ನರೇಂದ್ರ ಮೋದಿ ಗಡ್ಡ ಬಿಟ್ಟರೆ ರವೀಂದ್ರನಾಥ್​ ಠಾಗೋರ್​ ಆಗುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

Maski Assembly By Election: ಗಡ್ಡ ಬಿಟ್ಟ ತಕ್ಷಣಕ್ಕೆ ನೀವು ರವೀಂದ್ರನಾಥ್​ ಠಾಗೋರ್​ ಆಗುವುದಿಲ್ಲ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ ಪ್ರಧಾನಿ ನರೇಂದ್ರ ಮೋದಿಯವರೇ ಎಂದು ಕಾಂಗ್ರೆಸ್​ನ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.

  • TV9 Web Team
  • Published On - 22:17 PM, 11 Apr 2021
ನರೇಂದ್ರ ಮೋದಿ ಗಡ್ಡ ಬಿಟ್ಟರೆ ರವೀಂದ್ರನಾಥ್​ ಠಾಗೋರ್​ ಆಗುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ
ನರೇಂದ್ರ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ

ರಾಯಚೂರು: ಗಡ್ಡ ಬಿಟ್ಟ ತಕ್ಷಣಕ್ಕೆ ನೀವು ರವೀಂದ್ರನಾಥ್​ ಠಾಗೋರ್​ ಆಗುವುದಿಲ್ಲ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ ಪ್ರಧಾನಿ ನರೇಂದ್ರ ಮೋದಿಯವರೇ ಎಂದು ಕಾಂಗ್ರೆಸ್​ನ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು. ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಸ್ಕಿ ನಗರದಲ್ಲಿ ಭಾನುವಾರ ಕಾಂಗ್ರೆಸ್​ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮಸ್ಕಿ ಕ್ಷೇತ್ರದ ಈ ಉಪಚುನಾವಣೆ ಬಹಳ ಮಹತ್ವದ್ದಾಗಿದೆ. ನಿಮಗಾಗಿ ಯಾರು ಶ್ರಮಿಸಿದ್ದಾರೋ ಅವರ ಪರವಾಗಿ ನಿಲ್ಲಿ’ ಎಂದು ಕರೆ ನೀಡಿದರು.

‘ಮಸ್ಕಿ ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದು ಯಾರು? ನೋಟ್​ ಕೊಡುವ ಅವರಿಗೆ ವೋಟ್​​ ಹಾಕುತ್ತೀರೋ? ಜಿಲ್ಲೆಗೆ ಅನುಕೂಲ ಮಾಡಿದವರಿಗೆ ಹಾಕ್ತಿರೋ ಯೋಚಿಸಿ ಎಂದು ಮುಗುಮ್ಮಾಗಿ ಮಾತನಾಡಿದರು. ಸಾರಿಗೆ ನೌಕರರ ಮುಷ್ಕರಕ್ಕೆ ನಮ್ಮ ಬೆಂಬಲ ಸಂಪೂರ್ಣವಿದೆ. ಬಡವರ ಜತೆ ನಾವೂ ಇದ್ದೇವೆ ಎಂದು ಘೋಷಿಸಿದರು.

ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮತದಾರರು ಕಾಂಗ್ರೆಸ್​ ಪಕ್ಷ ಗೆಲ್ಲಿಸುವ ಸಂಕಲ್ಪ ಮಾಡಬೇಕು. ನೀವು ಕೊಟ್ಟ ತೀರ್ಪನ್ನೇ ಮಾರಿಕೊಂಡಿದ್ದಾರೆ. ಅದನ್ನು ಮರೆಯಲು ಸಾಧ್ಯವಿಲ್ಲ. ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಮುಖ್ಯಮಂತ್ರಿ ಹಾಗೂ ಅವರ ಮಗ ಏಕೆ ಇಲ್ಲೇ ಠಿಕಾಣಿ ಹೂಡಬೇಕಿತ್ತು? ಬಿಜೆಪಿ ನೋಟು ಬಸನಗೌಡಗೆ ವೋಟು ಎಂದು ಮತದಾರರಿಗೆ ಕರೆ ನೀಡಿದರು.

ಸಮಾವೇಶದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ‘ಬಿಜೆಪಿ ನೋಟು, ಕಾಂಗ್ರೆಸ್‌ಗೆ ವೋಟು’ ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮಧ್ಯೆ ಕಮಿಷನ್‌ಗಾಗಿ ಜಗಳ ಬಂದಿದೆ. ಅಪ್ಪ ಹಾಗೂ ಮಗ ಹಣ ಲೂಟಿ ಮಾಡಿದ್ದಾರೆ. ಲೂಟಿ ಹಣದಲ್ಲಿ ಉಪ ಚುನಾವಣೆ ನಡೆಸಲು ಬಂದಿದ್ದಾರೆ. ಸಂಬಳ ಕೊಡಲೂ ಸರ್ಕಾರ ಬಳಿ ಹಣವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಸ್ಕಿ ಕ್ಷೇತ್ರದ ಜನರಿಗೆ ಒಂದು ಒಳ್ಳೇ ಅವಕಾಶ ಬಂದಿದೆ. ಪ್ರತಾಪ್ ಗೌಡ ಹೇಳಿದ ಕೆಲಸವೆಲ್ಲ ಮಾಡಿಕೊಟ್ಟರೂ 600-700 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಅಷ್ಟೇ ಹಣ ಖರ್ಚು ಮಾಡಿ ಚುನಾವಣೆ ಎದುರಿಸಿದ್ದಾರೆ. ವಿಧಾನಸಭೆ ವಿಸರ್ಜಿಸಲು ಹೇಳಿದ್ದೆ ಅದ್ರೆ ಅವರು ಬರಲಿಲ್ಲ. 2023ರಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೇರುವುದು ಖಚಿತ. ಬಸನಗೌಡ ಬಡವ, ಅವರಿಗೆ ಆಶೀರ್ವಾದ ಮಾಡಲು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ಜನರ ಶಕ್ತಿ ಮುಂದೆ ಹಣದ ಶಕ್ತಿ ಏನೂ ಕೆಲಸ ಮಾಡಲ್ಲ. ನಿಮ್ಮ ಮತಕ್ಕೆ ಗೌರವ ಕೊಡದವರನ್ನು ಮನೆಗೆ ಕಳುಹಿಸಿ ಎಂದು ಕರೆ ನೀಡಿದರು.

(Maski Assembly By Election Narendra Modi wont become ravindranath tagore if he grow beard criticises congress leader Mallikarjuna Kharge)