ಬೆಂಬಲ ಬೆಲೆಗಿಂತ ಹೆಚ್ಚಿನ ದರಕ್ಕೆ ಕಲಬುರ್ಗಿ ತೊಗರಿ ಮಾರಾಟ: ರೈತರಿಗೆ ತುಸು ನೆಮ್ಮದಿ
ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ನಿಂದ ಮಾರುಕಟ್ಟೆಗೆ ತೊಗರಿ ಬರುತ್ತದೆ. ಫೆಬ್ರವರಿ, ಮಾರ್ಚ್ ವರೆಗೆ ರೈತರು ಬೆಳೆದ ತೊಗರಿ ಬೆಳೆಯನ್ನು ಮಾರಾಟ ಮಾಡುತ್ತಾರೆ. ಪ್ರಾರಂಭದಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿ ಐದರಿಂದ ಐದುವರೆ ಸಾವಿರ ರೂಪಾಯಿಗೆ ಮಾರಾಟವಾಗುತ್ತಿತ್ತು.
ಕಲಬುರಗಿ: ರಾಜ್ಯದ ತೊಗರಿ ಕಣಜ ಎಂದು ಖ್ಯಾತಿ ಪಡೆದಿರುವ ಜಿಲ್ಲೆ ಕಲಬುರಗಿ. ರಾಜ್ಯಕ್ಕೆ ಮಾತ್ರವಲ್ಲದೇ ದೇಶದ ಅನೇಕ ಭಾಗಗಳಿಗೆ ತೊಗರಿ ಬೇಳೆ ಮತ್ತು ತೊಗರಿ ಕಾಳು ಪೂರೈಕೆಯಾಗುವುದು ಕಲಬುರಗಿ ಜಿಲ್ಲೆಯಿಂದಲೆ. ಪ್ರವಾಹದಿಂದಾಗಿ ತೊಗರಿ ಬೆಳೆ ಕಳೆದುಕೊಂಡಿದ್ದ ರೈತರಿಗೆ ಈ ಭಾರಿ ಬೆಲೆ ಹೆಚ್ಚಳವಾಗಿರುವುದು ತುಸು ನೆಮ್ಮದಿಯನ್ನು ನೀಡಿದೆ. ಈ ಬಾರಿ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಗೆ ತೊಗರಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇದು ಬೆಂಬಲ ಬೆಲೆ ತೋರಿಸಿ ಅಂತ ದೇಶಾದ್ಯಂತ ಆಂದೋಲನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಯೋಗೆಂದ್ರ ಯಾದವ್ಗೂ ಕೂಡಾ ಶಾಕ್ ನೀಡಿದೆ. ಆದರೆ ಸರ್ಕಾರ ಸ್ವಾಮಿನಾಥನ್ ವರದಿ ಪ್ರಕಾರ ಬೆಲೆ ನಿಗದಿ ಮಾಡಬೇಕು ಎನ್ನುವುದು ಹೋರಾಟಗಾರರ ಆಗ್ರಹವಾಗಿದೆ.
ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ನಿಂದ ಮಾರುಕಟ್ಟೆಗೆ ತೊಗರಿ ಬರುತ್ತದೆ. ಫೆಬ್ರವರಿ, ಮಾರ್ಚ್ ವರೆಗೆ ರೈತರು ಬೆಳೆದ ತೊಗರಿ ಬೆಳೆಯನ್ನು ಮಾರಾಟ ಮಾಡುತ್ತಾರೆ. ಪ್ರಾರಂಭದಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿ ಐದರಿಂದ ಐದುವರೆ ಸಾವಿರ ರೂಪಾಯಿಗೆ ಮಾರಾಟವಾಗುತ್ತಿತ್ತು. ಹೀಗಾಗಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ತೊಗರಿ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಅಂತ ರೈತರು ಆಗ್ರಹಿಸಿದ್ದರು. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ಆರು ಸಾವಿರ ರೂಪಾಯಿ ಬೆಂಬಲ ಬೆಲೆಯನ್ನು ನಿಗದಿ ಮಾಡಿ, ಖರೀದಿ ಕೇಂದ್ರವನ್ನು ಪ್ರಾರಂಭಿಸಿತ್ತು. ಪ್ರತಿ ವರ್ಷ ಕೇಂದ್ರ ಸರ್ಕಾರ ನಿಗದಿ ಮಾಡುತ್ತಿದ್ದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಪ್ರೋತ್ಸಾಹಧನವನ್ನು ನೀಡುತ್ತಿತ್ತು. ಆದರೆ ಈ ಭಾರಿ ಸರ್ಕಾರ ಕೊರೊನಾದ ಆರ್ಥಿಕ ಸಂಕಷ್ಟದ ನೆಪ ಹೇಳಿ ಪ್ರೋತ್ಸಾಹಧನವನ್ನು ತೊಗರಿಗೆ ಘೋಷಣೆ ಮಾಡಲಿಲ್ಲಾ. ಇದು ತೊಗರಿ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಪ್ರೋತ್ಸಾಹಧನ ಘೋಷಣೆ ಮಾಡಬೇಕು ಅಂತ ತೊಗರಿ ಬೆಳೆಗಾರರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮತ್ತೊಂದಡೆ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಕಲಬುರಗಿ ಜಿಲ್ಲಾಡಳಿತ 176 ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿತ್ತು. ಕಲಬುರಗಿ ಜಿಲ್ಲೆಯಲ್ಲಿಯೇ 48,448 ರೈತರು ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ತೊಗರಿ ಖರೀದಿ ಕೇಂದ್ರ ಪ್ರಾರಂಭವಾಗಿ ಎರಡು ತಿಂಗಳಾದರು ಕೂಡಾ ಯಾವೊಬ್ಬ ರೈತರು ತೊಗರಿ ಖರೀದಿ ಕೇಂದ್ರಕ್ಕೆ ಹೋಗಿ ತಮ್ಮ ತೊಗರಿಯನ್ನು ಮಾರಾಟ ಮಾಡಿಲ್ಲಾ. ಇದೇ ಕಾರಣ ಸರ್ಕಾರ ನಿಗದಿ ಪಡಿಸಿದ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ತೊಗರಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.
ಖರೀದಿ ಕೇಂದ್ರಗಳತ್ತ ಮುಖ ಮಾಡದ ರೈತರು ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ಆರು ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದ್ದರೆ, ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿ 6,500 ರಿಂದ ಏಳು ಸಾವಿರವರಗೆ ಮಾರಟವಾಗುತ್ತಿದೆ. ಕಳೆದ ಎರಡು ತಿಂಗಳಿಂದ ಕಲಬುರಗಿ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಲ್ ತೊಗರಿ ಆರು ಸಾವಿರ ಮೇಲ್ಪಟ್ಟ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ಖರೀದಿ ಕೇಂದ್ರಗಳತ್ತ ರೈತರು ಮುಖ ಮಾಡುತ್ತಿಲ್ಲಾ. ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ತೊಗರಿ ಮಾರಟವಾಗುತ್ತಿರುವುದು ರೈತರ ಮಂದಹಾಸಕ್ಕೆ ಕಾರಣವಾಗಿದೆ.
ತೊಗರಿ ಬೆಲೆ ಹೆಚ್ಚಾಗಲು ಕಾರಣವೇನು? ಪ್ರತಿ ವರ್ಷ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ತೊಗರಿ ಮಾರಟವಾಗುತ್ತಿತ್ತು. ಹೀಗಾಗಿ ಹೆಚ್ಚಿನ ರೈತರು ಖರೀದಿ ಕೇಂದ್ರಗಳಲ್ಲಿ ತಾವು ಬೆಳೆದ ತೊಗರಿಯನ್ನು ಮಾರಟ ಮಾಡುತ್ತಿದ್ದರು. ಆದರೆ ಈ ಭಾರಿ ಖರೀದಿ ಕೇಂದ್ರಗಳಿಗೆ ಹೋಗದ ರೈತರು ಮಾರುಕಟ್ಟೆಯಲ್ಲಿಯೇ ಹೆಚ್ಚಿನ ಬೆಲೆಗೆ ತಮ್ಮ ತೊಗರಿ ಮಾರಟ ಮಾಡುತ್ತಿದ್ದಾರೆ. ಇನ್ನು ಈ ಬಾರಿ ತೊಗರಿ ಬೆಳೆಗೆ ಬೆಲೆ ಹೆಚ್ಚಾಗಲು ಕಾರಣ ತೊಗರಿ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಾರದೇ ಇರುವುದು. ಪ್ರತಿ ವರ್ಷ ಕಲಬುರಗಿ ಜಿಲ್ಲೆಯಲ್ಲಿಯೇ ಸರಾಸರಿ ನಲವತ್ತರಿಂದ ನಲವತ್ತೈದು ಲಕ್ಷ ಕ್ವಿಂಟಲ್ ತೊಗರಿಯನ್ನು ಬೆಳೆಯಲಾಗುತ್ತಿತ್ತು. ಆದರೆ ಈ ಭಾರಿ ಜಿಲ್ಲೆಯಲ್ಲಿ ಬಹುತೇಕ ತೊಗರಿ ಬೆಳೆ ಪ್ರವಾಹಕ್ಕೆ ತುತ್ತಾಗಿತ್ತು. ಇದರಿಂದ ಈ ಭಾರಿ ಕೇವಲ 25 ಲಕ್ಷ ಕ್ವಿಂಟಲ್ ತೊಗರಿ ಮಾತ್ರ ಬೆಳೆಯಲಾಗಿದೆ. ಇದು ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಹೆಚ್ಚಾಗಲು ಪ್ರಮುಖ ಕಾರಣವೆನ್ನಲಾಗುತ್ತಿದೆ. ಇದನ್ನು ಮನಗಂಡು ಕೆಲ ವರ್ತಕರು ತೊಗರಿ ಬೆಲೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿಂದ ಇರುವ ತೊಗರಿಯನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಇದರ ಜೊತೆಗೆ ಕೆಲ ಖಾಸಗಿ ಕಾರ್ಪೋರೇಟ್ ಕಂಪನಿಗಳು ಕೂಡಾ ವರ್ತಕರಿಂದ ತಮಗೆ ಬೇಕಾದಷ್ಟು ತೊಗರಿಯನ್ನು ಖರೀದಿ ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.
ಯೋಗೆಂದ್ರ ಯಾದವ್ಗೆ ಶಾಕ್ ದೇಶದಲ್ಲಿ ಬೆಂಬಲ ಬೆಲೆಯಲ್ಲಿ ತೋರಿಸಿ ಅಂತ ಸಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ದೇಶಾದ್ಯಂತ ಸಂಚರಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ಯೋಗೇಂದ್ರ ಯಾದವ್ ಮಾರ್ಚ್ 5ರಂದು ಕಲಬುರಗಿ ನಗರದ ಎಪಿಎಂಸಿಗೆ ಭೇಟಿ ನೀಡಿದ್ದರು. ಬೆಂಬಲ ಬೆಲೆ ತೋರಿಸಿ ಎನ್ನುವ ಆಂದೋಲನದ ಅಂಗವಾಗಿ ಮಾರುಕಟ್ಟೆಗೆ ಆಗಮಿಸಿದ್ದ ಯೋಗೇಂದ್ರ ಯಾದವ್ಗೆ ಶಾಕ್ ಆಗಿತ್ತು. ಯಾಕೆಂದರೆ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಗೆ ತೊಗರಿ ಮಾರಾಟವಾಗುತ್ತಿತ್ತು. ಈ ಬಗ್ಗೆ ವರ್ತಕರು ಮತ್ತು ರೈತರನ್ನು ಮಾತನಾಡಿಸಿದಾಗ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಗೆ ತೊಗರಿ ಮಾರಾಟವಾಗುತ್ತಿರುವುದು ಕಂಡು ಬಂತು. ಆದರೆ ಸ್ವಾಮಿನಾಥನ್ ವರದಿ ಪ್ರಕಾರ ಪ್ರತಿ ಕ್ವಿಂಟಲ್ ತೊಗರಿಗೆ 7,650 ರೂಪಾಯಿ ನಿಗದಿ ಮಾಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನೆ ಕಡಿಮೆ ನಿಗದಿ ಮಾಡಿದೆ ಎನ್ನುವುದು ಆಂದೋಲನದಲ್ಲಿ ಭಾಗಿಯಾದವರು ತಗಾದೆ ತೆಗೆದಿದ್ದಾರೆ.
ಸ್ವಾಮಿನಾಥನ್ ವರದಿ ಪ್ರಕಾರ ಪ್ರತಿ ಕ್ವಿಂಟಲ್ ತೊಗರಿಗೆ 7,650 ರೂಪಾಯಿ ನೀಡಬೇಕಿತ್ತು. ಆದರೆ ಸರ್ಕಾರ ಕೇವಲ ಆರು ಸಾವಿರ ರೂಪಾಯಿ ಮಾತ್ರ ನಿಗದಿ ಮಾಡಿದೆ. ಕೇಂದ್ರ ಸರ್ಕಾರ ರೈತರಿಗೆ ಬೆಂಬಲ ಬೆಲೆ ಕಡಿಮೆ ನೀಡಿದರೆ ವರ್ತಕರು ಹೆಚ್ಚಿನ ಬೆಲೆಗೆ ತೊಗರಿ ಖರೀದಿಸುತ್ತಿದ್ದಾರೆ. ರೈತರಿಗೆ ಸರ್ಕಾರದಿಂದ ಲಾಭವಾಗಿಲ್ಲ. ಬದಲಾಗಿ ವರ್ತಕರಿಂದ ಲಾಭವಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಸಂಘಟಕ ಶರಣಬಸಪ್ಪ ಮಮಶೆಟ್ಟಿ ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ವರ್ಷ ನಲವತ್ತರಿಂದ ನಲವತ್ತೈದು ಲಕ್ಷ ಕ್ವಿಂಟಲ್ ತೊಗರಿ ಬೆಳೆಯಲಾಗುತ್ತಿತ್ತು. ಆದರೆ ಪ್ರವಾಹದಿಂದಾಗಿ ಈ ಬಾರಿ ಕಡಿಮೆ ಬೆಳೆ ಬಂದಿದೆ. ಇದರಿಂದ ಬೆಂಬಲ ಬೆಲೆಯತ್ತ ರೈತರು ಬರುತ್ತಿಲ್ಲಾ. ಮಾರುಕಟ್ಟೆಯಲ್ಲಿಯೇ ಆರುವರೆಯಿಂದ ಏಳು ಸಾವಿರದವರಗೆ ತೊಗರಿ ಮಾರಟವಾಗುತ್ತಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ರಿತೇಂದ್ರ ಸೂಗೂರು ತಿಳಿಸಿದರು.
ಇದನ್ನೂ ಓದಿ
ರಾಯಚೂರು: ಮಂತ್ರಾಲಯದ ಗೋಶಾಲೆಗೆ ಮೇವು ದಾನ ನೀಡಿದ ರೈತರು
ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ರಾಯಚೂರು ರೈತರು: ನೀರು ಬಿಡುಗಡೆಗೆ ರೈತರ ಆಗ್ರಹ
Published On - 4:04 pm, Tue, 9 March 21