ನೀರೆಚ್ಚರದ ಬದುಕು | ನೀರು ಪೋಲು ಮಾಡುವುದೂ ಸಮಾಜದ್ರೋಹ ಅಂತಾರೆ ಶ್ರೀಪಡ್ರೆ
ಬೆಂಗಳೂರಿನಲ್ಲಿನ ಕೆರೆಗಳನ್ನು ಇಟ್ಟುಕೊಂಡು ಇಂಗು ಬಾವಿಗಳ ಮೊರೆ ಹೋಗಿರುವುದು ನಿಜಕ್ಕೂ ವಿಪರ್ಯಾಸ. ಜಮೀನನಲ್ಲಿ ಬಿದ್ದ ನೀರನ್ನು ಇಂಗುವ ಹಾಗೆ ಮಾಡಿದರೆ ಜಲಮಟ್ಟ ಮೇಲೆ ಬರುತ್ತದೆ. ಹೀಗಾಗಿ ಸಮಗ್ರವಾಗಿ ಚಿಂತನೆ ಮಾಡಬೇಕು. ಬೆಂಗಳೂರಿನ ನಳ್ಳಿಯಲ್ಲಿ ದಿನನಿತ್ಯ ಸೋರುವ ನೀರನ್ನು ಉಳಿಸುವ ಚಿಂತನೆ ಕೆರೆವರೆಗೂ ವ್ಯಾಪಿಸಿದರೆ ಮಾತ್ರ ಬೆಂಗಳೂರಿಗೆ ಒಳಿತಾಗುತ್ತದೆ.
ಮುಂದೊಂದು ದಿನ ವಿಶ್ವದಲ್ಲಿ ಮಹಾಯುದ್ಧವೋ, ದೇಶ-ರಾಜ್ಯಗಳೊಳಗೆ ಅಂತರ್ಯುದ್ಧವೋ ಅಗುವುದಿದ್ದರೆ ಅದು ನೀರಿಗಾಗಿಯೇ ಎಂಬ ಮಾತುಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ನಮ್ಮನ್ನಾಳುವ ಸರ್ಕಾರಗಳ ಪಾಲಿಗೆ ಕರ್ನಾಟಕದ ಮಲೆನಾಡು-ಕರಾವಳಿ ಎಂಬುದು ಎಂದೂ ಬತ್ತದ ನೀರಿನ ಖಜಾನೆಯಂತೆ ಕಾಣಿಸುತ್ತಿದೆ. ಅಲ್ಲಿಂದ ಬಯಲುಸೀಮೆಗೆ ನೀರು ಹರಿಸುವ ಯೋಜನೆಗಳನ್ನು ಕಾಲಕ್ಕೊಬ್ಬರು, ಕಾಲಕ್ಕೊಂದು ರೀತಿ ಜನರ ಮುಂದಿಟ್ಟು ಮರೀಚಿಕೆಯನ್ನು ನಿಜವೆಂದು ನಂಬಿಸಲು ಹಾತೊರೆಯುತ್ತಾರೆ. ಇಂಥ ದೊಡ್ಡದೊಡ್ಡ ಯೋಜನೆಗಳಲ್ಲಿ ನಿಜಕ್ಕೂ ಯಾರಿಗೆ ಲಾಭವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ನಮ್ಮನಮ್ಮ ಊರುಗಳ ನೀರ ನೆಮ್ಮದಿಗೆ ನಮ್ಮ ಮಿತಿಯಲ್ಲಿಯೇ ನಾವು ಎಷ್ಟೆಲ್ಲಾ ಮಾಡಬಹುದು ಗೊತ್ತೆ? ಹತ್ತಾರು ವರ್ಷಗಳಿಂದ ನಾಡಿನಲ್ಲಿ ನೀರೆಚ್ಚರ ಮೂಡಿಸಲು ಶ್ರಮಿಸುತ್ತಿರುವ ಹಿರಿಯ ಅಭ್ಯುದಯ ಪತ್ರಕರ್ತ ಶ್ರೀಪಡ್ರೆ ಇಂಥ ಹಲವು ಸರಳ ಉಪಾಯಗಳನ್ನು ಹಂಚಿಕೊಂಡಿದ್ದಾರೆ.
ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆಯ ವಿಚಾರವನ್ನು ನೊಡುವುದಾದರೆ ಕರಾವಳಿಯಲ್ಲಿ ಮದಗಗಳು ಎನ್ನುವ ಅದ್ಭುತ ರಚನೆಗಳಿವೆ. ಅದರಲ್ಲೂ ಉಡುಪಿ ಮತ್ತು ಮಂಗಳೂರಿನಲ್ಲಿ ಮಳೆ ನೀರನ್ನು ಶೇಖರಿಸಿಕೊಡುವಂತಹ ಮದಗಗಳಿವೆ. ಆದರೆ ಈ ಬಗ್ಗೆ ಜನರಿಗೆ ಮತ್ತು ಸರ್ಕಾರಕ್ಕೆ ಮಾಹಿತಿ ಇಲ್ಲ. ಆದರೆ ಈಗ ಜಲ ಮಟ್ಟ ಕುಸಿದಿದೆ. ಮಣಿಪಾಲದಲ್ಲಿ ಕೂಡ ಒಂದು ಮದಗ ಇದೆ. ಮಣ್ಣು ಪಲ್ಲ ಎನ್ನುವ ಹೆಸರಿನಿಂದಲೆ ಮಣಿಪಾಲ ಎಂಬ ಹೆಸರು ಬಂದಿದ್ದು.
ಮದಗಗಳಲ್ಲಿ ಸರಿಯಾದ ರೀತಿಯಲ್ಲಿ ಪುನರ್ವ್ಯವಸ್ಥೆ ಮಾಡಿದರೆ ಇಡಿ ಊರಿಗೆ ನೀರಿನ ಕೊರತೆ ಇರುವುದಿಲ್ಲ. ಇಂಗು ಬಾವಿ ವ್ಯವಸ್ಥೆಗಳೂ ಕೂಡ ನೀರಿನ ವ್ಯವಸ್ಥೆಯಲ್ಲಿ ಅಷ್ಟೇ ಮುಖ್ಯವಾಗುತ್ತದೆ. 10 ಲಕ್ಷ ಇಂಗು ಬಾವಿಯನ್ನು ಬೆಂಗಳೂರಿನಲ್ಲಿ ತೊಡಿದರೆ ಕಾವೇರಿಯ ಹಂಗಿಲ್ಲದೆ ಬದುಕಬಹುದು ಎನ್ನುವುದು ಕೂಡ ಅಷ್ಟೇ ಸತ್ಯ. ಮಳೆ ನೀರು ಹರಿದುಹೋಗಲೆಂದು ನಿರ್ಮಿಸಿರುವ ದೊಡ್ಡ ಚರಂಡಿಗಳಲ್ಲಿಯೂ ಇಂಗು ಬಾವಿ ಮಾಡಬಹುದು. ಇನ್ನು ಬಾವಿ ಕೂಡ ನೀರಿನ ಶೇಖರಣೆಗೆ ಪ್ರಮುಖ ವ್ಯವಸ್ಥೆ. ಕೇವಲ ಸರ್ಕಾರವನ್ನು ನೆಚ್ಚಿಕೊಂಡರೆ ಸಾಧ್ಯವಿಲ್ಲ ಎಲ್ಲರೂ ಕೂಡ ನೀರಿನ ಬಗ್ಗೆ ವೈಯಕ್ತಿಕವಾಗಿ ಕಾಳಜಿ ಹೊಂದುವುದು ಅಗತ್ಯ.
ಇರುವ ಕಾನೂನುಗಳು ಬದಲಾಗಬೇಕಿದೆ ಕರ್ನಾಟಕದಲ್ಲಿ ನಮ್ಮ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆಯನ್ನು ಹಾಳು ಮಾಡುವ ಕಾರ್ಯವನ್ನು ಸರ್ಕಾರ ಮಾಡಿದೆ. ಮೊಟ್ಟಮೊದಲು ಇದರಿಂದ ಆಗಿರುವ ಹಾನಿಯನ್ನು ಸರಿ ಮಾಡಬೇಕು. ನೀರಾವರಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕೊಡುವುದು ಜಲ ಸಂರಕ್ಷಣೆಗೆ ಪೂರಕವಲ್ಲದ ಕ್ರಮ. ಹೊಸದಾಗಿ ಎಂಥ ಕಾನೂನುಗಳನ್ನು ಮಾಡಬೇಕು ಎನ್ನುವುದಕ್ಕಿಂತ, ಈಗಾಗಲೇ ಇರುವ ಹಲವು ಕಾನೂನುಗಳನ್ನು ಬದಲಾಯಿಸಬೇಕು ಎನ್ನುವುದು ಮುಖ್ಯ.
ಜಲಸಂರಕ್ಷಣಾ ವ್ಯವಸ್ಥೆಗಳನ್ನು ಸಂರಕ್ಷಿಸುವುದರಲ್ಲಿಯೇ ನೀರು ಉಳಿಸುವ ಕಾಳಜಿಯೂ ಇದೆ. ಕರ್ನಾಟಕದ ಅಭಿವೃದ್ಧಿಯ ಹೆಸರಿನಲ್ಲಿ ಸಾಕಷ್ಟು ಕೆರೆಗಳನ್ನು ನಾಶ ಮಾಡಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೆಂಪಾಂಬುಧಿ ಎಂಬ ಕೆರೆ ಇತ್ತು. ಹೀಗಾಗಿ ಈಗಲೂ ಕೂಡ ಮಳೆ ಬಂದಾಗ ಅಲ್ಲಿ ನೀರು ನಿಂತುಕೊಳ್ಳುತ್ತದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಅದು ಬಿಟ್ಟು ನದಿ ನೀರನ್ನು ತಿರುಗಿಸುವ ಅನಿವಾರ್ಯ ನನಗೆ ಕಾಣುವುದಿಲ್ಲ.
ಪಾನಿ ಫೌಂಡೆಷನ್ ಮಾದರಿ ಮಹಾರಾಷ್ಟ್ರದಲ್ಲಿ ಅಮೀರ್ಖಾನ್ ನೇತೃತ್ವದ ಪಾನಿ ಎನ್ನುವ ಫೌಂಡೆಷನ್ ವಾಟರ್ ಕಪ್ ಹೆಸರಿನ ಸ್ಪರ್ಧೆ ಏರ್ಪಡಿಸುತ್ತದೆ. ಈ ಸ್ಪರ್ಧೆಯನ್ನು ತುಂಬಾ ಬರ ಇರುವ ಪ್ರದೇಶದಲ್ಲಿ ಮಾಡುತ್ತಾರೆ. ನಂತರ ಪ್ರತಿ ಪಂಚಾಯತಿಯಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಬರಿ ಶ್ರಮದಾನದಿಂದ ಮಾತ್ರ ಇಲ್ಲಿ ಕೆಲಸ ಆಗುವುದಿಲ್ಲ. ಯಂತ್ರಗಳು ಬೇಕು. ಇದಕ್ಕೆ ಈ ಸಂಸ್ಥೆ ಹಣ ಕೊಡುವುದಿಲ್ಲ. ಬದಲಿಗೆ ಜ್ಞಾನವನ್ನು ಕೊಡುತ್ತದೆ. ಸ್ಥಳೀಯ ಪಂಚಾಯಿತಿಗಳು ಈ ಕೆಲಸದಲ್ಲಿ ಕೈಜೋಡಿಸುತ್ತವೆ. ಇದರಲ್ಲಿ ಭಾಗವಹಿಸಿದ ಊರಿನಲ್ಲಿ ಬಾವಿಗಳು ತುಂಬಿ ಬರ ನಿವಾರಣೆ ಆಗುತ್ತದೆ ಎನ್ನುವುದು ಖುಷಿಯ ವಿಚಾರ. ಬರ ನಿರೋಧಕ ಶಕ್ತಿ ಜನರಲ್ಲಿ ಇದೆ. ಇದನ್ನ ಮಾಡಿಸಲು ಸರಿಯಾದ ನಾಯಕತ್ವ ಬೇಕು.
ಮದಗದ ಪರಿಚಯ ಮದಗಗಳು ಜಮ್ಮಿಟ್ಟಿಗೆಯ ಪ್ರದೇಶದಲ್ಲಿ ಅದರಲ್ಲೂ ಉಡುಪಿ ಮತ್ತು ಕಾಸರಗೋಡು ಪ್ರದೇಶದಲ್ಲಿ ಹೆಚ್ಚು ಕಂಡು ಬರುತ್ತದೆ. ದಶಕದ ಹಿಂದೆ ಭತ್ತದ ಕೃಷಿಗೆ ನೀರು ಸಾಲದೆ ಹೋದರೆ ಪೂರಕ ನೀರಾವರಿಗಾಗಿ ಇದನ್ನು ಬಳಸುತ್ತಿದ್ದರು. ಸಾಮಾನ್ಯವಾಗಿ ಎತ್ತರದ ಜಾಗದಲ್ಲಿ ಇರುವಂತಹದ್ದಾಗಿರುತ್ತದೆ. ಶಾನಾಡಿ ಮದಗ ಅಂತ ಕೂಡ ಇದರಲ್ಲಿ ಇದೆ. ಆದರೆ ಮದಗಗಳು ಇತ್ತೀಚೆಗೆ ಅವಸಾನವಾಗಿದೆ. ಮದಗಗಳನ್ನು ಪುನರುಜ್ಜೀವನ ಮಾಡುವುದು ಕಷ್ಟ ಅಲ್ಲ. ಹೂಳು ತೆಗೆದರೆ ಉತ್ತಮ ನೀರಿನ ವ್ಯವಸ್ಥೆ ಸಿಗುತ್ತದೆ.
ಸಂಘ- ಸಂಸ್ಥೆ ಶಾಲೆ ಕಾಲೇಜುಗಳಿಗೆ ಹೋಗಿ ಶಿಕ್ಷಣ ಕಲಿತು ನೀರಿನ ಬಗ್ಗೆ ಜ್ಞಾನ ಗಳಿಸಿಕೊಳ್ಳಬೇಕು ಎನ್ನುವುದು ಇಲ್ಲ. ಅದರ ಆಚೆಗೆ ಉತ್ತಮ ಕೆಲಸ ಮಾಡಿದ ಹಲವರು ಇದ್ದಾರೆ. ರಾಜಸ್ಥಾನದಲ್ಲಿ ನಾಂಡುವಾಲಿ, ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿನ ನದಿಯ ಕಥೆಗಳು ನೀರಿನ ಮಹತ್ವ ತಿಳಿಸುತ್ತದೆ. ಕೆರೆ ಸಂರಕ್ಷಣಾ ಸಂಘ ಈ ರೀತಿ ಹೃದಯದಿಂದ ಕೆಲಸ ಮಾಡುವವರಿಗೆ ಬೇರೆ ಬೇರೆ ದಾರಿ ಸಿಗುತ್ತದೆ. ಮಳೆ ಕೊಯ್ಲು ಪದ್ಧತಿ ಹೇಗೆ ಇರುತ್ತದೆ ಎಂದರೆ ಅದು ಕೋಲಾರದಲ್ಲಿ ಇದ್ದ ಹಾಗೆ ಉಡುಪಿಯಲ್ಲಿಯೂ ಇರಬೇಕಿಲ್ಲ. ತತ್ವ ಒಂದೇ ಆದರೆ ರಚನೆಗಳು ಒಂದೇ ರೀತಿ ಇರಬೇಕಿಲ್ಲ.
ಜನರ ಸಹಭಾಗಿತ್ವದ ಹೊರತು ಈ ದೇಶದಲ್ಲಿ ಎಲ್ಲೂ ಕೂಡ ನೀರ ನೆಮ್ಮದಿ ತರಲು ಸಾಧ್ಯವಿಲ್ಲ. ಯೇಸುಕ್ರಿಸ್ತ ಹುಟ್ಟುವ ಮೊದಲೇ ಈ ದೇಶದಲ್ಲಿ ಜಲ ಸಂರಕ್ಷಣೆ ಮತ್ತು ಮಳೆ ಕೊಯ್ಲು ಆಗಿತ್ತು. ಹೀಗಾಗಿ ವಿಧಾನ ಅಥವಾ ತಂತ್ರಜ್ಞಾನದ ಸಮಸ್ಯೆ ನಮಗಿಲ್ಲ. ಆದರೆ, ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ಜಲ ಸಾಕ್ಷರತೆ ಬೇಕು ಎನ್ನುವುದನ್ನು ನಾವು ಗಮನಿಸಬೇಕು. ವಿಶೇಷವಾಗಿ ನೀರು ಕಡಿಮೆ ಇರುವ ದೇಶದಲ್ಲಿ ಇದು ಮುಖ್ಯ. ನೀರಿನ ಪೋಲು ಸಮಾಜ ದ್ರೋಹ ಎನ್ನುವಷ್ಟರ ಮಟ್ಟಿನ ಜಾಗೃತಿ ಮುಖ್ಯ.
ಕ್ಯಾಚ್ ದಿ ರೈನ್ ಸರ್ಕಾರದ ಎಲ್ಲಾ ಕೆಲಸಗಳನ್ನು ನಾನು ಗುಮಾನಿಯಿಂದಲೇ ನೋಡುತ್ತೇನೆ. ಏಕೆಂದರೆ ಸರ್ಕಾರದ ಮುಖಾಂತರ ಬರುವ ಎಲ್ಲಾ ಕೆಲಸಗಳು ಕುಲಗೆಟ್ಟು ಹೋಗಿರುವುದನ್ನು ನಾವು ನೋಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಪ್ರಚಾರಕ್ಕೆ ತರಲು ಯತ್ನಿಸುತ್ತಿರುವ ಕ್ಯಾಚ್ ದಿ ರೈನ್ ತತ್ವವನ್ನು ಮೆಚ್ಚಿಕೊಳ್ಳಬೇಕು. ಮಳೆ ನೀರು ಎಲ್ಲಿ ಬೀಳುತ್ತದೋ ಅಲ್ಲೇ ಅದನ್ನು ಇಂಗಿಸುವುದು. ಇದನ್ನು ಇಡಿ ವಿಶ್ವವೇ ಒಪ್ಪಿಕೊಂಡಿದೆ. ಇದನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬಹುದು. ಮಳೆ ಕೊಯ್ಲನ್ನು ಲಘುವಾಗಿ ತೆಗೆದುಕೊಳ್ಳಬಾರದು ಎನ್ನುವುದು ಕೂಡ ಮುಖ್ಯ. ಕೊಡಗಿನಲ್ಲಿ ಭೂಕುಸಿತವಾಗಲು ಇರಬಹುದಾದ ಕಾರಣಗಳಲ್ಲಿ ಇದರ ಬಗ್ಗೆಯೂ ಪ್ರಸ್ತಾಪಿಸಲಾಗುತ್ತಿದೆ. ಯಾವುದೇ ವಿಷಯಕ್ಕಾದರೂ ಎರಡು ಮುಖ ಇರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು.
ಕಾಸರಗೋಡಿನಲ್ಲಿ ನೋಡುವುದಾದರೆ ಮನೆಯ ಚಾವಣಿಯ ಮೇಲೆ ಇಡಿ ಕುಟುಂಬಕ್ಕೆ ವರ್ಷ ಪೂರ್ತಿ ಸಾಕಾಗುವಷ್ಟು ನೀರು ಬೀಳುತ್ತದೆ. ಪ್ರತಿ ಚದರ ಮೀಟರ್ ಮೇಲೆ 3500 ಲೀಟರ್ ನೀರು ಬೀಳುತ್ತದೆ. ಒಂದು ಎಕರೆ ಮೇಲೆ 1.4 ಕೋಟಿ ಲೀಟರ್ ನೀರು ಬೀಳುತ್ತದೆ. ಹೀಗಾಗಿ ಒಬ್ಬ ಬಡವ ಕೂಡ ತಮ್ಮ ಮನೆಯಲ್ಲಿನ ಬಾವಿಯನ್ನು ಬತ್ತಿ ಹೋಗದಂತೆ ನೋಡಿಕೊಳ್ಳಬಹುದು. ಇನ್ನು ಕಟ್ಟಗಳು ಕೂಡ ಈ ಭಾಗದಲ್ಲಿ ನೀರಿನ ಸಂರಕ್ಷಣೆಗೆ ಪ್ರಮುಖ ಪಾತ್ರವಹಿಸುತ್ತದೆ.
ಮಳೆ ನೀರಿನ ಆಚೆಗಿನ ಪ್ರಯತ್ನ ಪ್ರಕೃತಿಯಲ್ಲಿ ನೀರನ್ನು ಮಾತ್ರ ಉಳಿಸುವ ಯಾವುದೇ ವಿಧಾನ ಇಲ್ಲ. ಪರಿಸರವನ್ನು ಸಂರಕ್ಷಿಸಿದರೆ, ಅದರ ಭಾಗವಾಗಿ ನೀರೂ ಉಳಿಯುತ್ತದೆ. ನೀರು ಉಳಿಸುವುದು ಅಥವಾ ಸಂರಕ್ಷಿಸುವುದು ಎಂದರೆ ನಮ್ಮನೆಯ ತೊಟ್ಟಿಯಲ್ಲಿ ನೀರು ಸಂರಕ್ಷಣೆ ಮಾಡುವುದು ಎಂಬ ಸೀಮಿತ ಅರ್ಥದಲ್ಲಿ ನೋಡಬಾರದು. ನಮ್ಮ ಜನಮಾನಸಕ್ಕೆ ಬೇಕಾದಷ್ಟು ನೀರನ್ನು ಉಳಿಸಿಕೊಳ್ಳಬೇಕಾದರೆ, ಭೂಮಿಯ ಜಲಪಾತ್ರೆಯಲ್ಲಿ ನೀರನ್ನು ತುಂಬಿಕೊಳ್ಳಬೇಕು. ಹಾಗಾಗಿ ಭೂಮಿ ಬೇಕು, ಮಣ್ಣು ಬೇಕು, ಮಣ್ಣಿನ ಸವಕಳಿಯನ್ನು ಕಡಿಮೆ ಮಾಡಬೇಕು. ಮಳೆ ಬಿದ್ದಾಗ ನೀರು ಓಡದ ಹಾಗೆ ನೋಡಿಕೊಳ್ಳಬೇಕು. ಇದೆಲ್ಲವನ್ನು ಮಾಡಬೇಕಾದರೆ ಮಣ್ಣಿಗೆ ಹಸಿರಿನ ಕೊಡೆ ಬೇಕು .ಹಸಿರು ಕೊಡೆ ಎಂದರೆ ಅರಣ್ಯ ಬೇಕು ಎಂದರ್ಥ.
ಎಲ್ಲಿ ಕಾಡು ಇದೆಯೋ ಅಲ್ಲಿ 12 ತಿಂಗಳು ನೀರು ಇರುತ್ತದೆ. ಕಾಡೇ ನದಿಗಳ ತಾಯಿ ಎಂಬ ಮಾತು ಇದೆ. ಕಾಡಿನಲ್ಲಿ ಸುರಿಯುವ ನೀರನ್ನು ಭೂಮಿಯಲ್ಲಿ ಇಂಗಿಸುತ್ತದೆ. ಮಣ್ಣು, ನೀರು, ಅರಣ್ಯ ಬಹಳ ಮುಖ್ಯ. ಜಲಾನಯನ ಯೋಜನೆ ಎಂದರೆ ಮಣ್ಣು ಮತ್ತು ನೀರಿಗೆ ಸಂಬಂಧಿಸಿದ ಕೆಲಸ. ಮಳೆ ನೀರು ಇಂಗಿಸುವ ಜಲಾನಯನ ವ್ಯವಸ್ಥೆ ಸರಿಯಾಗಿ ಇರುವುದು ಮುಖ್ಯ. ಕಾಡು ಹಾಳುಮಾಡಿರುವ ಅಪರಾಧದ ಕಾರಣಕ್ಕಾಗಿ ಇಂದು ಇಂಗುಬಾವಿ ರೂಪಿಸಿಕೊಳ್ಳುವ ಯೋಜನೆಯನ್ನು ರೂಪಿಸಿಕೊಳ್ಳಬೇಕಾಯಿತು. ಬೆಂಗಳೂರಿನಲ್ಲಿ ಕೆರೆಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳದ ನಾವು ಇಂಗು ಬಾವಿಗಳ ಮೊರೆ ಹೋಗಬೇಕಾಗಿದೆ. ಜಮೀನಿನಲ್ಲಿ ಬಿದ್ದ ನೀರನ್ನು ಇಂಗುವ ಹಾಗೆ ಮಾಡಿದರೆ ಜಲಮಟ್ಟ ಮೇಲೆ ಬರುತ್ತದೆ. ಹೀಗಾಗಿ ಸಮಗ್ರವಾಗಿ ಚಿಂತನೆ ಮಾಡಬೇಕು. ಬೆಂಗಳೂರಿನ ನಲ್ಲಿಯಲ್ಲಿ ದಿನನಿತ್ಯ ಸೋರುವ ನೀರನ್ನು ಉಳಿಸುವ ಚಿಂತನೆ ಕೆರೆವರೆಗೂ ವ್ಯಾಪಿಸಿದರೆ ಮಾತ್ರ ಬೆಂಗಳೂರಿಗೆ ಒಳಿತಾಗುತ್ತದೆ.
ಪ್ರಿಯ ಓದುಗರೇ, ‘ನೀರೆಚ್ಚರದ ಬದುಕು’ ಸರಣಿಯಲ್ಲಿ ನಿಮ್ಮ ಪಾಲೂ ಇರಲಿ. ನೀವು ಓದಿದ ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ನೀವು ಕಂಡುಕೊಂಡ ನೀರು ಉಳಿಸುವ ಉಪಾಯಗಳನ್ನು ನಮ್ಮೊಂದಿಗೂ ಹಂಚಿಕೊಳ್ಳಿ. ನಿಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯೊಂದಿಗೆ ಸೂಕ್ತ ಚಿತ್ರಗಳೂ ಬರಹದ ಜೊತೆಗಿರಲಿ. ನಮ್ಮ ಇಮೇಲ್ ವಿಳಾಸ tv9kannadadigital@gmail.com
ಪರಿಕಲ್ಪನೆ ಮತ್ತು ನಿರೂಪಣೆ: ಪ್ರೀತಿ ಶೆಟ್ಟಿಗಾರ್
ಇದನ್ನೂ ಓದಿ:
ನೀರೆಚ್ಚರದ ಬದುಕು | ಶ್ರೀಪಡ್ರೆ ಹಂಚಿಕೊಂಡ ಈ ಜಲಜಾಗೃತಿ ಕಥನಗಳಲ್ಲಿ ಬದುಕಿನ ಪಾಠಗಳಿವೆ