ಕೊಳ್ಳಿಗನಹಳ್ಳಿ ಗ್ರಾಮದಲ್ಲಿ ಸಿದ್ಧವಾಯ್ತು ಹೈಟೆಕ್ ಲೈಬ್ರರಿ, ಗ್ರಾಮ ಪಂಚಾಯಿತಿ ಅಧಿಕಾರಿಗಳ ಕಾರ್ಯಕ್ಕೆ ಗ್ರಾಮಸ್ಥರಿಂದ ಪ್ರಶಂಸೆ
ಕನಕಪುರ ತಾಲೂಕಿನ ಕೊಳ್ಳಿಗನಹಳ್ಳಿ ಗ್ರಾಮದಲ್ಲಿರೋ ಗ್ರಾಮ ಪಂಚಾಯಿತಿ ಕಟ್ಟಡದಲ್ಲೇ ಸುಮಾರು 2.5 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣಗೊಂಡಿದೆ. ಇದೇ ಕಟ್ಟಡದಲ್ಲಿ ಇದ್ದ ಲೈಬ್ರರಿ ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳಿಗೆ ಮಾತ್ರ ಸೀಮಿತವಾಗಿತ್ತು.
ರಾಮನಗರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಇದ್ದರೂ ಹಳ್ಳಿಗಳಲ್ಲಿ ಕೆಲವಷ್ಟು ಸೌಕರ್ಯಗಳು ಇರುವುದಿಲ್ಲ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ಕಲಿಕೆಯಲ್ಲಿ ತೊಡಗಿಕೊಳ್ಳುವಂತಹ ಪರಿಸ್ಥಿತಿ ಈಗಲೂ ಇದೆ. ಹೀಗಾಗಿ ಎಷ್ಟು ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಸರಿದ್ದಿದಾರೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಹೈಟೆಕ್ ಲೈಬ್ರರಿ ನಿರ್ಮಾಣ ಮಾಡಿ ರಾಮಗರ ಜಿಲ್ಲೆ ಕನಕಪುರ ತಾಲೂಕಿನ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಸೆಳೆದಿದ್ದಾರೆ.
ಕನಕಪುರ ತಾಲೂಕಿನ ಕೊಳ್ಳಿಗನಹಳ್ಳಿ ಗ್ರಾಮದಲ್ಲಿರೋ ಗ್ರಾಮ ಪಂಚಾಯಿತಿ ಕಟ್ಟಡದಲ್ಲೇ ಸುಮಾರು 2.5 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣಗೊಂಡಿದೆ. ಇದೇ ಕಟ್ಟಡದಲ್ಲಿ ಇದ್ದ ಲೈಬ್ರರಿ ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳಿಗೆ ಮಾತ್ರ ಸೀಮಿತವಾಗಿತ್ತು. ಗ್ರಾಮದ ಓದುಗರು ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಮತ್ತು ಓದುಗರಿಗೆ ಪೂರಕವಾದ ವಾತಾವರಣವೂ ಇರಲಿಲ್ಲ. ಗ್ರಾಮೀಣ ಭಾಗದ ಜನರು ಓದಿನಲ್ಲಿ ಆಸಕ್ತಿ ಇದ್ದರು ನಗರ ಪ್ರದೇಶಗಳ ಲೈಬ್ರರಿಗೆ ಹೊಗುವುದು ದೂರದ ಮಾತಾಗಿತ್ತು. ಇದನ್ನ ಅರಿತ ಗ್ರಾಮಪಂಚಾಯಿತಿ ಅಧಿಕಾರಿಗಳು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಜನರಿಗೆ ಉತ್ತಮವಾದ ಗ್ರಂಥಾಲಯವನ್ನ ನಿರ್ಮಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅಂದಹಾಗೆ ಸುಸಜ್ಜಿತವಾದ ಹೈಟೆಕ್ ಲೈಬ್ರರಿ ನಿರ್ಮಾಣ ಮಾಡಿ, ಗ್ರಾಮೀಣ ಭಾಗದ ಜನರಿಗೂ ನಗರ ಪ್ರದೇಶದ ಹಾಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಳೆಯ ಕಟ್ಟಡಕ್ಕೆ ಆಧುನಿಕ ಸ್ಪರ್ಶ ನೀಡಿ, ಕೊಠಡಿಯಲ್ಲಿ ಟೈಲ್ಸ್ ಮತ್ತು ಓದುಗರು ಕುಳಿತುಕೊಳ್ಳಲು ಸುಸಜ್ಜಿತವಾದ ಆಸನ ಮತ್ತು ಪೀಠೋಪಕರಣಗಳನ್ನು ವ್ಯವಸ್ಥೆ ಕಲ್ಪಿಸಿದ್ದಾರೆ. ಗ್ರಾಮೀಣ ಭಾಗದ ಗ್ರಂಥಾಲಯಗಳೆಂದರೆ ಬೆರಳೆಣಿಕೆಯಷ್ಟು ಪುಸ್ತಕಗಳಿಗೆ ಮಾತ್ರ ಸೀಮಿತ. ಆದರೆ ಇಲ್ಲಿ ನಗರ ಪ್ರದೇಶದಲ್ಲಿರುವ ಲೈಬ್ರರಿಗಳಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗುವ ಸಾಮಾನ್ಯ ಜ್ಞಾನ, ವಿಶ್ವಕೋಶ, ಪ್ರಾಚೀನ ಭಾರತ ಸೇರಿದಂತೆ ಪತ್ರಿಕೋದ್ಯಮದ ಪುಸ್ತಕಗಳು ಸೇರಿದಂತೆ ಒಂದೂವರೆ ಸಾವಿರ ಪುಸ್ತಕಗಳು ಲಭ್ಯವಿವೆ.
ಈ ಹಿಂದೆ ಇದ್ದ ಗ್ರಂಥಾಲಯ ಸಾಕಷ್ಟು ಚಿಕ್ಕದಾಗಿ ಇತ್ತು. ಹೀಗಾಗಿ ಜಿಲ್ಲಾ ಪಂಚಾಯತಿ ಸಿಇಒ ಅವರ ಸೂಚನೆ ಮೇರೆಗೆ ಸುಮಾರು 2.5 ಲಕ್ಷ ವೆಚ್ಚದಲ್ಲಿ ಹೊಸ ಲೈಬ್ರರಿ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಅಲ್ಲದೆ ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲೇ ಕಾರ್ಯಾಗಾರವನ್ನು ಸಹಾ ಏರ್ಪಡಿಸಲಾಗುತ್ತಿದೆ ಎಂದು ಕೊಳ್ಳಿಗಾನಹಳ್ಳಿ ಗ್ರಾಮಪಂಚಾಯಿತಿ ಪಿಡಿಓ ದೊಡ್ಡಲಿಂಗೇಗೌಡ ಮಾಹಿತಿ ನೀಡಿದ್ರು.
ಯೂತ್ ಸ್ಕಿಲ್ ಡೆವಲಪ್ಮೆಂಟ್ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಲೈಬ್ರರಿಗೆ ಬರುವ ವಿವಿಧ ಅಭಿರುಚಿ ಉಳ್ಳ ಓದುಗರಿಗೆ ಪುಸ್ತಕಗಳು ಸರಳವಾಗಿ ಕೈಗೆ ಸಿಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಲೈಬ್ರರಿಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವುದು ಅಧಿಕಾರಗಳ ಶ್ರಮ ಸಾರ್ಥಕವಾಗಿದೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಮತ್ತು ಉನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡುತ್ತಿರುವುದು ಈ ಲೈಬ್ರರಿಯ ಮತ್ತೊಂದು ವಿಶೇಷ. ಗ್ರಾಮೀಣ ಭಾಗದ ಮಕ್ಕಳಿಗೆ ಜ್ಞಾನಾರ್ಜನೆಯ ಜೊತೆಗೆ ಮಕ್ಕಳಲ್ಲಿ ಕೌಶಲ್ಯಾಧಾರಿತ ಮತ್ತು ಉನ್ನತ ಶಿಕ್ಷಣದ ಬಗ್ಗೆ ವಾರದಲ್ಲಿ ಒಂದು ದಿನ ಯೂತ್ ಸ್ಕಿಲ್ ಡೆವಲಪ್ಮೆಂಟ್ ಎಂಬ ಕಾರ್ಯಗಾರದ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ.
ಅಕ್ಷರ ಫೌಂಡೇಶನ್ ಮತ್ತು ಡೆಲ್ ಸಂಸ್ಥೆ ವತಿಯಿಂದ ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ 11.30 ರವರೆಗೂ ನಡೆಯುವ ಈ ಕಾರ್ಯಗಾರದಲ್ಲಿ ಕಾಲೇಜು ವಿದ್ಯಾರ್ಥಿಗಳು ಇಟ್ಟುಕೊಂಡಿರುವ ಗುರಿ ಮತ್ತು ಧ್ಯೇಯ ಮುಟ್ಟಬೇಕಾದರೆ ಯಾವ ಹಂತದಲ್ಲಿ ಯಾವ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಅನಿವಾರ್ಯ ಸಂದರ್ಭಗಳಲ್ಲಿ ಉದ್ಯೋಗದ ಜೊತೆ ಜೊತೆಗೆ ಉನ್ನತ ಶಿಕ್ಷಣವನ್ನು ಪಡೆಯು ಅವಕಾಶಗಳ ಬಗ್ಗೆ ಹಾಗೂ ವೃತ್ತಿಪರ ಕೌಶಲ್ಯದ ಬಗ್ಗೆಯೂ ಕಾರ್ಯಗಾರದಲ್ಲಿ ಬೆಳಕು ಚೆಲ್ಲಲಾಗುತ್ತಿದೆ. ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಂಟೆನಹಳ್ಳಿ, ಕಡಸಿಕೊಪ್ಪ, ನಾರಾಯಣಪುರ ಸೇರಿದಂತೆ ಸುಮಾರು ಹತ್ತಾರು ಗ್ರಾಮಗಳಲ್ಲಿರುವ ಸುಮಾರು ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಇನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ
ಇದನ್ನೂ ಓದಿ: ಒಮಿಕ್ರಾನ್ ಸೋಂಕಿತ ವಿದೇಶಕ್ಕೆ ಎಸ್ಕೇಪ್! ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿದ ಬಿಬಿಎಂಪಿ