ಶಿವಮೊಗ್ಗ: ನಿಯಂತ್ರಣ ತಪ್ಪಿ ಶಾಲಾ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದ ಬಸ್ ಮರಕ್ಕೆ ಡಿಕ್ಕಿ ಹೊಡೆದು ಶಿಕ್ಷಕ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಕಲ್ಲಿಹಾಳ ಗ್ರಾಮದ ಬಳಿ ನಡೆದಿದೆ. ಪ್ರವಾಸ ಮುಗಿಸಿ ವಾಪಸಾಗುವಾಗ ಈ ಅಪಘಾತ ನಡೆದಿದ್ದು, 45 ವರ್ಷದ ಶಿಕ್ಷಕ ಹರಿಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಹಾಗೂ ಚಾಲಕ ಮತ್ತು ನಿರ್ವಾಹಕರಿಗೆ ಗಂಭೀರ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿ ಇಂದು ಬೆಳಗ್ಗೆ ವಾಪಸ್ ಆಗುತ್ತಿದ್ದರು. ಇವರಲ್ಲಿ ಕೆಲವರನ್ನು ಮನೆಗೆ ಡ್ರಾಪ್ ಮಾಡಿ ಬಳಿಕ ಉಳಿದವರನ್ನು ಡ್ರಾಪ್ ಮಾಡಲು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ತೋಟಕ್ಕೆ ನುಗ್ಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.