Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಆಯೋಗ ಸೂಚನೆ: ಅವಿರೋಧವಾಗಿ ಆಯ್ಕೆಯಾದ ಪಂಚಾಯತಿ ಸದಸ್ಯರಲ್ಲಿ ಶುರುವಾಯ್ತು ಟೆನ್ಶನ್

ರಾಜ್ಯ ಚುನಾವಣಾ ಆಯೋಗ ಅವಿರೋಧ ಆಯ್ಕೆಯ ಹಿಂದಿನ ಮಸಲಸತ್ತುಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಇದರಿಂದಾಗಿ ಆಯೋಗ ಕೈಗೊಳ್ಳುವ ಅಂತಿಮ ತಿರ್ಮಾನದ ಮೇಲೆ ಅವಿರೋಧವಾಗಿ ಆಯ್ಕೆಯಾಗಿರುವ ಸದಸ್ಯರ ಭವಿಷ್ಯ ನಿಂತಿದೆ.

ಚುನಾವಣಾ ಆಯೋಗ ಸೂಚನೆ: ಅವಿರೋಧವಾಗಿ ಆಯ್ಕೆಯಾದ ಪಂಚಾಯತಿ ಸದಸ್ಯರಲ್ಲಿ ಶುರುವಾಯ್ತು ಟೆನ್ಶನ್
ರಾಜ್ಯ ಚುನಾವಣಾ ಆಯೋಗ
Follow us
preethi shettigar
| Updated By: ಆಯೇಷಾ ಬಾನು

Updated on:Jan 04, 2021 | 7:22 AM

ರಾಯಚೂರು: ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದ ಪಂಚಾಯತಿ ಸದಸ್ಯರಲ್ಲಿ ಹೊಸ ಉದ್ವೇಗ ಶುರುವಾಗಿದ್ದು, ಅವಿರೋಧವಾಗಿ ಆಯ್ಕೆಯಾದ ಪಂಚಾಯತಿ ಸ್ಥಾನಗಳ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗ ರಾಯಚೂರು ಜಿಲ್ಲೆಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಅವಿರೋಧ ಆಯ್ಕೆ ಪರಿಗಣಿಸುವ ವಿಚಾರಕ್ಕೆ ಸಂಬಂಧಸಿದಂತೆ ರಾಜ್ಯ ಚುನಾವಣಾ ಆಯೋಗವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಪಂಚಾಯತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಂಗತಿಯನ್ನು ಆಯೋಗ ಗಂಭೀರವಾಗಿ ತೆಗೆದುಕೊಂಡಿದೆ. ಜಿಲ್ಲೆಯ 172 ಗ್ರಾಮ ಪಂಚಾಯತಿಯ 3428 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ ಚುನಾವಣೆಗೂ ಮುನ್ನವೇ ಜಿಲ್ಲೆಯಾದ್ಯಂತ 418 ಸದಸ್ಯರನ್ನ ಪಂಚಾಯತಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಪಂಚಾಯತಿ ಸದಸ್ಯರ ಅವಿರೋಧ ಆಯ್ಕೆ ವಿಚಾರದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ ಎಂಬ ಕೂಗು ಕೇಳಿ ಬರುತ್ತಿದ್ದು, ವಿಶೇಷವಾಗಿ ಹಣದ ಆಮಿಷಕ್ಕೆ ಒಳಗಾಗಿ ಪಂಚಾಯತಿ ಸ್ಥಾನಗಳನ್ನ ಭಾರಿ ಪ್ರಮಾಣದಲ್ಲಿ ಹರಾಜು ಹಾಕುವ ಮೂಲಕ ಸದ್ಯರನ್ನ ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಅವಿರೋಧವಾಗಿ ಆಯ್ಕೆಯಾಗಿರುವ ಸದಸ್ಯರ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ರಾಯಚೂರು ಜಿಲ್ಲಾಡಳಿತಕ್ಕೆ ಆಯೋಗ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ 418 ಜನ ಗ್ರಾಮ ಪಂಚಾಯತಿ ಸದಸ್ಯರ ಬಗ್ಗೆ ಜಿಲ್ಲಾಡಳಿತ ಚುನಾವಣಾ ಆಯೋಗಕ್ಕೆ ಸಮಗ್ರ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಇನ್ನು ಸಿಂಧನೂರು ತಾಲ್ಲೂಕಿನಲ್ಲಿ 89 ಸದಸ್ಯರು, ಲಿಂಗಸಗೂರು ತಾಲ್ಲೂಕಿನಲ್ಲಿ 75 ಸದಸ್ಯರು, ಮಸ್ಕಿ ತಾಲ್ಲೂಕಿನಲ್ಲಿ 51 ಸದಸ್ಯರು, ಮಾನವಿ ತಾಲ್ಲೂಕಿನಲ್ಲಿ 30 ಸದಸ್ಯರು, ದೇವದುರ್ಗ ತಾಲ್ಲೂಕಿನಲ್ಲಿ 58 ಸದಸ್ಯರು, ರಾಯಚೂರು ತಾಲ್ಲೂಕಿನಲ್ಲಿ 93 ಸದಸ್ಯರು ಹಾಗೂ ಸಿರವಾರ ತಾಲ್ಲೂಕಿನಲ್ಲಿ 22 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ಧಾರೆ.

ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ಹರಾಜು ಪ್ರಕ್ರಿಯೆ ಮತದಾನ ಬಹಿಷ್ಕಾರ ಮಾಡಿದ್ದರಿಂದ ಜಿಲ್ಲೆಯ ಮಸ್ಕಿ ತಾಲ್ಲೂಕಿನ 4 ಗ್ರಾಮ ಪಂಚಾಯತಿ ಸೇರಿದಂತೆ 77 ಸದಸ್ಯ ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಸಲಾಗಿಲ್ಲ. ಇನ್ನು ಹಲವೆಡೆ ನೆಪಮಾತ್ರಕ್ಕೆ ನಾಮಪತ್ರ ಸಲ್ಲಿಸಿ ಹಣ ಮತ್ತಿತರ ಆಮಿಷಕ್ಕೆ ಒಳಗಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದು ಈಗಾಗಲೇ ಜಗಜ್ಜಾಹಿರವಾಗಿದೆ. ಸಿಂಧನೂರು ತಾಲ್ಲೂಕಿನ ಹೊಸಳ್ಳಿ ಇಜೆ ಗ್ರಾಮದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ 4 ಗ್ರಾಮ ಪಂಚಾಯತಿ ಸ್ಥಾನಗಳನ್ನು 10 ಲಕ್ಷ ರೂಪಾಯಿಗೆ ಹರಾಜು ಹಾಕಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಇದೇ ರೀತಿ ಜಿಲ್ಲೆಯಾದ್ಯಂತ ಹತ್ತಾರು ಆಮಿಷಗಳನ್ನೊಡ್ಡಿ ಒಟ್ಟಾರೆಯಾಗಿ 418 ಗ್ರಾಮ ಪಂಚಾಯತಿ ಸ್ಥಾನಗಳಿಗೆ ಅವಿರೋಧವಾಗಿ ಸದಸ್ಯರನ್ನ ಆಯ್ಕೆ ಮಾಡಲಾಗಿದೆ ಎಂಬ ಅನುಮಾನ ಗುಲ್ಲೆದ್ದಿದೆ.

ಹೀಗಾಗಿ ರಾಜ್ಯ ಚುನಾವಣಾ ಆಯೋಗ ಅವಿರೋಧ ಆಯ್ಕೆಯ ಹಿಂದಿನ ಮಸಲಸತ್ತುಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಇದರಿಂದಾಗಿ ಆಯೋಗ ಕೈಗೊಳ್ಳುವ ಅಂತಿಮ ತಿರ್ಮಾನದ ಮೇಲೆ ಅವಿರೋಧವಾಗಿ ಆಯ್ಕೆಯಾಗಿರುವ ಸದಸ್ಯರ ಭವಿಷ್ಯ ನಿಂತಿದೆ. ಒಟ್ಟಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆಯನ್ನ ಗ್ರಾಮೀಣ ಪ್ರದೇಶದಲ್ಲಿ ಪ್ರತಿಷ್ಠೆಯಾಗಿ ಸ್ವಿಕರಿಸುವುದು ಕಾಮನ್. ಹೀಗಾಗಿ ಬಹುತೇಕ ಗ್ರಾಮಗಳಲ್ಲಿ ಜನ ಚುನಾವಣೆ ನಡೆಸದೇ ತಮ್ಮ ಗ್ರಾಮದ ಅಭಿವೃಧ್ದಿಯ ಅನುಕೂಲತೆಗೆ ಅವಿರೋಧ ಆಯ್ಕೆ ಮೊರೆ ಹೊಗುತ್ತಾರೆ. ಆದರೆ ಈ ಬಾರಿ ಚುನಾವಣಾ ಆಯೋಗ ಇದಕ್ಕೆ ಮೂಗುದಾರ ಹಾಕಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮವೆಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿರುವ ಬಗ್ಗೆ ಆಯೋಗ ವರದಿ ಕೇಳಿದ್ದು, ಅವಿರೋಧ ಆಯ್ಕೆ ವೇಳೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಬಗ್ಗೆ ಸಮಗ್ರ ವರದಿ ಸಿದ್ದ ಪಡಿಸಲಾಗ್ತಿದೆ. ಈ ನಿಟ್ಟಿನಲ್ಲಿ ಅವಿರೋಧ ಆಯ್ಕೆಯಾದವರ ಬಗ್ಗೆ ಚುನಾವಣಾ ಆಯೋಗದ ತೀರ್ಮಾನವೇ ಅಂತಿಮವಾಗಲಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ಹೇಳಿದ್ದಾರೆ.

ಇಂತಹ ಪ್ರಯತ್ನಗಳಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಈಗ ಅವಿರೋಧವಾಗಿ ಆಯ್ಕೆಯಾಗಿರುವ ಸದಸ್ಯರ ಬಗ್ಗೆ ಆಯೋಗ ಅದ್ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಸೋಲಿನ ಸೇಡು..; ಗೆದ್ದವರ ಮೇಲೆ ಸೋತವರಿಂದ ಹಲ್ಲೆ..​

Published On - 7:19 am, Mon, 4 January 21