ಅರ್ಧಕ್ಕೆ ನಿಂತ ಲಿಫ್ಟ್ ಕಾಮಗಾರಿ: ರೇವಣಸಿದ್ದೇಶ್ವರ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ನಿರಾಸೆ

ಕೆಲವೇ ತಿಂಗಳಲ್ಲಿ ಲಿಫ್ಟ್ ಅಳವಡಿಕೆ ಮುಗಿಯುತ್ತದೆ ಎಂದು ಹೇಳಿದವರು ಇತ್ತ ಸುಳಿದಿಲ್ಲ. ಅಲ್ಲದೆ ಲಿಫ್ಟ್ ಕಾಮಗಾರಿಗೆ ಹಿಂದೇಟು ಹಾಕಿದ್ದು, ನಿರಾಸಕ್ತಿ ತೊರಿದ್ದಾರೆ. ಇದರಿಂದ ವಯೋವೃದ್ಧರು, ವಿಶೇಷ ಚೇತನರ ಬೆಟ್ಟ ಹತ್ತುವ ಕನಸು ಕನಸಾಗೇ ಉಳಿಯುತ್ತಿದ್ದು ಭಕ್ತರಿಗೆ ನಿರಾಸೆ ತರಿಸಿದೆ.

  • ಪ್ರಶಾಂತ್ ಹುಲಿಕೆರೆ
  • Published On - 16:56 PM, 29 Jan 2021
ಅರ್ಧಕ್ಕೆ ನಿಂತ ಲಿಫ್ಟ್ ಕಾಮಗಾರಿ: ರೇವಣಸಿದ್ದೇಶ್ವರ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ನಿರಾಸೆ
ರೇವಣಸಿದ್ದೇಶ್ವರ ಬೆಟ್ಟ

ರಾಮನಗರ: ರಾಮನಗರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಭಕ್ತರಿಂದ ದಕ್ಷಿಣ ಕಾಶಿ ಎಂದು ಕರೆಸಿಕೊಳ್ಳುವ, ರುದ್ರ ರಮಣೀಯ ಪ್ರಮುಖ ಧಾರ್ಮಿಕ ಕೇಂದ್ರ ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿ ಇರುವ ರೇವಣಸಿದ್ದೇಶ್ವರ ಬೆಟ್ಟ. ಸದ್ಯ ಈ ಬೆಟ್ಟದಲ್ಲಿ ಭಕ್ತರ ಅನುಕೂಲಕ್ಕೆ ಅಳವಡಿಸುತ್ತಿದ್ದ ಲಿಫ್ಟ್ ಕಾಮಗಾರಿ ಅರ್ಧಕ್ಕೆ ನಿಂತು ಭಕ್ತರಿಗೆ ನಿರಾಸೆ ತಂದಿದೆ.

ಅಂದ ಹಾಗೆ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟ ಐತಿಹಾಸಿಕ ಚರಿತ್ರೆ ಉಳ್ಳ ದೇವಾಲಯವಾಗಿದ್ದು, ಜಗದ್ಗುರು ರೇಣುಕಾಚಾರ್ಯರೇ ಕಲಿಯುಗದಲ್ಲಿ ಲೋಕ ಸಂಚಾರ ಮಾಡುತ್ತಾ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಗೆ ಬಂದು ಇಲ್ಲಿನ ಬೆಟ್ಟದಲ್ಲಿ ಗುಪ್ತವಾಗಿ 700 ವರ್ಷಗಳು ತಪೋನುಷ್ಠಾನಗಳನ್ನು ಮಾಡಿ ಈ ಪರ್ವತ ಪ್ರದೇಶವನ್ನು ಪುನೀತಗೊಳಿಸಿದರು ಎಂಬ ಪ್ರತೀತಿ ಇದೆ.

ಅಂದಿನಿಂದ ಈ ಬೆಟ್ಟವು ರೇವಣಸಿದ್ದೇಶ್ವರ ಬೆಟ್ಟವೆಂದೇ ಪ್ರಸಿದ್ದವಾಗಿದೆ. ಅಂದ ಹಾಗೆ ರೇವಣಸಿದ್ದೇಶ್ವರ ಬೆಟ್ಟ, ಪ್ರಮುಖ ಏಕಶಿಲಾ ಬೆಟ್ಟವಾಗಿದ್ದು, ಅತೀ ಎತ್ತರದ ಬಂಡೆಗಳು ಇವೆ. ಕ್ಷೇತ್ರದಲ್ಲಿ ಪಾಂಡವರಿಂದ ಪ್ರತಿಷ್ಠಾಪಿಸಲ್ಪಟ್ಟ ಮರುಳಸಿದ್ದೇಶ್ವರ (ಭೀಮೆಶ್ವರ) ದೇವಾಲಯ ಸೇರಿದಂತೆ ರೇಣುಕಾಂಭ, ಬಸವೇಶ್ವರ, ವೀರಭದ್ರಸ್ವಾಮಿ, ಪ್ರಾಚೀನ ರೇವಣಸಿದ್ದೇಶ್ವರ ಬೆಟ್ಟದ ಮಠವು ಇದ್ದು, ಇತಿಹಾಸ ಸಾರುವ ಪ್ರಾಚೀನ ಕಲ್ಯಾಣಿಗಳು ಇಲ್ಲಿವೆ.

ಇನ್ನು ಇಂತಹ ಪ್ರಸಿದ್ದ ಧಾರ್ಮಿಕ ಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯದಿಂದ ಪ್ರತಿನಿತ್ಯ ನೂರಾರು ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಇಲ್ಲಿ ಬೆಟ್ಟ ಏರಲು ಮೆಟ್ಟಿಲು ಮಾಡಲಾಗಿದ್ದು, ಭಕ್ತರಿಗಾಗಿ ಬೆಟ್ಟದ ತುದಿಯವರೆಗೂ ನೆರಳಿನ ವ್ಯವಸ್ಥೆ ಮಾಡಲಾಗಿದೆ. ವಯೋವೃದ್ಧರು, ಅಂಗವಿಕಲರು ಬೆಟ್ಟದ ಮೇಲಿರುವ ರೇವಣಸಿದ್ದೇಶ್ವರ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ಕಳೆದ 2 ವರ್ಷಗಳ ಹಿಂದೆ ಸ್ವಯಂ ಪ್ರೇರಿತವಾಗಿ 2 ಕೋಟಿ ವೆಚ್ಚದಲ್ಲಿ 65 ಮೀಟರ್ ಎತ್ತರಕ್ಕೆ ಲಿಫ್ಟ್ ಅಳವಡಿಸಲು ರಿನ್ಯೂ ಪವರ್ ಕಂಪನಿಯ ವಿಶ್ವನಾಥ್ ಮತ್ತು ಟೂರಿಸ್ಟ್ ಫಾರೆಸ್ಟರ್ ಟಿ.ಆರ್. ನಾಗಪ್ರಸಾದ್ ಎಂಬ ಭಕ್ತರು ಮುಂದೆ ಬಂದು ಲಿಫ್ಟ್ ಕಾಮಗಾರಿಗೆ ಚಾಲನೆ ನೀಡಿದ್ದರು.

ರೇವಣಸಿದ್ದೇಶ್ವರ ಬೆಟ್ಟದ ಕಾಮಗಾರಿ ಅರ್ಧಕ್ಕೆ ನಿಂತಿರುವ ದೃಶ್ಯ

ಇದೇ ಸಂದರ್ಭದಲ್ಲಿ ಲಿಫ್ಟ್ ಅಳವಡಿಕೆಗೆ ಅಡಿಪಾಯ ತೆಗೆದು ನೆಲಮಟ್ಟದಿಂದ 20 ಅಡಿಗೂ ಹೆಚ್ಚು ಕಬ್ಬಿಣ ಅಳವಡಿಸಲಾಗಿತ್ತು. ಆದರೆ ಕಾಮಗಾರಿ ಮುಂದುವರಿಸದೆ ಹಾಗೇ ಬಿಟ್ಟ ಕಂಪನಿಯವರು ಕಳೆದ ಎರಡು ವರ್ಷದಿಂದ ಬೆಟ್ಟದ ಕಡೆ ಸುಳಿದಿಲ್ಲ. ಸ್ಥಳೀಯ ಜನರು, ಬೆಟ್ಟದ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಅವರನ್ನು ಸಂಪರ್ಕಿಸಿದರೂ ಲಿಫ್ಟ್ ಕಾಮಗಾರಿಗೆ ಆಸಕ್ತಿ ತೋರುತ್ತಿಲ್ಲ. ಇನ್ನು ಲಿಫ್ಟ್​ಗೆ ಹಾಕಿದ್ದ ಕಬ್ಬಿಣ ಮತ್ತಿತರ ಕಾಮಗಾರಿಗೆ ತಂದ ಕಬ್ಬಿಣ ಸ್ಥಳದಲ್ಲೇ ಹಾಳಾಗುತ್ತಿವೆ.

ಪ್ರಾರಂಭದಲ್ಲಿ ಕೆಲವೇ ತಿಂಗಳಲ್ಲಿ ಲಿಫ್ಟ್ ಅಳವಡಿಕೆ ಮುಗಿಯುತ್ತದೆ ಎಂದು ಹೇಳಿದವರು ಇತ್ತ ಸುಳಿದಿಲ್ಲ. ಹಾಗಾಗಿ ವಯೋವೃದ್ಧರು, ವಿಶೇಷ ಚೇತನರ ಬೆಟ್ಟ ಹತ್ತುವ ಕನಸು ಕನಸಾಗೇ ಉಳಿಯುತ್ತಿದ್ದು ಭಕ್ತರಿಗೆ ನಿರಾಸೆ ತರಿಸಿದೆ. ಕೂಡಲೇ ಪ್ರವಾಸೋದ್ಯಮ ಇಲಾಖೆ ಮುುಜರಾಯಿ ಇಲಾಖೆ ಅಗತ್ಯ ಕ್ರಮ ಕೈಗೊಂಡು ಕ್ಷೇತ್ರದಲ್ಲಿ ಲಿಫ್ಟ್ ಅಳವಡಿಕೆಗೆ ಮುಂದಾಗಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಲಿಫ್ಟ್ ಕಾಮಗಾರಿ ನಡೆಸುತ್ತೇವೆಂದು ಬಂದವರು ಕಾಮಗಾರಿ ನಡೆಸಲು ಆಸಕ್ತಿ ತೋರುತ್ತಿಲ್ಲ. ಲಿಫ್ಟ್​ ಅಳವಡಿಕೆ ಮಾಡುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಮುಖೇನ ಮನವರಿಕೆ ಮಾಡಲಾಗಿದೆ. ಅಲ್ಲದೆ ಕಳೆದ ವಾರವಷ್ಟೇ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಲಿಫ್ಟ್ ಕಾಮಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ವಿವರವಾಗಿ ತಿಳಿಸಲಾಗಿದ್ದು, ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ರೇವಣಸಿದ್ದೇಶ್ವರ ಬೆಟ್ಟ ದೇವಾಲಯದ ಆಡಳಿತಾಧಿಕಾರಿ ಯಶುರಾಜ್ ಹೇಳಿದ್ದಾರೆ.

ಲಿಫ್ಟ್ ಅಳವಡಿಕೆಯಾದರೆ ಕ್ಷೇತ್ರಕ್ಕೆ ಹೆಚ್ಚಿನ ಜನರು ಬರುತ್ತಾರೆ. ವಯೋವೃದ್ಧರು ಬೆಟ್ಟ ಹತ್ತಲಾಗದೆ ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ. ಲಿಫ್ಟ್ ಕಾಮಗಾರಿ ಶುರು ಮಾಡಿದ ಖಾಸಗಿಯವರು ಅಡಿಪಾಯ ಹಾಕಿದ ದಿನದಿಂದ ಇತ್ತ ಸುಳಿಯುತ್ತಿಲ್ಲ. ಆದಷ್ಟೂ ಬೇಗ ಮುಜರಾಯಿ ಇಲಾಖೆ ಕ್ರಮ ಕೈಗೊಂಡು ಬೆಟ್ಟದಲ್ಲಿ ನಿಂತಿರುವ ಲಿಫ್ಟ್ ಕಾಮಗಾರಿ ಕೆಲಸಕ್ಕೆ ಚಾಲನೆ ನೀಡಲು ಮುಂದಾಗಬೇಕಿದೆ ಎಂದು ಅವ್ವೇರಹಳ್ಳಿ ಗ್ರಾಪಂ ಸದಸ್ಯರಾದ ನಾಗೇಶ್ ತಿಳಿಸಿದ್ದಾರೆ.

ನಿಂತ ಮಳೆ, ಹೆಚ್ಚಿದ ಚಾರ್ಮಾಡಿ ವೈಭೋಗ: ಕಣ್ಮನ ತಣಿಸುತ್ತಿವೆ ಸಣ್ಣ ಸಣ್ಣ ಜಲಪಾತಗಳು