ಶಿವಮೊಗ್ಗ, ಮಾ.29: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬೆಳೆಯುತ್ತಿರುವ ಮಕ್ಕಳು ಪಠ್ಯಕ್ಕೆ ಸಂಬಂಧಿಸಿದಂತೆ ತಪ್ಪು ಉತ್ತರ ನೀಡಿದಾಗ ತಿದ್ದಿ ಬುದ್ಧಿ ಕಲಿಯಲಿ ಎಂದು ಶಿಕ್ಷಕರು ಕಿವಿ ಹಿಂಡುವುದು, ಬಸ್ಕಿ ತೆಗೆಸುವುದು, ತಪ್ಪು ಉತ್ತರ ನೀಡಿದ ಪ್ರಶ್ನೆಯ ಉತ್ತರವನ್ನು ಹತ್ತತ್ತು ಬಾರಿ ಬರೆಸುವುದು, ವಿದ್ಯಾರ್ಥಿಗಳಿಂದಲೇ ಬೆತ್ತ ತರಿಸಿ ಹೊಡೆಯುವುದನ್ನು ನೋಡಿರುತ್ತೇವೆ. ಸ್ವತಃ ನಾವೇ ವಿದ್ಯಾರ್ಥಿ ಜೀವನದಲ್ಲಿ ಇದನ್ನು ಅನುಭವಿಸಿರುತ್ತೇವೆ. ಆದರೆ, ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳೇ ಪಾಠ ಮಾಡಿದ ಶಿಕ್ಷಕರಿಗೆ ಪೆಟ್ಟು ಕೊಡುವ ವ್ಯವಸ್ಥೆಯನ್ನು ನೀವು ಎಂದಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಇಂತಹ ಒಂದು ವ್ಯವಸ್ಥೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರ ತವರು ಜಿಲ್ಲೆ ಶಿವಮೊಗ್ಗದ (Shivamogga) ಹೊಸನಗರ ತಾಲೂಕಿನ ಹಾಲಂದೂರಿನ ಸರ್ಕಾರಿ ಶಾಲೆಯಲ್ಲಿದೆ.
ಇಲ್ಲಿನ ಶಿಕ್ಷಕ ಗೋಪಾಲ್ ಹೆಚ್. ಎಸ್. ಅವರ ವಿನೂತನ ಪ್ರಯೋಗ ಎಲ್ಲರ ಗಮನ ಸೆಳೆಯುವುದರ ಜೊತೆಗೆ ಶಾಲಾ ಮಕ್ಕಳ ಮೇಲೆ ಗಾಢ ಪರಿಣಾಮ ಬೀರಿದೆ. ತಪ್ಪು ಉತ್ತರ ಕೊಡುವ ಶಿಷ್ಯರಿಂದಲೇ ಶಿಕ್ಷೆ ಪಡೆದು, ಅವರನ್ನು ಜಾಣರನ್ನಾಗಿಸಿದ ಪರಿ ಅಭೂತಪೂರ್ವವಾದುದು.
ಪುಟಾಣಿ ಮಕ್ಕಳ ಕಲಿಕೆಗೆ ಪ್ರೇರಣೆಯಾಗುವಂತೆ ಪಠ್ಯವನ್ನು ವಿವಿಧ ರೀತಿಯಲ್ಲಿ ಅರ್ಥಮಾಡಿಸಿ ಹೇಳಿ ಕೊಡುವ ಶಿಕ್ಷಕರು, ಬಾಲ್ಯದಲ್ಲಿ ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕೃತಿ ಹಾಗೂ ಸನ್ನಡತೆಯನ್ನೂ ಧಾರೆ ಎರೆಯುತಿದ್ದಾರೆ. ಉತ್ತಮ ಪ್ರತಿ ಫಲ ಸಿಗಲೇಬೇಕಾದರೆ ಹೊಸ ಪ್ರಯೋಗಕ್ಕೆ ಅಣಿಯಾಗಬೇಕು. ಈ ನಿಟ್ಟಿನಲ್ಲಿ ನಾನು ತಪ್ಪು ಉತ್ತರ ನೀಡಿದ ವಿದ್ಯಾರ್ಥಿಯಿಂದಲೇ ಪೆಟ್ಟು ತಿನ್ನುವ ಪರಿಪಾಠ ಬೆಳೆಸಿಕೊಂಡೆ ಎಂದು ಗೋಪಾಲ್ ಹೇಳುತ್ತಾರೆ.
ಇದನ್ನೂ ಓದಿ: Viral Video: ಶಾಲೆಗೆ ಕುಡಿದು ಬಂದ ಶಿಕ್ಷಕನನ್ನು ಚಪ್ಪಲಿಯಲ್ಲಿ ಹೊಡೆದು ಓಡಿಸಿದ ವಿದ್ಯಾರ್ಥಿಗಳು
ಆದರೆ, ಈ ವಿದ್ಯಾರ್ಥಿಗಳು ಆ ಶಿಕ್ಷಕರ ಮೇಲೆ ಅಪಾರ ಪ್ರೀತಿ, ಗೌರವವನ್ನು ಹೊಂದಿದ್ದಾರೆ. ಇಂತಹ ಮಹಾನ್ ಶಿಕ್ಷಕರಿಗೆ ಶಿಷ್ಯರಾದ ನಾವು ಹೊಡೆಯಬೇಕೇ? ಛೆ! ಇದು ಸಾಧ್ಯವಿಲ್ಲ ಎಂದು ಭಾವಿಸಿದ ವಿದ್ಯಾರ್ಥಿಗಳು, ಶಿಕ್ಷಕರು ನಮ್ಮಿಂದ ಪೆಟ್ಟು ತಿನ್ನುವಂತಾಗಬಾರದು ಎಂದು ಶಿಕ್ಷಕರು ಕಲಿಸುವ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದಾರೆ. ಚೆನ್ನಾಗಿ ಓದಿ ಶಿಕ್ಷಕರು ಕೇಳಿದ ಪ್ರಶ್ನೆಗೆಲ್ಲಾ ಉತ್ತರಿಸುತ್ತಿದ್ದಾರೆ.
ನನ್ನನ್ನು ದಂಡಿಸಬೇಕಾಗಬಹುದು ಎನ್ನುವ ಅಳುಕಿನಿಂದ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಪ್ರಯೋಗ ಮಕ್ಕಳ ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆ ತಂದಿದೆ ಎಂದು ಗೋಪಾಲ್ ಹೇಳಿದ್ದಾರೆ.
ಇದನ್ನೂ ಓದಿ: Video: ಪ್ಲೀಸ್ ಸರ್ ಬೇಸಿಗೆ ರಜೆ ಬೇಡ, ನನಗೆ ಶಾಲೆಯಲ್ಲಿ ಸಿಗುವ ಮಧ್ಯಾಹ್ನದ ಊಟ ತುಂಬಾ ಮುಖ್ಯ ಎಂದ ವಿದ್ಯಾರ್ಥಿ
ಈಗಾಗಲೇ ನಿವೃತ್ತಿಯ ಅಂಚಿನಲ್ಲಿರುವ ಗೋಪಾಲ್ ಅವರು 2024 ರ ಜೂನ್ ಅಂತ್ಯದಲ್ಲಿ ತಮ್ಮ ಕರ್ತವ್ಯದಿಂದ ಬಿಡುಗಡೆ ಹೊಂದಲಿದ್ದಾರೆ. ಈಗ ಕಲಿಯುತ್ತಿರುವ ಮಕ್ಕಳ ತಂದೆ ತಾಯಿಯರಿಗೂ ಇವರೇ ಅಕ್ಷರ ಕಲಿಸಿದ ಗುರು. ಆ ಒಂದು ಅಭಿಮಾನವೇ ಮುಚ್ಚುವ ಹಂತಕ್ಕೆ ತಲುಪಿದ ಸರ್ಕಾರಿ ಶಾಲೆಯೊಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಇದೇ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿನಿಯಾಗಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ಹೊಳೆಕೇವಿ ಇಂಪನ ಅಮೃತ ತನ್ನ ಬಿಡುವಿನ ಸಮಯದಲ್ಲಿ ಇಲ್ಲಿನ ಮಕ್ಕಳ ಕಲಿಕೆಗೆ ಸಹಕರಿಸುತ್ತಿದ್ದಾಳೆ.
ದೇಶದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುವ ಇಂತಹ ಮಾದರಿ ಶಿಕ್ಷಕರನ್ನು ಸರ್ಕಾರ ಅಥವಾ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದಲ್ಲಿ ಅವರ ಸೇವಾಕಾರ್ಯಕ್ಕೆ ಸಾರ್ಥಕತೆ ಸಿಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ