ನೆಪ ಮಾತ್ರಕ್ಕೆ ಭತ್ತ ಖರೀದಿ ಕೇಂದ್ರ ಆರಂಭಿಸಿದ ರಾಯಚೂರು ಜಿಲ್ಲಾಡಳಿತ; ರೈತರಲ್ಲಿ ಹೆಚ್ಚಿದ ಆತಂಕ

ಜಮೀನಿನಲ್ಲೇ ಸಂಗ್ರಹಿಸಿಡಲಾಗಿದ್ದ ಭತ್ತದ ಕಾಳುಗಳಲ್ಲಿ, ಇಟ್ಟಲ್ಲೆ ಮೊಳಕೆಯೊಡೆಯುತ್ತಿದೆ. ಜಿಲ್ಲೆಯಾದ್ಯಂತ ಬೇಸಿಗೆ ಹಂಗಾಮಿನಲ್ಲಿ ಸುಮಾರು 90,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತದ ಬೆಳೆ ಬೆಳೆದಿದ್ದಾರೆ. ಇದುವರೆಗೂ ಭತ್ತ ಖರೀದಿ ಕೇಂದ್ರದಿಂದ ರೈತರ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸದೇ ಇರುವುದೇ ಇದಕ್ಕೆ ಕಾರಣವಾಗಿದೆ.

ನೆಪ ಮಾತ್ರಕ್ಕೆ ಭತ್ತ ಖರೀದಿ ಕೇಂದ್ರ ಆರಂಭಿಸಿದ ರಾಯಚೂರು ಜಿಲ್ಲಾಡಳಿತ; ರೈತರಲ್ಲಿ ಹೆಚ್ಚಿದ ಆತಂಕ
ಹೊಲದಲ್ಲೇ ರಾಶಿ ಹಾಕಿರುವ ಭತ್ತ

ರಾಯಚೂರು: ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಲಾಕ್​ಡೌನ್ ಜಾರಿಗೆ ತಂದಿದೆ. ಆದರೆ ಈ ಲಾಕ್​ಡೌನ್​ನಿಂದಾಗಿ ಕೂಲಿ ಕಾರ್ಮಿಕರು, ವ್ಯಾಪಾರಿಗಳು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಲ್ಲೂ ರಾಯಚೂರಿನಲ್ಲಿ ಭತ್ತ ಬೆಳೆದ ರೈತರು ಲಾಕ್​ಡೌನ್​ನಿಂದಾಗಿ ಬೆಳೆದ ಬೆಳೆಯನ್ನು ಹೊಲದಿಂದ ಕಟಾವು ಮಾಡಿ ತರಲಾಗದೆ. ತಂದ ಭತ್ತವನ್ನು ಮಾರಾಟ ಮಾಡಲಾಗದೆ ಆತಂಕಕ್ಕೆ ಗುರಿಯಾಗಿದ್ದಾರೆ.

ಲಾಕ್​ಡೌನ್​ನಿಂದಾಗಿ ರೈತರು ಕಷ್ಟಪಟ್ಟು ಬೆಳೆದಿರುವ ಬಹುಪಾಲು ಭತ್ತದ ಬೆಳೆ ಮಾರಾಟ ಮಾಡಲು ಆಗದೆ ಜಮೀನಿನಲ್ಲೇ ಸಂಗ್ರಹಿಸಿಡುವ ಅನಿವಾರ್ಯ ಸ್ಥಿತಿ ಎದುರಾಗಿದೆ. ಈ ನಡುವೆ ಜಿಲ್ಲಾಡಳಿತ ಭತ್ತ ಖರೀದಿ ಕೇಂದ್ರ ಆರಂಭಿಸಿದೆ. ಭತ್ತ ಬೆಳೆದ ರೈತರು ಖರೀದಿ ಕೇಂದ್ರದಲ್ಲಿ ಹೆಸರು ನೊಂದಾವಣೆ ಆರಂಭಿಸಿದ್ಧಾರೆ. ಈಗಾಗಲೇ 400ಕ್ಕೂ ಅಧಿಕ ರೈತರು ಭತ್ತ ಮಾರಾಟಕ್ಕೆ ನೊಂದಣಿ ಮಾಡಿಸಿದ್ದಾರೆ. ಆದರೆ ಇದುವರೆಗೂ ನೊಂದಣಿಯಾದ ರೈತರ ಭತ್ತ ಖರೀದಿ ಮಾಡುತ್ತಿಲ್ಲ. ಹೀಗಾಗಿ ರೈತರು ಬೆಳೆದ ಭತ್ತ ಮಾರಾಟ ಮಾಡಲು ಆಗದೆ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಮೀನಿನಲ್ಲೇ ಸಂಗ್ರಹಿಸಿಡಲಾಗಿದ್ದ ಭತ್ತದ ಕಾಳುಗಳಲ್ಲಿ, ಇಟ್ಟಲ್ಲೆ ಮೊಳಕೆಯೊಡೆಯುತ್ತಿದೆ. ಜಿಲ್ಲೆಯಾದ್ಯಂತ ಬೇಸಿಗೆ ಹಂಗಾಮಿನಲ್ಲಿ ಸುಮಾರು 90,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತದ ಬೆಳೆ ಬೆಳೆದಿದ್ದಾರೆ. ಇದುವರೆಗೂ ಭತ್ತ ಖರೀದಿ ಕೇಂದ್ರದಿಂದ ರೈತರ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸದೇ ಇರುವುದೇ ಇದಕ್ಕೆ ಕಾರಣವಾಗಿದೆ. ಅದರಲ್ಲೂ ಭತ್ತದ ಗುಣಮಟ್ಟ ಕೊಂಚ ಏರುಪೇರಾದರೆ ಖರೀದಿ ಕೇಂದ್ರದಲ್ಲಿ ಭತ್ತವನ್ನು ಮುಲಾಜಿಲ್ಲದೇ ತಿರಸ್ಕರಿಸಲಾಗುತ್ತದೆ. ಹೀಗಾಗಿ ಬೆಳೆದ ಭತ್ತ ಮಾರಾಟ ಮಾಡೋಕ್ಕಾಗದೇ ಇತ್ತ ಜಮೀನಿನಲ್ಲೂ ಇಟ್ಟುಕೊಳ್ಳೋಕಾಗದೇ ಸಂಕಟ ಅನುಭವಿಸುತ್ತಿದ್ದೇವೆ ಎಂದು ಭತ್ತ ಬೆಳೆಗಾರ ಮಲ್ಲೇಶಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಕೇಳಿದರೆ, ಆದಷ್ಟು ಬೇಗ ಭತ್ತ ಖರೀದಿ ಪ್ರಕ್ರಿಯೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಒಂದುಕಡೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ, ಇನ್ನೊಂದು ಕಡೆ ಲಾಕ್​ಡೌನ್ ಮಾಡಿದೆ. ಇದರಿಂದ ಕೊರೊನಾ ಇಳಿಮುಖವಾಗುತ್ತಿದೆ. ಆದರೆ ಲಾಕ್​ಡೌನ್ ಜಾರಿ ಮಾಡಿದ್ದರಿಂದ ಜಿಲ್ಲೆಯಾದ್ಯಂತ ಕೃಷಿ ಸಮುದಾಯದ ಜನ ಸಂಕಷ್ಟಕ್ಕೆ ಸಿಲುಕಿರುವುದು ವಿಪರ್ಯಾಸವೆ ಸರಿ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸಂಕಟಕ್ಕೆ ಗುರಿಯಾಗಿರುವ ಭತ್ತ ಬೆಳೆಗಾರರ ನೆರವಿಗೆ ಮುಂದಾಗಬೇಕು ಎನ್ನುವುದು ರೈತರ ಮನವಿ.

ಇದನ್ನೂ ಓದಿ:

ಹಾವೇರಿಯಲ್ಲಿ ಭರಪೂರ ಬೆಳೆದ ಭತ್ತ ; ಖರೀದಿದಾರರಿಲ್ಲದೆ ಕಂಗಾಲಾದ ರೈತರು

ಹಡಿಲು ಭೂಮಿ ಕೃಷಿ ಪ್ರಕ್ರಿಯೆ ಉಡುಪಿಯಲ್ಲಿ ಮತ್ತೆ ಆರಂಭ; 2000 ಎಕರೆಯಲ್ಲಿ ಭತ್ತ ಭಿತ್ತನೆಗೆ ಸಿದ್ಧತೆ