ನಿವೃತ್ತ ಕಂದಾಯ ಅಧಿಕಾರಿಯ ಹಸಿರು ಪ್ರೇಮ; ಮನೆಯ ಮಹಡಿಯ ಮೇಲೆ ನಿರ್ಮಾಣವಾಗಿದೆ ಮಿನಿ ಲಾಲ್ಬಾಗ್
ಆಶಾಲತಾ ಒಂದೊಂದು ಜಾತಿಯ ಹೂವಿನಲ್ಲೂ ಹತ್ತಾರು ಪ್ರಬೇಧಗಳನ್ನು ಮನೆಯಲ್ಲಿ ಬೆಳೆಸಿದ್ದು, ನಿರಂತರವಾಗಿ ನೀರೆರೆದು ಮಕ್ಕಳಂತೆ ಜೋಪಾನ ಮಾಡುತ್ತಿದ್ದಾರೆ. ಆಶಾಲತಾ ತಮಗೆ ಮಕ್ಕಳಿಲ್ಲದಿದ್ದರೂ ಈ ಸಸಿ, ಗಿಡಗಳನ್ನೇ ಮಕ್ಕಳಂತೆ ಜೋಪಾನ ಮಾಡುವುದರಲ್ಲಿಯೇ ಸಂತೃಪ್ತಿ ಕಾಣುತ್ತಿದ್ದಾರೆ.
ಬಳ್ಳಾರಿ: ಮನೆಯ ಮಹಡಿಯ ಮೇಲೆ ಸುಂದರವಾದ ಮಿನಿ ಲಾಲ್ ಬಾಗ್ ನಿರ್ಮಿಸಿದ್ದು, ಹೂವಿನ ಲೋಕವನ್ನೇ ಸೃಷ್ಟಿಸಿದ್ದಾರೆ. ಈ ಮನೆಗೆ ಒಮ್ಮೆ ಭೇಟಿ ನೀಡಿದರೆ ಅದ್ಯಾವುದೋ ಹೂವಿನ ಲೋಕಕ್ಕೆ ಕಾಲಿಟ್ಟಂತೆ ಭಾಸವಾಗುತ್ತದೆ. ಹೌದು ನಿವೃತ್ತಿಯಾದ ಅಧಿಕಾರಿಯೊಬ್ಬರು ಮನೆಯಲ್ಲಿ ಸುಮ್ಮನೆ ಕುಳಿತರೆ ಆರೋಗ್ಯ ಏರುಪೇರು ಆಗುತ್ತದೆ ಏನಾದರೂ ಕೆಲಸ ಮಾಡಬೇಕು ಎಂಬ ನಿರ್ಧಾರ ಮಾಡಿರುವುದರ ಫಲವೇ ಮನೆಯ ಮೇಲೆ ಈ ತೋಟ ನಿರ್ಮಾಣ ಮಾಡಲು ಕಾರಣವಾಗಿದೆ.
ತೋಟದ ನಿರ್ಮಾತೃ ಆಶಾಲತಾ. ಇವರು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ. ಆಶಾಲತಾ ಯಾವುದೇ ಊರಿಗೆ ಹೋದರು ಮೊದಲು ಗಿಡಗಳನ್ನು ಖರೀದಿಸುತ್ತಿದ್ದರು. ಅದರಲ್ಲೂ ಗಿಡಮೂಲಿಕೆಗಳ ಸಸ್ಯಗಳು ಹಾಗೂ ವಿವಿಧ ಜಾತಿಯ ಹೂವುಗಳ ಸಸಿಗಳೆಂದರೆ ಆಶಾಲತಾಗೆ ಅಚ್ಚುಮೆಚ್ಚು. ಬಳ್ಳಾರಿಗೆ ಆರೋಗ್ಯ ತಪಾಸಣೆಗೆ ಹೋದಾಗ, ಬೆಂಗಳೂರಿನ ಲಾಲ್ ಬಾಗ್ಗೆ ಹೋದಾಗಲೂ ಅವರು ಗಿಡಗಳನ್ನು ಖರೀದಿಸಿದ್ದಾರೆ. ಹೂವುಗಳ ಲೋಕವನ್ನು ಸೃಷ್ಠಿ ಮಾಡಲು ನಿರಂತರ 7 ವರ್ಷ ಆಶಾಲತಾ ಶ್ರಮವಹಿಸಿದ್ದಾರೆ.
ಇಳಿ ವಯಸ್ಸಿನಲ್ಲಿಯೂ ಸಹ ಗಿಡಗಳ ಬಗೆಗಿನ ಪ್ರೀತಿ, ವ್ಯಾಮೋಹ ಸ್ವಲ್ಪವೂ ಕಡಿಮೆಯಾಗಿಲ್ಲ. ಆಶಾಲತಾ ಅವರು ಸ್ವಾತಂತ್ರ್ಯ ಹೋರಾಟಗಾರ ಕುಪ್ಪಿನಕೆರೆಯ ಸುಮಿತ್ರಪ್ಪ ಅವರ ಮಗಳಾಗಿದ್ದು, ಕೂಡ್ಲಿಗಿಯಲ್ಲಿ ಚಿರಪರಿಚತರಾಗಿದ್ದಾರೆ. ಅವರು ತಮ್ಮ ಮನೆಯ ಮೊದಲ ಅಂತಸ್ತಿನ ಮಹಡಿಯ ಮೇಲೆ ಆಲ, ನುಗ್ಗೆ, ಕರಿಬೇವು, ಅರಳಿ, ತೇಗ, ಪಪ್ಪಾಯಿ, ದೊಡ್ಡಪತ್ರೆ, ತುಳಸಿ, ವಿವಿಧ ಪ್ರಭೇದದ ದಾಸವಾಳ, ಗುಲಾಬಿ, ಮಲ್ಲಿಗೆ, ಡೇನಿಯಂ, ಸೇವಂತಿಗೆ, ಡೇರೆ ಹೂ, ಟೇಬಲ್ ರಾಜ ಹೂ, ಕಲಾಂಚು, ಜೆರೇನಿಯಂ, ಬೊನ್ಸಾಯ್ ಗಿಡಗಳನ್ನು ನೆಟ್ಟಿದ್ದಾರೆ.
ಆಶಾಲತಾ ಒಂದೊಂದು ಜಾತಿಯ ಹೂವಿನಲ್ಲೂ ಹತ್ತಾರು ಪ್ರಭೇದಗಳನ್ನು ಮನೆಯಲ್ಲಿ ಬೆಳೆಸಿದ್ದು, ನಿರಂತರವಾಗಿ ನೀರೆರೆದು ಮಕ್ಕಳಂತೆ ಜೋಪಾನ ಮಾಡುತ್ತಿದ್ದಾರೆ. ಆಶಾಲತಾ ತಮಗೆ ಮಕ್ಕಳಿಲ್ಲದಿದ್ದರೂ ಈ ಸಸಿ, ಗಿಡಗಳನ್ನೇ ಮಕ್ಕಳಂತೆ ಜೋಪಾನ ಮಾಡುವುದರಲ್ಲಿಯೇ ಸಂತೃಪ್ತಿ ಕಾಣುತ್ತಿದ್ದಾರೆ.
ಬೇಸಗೆಯಲ್ಲಿ ಟ್ಯಾಂಕರ್ ಮೂಲಕ ಪ್ರತಿ 4 ದಿನಗಳಿಗೊಮ್ಮೆ ಈ ತೋಟಕ್ಕೆ ನೀರುಣಿಸಲಾಗುತ್ತಿದ್ದು, ಇನ್ನು ಬೇರೆ ಸಮಯದಲ್ಲಿ 15 ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರನ್ನು ಖರೀದಿಸಿ ಈ ಹೂಗಿಡ, ಬಳ್ಳಿಗಳನ್ನು ಬೆಳೆಸುತ್ತಾರೆ. ಮನೆಯ ನೀರು ಈ ಗಿಡಗಳಿಗೆ ಬೇಸಗೆಯಲ್ಲಿ ಸಾಕಾಗುವುದಿಲ್ಲ. ಹೀಗಾಗಿ ಟ್ಯಾಂಕರ್ನಲ್ಲಿ ನೀರು ಖರೀದಿಸುತ್ತಾರೆ ಆಶಾ. ಮನೆಯ ಮೊದಲ ಅಂತಸ್ತಿನ ಮೇಲೆ 600 ಚದುರ ಅಡಿಗಳಲ್ಲಿ ಎಲ್ಲಿ ನೋಡಿದರೂ ಬರೀ ಹೂವುಗಳ ಸಸಿಗಳಿದ್ದು, ಈ ಹೂವುಗಳನ್ನು ಪಾಟ್ಗಳಲ್ಲಿ ನೆಟ್ಟಿರುವುದು ವಿಶೇಷ.
ಇದರ ಜೊತೆಗೆ ಆಶಾಲತಾ ಸಂತೆಯಲ್ಲಿ ಸೊಪ್ಪುಗಳ ಬೀಜಗಳನ್ನು ಖರೀದಿಸಿ ಮನೆಯ ಮೇಲ್ಛಾವಣಿಯ ಮೇಲೆ ಮತ್ತೊಂದು ಮೂಲೆಯಲ್ಲಿ ಬೆಳೆಯುತ್ತಾರೆ. ಮೆಂತ್ಯ, ಪಾಲಾಕ್, ಕೊತ್ತಂಬರಿ ಮುಂತಾದ ಸೊಪ್ಪುಗಳನ್ನು ಬೆಳೆಯುತ್ತಾರೆ. ಇದೇ ಸೊಪ್ಪನ್ನು ಅಡುಗೆಗೆ ಬಳಸಿಕೊಳ್ಳುತ್ತಾರೆ. ಮನೆಯ ತ್ಯಾಜ್ಯವೇ ಈ ಸಸಿಗಳಿಗೆ ಗೊಬ್ಬರವಾಗಿದ್ದು, ಮನೆಯಲ್ಲಿ ಊಟದ ನಂತರ ಉಳಿಯುವ ತರಕಾರಿ ಸಿಪ್ಪೆಗಳನ್ನು ಒಂದು ದೊಡ್ಡ ಬ್ಯಾರೆಲ್ನಲ್ಲಿ ಹಾಕಿ ನೀರಿನಲ್ಲಿ ಅದನ್ನು ಕೊಳೆಸಲಾಗುತ್ತದೆ.
ಅವು ಪೂರ್ಣವಾಗಿ ಕೊಳೆತನಂತರ ಅದನ್ನು ಗೊಬ್ಬರವಾಗಿ ಈ ಸಸಿಗಳ ಬುಡಕ್ಕೆ ಹಾಕಿ ನೀರನ್ನು ಹಾಕಲಾಗುತ್ತದೆ. ಮನೆಯಲ್ಲಿಯ ತ್ಯಾಜ್ಯವನ್ನೇ ಉಪಯೋಗಿಸಿ ಸಸಿಗಳನ್ನು ಯಾವುದೇ ವೈರಸ್ ಬರದ ಹಾಗೇ ನೋಡಿಕೊಂಡಿದ್ದಾರೆ. ಆಶಾಲತಾ ಅವರ ಪತಿ ವಿ.ಕೆ. ವಾಮನಮೂರ್ತಿ ಸಹ ಪತ್ನಿಯ ಹವ್ಯಾಸಕ್ಕೆ ಸಹಕಾರ ನೀಡುತ್ತಿದ್ದು, ದಂಪತಿಯ ಈ ವಿಶೇಷ ಹವ್ಯಾಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ದಂಪತಿಯ ಸತತ ಏಳು ವರ್ಷಗಳ ನಿರಂತರ ಶ್ರಮದಿಂದ ಈಗ ಇವರ ಮನೆ ಮಹಡಿಯ ಮೇಲೆ ಹೂವಿನ ಲೋಕವೇ ಸೃಷ್ಟಿಯಾಗಿದೆ. ಇವರ ಹವ್ಯಾಸ ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ: