ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ನಾಮ ನಿರ್ದೇಶನ ವಿರುದ್ಧ ಸಚಿವರಿಗೆ ಪತ್ರ
ಇತ್ತೀಚಿಗಷ್ಟೇ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಆರು ಜನ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನಗೊಳಿಸಲಾಗಿತ್ತು. ಈ ನಾಮ ನಿರ್ದೇಶನದ ಹಿಂದೆ ರಾಜಕೀಯ ವಾಸನೆ ಇರುವುದನ್ನು ಧಾರವಾಡದ ಸಾಮಾಜಿಕ ಹೋರಾಟಗಾರ ನಾಗರಾಜ್ ಹೊಂಗಲ್ ಪತ್ತೆ ಹಚ್ಚಿದ್ದಾರೆ.
ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಒಂದಲ್ಲಾ ಒಂದು ವಿವಾದದಲ್ಲಿ ಇದ್ದೇ ಇರುತ್ತದೆ. ಕೆಲವೊಮ್ಮೆ ಹಗರಣ, ಕೆಲವೊಮ್ಮೆ ಅಕ್ರಮ, ಮತ್ತೆ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯ. ಹೀಗೆ ಯಾವುದಾದರೂ ಒಂದು ವಿಚಾರವಾಗಿ ಈ ವಿಶ್ವವಿದ್ಯಾಲಯ ವಿವಾದದಲ್ಲಿ ಇರುತ್ತದೆ. ಈ ನಡುವೆಯೇ ಇದೀಗ ಮತ್ತೊಂದು ವಿವಾದ ಎದ್ದಿದೆ. ಅದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರ. ಈ ವಿಚಾರವಾಗಿಯೇ ಇದೀಗ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣಗೆ ಧಾರವಾಡದ ಸಾಮಾಜಿಕ ಹೋರಾಟಗಾರರೊಬ್ಬರು ಪತ್ರವನ್ನು ಬರೆದ್ದಾರೆ.
ಪತ್ರ ಬರೆದಿದ್ದು ಯಾರು? ಅದರಲ್ಲೇನಿದೆ? ಇತ್ತೀಚಿಗಷ್ಟೇ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಆರು ಜನ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನಗೊಳಿಸಲಾಗಿತ್ತು. ಈ ನಾಮ ನಿರ್ದೇಶನದ ಹಿಂದೆ ರಾಜಕೀಯ ವಾಸನೆ ಇರುವುದನ್ನು ಧಾರವಾಡದ ಸಾಮಾಜಿಕ ಹೋರಾಟಗಾರ ನಾಗರಾಜ್ ಹೊಂಗಲ್ ಪತ್ತೆ ಹಚ್ಚಿದ್ದಾರೆ. ಅಲ್ಲದೇ ನಾಮ ನಿರ್ದೇಶನ ಕೂಡ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ- 2000 ಸ್ಪಷ್ಟ ಉಲ್ಲಂಘನೆಯಾಗಿದೆ ಎನ್ನುವುದು ನಾಗರಾಜರವರ ಆರೋಪ.
ಹೀಗಾಗಿ ನಾಮ ನಿರ್ದೇಶನವನ್ನೇ ರದ್ದುಪಡಿಸುವಂತೆ ಆಗ್ರಹಿಸಿ ಡಿಸಿಎಂ ಅಶ್ವತ್ಥ್ ನಾರಾಯಣ ನಾಗರಾಜ್ ಹೊಂಗಲ್ ಪತ್ರ ಬರೆದಿದ್ದಾರೆ. ಇತ್ತೀಚಿಗಷ್ಟೇ ರಾಜ್ಯ ಸರಕಾರ ಜಯಪ್ರಕಾಶ ಬಾದಾಮಿ, ಪ್ರಕಾಶ ರಾಯ್ಕರ್, ಸ್ನೇಹಾ ಜೋಶಿ, ಶಾಂತನಗೌಡ ಜಕ್ಕನಗೌಡರ್, ಸುಧೀಂದ್ರ ದೇಶಪಾಂಡೆ, ರವಿಕುಮಾರ್ ಮಾಳಿಗೇರ್ರನ್ನು ನಾಮ ನಿರ್ದೇಶನಗೊಳಿಸಿ ಆದೇಶ ಮಾಡಿತ್ತು. ಇದೇ ಆದೇಶದ ವಿರುದ್ಧ ಇದೀಗ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ತಿರುಗಿ ಬಿದ್ದಿದ್ದಾರೆ.
ನಿಯಮಗಳಲ್ಲಿ ಇರುವುದಾದರೂ ಏನು? ವಿಶ್ವವಿದ್ಯಾಲಯದಲ್ಲಿ ಏನೇ ಮಾಡಿದರೂ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ-2000ರ ಅಡಿಯೇ ಮಾಡಬೇಕು. ಆದರೆ ಈ ನಾಮ ನಿರ್ದೇಶನದ ವೇಳೆ ಇದರಲ್ಲಿರುವ ಯಾವುದೇ ಅಂಶಗಳನ್ನು ಸರಕಾರ ಪಾಲಿಸಿಯೇ ಇಲ್ಲ. ಸರಕಾರ ನಿಯಮಾವಳಿಗಳನ್ನು ಉಲ್ಲಂಘಿಸಿ ಆರು ಜನ ಸದಸ್ಯರ ನಾಮಕರಣ ಮಾಡಿದೆ. ರಾಜ್ಯ ವಿಶ್ವವಿದ್ಯಾಲಯದ ಕಾಯ್ದೆ -2000 ಅಡಿಯಲ್ಲಿ ಸೆಕ್ಷನ್ 28 (1) ಜಿ ಪ್ರಕಾರ ಶಿಕ್ಷಣ ತಜ್ಞರು, ವಿವಿಧ ರಂಗಗಳ ಪದವೀಧರ ಪರಿಣಿತರನ್ನು ನಾಮಕರಣ ಮಾಡಬೇಕು. ಆದರೆ ಇಂಥಹ ಯಾವುದೇ ನಿಯಮಗಳು ಆರು ಸದಸ್ಯರಿಗೆ ಅನ್ವಯಿಸಿಯೇ ಇಲ್ಲ ಎಂದು ನಾಗರಾಜ್ ಹೊಂಗಲ್ ಆರೋಪಿಸಿದ್ದಾರೆ.
ವಿಶ್ವ ವಿದ್ಯಾಲಯದ ಆಡಳಿತದಲ್ಲಿ ಸಿಂಡಿಕೇಟ್ನ ಪಾತ್ರ ಅತಿ ಪ್ರಮುಖವಾಗಿರುತ್ತದೆ. ಇಂತಹ ಸಂಸ್ಥೆಗೆ ನಾಮಕರಣದ ವಿಚಾರದಲ್ಲಿ ಸರಕಾರ ನಿಯಮಾನುಸಾರ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಇದರ ಪರಿಣಾಮ ಒಟ್ಟಾರೆ ವಿದ್ಯಾರ್ಥಿಗಳ ಮೇಲೆ ಆಗುತ್ತದೆ ಎನ್ನುವುದು ನಾಗರಾಜ್ರವರ ಅಸಮಾಧಾನ. ಅಲ್ಲದೇ ಸದ್ಯಕ್ಕೆ ನಾಮ ನಿರ್ದೇಶನಗೊಂಡ ಸದಸ್ಯರು ಪದವಿ ಪೂರೈಸಿದ್ದನ್ನು ಬಿಟ್ಟರೆ ಸೆಕ್ಷನ್ 28 (1) ಜಿ ದಲ್ಲಿ ಉಲ್ಲೇಖಿಸಿದಂತೆ ಇವರು ಶಿಕ್ಷಣ ತಜ್ಞರೂ ಅಲ್ಲ ಮತ್ತು ಇವರಿಗೆ ಇತರೆ ರಂಗಗಳಲ್ಲಿ ಅನುಭವವೂ ಇಲ್ಲ ಎಂದು ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧನ ಸಹಾಯ ಆಯೋಗದ ನೀತಿಗೆ ವಿರುದ್ಧ ಆರು ಸದಸ್ಯರ ನಾಮ ನಿರ್ದೇಶನ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನೀತಿ ನಿಯಮಾವಳಿಗಳಿಗೂ ವಿರುದ್ಧವಾಗಿದೆಯಂತೆ. ವಿಶ್ವವಿದ್ಯಾಲಯದ ದಿನ ನಿತ್ಯದ ಆಡಳಿತ ಪಾರದರ್ಶಕವಾಗಿರಬೇಕು ಮತ್ತು ರಾಜಕೀಯ ಶಕ್ತಿಗಳ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು. ಇದಕ್ಕಾಗಿ ನಾಮಕರಣಗೊಳ್ಳುವ ಸದಸ್ಯರ ಹಿನ್ನೆಲೆ ರಾಜಕೀಯ ಪ್ರೇರಿತವಾಗಿರಬಾರದು. ವಿಪರ್ಯಾಸದ ಸಂಗತಿ ಎಂದರೆ ಸದರಿ ನಾಮ ನಿರ್ದೇಶನಗಳಲ್ಲಿ ರಾಜಕೀಯ ಪ್ರಭಾವ ಎದ್ದು ಕಾಣುತ್ತಿದೆ ಎನ್ನುವ ನಾಗರಾಜ್ aವರು ಪರೋಕ್ಷವಾಗಿ ಬಿಜೆಪಿ ಮೇಲೆ ಆರೋಪ ಮಾಡಿರುವುದು ತಿಳಿದು ಬರುತ್ತದೆ. ರಾಜಕೀಯ ಹಿನ್ನೆಲೆಯಿಂದ ಬಂದವರು ಪಕ್ಷಪಾತ ಧೋರಣೆ ಅನುಸರಿಸುವುದು ಸಾಮಾನ್ಯ. ಇದರಿಂದ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಸಹ ಮುಕ್ತವಾಗಿ ಆಡಳಿತ ನಡೆಸುವುದು ಕಷ್ಟವಾಗುತ್ತದೆ. ಹೀಗಾದಲ್ಲಿ ಇಡೀ ವಿಶ್ವವಿದ್ಯಾಲಯವೇ ಸಮಸ್ಯೆಗೆ ಸಿಲುಕುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರಕಾರ ಮುಂದೇನು ಮಾಡಬಹುದು? ಇಂಥ ವೇಳೆ ರಾಜ್ಯ ಸರಕಾರಕ್ಕೆ ಈ ಆದೇಶವನ್ನು ಮರಳಿ ಪಡೆಯಲು ಅವಕಾಶವಿದೆ. ಸಾಮಾನ್ಯವಾಗಿ ಸರಕಾರಗಳು ಬದಲಾದ ಕೂಡಲೇ ತಮಗೆ ಬೇಕಾದವರಿಗೆ ಮಣೆ ಹಾಕುವುದು ಸಾಮಾನ್ಯ. ಇಲ್ಲಿಯೂ ಅದೇ ರೀತಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಂದು ವೇಳೆ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ನ ಆಡಳಿತ ಪಾರದರ್ಶಕವಾಗಿ ನಡೆಯಬೇಕು ಎಂದಾದರೆ ಸರಕಾರವು ವಿ.ವಿ. ಕಾಯ್ದೆ ಸೆಕ್ಷನ್ 39 (1) (3) ರ ಪ್ರಕಾರ ನಾಮ ನಿರ್ದೇಶನಗಳನ್ನು ವಾಪಸ್ ಪಡೆಯಬೇಕು ಎಂದು ನಾಗರಾಜ ಸರಕಾರವನ್ನು ಆಗ್ರಹಿಸಿದ್ದಾರೆ. ತಕ್ಷಣವೇ ಸದರಿ ನಾಮ ನಿರ್ದೇಶನ ವಿಚಾರದಲ್ಲಿ ಸರಕಾರ ಮಧ್ಯ ಪ್ರವೇಶಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿ ಮಾಡಿದ ನಾಮ ನಿರ್ದೇಶನಗಳನ್ನು ರದ್ದುಪಡಿಸಬೇಕು ಮತ್ತು ನಿಯಮಾನುಸಾರ ಶಿಕ್ಷಣ ತಜ್ಞರನ್ನು ನಾಮಕರಣ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ನಾಗರಾಜ್ರವರು ರಾಜ್ಯಪಾಲರಿಗೂ ಕೂಡ ಪತ್ರ ರವಾನಿಸಿದ್ದಾರೆ.
ಶರವೇಗದಲ್ಲಿ ಅವಳಿ ನಗರ ಸ್ಮಾರ್ಟ್ ಸಿಟಿ ಯೋಜನೆ: ಅಂತಿಮ ಹಂತಕ್ಕೆ ತಲುಪಿದ ಪಜಲ್ ಪಾರ್ಕಿಂಗ್ ಕಾಮಗಾರಿ