ಬಿಡದಿ: ಈಗಲ್ಟನ್​ ರೆಸಾರ್ಟ್ ಒತ್ತುವರಿ ಮಾಡ್ಕೊಂಡಿದ್ದ 928 ಕೋಟಿ ರೂ. ಮೌಲ್ಯದ 77 ಎಕರೆ ಸರ್ಕಾರಿ ಭೂಮಿ ಜಿಲ್ಲಾಡಳಿತ ವಶಕ್ಕೆ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 14, 2021 | 4:43 PM

ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ ಲಿ ಕೋರ್ಟ್ ಮೊರೆ ಹೋಗಿದ್ದು, 77 ಎಕರೆಗೆ 12.35 ಕೋಟಿ ಪಾವತಿಸಲು ಸಿದ್ದ ಎಂದು ತಿಳಿಸಿತ್ತು. ಆದರೆ ಇತ್ತೀಚೆಗೆ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ ಲಿನ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಬಿಡದಿ: ಈಗಲ್ಟನ್​ ರೆಸಾರ್ಟ್ ಒತ್ತುವರಿ ಮಾಡ್ಕೊಂಡಿದ್ದ 928 ಕೋಟಿ ರೂ. ಮೌಲ್ಯದ 77 ಎಕರೆ ಸರ್ಕಾರಿ ಭೂಮಿ ಜಿಲ್ಲಾಡಳಿತ ವಶಕ್ಕೆ
ರಾಮನಗರ ಜಿಲ್ಲೆಯಲ್ಲಿ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ

ರಾಮನಗರ: ತಾಲ್ಲೂಕಿನ ಬಿಡದಿ ಬಳಿ ಇರುವ ಈಗಲ್​ಟನ್ ರೆಸಾರ್ಟ್ ರಾಜಕಾರಣಿಗಳು ಸೇರಿದಂತೆ ಸೆಲಬ್ರೆಟಿಗಳ ನೆಚ್ಚಿನ ತಾಣ. ಇದೇ ರೆಸಾರ್ಟ್​ನ ಮಾಲೀಕತ್ವ ಇರುವ ಚಾಮುಂಡೇಶ್ವರಿ ಬಿಲ್ಡ್​ಟೆಕ್ ಪ್ರೈವೇಟ್ ಲಿಮಿಟೆಡ್ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಒತ್ತುವರಿಯಾಗಿದ್ದ ಸರ್ಕಾರಿ ಜಮೀನಿನನ್ನು ರಾಮನಗರ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದು, ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದೆ.

ಒತ್ತುವರಿಯಾಗಿದ್ದ 77.18 ಎಕರೆ ಜಮೀನನ್ನು ರಾಮನಗರ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ. 15 ದಿನಗಳ ಹಿಂದೆಯೇ ಜಾಗವನ್ನು ಗುರುತಿಸಿ ಕಾಪೌಂಡ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ತಹಶೀಲ್ದರ್ ವಿಜಯ್ ಕುಮಾರ್ ನೇತೃತ್ವದಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಗೋಮಾಳದ ಜಾಗದಲ್ಲಿ ಶೇ 90ರಷ್ಟು ಪ್ರದೇಶದಲ್ಲಿ ಗಾಲ್ಫ್ ಮೈದಾನ ನಿರ್ಮಾಣವಾಗಿತ್ತು. ಉಳಿದಂತೆ ವಿಲ್ಲಾ ನಿರ್ಮಿಸಲಾಗಿತ್ತು. ಕೆಲವೆಡೆ ರೆಸಾರ್ಟ್ ನಿರ್ಮಿಸಲಾಗಿತ್ತು.

ವಿಶ್ವದರ್ಜೆಯ ಗಾಲ್ಫ್ ಕೋರ್ಟ್​, ರೆಸಾರ್ಟ್, ವಿಲ್ಲಾಗಳನ್ನ ನಿರ್ಮಿಸಲೆಂದು ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ರಾಮನಗರ ತಾಲೂಕಿನ ಬಿಡದಿ ಬಳಿ 1996ರಲ್ಲಿಯೇ ಸುಮಾರು 400 ಎಕರೆ ಜಮೀನನ್ನು ರೈತರಿಂದ ಖರೀದಿಸಿತ್ತು. ಆದರೆ ಜಮೀನಿನ ಮಧ್ಯದಲ್ಲಿಯೇ ಇದ್ದ 77 ಎಕರೆ ಸರ್ಕಾರಿ ಗೋಮಾಳ ಜಾಗವನ್ನ ಒತ್ತುವರಿ ಮಾಡಿಕೊಂಡು ಗಾಲ್ಫ್ ಕೋರ್ಟ್ ನಿರ್ಮಾಣ ಮಾಡಿತ್ತು. ಈ ವಿಚಾರವಾಗಿ ರಾಮನಗರ ಜಿಲ್ಲಾಡಳಿತ ಗೋಮಾಳ ಜಾಗವನ್ನ ಗುರುತಿಸಿ, ವಶಕ್ಕೆ ಪಡೆಯಲು ಮುಂದಾಗಿತ್ತು.

ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಹೀಗಾಗಿ 2014ರಲ್ಲಿ ಸುಪ್ರೀಂಕೋರ್ಟ್ ಒಂದು ಆದೇಶ ಹೊರಡಿಸಿತ್ತು. ಉಪಸಮಿತಿ ರಚಿಸಿ, ಒತ್ತುವರಿ ಮಾಡಿಕೊಂಡಿರುವ ಜಾಗಕ್ಕೆ ಬೆಲೆ ನಿಗದಿ ಮಾಡಬೇಕು ಎಂದು ಆದೇಶಿಸಿತ್ತು. ಅದರಂತೆ 2016-17ರಲ್ಲಿ ಸದನ ಸಮಿತಿ ವರದಿ ನೀಡಿ, ಮಾರುಕಟ್ಟೆ ಮೌಲ್ಯದಂತೆ ಒತ್ತುವರಿ ಆಗಿರುವ ಜಾಗಕ್ಕೆ ₹ 920 ಕೋಟಿ ಹಣ ಪಾವತಿಸುವಂತೆ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್​ಗೆ ಸೂಚನೆ ನೀಡಿತ್ತು. ಆದರೆ ಸಂಸ್ಥೆಯು ಹಣವನ್ನು ಸರ್ಕಾರಕ್ಕೆ ಪಾವತಿಸಲಿಲ್ಲ. ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಕಳೆದ ತಿಂಗಳು ಚಾಮುಂಡೇಶ್ವರಿ ಬಿಲ್ಡ್ ಟೆಕ್ ಅರ್ಜಿಯನ್ನು ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಡಳಿತವು ಮತ್ತೆ ಚಾಮುಂಡೇಶ್ವರಿ ಬಿಲ್ಡ್​ಟೆಕ್​ಗೆ ಹಣ ಕಟ್ಟಲು ಸೂಚಿಸಿತ್ತು.

ಆದರೆ ಕಂಪನಿ ಕಡೆಯಿಂದ ಯಾವುದೇ ಉತ್ತರ ಬಾರದ ಕಾರಣ ಇದೀಗ ಜಿಲ್ಲಾಡಳಿತವು ಒತ್ತುವರಿ ಜಮೀನನ್ನು ವಶಕ್ಕೆ ಪಡೆದು ಕಾಂಪೌಂಡ್ ನಿರ್ಮಿಸಲು ಮುಂದಾಗಿದೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ರಾಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ‘ಚಾಮುಂಡೇಶ್ವರಿ ಬಿಲ್ಡ್​ಟೆಕ್ 77 ಎಕರೆ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಒತ್ತುವರಿ ಜಾಗಕ್ಕೆ ದರ ನಿಗದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿತ್ತು. ಅವರು ಹಣವನ್ನ ಕಟ್ಟದೇ ಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ತಿಂಗಳು ಅವರ ಅರ್ಜಿ ವಜಾ ಆಗಿತ್ತು. ಅನಂತರ ಅವರು ಹಣ ಕಟ್ಟಲಿಲ್ಲ. ಹೀಗಾಗಿ ಸರ್ಕಾರಿ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಒತ್ತುವರಿ ಜಾಗವನ್ನು ಮತ್ತೆ ಉಪಯೋಗಿಸದಂತೆ ಫಲಕವನ್ನೂ ಹಾಕಲಾಗುವುದು’ ಎಂದು ಹೇಳಿದರು.

ಬೆಳಗಾವಿ: 80 ವರ್ಷಕ್ಕೂ ಹಿಂದಿನ ಆಂಜನೇಯ ದೇವಸ್ಥಾನದ ಮೇಲೂ ಕಣ್ಣು ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ವಿಚಾರವಾಗಿ ರಾಜ್ಯದಲ್ಲಿ ಸದ್ಯ ಚರ್ಚೆ ಮತ್ತು ಗೊಂದಲ ಸೃಷ್ಟಿಯಾಗಿದೆ. ಅದರಂತೆ ಹಳೆ ಬೆಳಗಾವಿ ಹೊರ ವಲಯದಲ್ಲಿರುವ ಎಂಬತ್ತು ವರ್ಷಕ್ಕೂ ಹಿಂದಿನ ಆಂಜನೇಯ ದೇವಸ್ಥಾನವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಲು ತಿಳಿಸಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ದೇವಸ್ಥಾನ ತೆರವು ಮಾಡಲು ಆದೇಶ ನೀಡಲಾಗಿತ್ತು. ಆದರೆ ಆದೇಶವಿದ್ದರೂ ಹೋರಾಟ ಮಾಡಿ ಸ್ಥಳೀಯರು ಮತ್ತು ಹಿಂದೂಪರ ಕಾರ್ಯಕರ್ತರು ಉಳಿಸಿಕೊಂಡಿದ್ದರು. ಎಂಟು ವರ್ಷದ ಹಿಂದೆ ಹೋರಾಡಿ ದೇವಸ್ಥಾನ ತೆರವಾಗದಂತೆ ನೋಡಿಕೊಂಡಿದ್ದ ಸ್ಥಳೀಯರು, ಈಗ ಮತ್ತೆ ದೇವಸ್ಥಾನ ತೆರವುಗೊಳ್ಳುವ ಭೀತಿ ಎದುರಿಸುವಂತಾಗಿದೆ. ಧಾರವಾಡ: ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯಿರುವ ರಾಮಲಿಂಗೇಶ್ವರ ದೇವಾಲಯದ ಭಕ್ತರಲ್ಲಿ ಆತಂಕ ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ, ಅವಳಿ ನಗರದ ಭಕ್ತರಲ್ಲಿ ಆತಂಕ ಶುರುವಾಗಿದೆ. ಧಾರವಾಡ ಜಿಲ್ಲೆಯಲ್ಲಿ 324 ಮಂದಿರ ಮಸೀದಿ ತೆರವುಗೊಳಿಸಲು ಆದೇಶ ನೀಡಲಾಗಿದೆ. ಈಗಾಗಲೇ 43 ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಆದರೆ ಈಗ 281 ಅನಧಿಕೃತವಾಗಿರುವ ಪ್ರಾರ್ಥನಾ ಮಂದಿರ ತೆರವುಗೊಳಿಸುವುದೇ ದೊಡ್ಡ ಸವಾಲಾಗಿದೆ.

ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯಿರುವ ರಾಮಲಿಂಗೇಶ್ವರ ದೇವಾಲಯದ ಭಕ್ತರಲ್ಲಿ ಆತಂಕ ಶುರುವಾಗಿದೆ. ಇದು ಪುರಾತನ ಕಾಲದ ಸ್ವಯಂಭು ಲಿಂಗವಾಗಿದ್ದು, ಬಿಆರ್​ಟಿಸಿ ಮೇಲ್ಸೇತುವೆ ಕಾಮಗಾರಿ ಸಮಯದಲ್ಲು ತೆರವುಗೊಳ್ಳದ ಗುಡಿ, ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ತೆರವಿನ ಬಗ್ಗೆ ಆಡಳಿತ ಮಂಡಳಿಯಿಂದ ಚರ್ಚೆಯಾಗುತ್ತಿದೆ.

ಅಶ್ವತ್ಥಾಮ ದೇವಸ್ಥಾನಕ್ಕೂ ತೆರವು ಆತಂಕ ಶುರು ಹತ್ತು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ವೇಳೆ ಬೆಳಗಾವಿ ಹೃದಯ ಭಾಗದಲ್ಲಿರುವ ಪಾಂಗಳುಗಲ್ಲಿಯ ಅಶ್ವತ್ಥಾಮ ದೇವಸ್ಥಾನ ತೆರುವಿಗೆ ಜಿಲ್ಲಾಡಳಿತ ಮುಂದಾಗಿದ್ದಾಗ ಸ್ಥಳೀಯರು ಹೋರಾಟ ಮಾಡಿ ದೇವಸ್ಥಾನ ಉಳಿಸಿಕೊಂಡಿದ್ದರು. ಇದೀಗ ಮತ್ತೆ ತೆರವುಗೊಳ್ಳುವ ಭೀತಿಯಲ್ಲಿ ಅಶ್ವತ್ಥಾಮ ದೇವಸ್ಥಾನ ಭಕ್ತರು ಕಾಲ ಕಳೆಯುವಂತಾಗಿದೆ. 150ಕ್ಕೂ ಅಧಿಕ ಇತಿಹಾಸ ಹೊಂದಿರುವ ದೇವಸ್ಥಾನ ಇದಾಗಿದೆ.

ದಾವಣಗೆರೆ: 23 ಅನಧಿಕೃತ ಧಾರ್ಮಿಕ ಕಟ್ಟಡ ಗುರುತಿಸಿದ ಜಿಲ್ಲಾಡಳಿತ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಶುರುವಾಗಿದೆ. ಅದರಂತೆ ದಾವಣಗೆರೆ ಜಿಲ್ಲಾಡಳಿತ ಈಗಾಗಲೇ 23 ಅನಧಿಕೃತ ಧಾರ್ಮಿಕ ಕಟ್ಟಡ ಗುರುತಿಸಿದೆ. ಈ ಹಿಂದೆ 13 ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿತ್ತು. ಸದ್ಯ ಉಳಿದ ಹತ್ತು ಕಟ್ಟಡಗಳ ತೆರವಿಗೆ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲಾಡಳಿದಿಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದ್ದು, ಈ ಹತ್ತು ಧಾರ್ಮಿಕ ಕಟ್ಟಡಗಳ ವಿಚಾರವಾಗಿ ಕೆಲ ಪ್ರಕರಣಗಳಲ್ಲಿ ಸ್ಥಳೀಯರು ಕೋರ್ಟ್ ಮೊರೆ ಹೋಗಿರುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka News Live: ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ ದೇಗುಲಗಳ ತೆರವು ಕಾರ್ಯಕ್ಕೆ ವ್ಯಾಪಕ ವಿರೋಧ

ಆನೇಕಲ್​​​ನಲ್ಲಿ ಒತ್ತುವರಿ ಸರ್ಕಾರಿ ಜಾಗ ತೆರವು ಕಾರ್ಯ; ಒಂದು ಗಂಟೆಯೊಳಗೆ ಜಾಗ ಖಾಲಿ ಮಾಡಲು ಸೂಚನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada