ಐಎಂಎ ಹಗರಣದಲ್ಲಿ ನನ್ನ ಪಾತ್ರವಿಲ್ಲ: ಎಚ್.ಡಿ.ಕುಮಾರಸ್ವಾಮಿ

ಜನರ ಹಣವನ್ನ ಲೂಟಿ ಮಾಡಿದವರಿಗೆ ಈ ಕ್ಷಣದವರೆಗೆ ರಕ್ಷಣೆ ಕೊಟ್ಟವನಲ್ಲ. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆಗೆ ಆದೇಶಿಸಿದ್ದವನೇ ನಾನು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

  • TV9 Web Team
  • Published On - 0:13 AM, 22 Feb 2021
ಐಎಂಎ ಹಗರಣದಲ್ಲಿ ನನ್ನ ಪಾತ್ರವಿಲ್ಲ: ಎಚ್.ಡಿ.ಕುಮಾರಸ್ವಾಮಿ
ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ರಾಮನಗರ: ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಹಗರಣ ಹೊರಬಂದಿತ್ತು. ಹಗರಣದ ಬಗ್ಗೆ ತನಿಖೆ ನಡೆಸುವಂತೆ ಸಿಸಿಬಿಗೆ ಆದೇಶಿಸಿದ್ದೆ. ಆ ವೇಳೆಗಾಗಲೇ ಆತ ದೇಶ ಬಿಟ್ಟು ದುಬೈಗೆ ಪರಾರಿಯಾಗಿದ್ದ. ನಮ್ಮ ಅಧಿಕಾರಿಗಳು ಆರೋಪಿಯನ್ನ ಬಂಧಿಸಿ ಕರೆತಂದಿದ್ದರು. ವಿಚಾರಣೆ ವೇಳೆ ಕುಮಾರಸ್ವಾಮಿ ಅವರಿಗೆ ಸೇರಬೇಕು ಅಂತ ಹಣ ಸಂಗ್ರಹಣೆ ಮಾಡಿದ್ರಂತೆ, ಆ ಹಣ ಕುಮಾರಸ್ವಾಮಿಗೆ ಸೇರಿಲ್ಲಾ ಎಂಬ ಚರ್ಚೆ ನಡೀತಿದೆ . ಈ ಕುರಿತಂತೆ ಯಾರ ವಿರುದ್ಧ ಬೇಕಾದರೂ ಕ್ರಮಕೈಗೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜನರ ಹಣವನ್ನ ಲೂಟಿ ಮಾಡಿದವರಿಗೆ ಈ ಕ್ಷಣದವರೆಗೆ ರಕ್ಷಣೆ ಕೊಟ್ಟವನಲ್ಲ. ರೋಷನ್‌ ಬೇಗ್ ಒಂದು ಬಾರಿ ಕೃಷ್ಣ ಕಚೇರಿಯಲ್ಲಿದ್ದಾಗ ಒಂದು ಇಫ್ತಾರ್ ಕೂಟ ಇದೆ ಬರಬೇಕೆಂದು ಹಠ ಹಿಡಿದಿದ್ದರು. ಕೃಷ್ಣ ಕಚೇರಿಯಿಂದ ನಾನು ಅಲ್ಲಿಗೆ ಹೋಗಿದ್ದೆ. ಆ ವೇಳೆಗೆ ಅಲ್ಲಿ ಇಬ್ಬರು ವ್ಯಕ್ತಿಗಳು ಇದ್ದರು. ಅವರು ಯಾರು ಎಂಬುದೂ ನನಗೆ ಗೊತ್ತಿರಲಿಲ್ಲ ಎಂದು ನೆನಪಿಸಿಕೊಂಡರು.

ಅಲ್ಲಿದ್ದ ಇಬ್ಬರನ್ನು ರೋಷನ್ ಬೇಗ್ ಮಹಾನ್ ದಾನಿಗಳು ಎಂದು ಪರಿಚಯಿಸಿದ್ದರು. ಶಿಕ್ಷಣ ಸಂಸ್ಥೆಗಳಿಗೆ ಇವರಿಂದ ದಾನ ಲಭಿಸಿದೆ ಎಂದು ಹೇಳಿದ್ದರು ಅಷ್ಟೇ. ಅಲ್ಲಿಯವರೆಗೆ ಆತ ಯಾರು ಅಂತಾನೆ ಗೊತ್ತಿರಲಿಲ್ಲಾ. ನಾನೇ ತನಿಖೆಗೆ ಆದೇಶ ಮಾಡಿದ ಮೇಲೆ ನನ್ನ ಪಾತ್ರ ಎಲ್ಲಿ ಇರುತ್ತದೆ ಎಂದು ಹೇಳಿದರು.

ಬಂದ್ ಮಾಡುವುದರಿಂದ ಅಭಿವೃದ್ಧಿ ಆಗಲ್ಲ. ಅಭಿವೃದ್ಧಿ ಬಯಸದವರು ಬಂದ್ ಮಾಡಲು ಮುಂದಾಗಿದ್ದಾರೆ ಎಂದು ನಿನ್ನೆ(ಫೆ.20) ರಾಮನಗರ ಬಂದ್​ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದರು. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ನಿನ್ನೆ ಬಂದ್​ ಎಂಬ ಉಪಾಯ ಹೂಡಿದ್ದರು. ಹಣಕ್ಕೆ ಪ್ರೇರಿತರಾಗಿ ನಡೆದ ಬಂದ್​ ಇದಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಹಾನುಭವ ₹ 10 ಲಕ್ಷ ಹಣ ಕೊಟ್ಟು ನಿನ್ನೆ ರಾಮನಗರ ಬಂದ್​ ಮಾಡಿಸಿದ್ದ. ಅಭಿವೃದ್ಧಿ ವಿಚಾರದಲ್ಲಿ ಇಂಥವರಿಂದ ನಾನು ಕಲಿಯಬೇಕಾಗಿಲ್ಲ. ಇದಕ್ಕೆ ಮುಂದಾದ ವ್ಯಕ್ತಿಯ ಸುಲಿಗೆ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ. ಈತ ಯಾವ ವ್ಯಕ್ತಿಯಿಂದ ಸುಲಿಗೆಗೆ ಒಳಗಾಗಿದ್ದಾನೆ ಎಂಬುದೂ ಗೊತ್ತಿದೆ. ನಗರಸಭಾ ಚುನಾವಣೆ ಹಿನ್ನೆಲೆ ಜನರ ದಿಕ್ಕು ತಪ್ಪಿಸಲು ಯತ್ನ ಹೂಡಿದ್ದಾರೆ ಎಂದು ಮಾತನಾಡಿದ್ದಾರೆ.

ಮೀಸಲಾತಿ ಹೋರಾಟಗಳು ಎಲ್ಲೋ ಒಂದು ಕಡೆ ದಾರಿ ತಪ್ಪಿ ಹೋಗುತ್ತಿರುವ ಸನ್ನಿವೇಶಗಳು ಕಾಣಿಸುತ್ತಿವೆ. ನಾನು ಇಂತಹ ವಿಷಯಗಳ ಮುಖಾಂತರ ರಾಜಕೀಯ ದುರ್ಬಳಕೆ ಮಾಡಿಕೊಳ್ಳೋದಿಲ್ಲ. ರಾಜಕೀಯವಾಗಿ ಸ್ಥಾನಮಾನ ಪಡೆಯಲು ಒಂದು ವರ್ಗ ಹೊರಟಿದೆ. ಇಂತಹ ಹೋರಾಟದಲ್ಲಿ ಭಾಗಿಯಾದವನು ನಾನಲ್ಲಾ. ಇಂತಹ ವಿಷಯಗಳನ್ನ ಸಮಾಜದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ಸಂಘರ್ಷ ಉಂಟುಮಾಡುಲು ಹೋಗುವವನು ನಾನಲ್ಲ. ಆ ಸಮಯ ಬಂದಾಗ ಚರ್ಚೆ ಮಾಡೋಣ ಎಂದು ಹೇಳಿದರು.

ಇದನ್ನೂ ಓದಿ: ನಗರಸಭೆ ಅರಾಜಕತೆ, ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಇಂದು ರಾಮನಗರ ಬಂದ್

ಇದನ್ನೂ ಓದಿ: ಚನ್ನಪಟ್ಟಣ ತಾಲೂಕಿನಲ್ಲಿ ಹಳ್ಳ ಹಿಡಿದಿದೆ ಹೈಟೆಕ್ ಖಾಸಗಿ ಬಸ್ ನಿಲ್ದಾಣ ಕಾಮಗಾರಿ