ಬೆಂಗಳೂರು: ಖಾಸಗಿ ಶಾಲೆಗಳ ಒಕ್ಕೂಟದೊಂದಿಗೆ ಸಚಿವ ಎಸ್.ಸುರೇಶ್ ಕುಮಾರ್ ಬುಧವಾರ (ಜ.6) ನಡೆಸಿದ ಸಭೆ ಮುಕ್ತಾಯವಾಗಿದೆ. ರುಪ್ಸಾ ಜೊತೆಗಿನ ಶಿಕ್ಷಣ ಸಚಿವರ ಸಭೆ ಮುಕ್ತಾಯವಾಗಿದೆ. ಸಚಿವರು ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರುಪ್ಸಾ ತನ್ನ ಹೋರಾಟ ಹಿಂಪಡೆಯಲು ನಿರ್ಧರಿಸಿದೆ.
ರುಪ್ಸಾ ಹಾಗೂ ಶಿಕ್ಷಣ ಸಚಿವರ ಜೊತೆ ನಡೆದ ಸಭೆಯಲ್ಲಿ, ರುಪ್ಸಾದ 14 ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು. 14 ಬೇಡಿಕೆಗಳಲ್ಲಿ ಬಹುತೇಕ ಬೇಡಿಕೆಗಳ ಈಡೇರಿಕೆಗೆ ಶಿಕ್ಷಣ ಸಚಿವರ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ರುಪ್ಸಾ ವಾಪಾಸ್ ಪಡೆದುಕೊಂಡಿದೆ.
ಕೆಲ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆ ಅನಿವಾರ್ಯವಾದ ಕಾರಣ, ಕೆಲ ಬೇಡಿಕೆಗಳ ಈಡೇರಿಕೆ ಕಷ್ಟ ಎಂದೂ ಸುರೇಶ್ ಕುಮಾರ್ ತಿಳಿಸಿದ್ದಾರೆ. ಆದರೆ, ನಿರಂತರ ಸಂಪರ್ಕದಲ್ಲಿದ್ದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸಚಿವರ ಭರವಸೆ ಹಿನ್ನಲೆಯಲ್ಲಿ ರುಪ್ಸಾ ಸದಸ್ಯರು ಹೋರಾಟ ನಿಲ್ಲಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಸಂಕ್ರಾಂತಿಯವರೆಗೂ ಬೇಡಿಕೆ ಈಡೇರುವ ಭರವಸೆ ಇದೆ. ಆವರೆಗೆ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ, ಪಠ್ಯಕ್ರಮವನ್ನು ಶನಿವಾರದೊಳಗೆ ಬಿಡುಗಡೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಆರ್ಟಿಇ ಸಮೀಕ್ಷಾ ವರದಿಯನ್ನು ಒಂದೇ ಬಾರಿಗೆ ಕೊಡಲು ರುಪ್ಸಾ ಒಪ್ಪಿಗೆ ಸೂಚಿಸಿದೆ. ಆರ್ಟಿಇ ಪುನರ್ ಸ್ಥಾಪನೆಯ ಭರವಸೆ ನೀಡಿದೆ. ಖಾಸಗಿ ಶಾಲೆಗಳಿಗೆ ಸಾರ್ವಜನಿಕರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ರಕ್ಷಣೆ ಒದಗಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕೆ ನಿಧಿಯಲ್ಲಿ ಯಾವುದೇ ಭೇದಭಾವ ಮಾಡದಿರಲು ನಿರ್ಧಾರ ಮಾಡಲಾಗಿದೆ. 124 ಶಾಲೆಗಳನ್ನು ಮುಚ್ಚುವ ವಿಚಾರದ ಕುರಿತು ಕಲ್ಯಾಣ ಕರ್ನಾಟಕ ಅಡಿಯಲ್ಲಿರುವ ಅನುದಾನ ಬಳಕೆ ಮಾಡಲು ತಿಳಿಸಲಾಗಿದೆ. ಶಿಕ್ಷಕರಿಗೆ 10 ಸಾವಿರ ರೂಪಾಯಿ ನೀಡುವ ವಿಚಾರದಲ್ಲಿ ಆರ್ಥಿಕ ವ್ಯವಸ್ಥೆ ಇಲ್ಲದ ಕಾರಣ ಮುಂದೆ ಪ್ಯಾಕೇಜ್ ಘೋಷಣೆ ಮಾಡುವ ಭರವಸೆ ನೀಡಲಾಗಿದೆ. ಶಾಲೆಗಳಲ್ಲಿ ಪುಸ್ತಕ ಮಾರುವ ಆದೇಶ ಹಿಂಪಡೆಯುವ ಮನವಿಯನ್ನು ಪುನರ್ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ಅದಾಲತ್ ರೂಪದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ಹೀಗೆ, ಬಹುತೇಕ ಬೇಡಿಕೆಗಳಿಗೆ ಸಚಿವರ ಸಹಮತ ಇರುವ ಕಾರಣ ರುಪ್ಸಾ ಪ್ರತಿಭಟನೆ ಕೈಬಿಡಲು ನಿರ್ಧಾರ ಮಾಡಿದೆ.
ಶಿಕ್ಷಣ ಸಚಿವರೊಂದಿಗೆ ರುಪ್ಸಾ ಸಭೆ
ಫ್ರೀಡಂಪಾರ್ಕ್ನಲ್ಲಿಂದು ರುಪ್ಸಾ ಪ್ರೊಟೆಸ್ಟ್, 10 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ