ಬಾಗಲಕೋಟೆ ರೈತರಲ್ಲಿ ಆತಂಕ; ಕೊರೊನಾ ಎರಡನೇ ಅಲೆಗೆ ತತ್ತರಿಸಿದ ಟೊಮ್ಯಾಟೊ ಬೆಳೆಗಾರ
ಕಳೆದ ವರ್ಷವೂ ಶ್ರೀಶೈಲ್ ಅರಬ್ಬಿ ಅವರು ಹತ್ತು ಎಕರೆಯಲ್ಲಿ ಬಂಪರ್ ಟೊಮ್ಯಾಟೊ ಬೆಳೆದಿದ್ದರು. ಆಗ ಕೊರೊನಾದಿಂದ ಲಾಕ್ಡೌನ್ ಆಗಿ 3 ಲಕ್ಷ ಖರ್ಚು ಮಾಡಿ ಹಾಕಿದ್ದ ಟೊಮ್ಯಾಟೊದಿಂದ ನಯಾಪೈಸೆ ಲಾಭ ಸಿಗಲಿಲ್ಲ. ಈಗ ಪುನಃ ಇದೇ ಪರಿಸ್ಥಿತಿ ಬಂದಿದೆ.
ಬಾಗಲಕೋಟೆ: ರೈತರು ಇತ್ತೀಚೆಗೆ ಒಂದಿಲ್ಲಾ ಒಂದು ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಮೊದಲು ಮಳೆಯಿಂದಾಗಿ ಒಂದಷ್ಟು ಬೆಳೆನಾಶವಾದರೆ ನಂತರ ಬೆಳೆ ಸರಿಯಾಗಿ ಫಸಲು ಕೊಡದೆ ನಷ್ಟವನ್ನು ಎದುರಿಸುವಂತಾಗಿದೆ. ಈ ರೀತಿಯ ಪರಿಸ್ಥಿತಿ ಸದ್ಯ ಬಾಗಲಕೋಟೆ ರೈತರನ್ನು ಸಹ ಕಾಡಿದ್ದು, ಕೊರೊನಾ ಅಲೆಗೆ ಸಿಲುಕಿದ್ದಾರೆ. ಕಳೆದ ವರ್ಷ ಟೊಮ್ಯಾಟೊ ಬೆಳೆ ಬೆಳೆದಿದ್ದ ಈ ಭಾಗದ ರೈತರು ಉತ್ತಮ ಫಸಲನ್ನು ಪಡೆದಿದ್ದರು ಆದರೆ ಕೊರೊನಾದಿಂದಾಗಿ ಸರಿಯಾದ ಬೆಲೆ ಸಿಗಲಿಲ್ಲ. ಆದರೆ ಈ ಬಾರಿ ಎಲ್ಲವೂ ಸರಿಯಾಗಿದೆ ಇನ್ನೇನು ಬೆಳೆಗೆ ತಕ್ಕ ಬೆಲೆ ಸಿಗುತ್ತದೆ ಎಂದು ರೈತ ಕನಸು ಕಂಡಿದ್ದ ಆದರೆ ಈ ಕನಸು ಕೂಡ ಹುಸಿಯಾಗಿದೆ. ಇದಕ್ಕೆ ಕಾರಣ ಕೊರೊನಾ ಎರಡನೇ ಅಲೆ.
ಶ್ರೀಶೈಲ್ ಅರಬ್ಬಿ ಎಂಬ ರೈತ ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ತಮ್ಮ ಒಂದು ಮುಕ್ಕಾಲು ಎಕರೆ ಹೊಲದಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಟೊಮ್ಯಾಟೊ ಕೂಡ ಸಮೃದ್ಧವಾಗಿ ಬೆಳೆದು ಗಿಡದ ತುಂಬೆಲ್ಲ ಗೊಂಚಲುಗಟ್ಟಲೆ ಟೊಮ್ಯಾಟೊ ಬೆಳೆದಿವೆ. ಆದರೆ ಇಷ್ಟೊಂದು ಸಮೃದ್ಧವಾಗಿ ಟೊಮ್ಯಾಟೊ ಬೆಳೆದರೂ ಕೂಡ ಈ ರೈತನಿಗೆ ಸಂಭ್ರಮಪಡುವ ಪರಿಸ್ಥಿತಿ ಇಲ್ಲ. ಏಕೆಂದರೆ ಟೊಮ್ಯಾಟೊ ಇಷ್ಟೊಂದು ಉತ್ತಮವಾಗಿ ಬೆಳೆದರೂ ಕೊರೊನಾ ಕಾಟದಿಂದಾಗಿ ಉತ್ತಮ ಬೆಲೆ ಸಿಗುತ್ತಿಲ್ಲ. ಕೊರೊನಾದಿಂದಾಗಿ ಮದುವೆಗೆ ಟಫ್ ರೂಲ್ಸ್ ಜಾರಿ ಮಾಡಿದ್ದು, ಕೆಲವರು ಮದುವೆ ಸರಳವಾಗಿ ಮಾಡಿದರೆ, ಎಷ್ಟೋ ಮದುವೆಗಳು ರದ್ದಾಗಿ ಮದುವೆ ಸಂಖ್ಯೆಯಲ್ಲಿ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಟೊಮ್ಯಾಟೊ ದರ ದಿಢೀರನೆ ಕುಸಿತ ಕಂಡಿದೆ.
ಶ್ರೀಶೈಲ್ ಅರಬ್ಬಿ ಅವರು ಸಿಂಜೆಂಟಾ ಕಂಪನಿಯ “ಸಾಹು” ಎಂಬ ತಳಿಯ ಟೊಮ್ಯಾಟೊ ಬೆಳೆದಿದ್ದಾರೆ. ಒಂದು ಮುಕ್ಕಾಲು ಎಕರೆಯಲ್ಲಿ ಒಟ್ಟು 60 ಟನ್ ಟೊಮ್ಯಾಟೊ ಫಸಲು ಇವರ ಕೈ ಸೇರಲಿದೆ. ಇನ್ನು ವಿಶೇಷ ಅಂದರೆ ಇವರು ಇಷ್ಟೊಂದು ಸಮೃದ್ಧವಾಗಿ ಟೊಮ್ಯಾಟೊ ಬೆಳೆದಿದ್ದು, ಸಾವಯವ ಪದ್ಧತಿಯಲ್ಲಿ. ಯಾವುದೇ ರಸಾಯನಿಕ ಸಿಂಪಡನೆ ಮಾಡದೆ ಗೋಕುಪಾಮೃತ ಸಿಂಪಡನೆ ಮಾಡಿ ಸಾವಯವ ಪದ್ಧತಿಯಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಉತ್ತಮ ಬೆಳೆಯೂ ಬಂದಿದೆ, ಆದರೆ ಸದ್ಯ ಮದುವೆ ಸಂಖ್ಯೆಯಲ್ಲಿ ಬಾರಿ ಪ್ರಮಾಣದ ಇಳಿಕೆಯಾಗಿದೆ. ಇದರಿಂದ ಇಪ್ಪತ್ತು ಕೆಜಿ ಒಂದು ಟ್ರೆಗೆ 500ರಿಂದ 600 ರೂಪಾಯಿ ಸಿಗಬೇಕಿದ್ದ ಬೆಲೆ, ಈಗ ಇಪ್ಪತ್ತು ಕೆಜಿಯ ಒಂದು ಟ್ರೇಗೆ ಕೇವಲ 100ರಿಂದ 120ಬೆಲೆ ಬಂದಿದೆ.
ಕಳೆದ ವರ್ಷವೂ ಶ್ರೀಶೈಲ್ ಅರಬ್ಬಿ ಅವರು ಹತ್ತು ಎಕರೆಯಲ್ಲಿ ಬಂಪರ್ ಟೊಮ್ಯಾಟೊ ಬೆಳೆದಿದ್ದರು. ಆಗ ಕೊರೊನಾದಿಂದ ಲಾಕ್ಡೌನ್ ಆಗಿ 3 ಲಕ್ಷ ಖರ್ಚು ಮಾಡಿ ಹಾಕಿದ್ದ ಟೊಮ್ಯಾಟೊದಿಂದ ನಯಾಪೈಸೆ ಲಾಭ ಸಿಗಲಿಲ್ಲ. ಈಗ ಪುನಃ ಇದೇ ಪರಿಸ್ಥಿತಿ ಬಂದಿದೆ. ಇಲ್ಲಿ ಈ ರೈತ ಒಂದು ಉದಾಹರಣೆ ಮಾತ್ರ. ಕೊರೊನಾದಿಂದ ಅನೇಕ ರೈತರ ಪರಿಸ್ಥಿತಿಯೂ ಇದೆ ಆಗಿದೆ. ಕೊರೊನಾದಿಂದ ಪುನಃ ರೈತರ ಬದುಕು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಸರಕಾರ ರೈತರಿಗೆ ಅನುಕೂಲರ ರೀತಿಯಲ್ಲಿ ಯಾವುದಾದರೂ ಪರಿಹಾರ ಮಾರ್ಗ ಕಲ್ಪಿಸಬೇಕು ಎಂದು ಟೊಮ್ಯಾಟೊ ಬೆಳೆದ ರೈತ ಶ್ರೀಶೈಲ್ ಅರಬ್ಬಿ ಮನವಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಕಳೆದ ವರ್ಷ ಕೊರೊನಾ ಹೊಡೆತ, ಪ್ರವಾಹ, ಅತಿವೃಷ್ಟಿಯಿಂದ ಸುಧಾರಿಸದ ರೈತರಿಗೆ, ಕೊವಿಡ್ ಎರಡನೇ ಅಲೆ ಪುನಃ ಆಘಾತ ತಂದೊಡ್ಡಿದೆ ಎನ್ನುವುದು ಮಾತ್ರ ಸತ್ಯ.
ಇದನ್ನೂ ಓದಿ:ತೊಗರಿ ಇಳುವರಿ, ಬೆಲೆ ಕಡಿಮೆ: ತೊಗರಿ ಕಣಜ ಕಲಬುರಗಿಯಲ್ಲಿ ಬೆಳೆಗಾರರು ಕಂಗಾಲು
Onion Price: ಹಠಾತ್ತಾಗಿ ಕುಸಿದ ಈರುಳ್ಳಿ ದರ: ಬೆಲೆ ಇಳಿಕೆಯಿಂದ ವ್ಯಾಪಾರಕ್ಕೆ ಮುಗಿಬಿದ್ದ ಗ್ರಾಹಕರು