SM Krishna: ಎಸ್ಎಂ ಕೃಷ್ಣ ಸುದೀರ್ಘ ರಾಜಕೀಯ ಜೀವನದ ಹಿನ್ನೋಟ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. ಅವರ 60 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ರಾಜಕೀಯ ಜೀವನ, ಸಾಧನೆಗಳು ಮತ್ತು ಕೊಡುಗೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಬೆಂಗಳೂರು, ಡಿಸೆಂಬರ್ 10: ಕರ್ನಾಟಕ ಮಾಜಿ ಸಿಎಂ, ಮುತ್ಸದ್ದಿ ರಾಜಕಾರಣಿ ಎಸ್ಎಂ ಕೃಷ್ಣ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಈ ಮೂಲಕ ಕರ್ನಾಟಕ ರಾಜಕಾರಣದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಈ ಸಂದರ್ಭದಲ್ಲಿ ಎಸ್ಎಂ ಕೃಷ್ಣ ಅವರ ರಾಜಕೀಯ ಜೀವನ, ವೈಯಕ್ತಿಕ ಜೀವನ, ಹವ್ಯಾಸಗಳ ಕುರಿತ ಇಣುಕುನೋಟ ಇಲ್ಲಿದೆ.
- 1962 ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು.
- 1968 ರಲ್ಲಿ ಲೋಕಸಭಾ ಸದಸ್ಯರಾಗಿ ಎಸ್ಎಂಕೃಷ್ಣ ಆಯ್ಕೆ.
- 1972 ರಲ್ಲಿ ಕೇಂದ್ರ ಸಚಿವರಾಗಿದ್ದ ಎಸ್ಎಂ ಕೃಷ್ಣ.
- 1989 ರಿಂದ 1992ರವರೆಗೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.
- 1992 ರಿಂದ 1994ರವರೆಗೆ ಡಿಸಿಎಂ ಆಗಿದ್ದರು.
- 1996 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
- 2004-2008 ರ ವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.
- ಒಟ್ಟಾರೆಯಾಗಿ ಪ್ರಮುಖ 10 ಚುನಾವಣೆಗಳನ್ನು ಎದುರಿಸಿದ್ದಾರೆ.
- 6 ವಿಧಾನಸಭಾ ಚುನಾವಣೆಗಳನ್ನು ಎದುರಿದ್ದು ಇವುಗಳಲ್ಲಿ 4 ರಲ್ಲಿ ಗೆಲುವು, 2 ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.
- 4 ಲೋಕಸಭಾ ಚುನಾವಣೆಗಳನ್ನು ಎದುರಿದ್ದು ಈ ಪೈಕಿ 3 ಚುನಾವಣೆಯಲ್ಲಿ ಗೆಲುವು ಪಡೆದು, 1 ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
- ಮದ್ದೂರು ಕ್ಷೇತ್ರದಿಂದ 3 ಬಾರಿ ಹಾಗೂ ಚಾಮರಾಜಪೇಟೆಯಿಂದ 1 ಬಾರಿ ಶಾಸಕರಾಗಿದ್ದಾರೆ.
- ಮೂರು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದಾರೆ.
- 1 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
- 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದಾರೆ.
- ಕರ್ನಾಟಕದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
- 1993 ರಿಂದ 1994 ರ ವರಗೆ ರಾಜ್ಯದ ಉಪಮುಖ್ಯಮಂತ್ರಿಯಾಗಿ ಎಸ್ಎಂ ಕೃಷ್ಣ ಸೇವೆ ಸಲ್ಲಿಸಿದ್ದಾರೆ.
- 1995ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಸ್ಎಂಕೃಷ್ಣ ಸೋಲು ಅನುಭವಿಸಬೇಕಾಯಿತು. ಆ ವೇಳೆ ರಾಜಕೀಯದಲ್ಲಿ ಉತನ್ನತ ಮಟ್ಟದಲ್ಲಿದ್ದ ಕೃಷ್ಣ ಅವರ ಸೋಲು ವ್ಯಾಪಕ ಚರ್ಚೆಗೆ ಸಹ ಕಾರಣವಾಯಿತು.
- 1996 ರಲ್ಲಿ ಕೃಷ್ಣ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾರೆ.
- ಬಳಿಕ 1999 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗುತ್ತಾರೆ.
- 1999 ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಎಸ್ಎಂ ಕೃಷ್ಣ ಮುನ್ನೆಡಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 132 ಸೀಟುಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಿತು.
ಮಂಡ್ಯ ಜಿಲ್ಲೆಯಿಂದ ಮುಖ್ಯಮಂತ್ರಿಯಾದ ಮೊದಲಿಗ ಎಸ್ಎಂ ಕೃಷ್ಣ
ಈ ವೇಳೆ ಮದ್ದೂರು ಕ್ಷೇತ್ರದಿಂದ ಗೆಲುವು ಸಾಧಿಸಿದ ಎಸ್ಎಂ ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಈ ಮೂಲಕ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮೊದಲ ನಾಯಕ ಸಿಎಂ ಆಗಿರುವ ಹೆಗ್ಗಳಿಕೆಗೆ ಕೃಷ್ಣ ಅವರು ಪಾತ್ರರಾಗಿದ್ದಾರೆ.
ಎಸ್ಎಂ ಕೃಷ್ಣ ಆಡಳಿತಾವಧಿಯ ಪ್ರಮುಖ ಘಟನಾವಳಿಗಳ ವಿವರ ಇಲ್ಲಿದೆ;
ವೀರಪ್ಪನ್ನಿಂದ ರಾಜ್‌ಕುಮಾರ್ ರಕ್ಷಣೆ
ಇವರು ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಎರಡು ಘಟನೆಗಳು ದೊಡ್ಡ ಮಟ್ಟದ ಚರ್ಚೆ ಉಂಟಾಯಿತು. ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮೂರು ತಿಂಗಳ ಕಾಲ ಅಪಹರಣ ಮಾಡಿದ್ದ. ಆಗ ರಾಜ್ಯದ್ಯಾಂತ ಸರಕಾರದ ವಿರುದ್ಧ ಹೋರಾಟಗಳು ನಡೆದವು. ಬಳಿಕ ಕೃಷ್ಣ ಅವರು ಅಂದಿನ ತಮಿಳುನಾಡು ಸಿಎಂ ಜಯಲಲಿತ ಅವರೊಮದಿಗೆ ಮಾತುಕತೆ ನಡೆಸಿ, ಬಳಿಕ ವೀರಪ್ಪನ್ ಸಂಪರ್ಕ ಮಾಡಿ ರಾಜ್‌ಕುಮಾರ್ ಅವರನ್ನು ಕ್ಷೇಮವಾಗಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬರಗಾಲ, ಮೋಡ ಬಿತ್ತನೆ ಹಾಗೂ ಮತ್ತಷ್ಟು…
ಕೃಷ್ಣ ಆಡಳಿತದ ವೇಳೆ ರಾಜ್ಯಕ್ಕೆ ಬರಗಾಲವು ಸಹ ಬಂದೊದಗಿತ್ತು. ಆ ವೇಳೆ ರಾಜ್ಯ ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಲು ಸಹ ಕೃಷ್ಣ ಅವರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಈ ಪ್ಲಾನ್ ಕೈಕೊಟ್ಟಿತು. ಈ ವೇಳೆ ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆಯನ್ನು ಸಹ ತೆಗೆಯಿತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟಗಳು ಸಹ ಜರುಗಿದವು.
ಭೂ ದಾಖಲೆಗಳ ಡಿಜಿಟಲೀಕರಣ
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿದ್ದು, ಸರಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಯಶಸ್ವಿನಿ ಯೋಜನೆ, ಬೆಂ-ಮೈ ಹೆದ್ದಾರಿ, ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದ್ದು, ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಸೇರಿದಂತೆ ಇನ್ನೂ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ.
2004 ರಲ್ಲಿ ಕೃಷ್ಣ ಅವರು ತಮ್ಮ ಸ್ವಕ್ಷೇತ್ರ ಮದ್ದೂರು ಕ್ಷೇತ್ರವನ್ನು ಡಿಸಿ ತಮ್ಮಣ್ಣಗೆ ಬಿಟ್ಟುಕೊಟ್ಟು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಿಧಾಸಭಾ ಚುನಾವಣೆಯನ್ನು ಎದುರಿಸುತ್ತಾರೆ. ಚಾಮರಾಜಪೇಟೆಯಲ್ಲೂ ಸಹ ಕೃಷ್ಣ ಅವರು ಗೆಲುವು ಸಾಧಿಸುತ್ತಾರೆ ಬಳಿಕ ಚಾಮರಾಜಪೇಟೆಯ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ 2004 ರಲ್ಲಿ ಮಹಾರಾಷ್ಟದ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.
ಇದನ್ನೂ ಓದಿ: ಎಸ್ಎಂ ಕೃಷ್ಣ ನಿಧನ, ಕರ್ನಾಟಕ ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಇನ್ನಿಲ್ಲ
2008 ರಲ್ಲಿ ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ಪ್ರವೇಶಿಸುತ್ತಾರೆ. ನಂತರ 2009 ರಲ್ಲಿ ಮನಮೋಹನ ಸಿಂಗ್ ಅವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2012 ರಂದು ವಿದೇಶಾಂಗ ಸಚಿವ ಸ್ಥಾನಕ್ಕೂ ಕೃಷ್ಣ ಅವರು ರಾಜಿನಾಮೆ ನೀಡಿದ್ದರು.
ಕಾಂಗ್ರೆಸ್ಗೆ ರಾಜೀನಾಮೆ, ಬಿಜೆಪಿ ಸೇರ್ಪಡೆ
2017 ರಂದು ಕಾಂಗ್ರೆಸ್ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಎಸ್ಎಂ ಕೃಷ್ಣ 2017 ರಲ್ಲೇ ಬಿಜೆಪಿ ಪಕ್ಷಕ್ಕೆ ಎಸ್.ಎಂ.ಕೃಷ್ಣ ಸೇರ್ಪಡೆಯಾಗಿದ್ದರು. 2022 ಜನವರಿ 7 ರಂದು ಎಸ್ಎಂ ಕೃಷ್ಣ ತಮ್ಮ 60 ವರ್ಷಗಳ ಸುದೀರ್ಘ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ