ ಜನ
ಹಣ
Follow us
ಡಾ. ಭಾಸ್ಕರ ಹೆಗಡೆ
| Updated By: ರಮೇಶ್ ಬಿ. ಜವಳಗೇರಾ

Updated on:Jan 28, 2025 | 6:39 PM

ಡಾ. ಭಾಸ್ಕರ ಹೆಗಡೆ

ಊಟ ಕೊಡುವ ಭೂತಾಯಿಗೆ ವಂದಿಸಿ, ಬಂದಿರುವ ಫಸಲನ್ನು ಕೊಯ್ದು, ಕೈಯಲ್ಲಿ ಹಿಡಿದು ಸಂಭ್ರಮಿಸುವ ಹಬ್ಬ ಸಂಕ್ರಾಂತಿ. ಈ ವರ್ಷ ಕರ್ನಾಟಕದ ಗ್ರಾಮೀಣ ಭಾಗದ ಜನ ಈ ಹಬ್ಬ ಆಚರಿಸಲೇ ಇಲ್ಲ! ಮೀಟರ್ ಬಡ್ಡಿ ಅಥವಾ ಮೈಕ್ರೋ ಫೈನಾನ್ಸ್ ಪೈಲ್ವಾನ್ಗಳ ದಾಳಕ್ಕೆ ಸಿಕ್ಕು ನಲುಗಿದ ಲಕ್ಷಾಂತರ ಜನರಿಗೆ ಹಬ್ಬ ಬಂದು ಹೋಗಿದ್ದೇ ಗೊತ್ತಾಗಲಿಲ್ಲ. ಪ್ರತಿ ವರ್ಷ ಮೇ ತಿಂಗಳಿನ ಬಿರುಬೇಸಿಗೆಯ ಝಳಕ್ಕೆ ನೀರಿನ ಮೂಲ ಖಾಲಿಯಾಗುತ್ತಿದ್ದಂತೆ ಊರು ಬಿಡುವವರು, ಈ ಬಾರಿ ಚಳಿಯಲ್ಲೇ ಮನೆ ಬಿಟ್ಟು ಹೋಗಿದ್ದಾರೆ. ಸಂಕ್ರಾಂತಿಯ ಸಮಯಕ್ಕೆ ಸರಿಯಾಗಿ ಬರುವ ಹೊಸ ಬೆಳೆ ನೋಡದೇ ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಓರ್ವ ಮಹಿಳೆ ತನ್ನ ಮಾಂಗಲ್ಯವನ್ನು ಮುಖ್ಯಮಂತ್ರಿಯವರಿಗೆ ಕಳಿಸಿ ತನ್ನ ಕಣ್ಣೀರಿನ ಕಥೆಯನ್ನು ವಿವರಿಸಿದ್ದಾಳೆ.

ಏತನ್ಮಧ್ಯೆ, ಈ ಕುರಿತು ಸುಧೀರ್ಘ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಕಾನೂನು ತಂದು ಈ ಮೀಟರ್ ಬಡ್ಡಿ ಲಾಬಿಯನ್ನು ಮಣಿಸುವುದಾಗಿ ಹೇಳಿ ರೈತಾಪಿ ಜನರ ವಿಶ್ವಾಸ ಗೆಲ್ಲಲು ಮುಂದಾಗಿದ್ದಾರೆ. ಪ್ರಾಯಶಃ, ಮಾಧ್ಯಮಗಳಲ್ಲಿ ಈ ಸುದ್ದಿ ಬರಲು ಶುರುವಾದ ಎರಡು ವಾರದೊಳಗೆ ಎಚ್ಚೆತ್ತ ರಾಜ್ಯ ಸರಕಾರ ತನ್ನ ನಿಲುವು ಸ್ಪಷ್ಟ ಪಡಿಸಿದ್ದು ಬಹಳ ಒಳ್ಳೇ ಬೆಳವಣಿಗೆ. ಆದರೆ ನಿಜವಾಗಿಯೂ ರಾಜ್ಯ ಸರಕಾರ ಮೀಟರ್ ಬಡ್ಡಿ ಲಾಬಿಯನ್ನು ಮಕಾಡೆ ಮಲಗಿಸಲು ಸಾಧ್ಯವೇ? ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ಯಾಕಾಯ್ತು ಈ ಗೋಳು?

ಈ ಮೀಟರ್ ಬಡ್ಡಿ ಅಥವಾ ಮೈಕ್ರೋ ಫೈನಾನ್ಸ್ನವರ ಆಟಾಟೋಪವನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ಬರುವ ಮೊದಲು, ಇದು ಇಷ್ಟೆಲ್ಲ ಆಳವಾಗಿ ಬೇರೂರಿದ್ದು ಯಾಕೆ ಎಂಬುದನ್ನು ನೋಡಬೇಕು ತಾನೆ? ಇದು ಕಾಂಗ್ರೆಸ್ ಸರಕಾರದ ತಪ್ಪು ಹೆಜ್ಜೆಗಳಿಂದ ಆಗಿರುವ ಸಾಮಾಜಿಕ ವಿಪ್ಲವ ಅಲ್ಲ. ಹಾಗಾಗಿ ಸಿದ್ದರಾಮಯ್ಯನವರ ಸರಕಾರವನ್ನು ಟೀಕಿಸಿ ಪ್ರಯೋಜನ ಇಲ್ಲ ಮತ್ತು ಹಾಗೆ ಮಾಡಿದರೆ ಅದು ತಪ್ಪಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಇದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡರ ಮಾತನ್ನೇ ತೆಗೆದುಕೊಳ್ಳುವುದಾದರೆ, ಈ ಮೈಕ್ರೋ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ನ ನಿರ್ದೇಶನವನ್ನು ಗಾಳಿಗೆ ತೂರಿ, ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಹೆಚ್ಚು ಹಣ ಹಂಚಿದ್ದಾರೆ.

ರಿಸರ್ವ್ ಬ್ಯಾಂಕ್ ನಿಯಮದಂತೆ, ಒಂದು ಕುಟುಂಬಕ್ಕೆ ಹೆಚ್ಚೆಂದರೆ ಎರಡು ಲಕ್ಷ ರೂಪಾಯಿ ಮಾತ್ರ ನೀಡಬಹುದು. ಆದರೆ ತುಂಬಾ ಊರುಗಳಲ್ಲಿ, ಕುಟುಂಬವೊಂದಕ್ಕೆ ಸರಾಸರಿ, ಐದು, ಆರು ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಕರ್ನಾಟಕವೊಂದರಲ್ಲೇ ಈ ರೀತಿಯ ಹಣಕಾಸು ಸಂಸ್ಥೆಗಳು ಸುಮಾರು 59000 ಕೋಟಿ ರೂಪಾಯಿಗೂ ಹೆಚ್ಚು ಸಾಲ ನೀಡಿವೆ ಎಂದು ಭೈರೇಗೌಡರು ಹೇಳಿದ್ದಾರೆ. ನಿರಕ್ಷರಕುಕ್ಷಿಗಳಿಗೆ ಹಣ ನೀಡಿ ಬಡ್ಡಿ, ಚಕ್ರ ಬಡ್ಡಿ, ಮತ್ತು ಮೀಟರ್ ಬಡ್ಡಿ, ಅಂದರೆ ಅಸಲು ಬಡ್ಡಿ ಎಲ್ಲ ಕಟ್ಟಿದರೂ ಮುಗಿಯದ ಸಾಲದ ಸುಳಿಯಲ್ಲಿ ಜನರನ್ನು ಸಿಲುಕಿಸಿ ಅವರ ಜಮೀನನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ಮಾಡುತ್ತಿರಬಹುದು, ಈ ಸಂಸ್ಥೆಗಳು.

ಜನ ಯಾಕೆ ಈ ಕಂಪೆನಿಗಳ ಮೊರೆ ಹೋಗ್ತಾರೆ?

ಜನ ದಡ್ಡರಲ್ಲ. ಅವರ ಕೈಲಿ ಹಣ ಇದ್ದರೆ ಅವರು ಯಾಕೆ ಇಂತಹ ಕಂಪೆನಿಗಳ ಜಾಲಕ್ಕೆ ಬೀಳುತ್ತಾರೆ? ಕುಟುಂಬವೊಂದರ ಬಳಿ ಆರೋಗ್ಯ ವಿಮೆ ಇಲ್ಲ ಎಂದಿಟ್ಟುಕೊಳ್ಳಿ. ಅದೇ ವರ್ಷ, ಕುಟುಂಬದಲ್ಲಿ ಯಾರಿಗಾದರೂ ರೋಗ ವಕ್ಕರಿಸಿದರೆ ಆ ಕುಟುಂಬ ಬೇರೆ ದಾರಿ ಇಲ್ಲದೇ ಇಂತಹ ಜಾಲಕ್ಕೆ ಬಿದ್ದು, ಚಿಕಿತ್ಸೆಗಾಗಿ ಸಾಲ ಪಡೆಯಲೇಬೇಕಾಗುತ್ತದೆ. ಮಕ್ಕಳ ಮದುವೆ ಎಂದರೆ ಯಾವ ಪತ್ತಿನ ಸಹಕಾರ ಸಂಘಗಳೂ ಲಕ್ಷಗಟ್ಟಲೇ ಸಾಲ ಕೊಡುವುದಿಲ್ಲ. ಆದರೆ, ಪಾಲಕರಿಗೆ ಇದು ಮರ್ಯಾದಿ ಪ್ರಶ್ನೆ. ಹಾಗಾಗಿ ಜನ ಯಾವ ಉತ್ಪತ್ತಿ ಇಲ್ಲದೇ ಇದ್ದರೂ ಮುದುವೆ, ಮುಂಜಿಗೆ ಲಕ್ಷಗಟ್ಟಲೇ ಸುರಿಯುತ್ತಾರೆ.

ಮದುವೆ ಎಂಬುದು ಅವರಿಗೆ ಭಾವನಾತ್ಮಕ ವಿಚಾರವಾದದ್ದರಿಂದ ಮೈಕ್ರೋ ಫೈನಾನ್ಸ್ಗಳಿಂದ ಲಕ್ಷಗಟ್ಟಲೇ ಸಾಲ ಪಡೆಯುತ್ತಾರೆ. ಬೆಂಗಳೂರಲ್ಲೋ ದೆಹಲಿಯಲ್ಲೋ ಕೂತು ಹೇಳಬಹುದು; ಸರಳ ಮದುವೆ ಮಾಡಿ ಎಂಬುದಾಗಿ. ಹಾಗೆ ಹೇಳುವ ನಾಯಕರು ಕೋಟಿ ಖರ್ಚು ಮಾಡಿ ಮದುವೆ ಮಾಡುತ್ತಾರೆ! ಗ್ರಾಮೀಣ ಭಾಗದ ಸಾಮಾನ್ಯ ಜನರ ಬದುಕನ್ನು ಅವಲೋಕಿಸಿದರೆ, ಇಡೀ ಬದುಕಿನಲ್ಲಿ ಅವರಿಗೆ ಖುಷಿ ತರುವ ಕ್ಷಣವೇ-ಮಕ್ಕಳ ಮದುವೆ. ಇಡೀ ಜೀವಮಾನ ನೆನಪಿನ ಖಜಾನೆಯಲ್ಲಿ, ಮತ್ತೆ ಮತ್ತೆ ನೆನಪಾದಾಗೆಲ್ಲ ಖುಷಿಯನ್ನೇ ತರುವ ಮದುವೆಗೆ ಹಿಂದು ಮುಂದು ನೋಡದೇ ಪಾಲಕರು ಹಣ ಖರ್ಚು ಮಾಡಿ ನೂರಾರು ಜನರಿಗೆ ಹೋಳಿಗೆ ಊಟ ಹಾಕಿಸುತ್ತಾರೆ ಮತ್ತು ಇಡೀ ಕುಟುಂಬವನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಾರೆ. ಇದಕ್ಕೆ ಜೋಡಿಯಾಗಿದ್ದು ವರ ದಕ್ಷಿಣೆ. ಇದು ಮತ್ತೊಂದು ಮಹಾಮಾರಿ.

ಪ್ರತಿ ವರ್ಷ ರೈತರು ಬಿತ್ತಿದ ಬೀಜ ಹವಾಮಾನ ವೈಪರಿತ್ಯವನ್ನು ಎದುರಿಸಿ, ಬೆಳೆ ಬೆಳೆದು ಕೈಗೆ ಬಂದರೆ ಅವರು ಒಂದಿಷ್ಟು ಹಣ ಉಳಿಸಬಹುದು. ಆದರೆ, ಇತ್ತೀಚೆಗೆ ಬರ ಮತ್ತು ಅತಿವೃಷ್ಟಿಯನ್ನು ಮೀರಿ ಅತ್ಯಂತ ಖುಷಿ ತಂದ ಮನ್ಸೂನೇ ಇಲ್ಲ. ಹಾಗಾಗಿ ರೈತಾಪಿ ಜನ ಕಣ್ಣೀರಲ್ಲೇ ಕೈ ತೊಳೆಯುವ ದಿನ ಬಂದೊದಗಿದೆ. ಅದೇ ರೀತಿ, ಗ್ರಾಮೀಣ ಭಾಗದಲ್ಲಿ, ಚಟಕ್ಕೆ ದಾಸರಾಗಿ ಮನೆಯನ್ನು ಸಾಲದ ಕೂಪಕ್ಕೆ ತಳ್ಳಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಗ್ರಾಮೀಣ ಜೀವನಾಡಿಯ ಈ ದೌರ್ಬಲ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಈ ಮೈಕ್ರೋ ಹಣಕಾಸು ಕಂಪೆನಿಗಳು, ಈಗ ಸಾಲ ಕೊಟ್ಟವರಿಗೇ ಬಡಿಗೆ ಏಟು ಕೊಡಲು ಮುಂದಾಗಿವೆ. ಈ ಕುರಿತು ಯಾವ ಮಹತ್ವದ ಸಂಶೋಧನೆ ನಡೆಯದೇ ಇರುವುದರಿಂದ ಇದು ಹೀಗೆಯೇ ಎಂದು ಹೇಳುವುದು ಕಷ್ಟ. ಆದರೆ, ಮೇಲ್ನೋಟಕ್ಕೆ ಕಾಣುವುದೇನೆಂದರೆ, ಸಾಲ ವಸೂಲಾತಿಗೆ ಕಳುಹಿಸುವ ಬಾಡಿಗೆ ಜನರೇನೂ ಆಕಾಶದಿಂದ ಇಳಿದು ಬಂದಿರುವುದಿಲ್ಲ. ಇವರು ಕೂಡ ಪ್ರಾಯಶಃ ಗ್ರಾಮೀಣ ಬಾಗದವರೇ. ಎಲ್ಲೂ ಕೆಲಸ ಸಿಕ್ಕಿಲ್ಲ ಎಂದು ಈ ಕಂಪೆನಿಗಳ ಪರವಾಗಿ ಮತ್ಯಾವುದೋ ಊರಿಗೆ ಹೋಗಿ ದೊಣ್ಣೆ ತೋರಿಸಿ ಹಣ ವಸೂಲಾತಿ ಮಾಡುವ ಕೆಲಸಕ್ಕೆ ಇಳಿದಿರುವಂತೆ ಕಾಣುತ್ತಿದೆ. ಇದೊಂದು ವ್ಯಂಗ್ಯ. ರೈತರ ಮಕ್ಕಳೇ ಆಗಿ, ಪರವೂರಿನ ರೈತರಿಗೆ ಹೊಡೆಯುವ ಸ್ಥಿತಿ ಆ ಯುವಕರದ್ದು.

ನಗರ ಪ್ರದೇಶದ ಮಧ್ಯಮ ವರ್ಗ ಕೂಡ ಇದಕ್ಕೆ ಹೊರತಾಗಿಲ್ಲ. ಪ್ರತಿ ತಿಂಗಳು ಪಗಾರು ತೆಗೆದುಕೊಳ್ಳುವವರು ಇಂಥದ್ದೇ ಹಣಕಾಸು ನಿರ್ವಹಣಾ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ ಎಂಬುದು ಈಗ ನಿರೂಪಿತವಾಗಿರುವ ಅಂಶ. ಬಿಸಿನೆಸ್ ಸ್ಟಾಂಡರ್ಡ್ ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಕ್ರೆಡಿಟ್ ಕಾರ್ಡ್ ಇಟ್ಟುಕೊಂಡವರ ಸಂಖ್ಯೆ ದ್ವಿಗುಣಗೊಂಡಿದೆ. 2019 ರಲ್ಲಿ, 5.5 ಕೋಟಿಯಷ್ಟಿದ್ದ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ, 2024 ಅಂತ್ಯಕ್ಕೆ 10.58 ಕೋಟಿಯ ಗಡಿ ದಾಟಿದೆ. ಈ ರೀತಿಯ ಕ್ರೆಡಿಟ್ ಕಾರ್ಡ್ ಬಳಸಿ ಎಷ್ಟು ಕೈ ಸಾಲ ಪಡೆದಿದ್ದಾರೆ ಎನ್ನುವ ವಿವರ ನಮಗಿನ್ನು ಸಿಕ್ಕಿಲ್ಲ. ಅದನ್ನು ಪ್ರಾಯಶಃ ರಿಸರ್ವ್ ಬ್ಯಾಂಕ್ ಹೇಳಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಾಲ ಕೂಡ ಸ್ವಲ್ಪ ಇದೇ ರೀತಿ. ಸ್ವಲ್ಪ ಯಾಮಾರಿದರೂ ಅದು ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ. ಆದರೆ, ನಗರ ಪ್ರದೇಶದಲ್ಲಿ ಜನ ಗ್ರಾಹಕರ ಹಕ್ಕು ಮತ್ತು ಕಾನೂನಿನ ಬಗ್ಗೆ ಹೆಚ್ಚು ತಿಳಿದುಕೊಂಡಿರುವುದರಿಂದ ಮತ್ತು ಈ ರೀತಿ ಸಾಲ ಪಡೆಯುವ ಜನ ಬೇರೆ ಬೇರೆ ಕಂಪೆನಿಗಳ ವಿವಿಧ ಹುದ್ದೆಯಲ್ಲಿದ್ದು ಅಧಿಕಾರ ಚಲಾಯಿಸುತ್ತಿರುವುದರಿಂದ, ಗ್ರಾಮೀಣ ಭಾಗದ ಜನರ ಮೇಲೆ ಸವಾರಿ ಮಾಡಿದಂತೆ, ನಗರ ಪ್ರದೇಶದ ಜನರ ಮೇಲೆ ಸವಾರಿ ಮಾಡುವುದು ಈ ಕಂಪೆನಿಗಳಿಗೆ ಕಷ್ಟ ಸಾಧ್ಯವೇ ಸರಿ. ಆದರೂ ನಗರ ಪ್ರದೇಶಗಳಲ್ಲಿ ಕೂಡ ಸಾಲ ವಸೂಲಾತಿ ಮಾಡಿಕೊಡುವ ಕಂಪೆನಿಗಳಿವೆ. ಅವರು ಕೆಲಸ ಮಾಡುವ ವಿಧಾನವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಆದರೆ, ನಗರ ಪ್ರದೇಶಗಳಲ್ಲಿ ಸಾಲ ವಸೂಲಾತಿಗಾಗಿ ಇರುವ ಏಜೆಂಟ್ರುಗಳು ನವನವೀನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ.

ಮೀಟರ್ ಬಡ್ಡಿ ಕಡಿವಾಣ ಸಾಧ್ಯವೇ?

ಈ ಸಾಲ ಹಂಚಿಕೆ ಮತ್ತು ಸಾಲ ವಸೂಲಾತಿ ನಿಲ್ಲಿಸಲು ಆಗದು. ಆದರೆ, ಕಾನೂನನ್ನು ಕೈಗೆತ್ತಿಕೊಂಡು ಬಡಿಗೆ ಮೂಲಕ ಸಾಲ ವಸೂಲಾತಿ ಮಾಡುವ ವಿಧಾನಕ್ಕೆ ಕಡಿವಾಣ ಹಾಕುವ ಉಪಕ್ರಮ ತೆಗೆದುಕೊಳ್ಳಬಹುದು. ಆದರೆ, ಇಲ್ಲಿ ಒಂದು ಅಡ್ಡಿ ಸರಕಾರಕ್ಕೆ ಎದುರಾಗುವುದು ಖಂಡಿತ. ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಪೊಲೀಸರನ್ನು ಹೇಗೋ ಸುಪರ್ದಿಗೆ ತೆಗೆದುಕೊಂಡರೆ, ಈ ಕಂಪೆನಿಗಳು ಆಡಿದ್ದೇ ಆಟ. ಯಾರೂ ಇವರನ್ನು ತಡೆಯಲು ಸಾಧ್ಯವಿಲ್ಲ. ಇಲ್ಲಿವರೆಗೆ ಬಂದ ವರದಿಯನ್ನು ಕೂಲಂಕುಷವಾಗಿ ವಿಶ್ಲೇಷಿಸಿದರೆ, ಮೀಟರ್ ಬಡ್ಡಿ ವಿರುದ್ಧ ಕೆಲವು ಜನ ಪೊಲೀಸ್ ಸ್ಟೇಷನ್ ಬಾಗಿಲು ತಟ್ಟಿರುವ ಉದಾಹರಣೆ ಇದೆ. ಆದರೆ ಎಲ್ಲೂ ಕೂಡ ಪೊಲೀಸರು ರೈತರ ನೆರವಿಗೆ ಬಂದಿಲ್ಲ. ಮೇಲ್ನೋಟಕ್ಕೆ ಪೊಲೀಸರು ಬ್ಲೇಡ್ ಕಂಪೆನಿಗಳಿಗೆ ನೆರಳಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ.

ಎಲ್ಲಿವರೆಗೆ ರೈತಾಪಿ ಜನರಿಗೆ ಅವರ ಬೆಳೆಗೆ ಸರಿಯಾಗಿ ಬೆಲೆ ಕೊಡಿಸಿ, ಅವರ ಕೈಯಲ್ಲಿ ಹಣ ಉಳಿಸುವಂತೆ ಮಾಡಲಾಗದೋ, ಅಲ್ಲಿವರೆಗೆ ಈ ಕಂಪೆನಿಗಳ ಆಟಾಟೋಪ ಇದ್ದಿದ್ದೆ. ಎರಡನೇಯದು, ರೈತರಿಗೆ ಬರೀ ಕೃಷಿಗೆ ಮಾತ್ರ ಅಲ್ಲ, ಬೇರೆ ಬೇರೆ ಚಟುವಟಿಕೆಗಳಿಗೆ ಹಣ ಬೇಕಾಗುತ್ತದೆ. ಅದನ್ನು ಯಾರೂ ಕೊಡುವ ವ್ಯವಸ್ಥೆ ಈಗ ಇಲ್ಲ. ಈ ನಿರ್ವಾತದಲ್ಲಿ(void)ದಲ್ಲಿ ಜನರಿಗೆ ಬೇಕಾಗುವ ಹಣ ನೀಡುವ ಅಪಾಯಕಾರಿ (risk) ಹಣಕಾಸು ನೀತಿಯನ್ನು ಈ ಕಂಪೆನಿಗಳು ಮಾತ್ರ ಜಾರಿ ಮಾಡಲು ಸಾಧ್ಯ. ಸರಕಾರದಿಂದ ಅಥವಾ ಗ್ರಾಮೀಣ ಭಾಗದಲ್ಲಿರುವ ಪತ್ತಿನ ಸಹಕಾರ ಸಂಘಗಳಿಂದ ಆಗದ ಕೆಲಸ ಇದು. ಯಾವುದೇ ಸರಕಾರ ಬಂದರೂ, ಈ ಮೀಟರ್ ಬಡ್ಡಿ ವ್ಯವಸ್ಥೆ ಮುಗಿಸಲು ಆಗದು.

ಕೊನೆ ಗುಟುಕು

ಸಿದ್ದರಾಮಯ್ಯ ಅವರಿಗೆ ಈ ವಿಚಾರ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದರೂ, ಆ ಕುರ್ಚಿಯಲ್ಲಿ ಕುಳಿತಿರುವ ಅವರು ಬಾಯಿ ಬಿಟ್ಟು ಒಂದು ಮಾತು ಹೇಳಲಾಗದು. ನಮ್ಮಲ್ಲಿ ವರದಕ್ಷಿಣೆ ತಡೆಯುವ ಕಾನೂನಿದೆ. ವಾಸ್ತವದಲ್ಲಿ ಏನಾಗಿದೆ? ಕೆಲವು ಸಮುದಾಯಗಳಲ್ಲಿ ಲಕ್ಷ ದಾಟಿ ಕೋಟಿಗೆ ಬಂದು ನಿಂತಿದೆ ವರದಕ್ಷಿಣೆ. ವರ ದಕ್ಷಿಣೆ ಕೊಟ್ಟಿರುವ ಮದುವೆಗಳಿಗೆ ನಮ್ಮ ರಾಜಕೀಯ ನಾಯಕರು ಹೋಗಿ ದಂಪತಿಗಳನ್ನು ಹರಸಿ ಬರುತ್ತಾರೆ. ಇನ್ನೇನು ಬೇಕು. ಬೆಂಗಳೂರಿನಲ್ಲಿ ಕೊಳವೆಬಾಯಿ ಕೊರೆಯಬಾರದು ಅಂತ ಬಿಡಬ್ಲ್ಯುಎಸ್ಎಸ್ಬಿ (BWSSB) ಕಾನೂನಿಗೆ ತಿದ್ದುಪಡಿ ತಂದು ದಶಕವೇ ದಾಟಿತು. ಕೊಳವೆ ಬಾವಿ ಕೊರೆಯುವುದು ನಿಂತಿದೆಯೇ? ಹಾಗೆ ನೋಡಿದರೆ, ನಮ್ಮ ಮಂತ್ರಿಗಳಿಗೆ ವಂದಿ ಮಾಗಧರಾಗಿ ಕೆಲಸ ಮಾಡುವ ರಿಯಲ್ ಎಸ್ಟೇಟ್ನ ಏಜೆಂಟರೇ ಹೆಚ್ಚು ಕೊಳವೆ ಬಾವಿ ಕೊರೆದಿದ್ದಾರೆ. ಇದು ಯಾಕೆ ವಿಫಲ ಆಯ್ತು ಗೊತ್ತಾ? ಮನೆ ಕಟ್ಟುವ ಓರ್ವ ಮಧ್ಯಮ ವರ್ಗದವನಿಗೆ ಮನೆ ಕಟ್ಟುವ ಸಮಯದಿಂದ ಶುರು ಮಾಡಿ, ಕಟ್ಟಿದ ಹೊಸ ಮನೆಗೆ ಬಂದು ವಾಸ ಮಾಡುವಾಗ, ನೀರು ಸಿಗುವ ಗ್ಯಾರೆಂಟಿ ಇಲ್ಲದಿದ್ದರೆ ಜನ ಏಕೆ ಜಲಮಂಡಳಿ ಕಾನೂನಿಗೆ ಗೌರವ ಕೊಡುತ್ತಾರೆ? ಆ ಕಾನೂನಿನ ವಿಫಲತೆ ಗೊತ್ತಾಗಿಯೇ ಜನ ಹುಚ್ಚೆದ್ದು ಕೊಳವೆ ಬಾವಿ ಕೊರೆಸುತ್ತಾರೆ. ಬಾಡಿಗೆ ನಿಯಂತ್ರಣ ಕಾಯ್ದೆ ಬೆಂಗಳೂರಲ್ಲಿ ಇದೆ. ಇದರ ಜಾರಿ ಆಗಿದೆಯೇ? ಈ ಕುರಿತು ಯಾರಿಗೂ ಗೊತ್ತಿಲ್ಲ ಅಥವಾ ಅದು ಮರೆತೇ ಹೋಗಿದೆ. ಹೀಗೇ, ಪುಸ್ತಕದ ಬದನೆಕಾಯಿಯಾಗಿ ಉಳಿದಿರುವ ಕಾನೂನುಗಳ ಪಟ್ಟಿ ಮಾಡುತ್ತ ಹೋದರೆ ಅದು ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಪ್ರತಿಷ್ಠೆಗೆ ಕಾನೂನು ರೂಪಿಸುವುದು, ಅದನ್ನು ಜಾರಿಗೆ ತಂದಂತೆ ತೋರಿಸುವುದು ದೊಡ್ಡ ವಿಚಾರವೇನಲ್ಲ. ಆದರೆ, ಆ ಕಾನೂನಿನ ಅಡಿಯಲ್ಲಿ ಬರುವ ನಿಯಮಗಳನ್ನು ಮಾಡುವ ಅಧಿಕಾರವನ್ನು ಇಲಾಖಾ ಅಧಿಕಾರಿಗಳಿಗೆ ಬಿಟ್ಟು ಇಡೀ ಕಾನೂನನ್ನು ಜಾರಿಗೊಳಿಸಲಾಗದಿರುವಷ್ಟು ಅವಾಸ್ತವಿಕ ಮಾಡಿದರೆ ಯಾವ ಕಾನೂನನ್ನು ನಾವು ಅಂದುಕೊಂಡಂತೆ ಜಾರಿ ಮಾಡಲು ಸಾಧ್ಯವಾದೀತು? ಈ ಬಾರಿ ಸಿದ್ದರಾಮಯ್ಯ ಸರಕಾರ ತರುವ ಈ ಕಾನೂನು ಕೂಡ ಇದೇ ದಾರಿಯತ್ತ ಸಾಗಿದರೆ ಆಶ್ಚರ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ, ಈ ಕಂಪೆನಿಗಳು ರಾಜಕೀಯ ಪಕ್ಷಗಳ ಜೊತೆ ಸಮ್ಮಿಳಿತವಾದರಂತೂ ಮುಗಿಯಿತು. ಗಣಿ ಹಗರಣ, ಲಿಕ್ಕರ್ ಲಾಬಿ ತರ, ಈ ಹಣಕಾಸು ಸಂಸ್ಥೆಗಳ ಮಾಲಿಕರು ಮುಂದೊಂದು ದಿನ ನಮ್ಮ ಎಮ್ಎಲ್ಎ, ಎಮ್ ಎಲ್ ಸಿ ಗಳಾಗಿ, ನಮ್ಮೆದುರೇ ಬಂದರೆ? ಈಗ ಮಾಡಲು ಹೊರಟಿರುವ ಕಾನೂನನ್ನು, ಆಗ ಪುಸ್ತಕದಲ್ಲಿ ಮಾತ್ರ ಹುಡುಕಬೇಕಾಗಿ ಬರಬಹುದು. ಇದನ್ನು ನೋಡಿದಾಗ ಅನ್ನಿಸುವುದೇನೆಂದರೆ, ಪಕ್ಷಾತೀತವಾಗಿ ರಾಜಕೀಯ ವ್ಯವಸ್ಥೆಯಲ್ಲಿ ಹುಳುಕಿದೆ. ಅದು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರೆ ಅದು ಅನ್ಯಾಯವಾದೀತು.

Published On - 6:37 pm, Tue, 28 January 25

ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ