AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್: ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಅರೆಸ್ಟ್

SSLC ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ 8 ಆರೋಪಿಗಳನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ತುಮಕೂರು, ರಾಮನಗರ, ಕಲಬುರಗಿ ಜಿಲ್ಲೆಗಳ ಶಾಲೆಗಳ ಶಿಕ್ಷಕರು, ಸಹಾಯಕ ಶಿಕ್ಷಕರು, ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಶಾಮೀಲಾಗಿದ್ದರು.

SSLC ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್: ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಅರೆಸ್ಟ್
ಸಾಂದರ್ಭಿಕ ಚಿತ್ರ
Ganapathi Sharma
|

Updated on: Jan 12, 2026 | 9:41 AM

Share

ಬೆಂಗಳೂರು, ಜನವರಿ 12: ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ (SSLC Preparatory Exam) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಟ್ಟು ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು (Bangalore) ಉತ್ತರ ವಿಭಾಗದ ಸೈಬರ್ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಬಂಧಿತರಲ್ಲಿ ವಿವಿಧ ಜಿಲ್ಲೆಗಳ ಶಾಲಾ ಶಿಕ್ಷಕರು, ಸಹ ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಸೇರಿದ್ದಾರೆ.

ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವುದು ಪತ್ತೆಯಾಗಿತ್ತು. ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟಿತ್ತು.

ಪೊಲೀಸರ ಮಾಹಿತಿ ಪ್ರಕಾರ, ತುಮಕೂರು, ರಾಮನಗರ ಮತ್ತು ಕಲಬುರಗಿ ಜಿಲ್ಲೆಗಳ ಕೆಲವು ಶಾಲೆಗಳ ಶಿಕ್ಷಕರು ಈ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿರುವುದು ಪತ್ತೆಯಾಗಿದೆ. ತುಮಕೂರಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ವಿ.ಡಿ. ಗಿರೀಶ್, ರಾಮನಗರದ ಸಹ ಶಿಕ್ಷಕ ಅಮ್ಜದ್ ಖಾನ್ ಸೇರಿದಂತೆ ಕಲಬುರಗಿ ಜಿಲ್ಲೆಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಬಂಧನಕ್ಕೊಳಗಾಗಿದ್ದಾರೆ.

ಬಂಧಿತರ ಪೈಕಿ ಕಲಬುರಗಿ ಜಿಲ್ಲೆಯ ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ, ಶಿಕ್ಷಕ ಮೊಹಮ್ಮದ್ ಸಿರಾಜುದ್ದೀನ್, ಸಹ ಶಿಕ್ಷಕಿ ಫಾಹ್ಮಿದಾ ಹಾಗೂ ಶಿಕ್ಷಕಿ ಫರ್ಜಾನಾ ಬೇಗಂ ಇದ್ದಾರೆ. ಇವರ ಜೊತೆಗೆ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಎಸ್​ಎಸ​ಲ್​ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ವಿವರ

  • ವಿ.ಡಿ. ಗಿರೀಶ್ – ಮುಖ್ಯೋಪಾಧ್ಯಾಯ, ತುಮಕೂರು
  • ಅಮ್ಜದ್ ಖಾನ್ – ಸಹ ಶಿಕ್ಷಕ, ರಾಮನಗರ
  • ಶಾಹಿದಾ ಬೇಗಂ – ಮುಖ್ಯ ಶಿಕ್ಷಕಿ, ಕಲಬುರಗಿ
  • ಫಾಹ್ಮಿದಾ – ಸಹ ಶಿಕ್ಷಕಿ, ಕಲಬುರಗಿ
  • ಮೊಹಮ್ಮದ್ ಸಿರಾಜುದ್ದೀನ್ – ಶಿಕ್ಷಕ, ಕಲಬುರಗಿ
  • ಫರ್ಜಾನಾ ಬೇಗಂ – ಶಿಕ್ಷಕಿ, ಕಲಬುರಗಿ
  • ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು

ಇದನ್ನೂ ಓದಿ: SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ

ಸದ್ಯ ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಯಾವ ರೀತಿಯಲ್ಲಿ ನಡೆದಿದೆ, ಇನ್ನಿತರರು ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಈ ಪ್ರಕರಣ ರಾಜ್ಯಾದ್ಯಂತ ಆತಂಕ ಮೂಡಿಸಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ