ದಿಕ್ಕು ತಪ್ಪಿದ ಶಿಕ್ಷಣ ವ್ಯವಸ್ಥೆ; ಗುರು ಇಲ್ಲದೆ ಗುರಿ ಇಲ್ಲದೆ ಕುರಿ ಮಂದೆ ಹಿಂದೆ ಓಡುತ್ತಿದ್ದಾರೆ ಮಕ್ಕಳು, ಸರಿದಾರಿ ತೋರುವವರಾರು?
ನಂಜನಗೂಡಿನ ಮಡುವಿನಹಳ್ಳಿ ಗ್ರಾಮ ಇಲ್ಲಿ ಒಂದು ಉದಾಹರಣೆಯಾಗಿದ್ದು, ಇಡೀ ರಾಜ್ಯದಲ್ಲಿ ಇಂತಹ ಸಾವಿರಾರು ಅಸಹಾಯಕತೆಯ ಘಟನೆಗಳು ಸಿಗುತ್ತವೆ. ಇನ್ನೊಂದೆಡೆ ಸಾಲ ಸೂಲ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಮಕ್ಕಳು ಇನ್ನೇನು ಕೆಲಸ ಹಿಡಿದು ಮನೆ ಬೆಳಗುತ್ತಾರೆ ಎಂಬ ಆಸೆಯಲ್ಲಿದ್ದವರು ಕೂಡಾ ಶಿಕ್ಷಣದ ಸಾಲವನ್ನೂ ತೀರಿಸಲಾಗದೆ ಕಂಗೆಟ್ಟು ಕುಳಿತಿದ್ದಾರೆ.
ಮೈಸೂರು: ಕೊರೊನಾ ಭಾರತಕ್ಕೆ ಕಾಲಿಟ್ಟು ಇಲ್ಲಿನ ವ್ಯವಸ್ಥೆಗಳನ್ನು ಬುಡಮೇಲು ಮಾಡಿ ಒಂದು ವರ್ಷಕ್ಕೂ ಅಧಿಕ ಸಮಯ ಆಗಿಹೋಗಿದೆ. ಕೊರೊನಾದಿಂದ ಜೀವ ಹೋಗಬಾರದೆಂದು ಲಾಕ್ಡೌನ್ ವಿಧಿಸುವ ಅನಿವಾರ್ಯತೆ ಎದುರಾಯಿತಾದರೂ ಅದರಿಂದಾಗಿ ಬಹುತೇಕ ಜೀವನೋಪಾಯ ಮಾರ್ಗಗಳು ಅಳಿಸಿ ಹೋಗಿವೆ. ಮೊದಲ ಅಲೆಯ ಹೊಡೆತದಿಂದ ಹಾಗೋ ಹೀಗೋ ಪಾರಾದೆವೆಂದು ಚೇತರಿಸಿಕೊಳ್ಳುವಷ್ಟರಲ್ಲಿ ಎರಡನೇ ಅಲೆ ಆಘಾತವನ್ನುಂಟುಮಾಡಿದೆ. ದುಡಿಯುತ್ತಿದ್ದ ಕೈಗಳು ಉದ್ಯೋಗ ಕಳೆದುಕೊಂಡವು, ಉದ್ಯೋಗಕ್ಕಾಗಿ ಅರಸುತ್ತಿದ್ದವರು ನಿರುದ್ಯೋಗಿಗಳಾಗಿಯೇ ಉಳಿದರು, ಆಗಷ್ಟೇ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಸಂಬಳ ಪಡೆಯುವ ಬಯಕೆ ಕನಸಾಯಿತು, ನಾವಂತೂ ಕಲಿಯಲಿಲ್ಲ ಮಕ್ಕಳಾದರೂ ಉತ್ತಮ ವಿದ್ಯಾಭ್ಯಾಸ ಪಡೆಯಲಿ ಎಂದು ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದ ಪೋಷಕರ ಆಸೆಗೂ ತಣ್ಣೀರು ಬಿತ್ತು. ಹೀಗೆ ಕೊರೊನಾ ಇಡೀ ವ್ಯವಸ್ಥೆಯೇ ದಿಕ್ಕೆಟ್ಟು ಹೋಗುವಂತೆ ಮಾಡಿದ್ದು, ಅದರ ಪರಿಣಾಮ ಇನ್ನೂ ಹತ್ತಾರು ವರ್ಷಗಳ ಕಾಲ ನಮ್ಮನ್ನು ಕಾಡಲಿದೆ. ಕೊರೊನಾದಿಂದ ಶಾಲಾ ಕಾಲೇಜುಗಳು ಮುಚ್ಚಿದ ಪರಿಣಾಮ ಎಷ್ಟೋ ಕಡೆಗಳಲ್ಲಿ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಇದಕ್ಕೊಂದು ತಾಜಾ ನಿದರ್ಶನ ಇಲ್ಲಿದೆ.
ಕಳೆದ ವರ್ಷ ಕೊರೊನಾ ಉಲ್ಬಣಿಸಲು ಆರಂಭಿಸಿದಾಗ ಮುಚ್ಚಿದ ಶಾಲಾ ಕಾಲೇಜುಗಳು ಮಧ್ಯೆ ಕೆಲ ತಿಂಗಳ ಕಾಲ ತೆರೆಯಿತಾದರೂ ಕಡ್ಡಾಯ ಹಾಜರಾತಿ ಇರಲಿಲ್ಲ. ಅದಾದ ನಂತರ ಪರಿಸ್ಥಿತಿ ಇನ್ನೇನು ಹತೋಟಿಗೆ ಬಂತು ಎನ್ನುವಷ್ಟರಲ್ಲಿ ಎರಡನೇ ಅಲೆಯ ಕಾರಣ ಮತ್ತೆ ತರಗತಿಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಾಲೆ ಇಲ್ಲದಿದ್ದರೂ ಆನ್ಲೈನ್ ತರಗತಿ ಮೂಲಕ ಮಕ್ಕಳನ್ನು ತಲುಪುವ ಪ್ರಯತ್ನ ಆಗುತ್ತಿದೆಯಾದರೂ ಅದು ಹಳ್ಳಿಗಾಡಿನ ಮಕ್ಕಳಿಗೆ ಕೈಗೆಟುಕದ ಸೌಲಭ್ಯ. ರಾಜ್ಯದ ಬಹುಪಾಲು ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಂವಹನ ನಡೆಸುವುದಕ್ಕೂ ದೂರವಾಣಿ ಸಂಪರ್ಕ ಸುಸೂತ್ರವಾಗಿ ಲಭ್ಯವಿಲ್ಲ. ಹೀಗಿರುವಾಗ ಅಂತರ್ಜಾಲವನ್ನು ಬಳಸಿಕೊಂಡು ಮಕ್ಕಳು ಶಿಕ್ಷಣ ಪಡೆಯಲಿ ಎಂಬುದು ವ್ಯಂಗ್ಯವಾಗುತ್ತದೆ. ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ವಿದ್ಯಾರ್ಥಿಗಳ ಪರಿಸ್ಥಿತಿಯೂ ಇದೇ ಆಗಿದೆ.
ಶಾಲೆಗೆ ಹೋಗಬೇಕಿದ್ದ ವಿದ್ಯಾರ್ಥಿಗಳು ಪುಸ್ತಕ, ಪೆನ್ನು ಬದಿಗಿಟ್ಟು ಕುರಿ ಮೇಯಿಸಲು ಮುಂದಾಗಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಸಿಕ್ಕ ನಂತರ ಶಿಕ್ಷಣದಿಂದ ವಿಮುಖರಾಗುತ್ತಿರುವ ಈ ಮಕ್ಕಳಿಗೆ ಆನ್ಲೈನ್ ಶಿಕ್ಷಣವೂ ಸಿಗದ ಕಾರಣ ಓದು, ಬರಹದಿಂದ ದೂರವಾಗುತ್ತಿದ್ದಾರೆ. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಉತ್ತಮ ಸ್ಥಾನಕ್ಕೆ ಏರುವುದನ್ನು ನೋಡಬೇಕೆಂಬ ಹಂಬಲದಲ್ಲಿದ್ದ ಪೋಷಕರು ಸಹ ಅಸಹಾಯಕರಾಗಿದ್ದಾರೆ. ಓದಿನಲ್ಲಿ ಚುರುಕಿದ್ದ ಮಕ್ಕಳೂ ಕಳೆದ ಒಂದು ವರ್ಷದಲ್ಲಿ ಬರೀ ಆಟ, ತಮಾಷೆ, ಚೇಷ್ಟೆ ಎಂದು ಓದಿನಿಂದ ದೂರವುಳಿದ ಕಾರಣ ಹೆತ್ತವರಿಗೆ ಮಕ್ಕಳ ಭವಿಷ್ಯ ಮುಂದೇನು ಎಂದು ಯೋಚನೆ ಶುರುವಾಗಿದೆ.
ನಂಜನಗೂಡಿನ ಮಡುವಿನಹಳ್ಳಿ ಗ್ರಾಮ ಇಲ್ಲಿ ಒಂದು ಉದಾಹರಣೆಯಾಗಿದ್ದು, ಇಡೀ ರಾಜ್ಯದಲ್ಲಿ ಇಂತಹ ಸಾವಿರಾರು ಅಸಹಾಯಕತೆಯ ಘಟನೆಗಳು ಸಿಗುತ್ತವೆ. ಇನ್ನೊಂದೆಡೆ ಸಾಲ ಸೂಲ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಮಕ್ಕಳು ಇನ್ನೇನು ಕೆಲಸ ಹಿಡಿದು ಮನೆ ಬೆಳಗುತ್ತಾರೆ ಎಂಬ ಆಸೆಯಲ್ಲಿದ್ದವರು ಕೂಡಾ ಶಿಕ್ಷಣದ ಸಾಲವನ್ನೂ ತೀರಿಸಲಾಗದೆ ಕಂಗೆಟ್ಟು ಕುಳಿತಿದ್ದಾರೆ. ಕೊರೊನಾ ಉಂಟುಮಾಡಿದ ಅವ್ಯವಸ್ಥೆಯಿಂದ ದಾರಿ ತಪ್ಪಿರುವ ಶಿಕ್ಷಣ ವ್ಯವಸ್ಥೆ ಇಡೀ ಸಮಾಜದ ಮೇಲೆ ಬಹು ದೀರ್ಘಕಾಲದ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸರ್ಕಾರ ಕೂಡಲೇ ಎಚ್ಚೆತ್ತು ಇದಕ್ಕೊಂದು ಪರ್ಯಾಯ ಮಾರ್ಗ ರೂಪಿಸಬೇಕಿದೆ.