ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಕೈಬೀಸಿ ಕರೆಯುತ್ತಿದೆ ಶಿಕ್ಷಕರ ಕುಂಚದಲ್ಲಿ ಅರಳಿರುವ ಚಿತ್ರ-ಚಿತ್ತಾರ

ಶಾಲೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಎಲ್ಲರ ಗಮನ ಸೆಳೆಯುವುದು ಪ್ರಕೃತಿಯೊಳಗೆ ಶಾರದೆ ಮತ್ತು ವಿದ್ಯಾರ್ಥಿಯನ್ನು ಒಳಗೊಂಡ ದೊಡ್ಡ ಚಿತ್ರಕಲೆ. ಇನ್ನು ಸುಭಾಷ ಚಂದ್ರ ಬೋಸ್, ಗಾಂಧೀಜಿ, ಭಗತ್ ಸಿಂಗ್, ರವೀಂದ್ರನಾಥ್ ಠಾಗೋರ್, ಸರ್ವಪಲ್ಲಿ ರಾಧಾಕೃಷ್ಣನ್, ವಿಜ್ಞಾನಿ ಸಿ .ವಿ.ರಾಮನ್, ಎಪಿಜಿ ಅಬ್ದುಲ್ ಕಲಾಂ ಹೀಗೆ ದೇಶಕ್ಕಾಗಿ ದೊಡ್ಡ ದೊಡ್ಡ ಸಾಧನೆ ಮಾಡಿರುವ ಮಹನೀಯರ ಚಿತ್ರಕಲೆಗಳು ಕ್ಯಾನರ್ಸ್​ನಲ್ಲಿ ಅದ್ಭುತವಾಗಿ ಮೂಡಿಬಂದಿದೆ.

  • TV9 Web Team
  • Published On - 17:03 PM, 2 Apr 2021
ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಕೈಬೀಸಿ ಕರೆಯುತ್ತಿದೆ ಶಿಕ್ಷಕರ ಕುಂಚದಲ್ಲಿ ಅರಳಿರುವ ಚಿತ್ರ-ಚಿತ್ತಾರ
ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದ ಸರ್ಕಾರಿ ಅನುದಾನಿತ ತುಂಗ ಭದ್ರಾ ಪ್ರೌಢ ಶಾಲೆ ಚಿತ್ರಣ

ಶಿವಮೊಗ್ಗ: ಗ್ರಾಮೀಣ ಪ್ರದೇಶದ ಶಾಲೆಗಳು ಎಂದರೆ ಒಂದು ರೀತಿಯ ತಾತ್ಸಾರ ಇದ್ದು, ಅಲ್ಲಿ ಸೌಲಭ್ಯಗಳ ಕೊರತೆ, ನೂರೆಂಟು ಸಮಸ್ಯೆ ಇರುತ್ತದೆ ಎನ್ನುವ ಪರಿಕಲ್ಪನೆ ಇದೆ. ಆದರೆ ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದ ಶಿಕ್ಷಕರೊಬ್ಬರು ತಮ್ಮ ಚಿತ್ರಕಲೆ ಮೂಲಕ ಶಾಲೆಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಿಸಿ ಬಿಟ್ಟಿದ್ದಾರೆ. ಸೂಗೂರು ಗ್ರಾಮದ ಹಳ್ಳಿಯ ಶಾಲೆಯಲ್ಲಿ ಅರಳಿ ನಿಂತಿರುವ ಚಿತ್ರಕಲೆಗಳು ಮಹತ್ವದ ಸಂದೇಶಗಳನ್ನು ರವಾನಿಸುತ್ತಿವೆ ಎನ್ನವುದು ವಿಶೇಷ.

ಒಂದು ಶಾಲೆಯು ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದ ಸರ್ಕಾರಿ ಅನುದಾನಿತ ತುಂಗಭದ್ರಾ ಪ್ರೌಢ ಶಾಲೆಯಲ್ಲಿ ಕಳೆದ ಮೂರು ದಶಕಗಳಿಂದ ಮಕ್ಕಳಿಗೆ ಚಿತ್ರಕಲೆ ಪಾಠ ಮಾಡುವ ಚಿತ್ರಕಲಾ ಶಿಕ್ಷಕ ಅಶೋಕ ವಾಲಿಕಾರ್, ಈಗ ಈ ಶಾಲೆಯ ಚಿತ್ರಣವನ್ನು ಬದಲಿಸಿದ್ದಾರೆ.

ವಿದ್ಯಾರ್ಥಿಗಳನ್ನು ಶಾಲೆಯತ್ತ ಸೆಳೆಯುವ ದೃಷ್ಟಿಕೋನದಿಂದ ಗ್ರಾಮಸ್ಥರೇ ಎಲ್ಲರೂ ಹಣ ಸಂಗ್ರಹಿಸಿ ಶಿಕ್ಷಕರ ಮೂಲಕ ವಿಭಿನ್ನವಾಗಿರುವ ಚಿತ್ರಕಲೆಗಳನ್ನು ಶಾಲೆಯ ಹೊರಗೆ ಮತ್ತು ಒಳಗೆ ರಚಿಸಿದ್ದಾರೆ. ದೇಶ, ರಾಜ್ಯ, ಕಲೆ, ಸಾಹಿತ್ಯ, ಇತಿಹಾಸ, ಕ್ರೀಡೆ, ಧಾರ್ಮಿಕ ಹೀಗೆ ಎಲ್ಲಾ ವಿಭಾಗದ ಮಹನೀಯರ ಚಿತ್ರಕಲೆಗಳು ಇಲ್ಲಿವೆ. ಶಾಲೆಗೆ ಬರುವ ಮಕ್ಕಳು ಮತ್ತು ಗ್ರಾಮಸ್ಥರನ್ನು ಸೆಳಯುತ್ತಿದೆ.

school painting

ಸಿದ್ಧಗಂಗಾ ಶ್ರೀಗಳ ಚಿತ್ರ

ಕೊರೊನಾದಂತಹ ಸಂಕಷ್ಟ ಸಮಯದಲ್ಲಿ ಎಲ್ಲಾ ಶಾಲೆಯ ಬಾಗಿಲು ಮುಚ್ಚಿದ್ದವು. ಮತ್ತೆ ಶಾಲೆಗೆ ವಿದ್ಯಾರ್ಥಿಗಳು ಬರಬೇಕು. ಮೊದಲಿನಂತೆ ಆಟ ಪಾಠ ನಡೆಯಬೇಕು. ಹೀಗೆ ಮತ್ತೆ ಪಾಠದ ಕಡೆಗೆ ಒಲವು ತರುವುದು ಅಷ್ಟೊಂದು ಸುಲಭದ ವಿಷಯವಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ತಮ್ಮ ಗ್ರಾಮದಲ್ಲಿರುವ ಶಾಲೆಯ ಚಿತ್ರಣ ಬದಲಿಸುವ ಮೂಲಕ ಮಕ್ಕಳಿಗೆ ಹೊಸದೊಂದು ವಾತಾವರಣ ನಿರ್ಮಾಣ ಮಾಡಬೇಕು ಎಂದು ನಿರ್ಧರಿಸಿದರು.

school painting

ಚಿತ್ರಕಲೆ ಪಾಠ ಮಾಡುವ ಚಿತ್ರಕಲಾ ಶಿಕ್ಷಕ ಅಶೋಕ ವಾಲಿಕಾರ್

ಶಾಲೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಎಲ್ಲರ ಗಮನ ಸೆಳೆಯುವುದು ಪ್ರಕೃತಿಯೊಳಗೆ ಶಾರದೆ ಮತ್ತು ವಿದ್ಯಾರ್ಥಿಯನ್ನು ಒಳಗೊಂಡ ದೊಡ್ಡ ಚಿತ್ರಕಲೆ. ಇನ್ನು ಸುಭಾಷ ಚಂದ್ರ ಬೋಸ್, ಗಾಂಧೀಜಿ, ಭಗತ್ ಸಿಂಗ್, ರವೀಂದ್ರನಾಥ್ ಠಾಗೋರ್, ಸರ್ವಪಲ್ಲಿ ರಾಧಾಕೃಷ್ಣನ್, ವಿಜ್ಞಾನಿ ಸಿ .ವಿ.ರಾಮನ್, ಎಪಿಜಿ ಅಬ್ದುಲ್ ಕಲಾಂ ಹೀಗೆ ದೇಶಕ್ಕಾಗಿ ದೊಡ್ಡ ದೊಡ್ಡ ಸಾಧನೆ ಮಾಡಿರುವ ಮಹನೀಯರ ಚಿತ್ರಕಲೆಗಳು ಕ್ಯಾನರ್ಸ್​ನಲ್ಲಿ ಅದ್ಭುತವಾಗಿ ಮೂಡಿಬಂದಿದೆ.

school painting

ರೈತರ ಉಳಿಮೆ ಮತ್ತು ನಾಟಿಯ ಚಿತ್ರಣ

ಬ್ರೀಟಿಷ್​ರ ವಿರುದ್ಧ ಹೋರಾಡಿದ ಸಂಗೋಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮರ ಚಿತ್ರಕಲೆಗಳು, ಗಿಡಮರಗಳನ್ನು ಇಳಿ ವಯಸ್ಸಿನಲ್ಲೂ ಸಾಕಿ ಮಕ್ಕಳಂತೆ ಬೆಳೆಸುತ್ತಿರುವ ಸಾಲು ಮರದ ತಿಮ್ಮಕ್ಕ, ದೇಶದ ಬೆನ್ನೆಲುಬಾಗಿ ದುಡಿಯುತ್ತಿರುವ ಶ್ರಮಜೀವಿಗಳಾದ ರೈತರ ಉಳಿಮೆ ಮತ್ತು ನಾಟಿಯ ಚಿತ್ರಣ, ಗಾಂಧೀಜಿ, ಸಿದ್ಧಗಂಗಾ ಶ್ರೀಗಳು, ಅಕ್ಕಮಹಾದೇವಿ, ಕೂಡಲಸಂಗಮದಲ್ಲಿ ಬಸವೇಶ್ವರರ ಐಕ್ಯ ಬಿಂಬಿಸುವ ಒಂದಕ್ಕಿಂತ ಒಂದು ಅದ್ಭುತ ಚಿತ್ರಕಲೆಗಳು ಹೊರಹೊಮ್ಮಿವೆ.

ಧ್ಯಾನದ ಭಂಗಿಯಲ್ಲಿರುವ ಶಿವನ ಚಿತ್ರಕಲೆಯು ಮಕ್ಕಳಿಗೆ ಏಕಾಗ್ರತೆಯ ಪಾಠವನ್ನು ಮಾಡುತ್ತಿದೆ. ಜೀವದ ಹಂಗು ತೊರೆದು ದೇಶದ ಗಡಿ ಕಾಯುವ ಸೈನಿಕರ ಚಿತ್ರಗಳು. ರಂಗಮಂದಿರದಲ್ಲಿ ಭರತನಾಟ್ಯ ನೃತ್ಯ ಮಾಡುವ ಕಲಾವಿದರು. ಕ್ರೀಡಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಸೆಳೆಯುವ ದೃಷ್ಟಿಕೋನದಿಂದ ವಿವಿಧ ಕ್ರೀಡೆಯ ಚಿತ್ರಣಗಳು. ನಂದಿ ಮತ್ತು ಶಿವನ ದೊಡ್ಡ ದೊಡ್ಡ ಪೇಟಿಂಗ್ಸ್​ಗಳು ಶಾಲೆಯ ಗೋಡೆಯ ಮೇಲೆ ರಾರಾಜಿಸುತ್ತಿವೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಚಿತ್ರಕಲೆಯು ದೇಶದ ಸಂವಿಧಾನದ ಮಹತ್ವ ಸಾರುತ್ತದೆ.

school painting

ಕೂಡಲಸಂಗಮದಲ್ಲಿ ಬಸವೇಶ್ವರರ ಐಕ್ಯದ ಚಿತ್ರಣ

ಫೈಬರ್​​ನಲ್ಲಿ ಮಾಡಿದ ಬಸವೇಶ್ವರ ಪುತ್ಥಳಿ ಅದ್ಭುತವಾಗಿ ಹೊರಹೊಮ್ಮಿದೆ. ಮಲೆನಾಡಿನ ದೇಶದ ಹೆಮ್ಮೆಯ ರಾಷ್ಟ್ರಕವಿ, ಜ್ಷಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು,ಮಲೆನಾಡಿನ ಇತಿಹಾಸವನ್ನು ನೆನಪಿಸುವ ಶಿವಪ್ಪ ನಾಯಕ, ಪ್ರವಾಸಿಗರ ಸ್ವರ್ಗವಾಗಿರುವ ಜೋಗ್ ಫಾಲ್ಸ್ ಸೂರ್ಯನ ಬೆಳಕಿನ ಕಿರಣದಲ್ಲಿ ಹೇಗೆ ಕಂಗೋಳಿಸುತ್ತದೆ ಎನ್ನುವುದನ್ನು ಕಲಾವಿದ ಅಶೋಕ ಅವರು ಅದ್ಭುತವಾಗಿ ತಮ್ಮ ಕುಂಚದಲ್ಲಿ ಸೆರೆಹಿಡಿದ್ದಾರೆ.

ಈ ಶಾಲೆಯ ಚಿತ್ರಣ ಬದಲಿಸಲು ಸತತ ಎರಡು ತಿಂಗಳು ಪರಿಶ್ರಮ ಪಟ್ಟಿರುವ ಚಿತ್ರಕಲಾ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಮತ್ತು ಗ್ರಾಮಸ್ಥರು ಶಾಲೆಯ ಸಮಿತಿಯ ಎಲ್ಲರೂ ಒಟ್ಟಾಗಿ ಗ್ರಾಮೀಣ ಮಕ್ಕಳಿಗೆ ವಿಶೇಷ ಕೊಡುಗೆ ಕೊಟ್ಟಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಒಟ್ಟಾರೆ ವಿದ್ಯಾರ್ಥಿಗಳಿಗೆ ಶಿಸ್ತು, ಸಂಸ್ಕಾರ, ಗುರು -ಹಿರಿಯರಿಗೆ ಗೌರವ, ದೇಶಾಭಿಮಾನ, ಕಲೆ -ಸಾಹಿತ್ಯ ಕ್ರೀಡೆಗಳ ಕುರಿತು ಒಂದೊಂದು ಚಿತ್ರಕಲೆಗಳ ಮೂಲಕ ಮಕ್ಕಳಿಗೆ ಪಾಠ ಮಾಡಿದ್ದು, ಶಿವಮೊಗ್ಗದ ಈ ಸರ್ಕಾರಿ ಶಾಲೆ ನಿಜಕ್ಕೂ ಮಾದರಿಯಾಗಿದೆ.

(ವರದಿ: ಬಸವರಾಜ್ ಯರಗಣವಿ- 9980914153)

ಇದನ್ನೂ ಓದಿ: ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದ ಹಾವೇರಿ ಯುವಕ

( Artworks by teacher on Government school walls are getting students attraction in shivamogga)