ಬೆಂಗಳೂರಿನಲ್ಲಿ ಕೆಲ ದಿಟ್ಟ ಕ್ರಮಕೈಗೊಂಡ ಪೊಲೀಸರು: ವೀಕೆಂಡ್​ನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಕಡ್ಡಾಯ

ಕರ್ನಾಟಕದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ರೋಡ್ ರೇಜ್ ಕೇಸ್​ಗಳು ಹೆಚ್ಚಳವಾಗುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ. ವೀಕೆಂಡ್​ನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಕಡ್ಡಾಯ ಮಾಡಿದ್ದು, ರಾತ್ರಿ ಕರ್ತವ್ಯಕ್ಕೆ ಮಹಿಳಾ ಸಿಬ್ಬಂದಿ ನಿಯೋಜಿಸಲು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಕೆಲ ದಿಟ್ಟ ಕ್ರಮಕೈಗೊಂಡ ಪೊಲೀಸರು: ವೀಕೆಂಡ್​ನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಕಡ್ಡಾಯ
ಬೆಂಗಳೂರಿನಲ್ಲಿ ಕೆಲ ದಿಟ್ಟ ಕ್ರಮಕೈಗೊಂಡ ಪೊಲೀಸರು, ವೀಕೆಂಡ್​ನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಕಡ್ಡಾಯ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 21, 2024 | 10:52 PM

ಬೆಂಗಳೂರು, ಆಗಸ್ಟ್​ 21: ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ರೋಡ್ ರೇಜ್ ಕೇಸ್ ಹೆಚ್ಚಳ ಹಿನ್ನೆಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು (police) ಕ್ರಮಕ್ಕೆ ಮುಂದಾಗಿದ್ದಾರೆ. ಪ್ರತಿ ಠಾಣೆಯಲ್ಲೂ ರಾತ್ರಿ ಕರ್ತವ್ಯಕ್ಕೆ ಇಬ್ಬರು ಮಹಿಳಾ ಹೆಚ್‌ಸಿ, ಪಿಸಿ ನಿಯೋಜನೆ ಮತ್ತು ರೋಡ್ ರೇಜ್ ಕೇಸ್ ನಿಯಂತ್ರಣಕ್ಕೆ ಪ್ರತಿ ಗುರುವಾರದಿಂದ ಭಾನುವಾರದವರೆಗೂ ಡ್ರಂಕ್ & ಡ್ರೈವ್ ಟೆಸ್ಟ್‌ಗೆ ಸೂಚನೆ ನೀಡಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ನಗರದ ಎಲ್ಲಾ ಠಾಣೆಯ ಪಿಎಸ್‌ಐಗಳಿಂದ ವಿಶೇಷ ಕಾರ್ಯಾಚರಣೆ ಮಾಡುವುದು. ಸಿಸಿಟಿವಿ ಇರುವ ಜಂಕ್ಷನ್‌ಗಳಲ್ಲಿ ಪರಿಶೀಲಿಸಿ ಪ್ರಕರಣ ದಾಖಲಿಸುವಾಗ ಮಹಿಳಾ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಮುಡಾ ಕೇಸ್​: ದಾಖಲೆಯನ್ನು ತಿದ್ದಲಾಗಿದೆ ಎಂದ ದೂರುದಾರ, ಇದಕ್ಕೆ ನಗರಾಭಿವೃದ್ಧಿ ಸಚಿವ ಹೇಳಿದ್ದಿಷ್ಟು

ಇನ್ನು ರಾತ್ರಿ ವೇಳೆ ಸಂಚಾರ ದಟ್ಟಣೆ ಹಾಗೂ ಅಪಘಾತ ಕೇಸ್ ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲಿ ರಾತ್ರಿ ವೇಳೆ ಅಲರ್ಟ್‌ ಆಗಿರುವಂತೆ ಸಂಚಾರ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಖಡಕ್ ಸೂಚನೆ ನೀಡಲಾಗಿದೆ.

ಸೂಚನೆಗಳು ಹೀಗಿವೆ

  • ರಾತ್ರಿ ಪಾಳಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮೇಲಾಧಿಕಾರಿಗಳ ಸೂಚನೆ ಪಾಲಿಸಬೇಕು.
  • ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವವರಿಗೆ ಎರಡು ಬೈಕ್ ಒದಗಿಸಬೇಕು.
  • ಮಹಿಳೆಯರು ಇದ್ದ ವಾಹನ ಅಪಘಾತದ ಕುರಿತು ದೂರುಗಳು ಬಂದಲ್ಲಿ ತಕ್ಷಣ ಸ್ಪಂದಿಸಬೇಕು. ಮಹಿಳಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಳ್ಳಬೇಕು.
  • ಅಪಘಾತವಾದಾಗ ಹಿರಿಯ ನಾಗರೀಕರು, ಮಕ್ಕಳು, ಮಹಿಳೆಯರಿದ್ದಲ್ಲಿ ತುರ್ತಾಗಿ ಸ್ಪಂದಿಸಬೇಕು. ಗಾಯಾಳುವಿದ್ದಲ್ಲಿ ಆಸ್ಪತ್ರೆಗೆ ಸಾಗಿಸಬೇಕು. ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡಬೇಕು.
  • ರಾತ್ರಿ ವೇಳೆ ಗಣ್ಯವ್ಯಕ್ತಿಗಳ ಸಂಚಾರವಿದ್ದಲ್ಲಿ ಯಾವುದೇ ತೊಂದರೆಯಾಗದ ರೀತಿ ಕ್ರಮ.
  • ರಾತ್ರಿ ವೇಳೆ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ವಾಹನಗಳು ಸಾಗುವ ಮಾರ್ಗದಲ್ಲಿ ಆದ್ಯತೆ ನೀಡಬೇಕು. ಸುಗಮ ಸಂಚಾರಕ್ಕೆ ಕ್ರಮವಹಿಸಬೇಕು.
  • ರಾತ್ರಿ ವೇಳೆ ಹಾಗೂ ಬೆಳಗಿನ ಜಾವದಲ್ಲಿ ವೀಲಿಂಗ್ ಮಾಡುವ ಸ್ಥಳಗಳು ಗುರುತಿಸಬೇಕು. ಮುಂಜಾಗ್ರತಾ ಕ್ರಮಗಳೊಂದಿಗೆ ನಿಗಾವಹಿಸುವುದು.
  • ರಾತ್ರಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಠಾಣಾ ಸರಹದ್ದಿನಲ್ಲಿರುವ ಸಿಗ್ನಲ್ ಲೈಟ್‌ಗಳು, ವೆಲಿಕಾನ್ ಸಿಗ್ನಲ್​ಗಳು, ಸಿಸಿಟಿವಿ ಕ್ಯಾಮರಾಗಳು ಹಾಗೂ ಸರ್ಕಾರಿ ಸ್ವತ್ತುಗಳ ಬಗ್ಗೆ ಗಸ್ತು ವೇಳೆ ನಿಗಾವಹಿಸಬೇಕು.
  • ಠಾಣಾ ಸರಹದ್ದಿನಲ್ಲಿ ರಾತ್ರಿ ವೇಳೆ ತೆರೆದಿರುವ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್​ ಇತರೆ ಮನೋರಂಜನೆ ಸ್ಥಳಗಳಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ ವಹಿಸಬೇಕು.
  • ರಾತ್ರಿ ವೇಳೆ ಪ್ರಮುಖ ಜಂಕ್ಷನ್‌ಗಳಲ್ಲಿ ರಿಫ್ಲೆಕ್ಟಿವ್ ಜಾಕೆಟ್‌ಗಳನ್ನು‌ ಕಡ್ಡಾಯವಾಗಿ ಧರಿಸಿ ಕಾಣುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದು.
  • ರಾತ್ರಿ ವೇಳೆ ಯಾವುದಾದರೂ ಕಾರ್ಯಕ್ರಮಗಳು ಇವೆಯೇ? ವಿಐಪಿ, ವಿವಿಐಪಿ, ಹಿರಿಯ ಅಧಿಕಾರಿಗಳ ಪ್ರಕ್ರಿಯೆ ಬಗ್ಗೆ ತಿಳಿದಿರಬೇಕು. ಯಾವ ಮಾರ್ಗದಲ್ಲಿ ಬರುತ್ತಿದ್ದಾರೆ? ಕಾರ್ಯಕ್ರಮಕ್ಕೆ ಎಷ್ಟು ಜನ ಸೇರುತ್ತಾರೆ? ಕಾರ್ಯಕ್ರಮ ಸ್ಥಳಕ್ಕೆ ಪರ್ಯಾಯ ಮಾರ್ಗಗಳು ಇವೆಯೇ? ಕಾರ್ಯಕ್ರಮದಿಂದ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇವೆಯೆ? ಇದನ್ನು ಖಚಿತಪಡಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು.
  • ರಾತ್ರಿ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ದೂರುಗಳು ಬರುತ್ತವೆ. ಮಹಿಳೆಯರಿಂದ ದೂರು ಬಂದಲ್ಲಿ ವಿಳಂಬ ಮಾಡಬಾರದು. ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ದೂರುದಾರರಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ಅಗತ್ಯವಿದ್ದಲ್ಲಿ ದೂರುದಾರರನ್ನು ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ಕರೆದುಕೊಂಡು ಹೋಗಬೇಕು.
  • ರಾತ್ರಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಎಚ್ಚರದಿಂದರಬೇಕು. ಠಾಣಾ ಸರಹದ್ದಿನ ಕ್ರೇನ್ ಮಾಲೀಕರು, ಸ್ವಯಂ ಸೇವಕರು, ರಾಜಕೀಯ ಮುಖಂಡರುಗಳು, ಆಟೋ ಚಾಲಕರು, ಆಸ್ಪತ್ರೆಯ ಮೇಲ್ವಿಚಾರಕರುಗಳು, ಆಂಬುಲೆನ್ಸ್ ಚಾಲಕರುಗಳು, ಸಿವಿಲ್ ಡಿಫೆನ್ಸ್ ರವರ ನಂಬ‌ರ್ ಇಟ್ಟುಕೊಳ್ಳಬೇಕು. ಇದರಿಂದ ತುರ್ತು ಸಮಯದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯವಾಗುತ್ತದೆ.
  • ರಿಂಗ್ ರಸ್ತೆಗಳಲ್ಲಿ ಬರುವ ಸಂಚಾರ ಪೊಲೀರು ಭಾರಿ ವಾಹನಗಳ ಮೇಲೆ ಗಮನವಿಡಬೇಕು. ಪೀಕ್ ಹವರ್ಸ್ ಹೊರತುಪಡಿಸಿ ಉಳಿದ ಸಮಯದಲ್ಲಿ ಭಾರಿ ವಾಹನಗಳು ಸಂಚರಿಸುವಂತೆ ಕ್ರಮ ವಾಹನಗಳು ಕೆಟ್ಟು ನಿಂತಲ್ಲಿ ಅದನ್ನು ತೆರವುಗೊಳಿಸಬೇಕು. ಕ್ರೇನ್‌ಗಳ ಅಥವಾ ಟೋಯಿಂಗ್ ವಾಹನಗಳ ಬಗ್ಗೆ ಮಾಹಿತಿಯನ್ನು ಇಟ್ಟುಕೊಳ್ಳಬೇಕು.
  • ರಾತ್ರಿ ವೇಳೆ ಅಪಘಾತವಾದಗ ಬೇಗ ಆಸ್ಪತ್ರೆಗೆ ಸೇರಿಸಬೇಕು. ಜೊತೆಗೆ ಆರೋಪಿ ಪತ್ತೆ ಬಗ್ಗೆಯೂ ನಿಗಾ ವಹಿಸಬೇಕು. ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಅಲರ್ಟ್ ಆಗಿರಬೇಕು. ವೈರ್‌ಲೆಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿಟ್ಟುಕೊಳ್ಳಬೇಕು. ಕಂಟ್ರೋಲ್ ರೂಂ ಸಂದೇಶಗಳಿಗೆ ಸ್ಪಂದಿಸಿ ಅಗತ್ಯ ಕ್ರಮಕೈಗೊಳ್ಳಬೇಕು.
  • ಮಳೆಗಾಲದಲ್ಲಿ ಹೆಚ್ಚಾಗಿ ಅಪಘಾತವಾಗುತ್ತವೆ. ಅಂತಹ ಸ್ಥಳಗಳು ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಇಲ್ಲದಿರುವ ಸ್ಥಳವನ್ನು ಗುರುತಿಸಬೇಕು. ಸಂಬಂಧಪಟ್ಟ ಇಲಾಖೆಯ ಜೊತೆಗೆ ಸಮನ್ವಯ ಸಾಧಿಸಿಬೇಕು. ಸುರಕ್ಷಿತ ಕ್ರಮಗಳನ್ನು ಕ್ರಮಕೈಗೊಂಡು ಮೇಲಾಧಿಕಾರಿಗಳಿಗೆ ವರದಿ ನೀಡಬೇಕು.
  • ಮರಗಳು ಬಿದ್ದ ಮಾಹಿತಿ ಬಂದಲ್ಲಿ ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಬೇಕು. ಬಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:05 pm, Wed, 21 August 24