ರಾಯಚೂರು: ನೀರಿನ ಮಟ್ಟ ಅರಿಯದೇ ಜಲಧಾರೆ ಯೋಜನೆ ಆರಂಭಕ್ಕೆ ಸ್ಥಳೀಯರ ಆಕ್ರೋಶ

ರಾಜ್ಯ ಸರ್ಕಾರ ಜಲಧಾರೆ ಯೋಜನೆಯಡಿ ಜಿಲ್ಲೆಯ 180 ಹಳ್ಳಿಗಳ 85,000 ಮನೆಗಳಿಗೆ ನೇರವಾಗಿ ಕುಡಿಯುವ ನೀರು ಹರಿಸುವ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗೆ ಮೊದಲನೆ ಕಂತಿನ 300 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.

ರಾಯಚೂರು: ನೀರಿನ ಮಟ್ಟ ಅರಿಯದೇ ಜಲಧಾರೆ ಯೋಜನೆ ಆರಂಭಕ್ಕೆ ಸ್ಥಳೀಯರ ಆಕ್ರೋಶ
ನಾರಾಯಣಪುರ ಜಲಾಶಯ
Follow us
TV9 Web
| Updated By: preethi shettigar

Updated on: Jun 22, 2021 | 4:46 PM

ರಾಯಚೂರು: ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರ ದಾಹ ಇಂಗಿಸಲು ಮುಂದಾಗಿರುವ ಸರ್ಕಾರ ಮಹತ್ವದ ಜಲಧಾರೆ ಯೋಜನೆ ಜಾರಿಗೆ ತರಲು ಒಪ್ಪಿಗೆ ನೀಡಿದೆ. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ನೀರಿನ ಬಳಕೆಯ ವಿಚಾರವಾಗಿ ಖಚಿತಪಡಿಸಿಕೊಳ್ಳದೇ ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಾರಾಯಣಪುರ ಜಲಾಶಯದಲ್ಲಿ ಸಂಗ್ರಹವಾಗುವ ನೀರು ಕೃಷ್ಣ ನದಿ ಮೂಲಕ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಿಗೆ ಹರಿದು ಹೋಗುತ್ತದೆ. ಈ ನದಿ ನೀರನ್ನು ಯಾವುದೇ ಯೋಜನೆಗೂ ಹೊಸದಾಗಿ ಬಳಕೆ ಮಾಡಿಕೊಳ್ಳಬೇಕಾದರೆ, ಎರಡು ರಾಜ್ಯಗಳ ಒಪ್ಪಿಗೆ ಬೇಕೇ ಬೇಕು. ಆದರೆ ಈ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಬಳಸಿ ರಾಯಚೂರು ಜಿಲ್ಲೆಯ 85,000 ಮನೆಳಿಗೆ ನೀರು ಪೂರೈಕೆಗೆ ಜಲಧಾರೆ ಯೋಜನೆ ಸಿದ್ಧಪಡಿಸಲಾಗಿದೆ. ಇದು ಸದ್ಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು 2,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಸರ್ಕಾರವೂ ಒಪ್ಪಿಗೆ ನೀಡಿದೆ. ಈ ಯೋಜನೆಯ ಮೂಲಕ ಪ್ರತಿ ಹಳ್ಳಿಯ ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ಮಹತ್ವದ ಉದ್ದೇಶ ಹೊಂದಲಾಗಿದೆ. ಈಗಾಗಲೇ ರಾಯಚೂರು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಈ ಯೋಜನೆಯನ್ನು ಜಾರಿಗೆ ತರಲು ಭರದ ಸಿದ್ಧತೆ ಕೂಡ ನಡೆಸಿದ್ದಾರೆ. ಆದರೆ ನಾರಾಯಣಪುರ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಬಳಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಖಚಿತವಾಗಿಲ್ಲ. ಯೋಜನೆ ಪೂರ್ಣಗೊಂಡ ನಂತರ ನೀರಿನ ಬೇಡಿಕೆಗೆ ಕೃಷ್ಣ ನ್ಯಾಯಾಧಿಕರಣದ ಮುಂದೆ ಬೇಡಿಕೆ ಇಟ್ಟರೆ ಎಲ್ಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಲಿದ ಎಂದು ಪ್ರಗತಿಪರ ಹೋರಾಟಗಾರ ಅಮರೇಷ್ ಆರೋಪಿಸಿದ್ದಾರೆ.

ಜಿಲ್ಲೆಯಾದ್ಯಂತ ಹಳ್ಳಿಗಾಡಿನ ಪ್ರದೇಶದಲ್ಲಿ ಜನ ಕುಡಿಯುವ ನೀರಿಗಾಗಿ ಇಂದಿಗೂ ಪರದಾಡುತ್ತಿದ್ದಾರೆ. 250ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜನ ಇಂದಿಗೂ ಫ್ಲೋರೈಡ್ ಮತ್ತು ಅರಸೆನಿಕ್ ಮಿಶ್ರಿತ ನೀರನ್ನೇ ಸೇವಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕಗಳು ಮಾಡಿದರೂ ಹಲವೆಡೆ ನಿಸ್ಪ್ರಯೋಜಕವಾಗಿವೆ. ಹೀಗಾಗಿ ರಾಜ್ಯ ಸರ್ಕಾರ ಜಲಧಾರೆ ಯೋಜನೆಯಡಿ ಜಿಲ್ಲೆಯ 180 ಹಳ್ಳಿಗಳ 85,000 ಮನೆಗಳಿಗೆ ನೇರವಾಗಿ ಕುಡಿಯುವ ನೀರು ಹರಿಸುವ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗೆ ಮೊದಲನೆ ಕಂತಿನ 300 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.

ಈಗಾಗಲೇ ಪೈಪ್​ಲೈನ್ ಮತ್ತೀತರ ಕಾಮಗಾರಿಗಳಿಗೆ ಟೆಂಡರ್ ಕೂಡ ಕರೆಯಲಾಗಿದೆ. ಆದರೆ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳದೇ ಈ ರೀತಿ ತರಾತುರಿಯಲ್ಲಿ ಜಲಧಾರೆ ಯೋಜನೆಯನ್ನು ಜಾರಿಗೆ ತರುತ್ತಿರುವುದು ಅಷ್ಟು ಸಮಂಜಸವಲ್ಲ. ಅಲ್ಲದೆ ಈ ಉದ್ದೇಶದ ಬಗ್ಗೆ ಸ್ಥಳೀಯರಲ್ಲಿ ಹತ್ತಾರು ಅನುಮಾನಗಳು ಸೃಷ್ಟಿಯಾಗಿವೆ. ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯತಿ ಸಿಇಓ ತನ್ವೀರ್ ಆಶೀಫ್ ಸೇಠ್ ಅವರನ್ನು ಕೇಳಿದರೆ ಈಗಾಗಲೇ ಜಲಧಾರೆ ಯೋಜನೆಯಡಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಆದಷ್ಟು ಬೇಗ ಈ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದು, ಸರ್ಕಾರ ಜಾರಿಗೆ ತರಲು ಹೊರಟಿರುವ ಈ ಯೋಜನೆಯ ಸಾಧಕ ಭಾಧಕಗಳ ಬಗ್ಗೆ ಯೋಚಿಸದೇ ಇರುವುದು ಸದ್ಯ ಹಳ್ಳಿಗಾಡಿನ ಜನರಲ್ಲಿ ನಿರಾಸೆ ಮೂಡಿಸಿದೆ. ನೆಪ ಮಾತ್ರಕ್ಕೆ ಪೈಪ್ ಜೋಡಣೆ ಮಾಡಿ ನೀರು ಹರಿಸದೇ ಇದ್ದರೆ ಜನ ನೀರಿಗಾಗಿ ಪರಿತಪಿಸುವುದು ಮುಂದುವರೆಯಲಿದೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡು ಜಲಧಾರೆ ಯೋಜನೆಯ ನೀರಿನ ಲಭ್ಯತೆಯ ವಿಚಾರದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ:

ಇಬ್ಬರು ರೈತರ ನಡುವಿನ ಜಗಳದಲ್ಲಿ ದ್ರಾಕ್ಷಿ ಗಿಡ ನಾಶ; ಕಳೆನಾಶಕ ಸಿಂಪಡಿಸಿ ಬೆಳೆಗೆ ಹಾನಿ ಮಾಡಿರುವ ಆರೋಪ

ಉದ್ಯೋಗ ಖಾತ್ರಿ ಯೋಜನೆ ಹೆಸರಿನಲ್ಲಿ ಅಕ್ರಮ; ಕಾರ್ಮಿಕರ ಬದಲು ಜೆಸಿಬಿ ಬಳಸಿ ಕಾಮಗಾರಿ ಮಾಡಿಸಿದ ಆರೋಪ