ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿಗಾಗಿ 6,316 ಮರಗಳ ತೆರವಿಗೆ ಆಲೋಚನೆ; ಪರಿಸರ ಪ್ರೇಮಿಗಳ ಆಕ್ರೋಶ

ಮರಗಳನ್ನು ಕಡಿಯದೇ ಕೆರೆಯನ್ನು ಉಳಿಸುವುದು ಸಾಧ್ಯವಿದೆ. ಇದಕ್ಕಾಗಿ ಸ್ವಲ್ಪ ಸಮಯಾವಕಾಶ ತೆಗೆದುಕೊಂಡು ತಜ್ಞರ ಜತೆ ಸೂಕ್ತ ಚರ್ಚೆ ನಡೆಸಲು ಆಡಳಿತ ವ್ಯವಸ್ಥೆ ಮನಸ್ಸು ಮಾಡಬೇಕು. 30 ವರ್ಷಗಳ ನಂತರ ಏಕಾಏಕಿ ಕೆರೆ ಅಭಿವೃದ್ಧಿ ಮಾಡುವ ಬಗ್ಗೆ ಎಚ್ಚೆತ್ತುಕೊಂಡು 6 ಸಾವಿರ ಮರಗಳಿಗೆ ಕೊಡಲಿಯೇಟು ಹಾಕುವುದನ್ನು ಖಂಡಿತಾ ಒಪ್ಪಲಾಗುವುದಿಲ್ಲ.

ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿಗಾಗಿ 6,316 ಮರಗಳ ತೆರವಿಗೆ ಆಲೋಚನೆ; ಪರಿಸರ ಪ್ರೇಮಿಗಳ ಆಕ್ರೋಶ
ಕೆರೆಯಂಗಳದಲ್ಲಿ ಬೆಳೆದು ನಿಂತ ಮರಗಳು
Follow us
TV9 Web
| Updated By: Skanda

Updated on: Jun 19, 2021 | 9:51 AM

ಬೆಂಗಳೂರು: ಇಷ್ಟು ವರ್ಷಗಳ ಕಾಲ ಬೇರೆ ಬೇರೆ ಅಭಿವೃದ್ಧಿ ಯೋಜನೆಗಳಿಗಾಗಿ ಮರಗಳ ಬುಡಕ್ಕೆ ಕೊಡಲಿ ಇಡುತ್ತಿದ್ದ ಆಡಳಿತ ವ್ಯವಸ್ಥೆ ಇದೀಗ ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿಯ ಹೆಸರಲ್ಲಿ ಮರಗಳ ಮಾರಣಹೋಮ ನಡೆಸಲು ಮುಂದಾಗಿದೆ. ಕೆರೆಗಳಿಗೆಲ್ಲಾ ಮಣ್ಣು ಸುರಿದು ಅದರ ಮೇಲೆ ಬಹುಮಹಡಿ ಕಟ್ಟಡಗಳನ್ನು ಎಗ್ಗಿಲ್ಲದೆ ಕಟ್ಟಿದ ನಂತರ ಈಗ ಕೆರೆಗಳ ಜಾಗವನ್ನು ಮರಗಳೇ ಆಕ್ರಮಿಸಿವೆಯೇನೋ ಎಂಬಂತೆ ತೆರವು ಕಾರ್ಯಾಚರಣೆಗೆ ಸನ್ನದ್ಧವಾಗಿರುವುದು ಸರ್ಕಾರ ಪರಿಸರದ ವಿಚಾರದಲ್ಲಿ ಎಷ್ಟು ಅಸೂಕ್ಷ್ಮವಾಗಿ ವರ್ತಿಸುತ್ತಿದೆ ಎನ್ನುವುದಕ್ಕೆ ಕೈಗನ್ನಡಿಯಂತಿದೆ. ಕೆರೆ ಅಭಿವೃದ್ಧಿ ಯೋಜನೆಗಾಗಿ ಸುಮಾರು 6,316ಮರಗಳನ್ನು ಕೆಡವಲು ಹೊರಟ ಸರ್ಕಾರದ ನಿರ್ಧಾರಕ್ಕೆ ಇದೀಗ ಪರಿಸರ ಪ್ರೇಮಿಗಳು ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದ ಹೊರವಲಯದಲ್ಲಿ ಯಲಹಂಕ ಸಮೀಪ ಇರುವ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗಾಗಿ ಘನ ಸರ್ಕಾರ ಇಂತಹ ನಿರ್ಧಾರವನ್ನು ಕೈಗೊಂಡಿದೆ. ಇದೇ 14ನೇ ತಾರೀಖು ಕರ್ನಾಟಕ ಅರಣ್ಯ ಇಲಾಖೆ ಈ ಯೋಜನೆಗೆ ಸಲಹೆ, ಸೂಚನೆ, ಆಕ್ಷೇಪಣೆಗಳನ್ನೂ ಆಹ್ವಾನಿಸಿದ್ದು 10 ದಿನಗಳ ಕಾಲಾವಕಾಶ ನೀಡಲಾಗಿದೆ. ಇದೀಗ ಸದರಿ ಯೋಜನೆ ವಿರುದ್ಧ ಧ್ವನಿ ಎತ್ತಿರುವ ಸಾಮಾಜಿಕ ಹೋರಾಟಗಾರರು ಹಾಗೂ ಪರಿಸರ ಪ್ರೇಮಿಗಳು, ಇದು ಕೆರೆ ಅಭಿವೃದ್ಧಿ ಯೋಜನೆ ಅಲ್ಲ. ಅದರ ಹೆಸರಿನಲ್ಲಿ ಭೂಮಿಯನ್ನು ಒಳಗೆ ಹಾಕಿಕೊಳ್ಳುವ ಹುನ್ನಾರ. ಆ ಜಾಗದಲ್ಲಿ ಐಟಿ ಹಬ್​ಗಳು ಹೆಚ್ಚಾಗಿ ತಲೆಯೆತ್ತಿದ್ದು, ಈಗಾಗಲೇ ಸ್ಥಳಾವಕಾಶದ ಕೊರತೆ ಎದುರಾಗಿದೆ. ಈಗ ಸರ್ಕಾರ ಇಂತಹ ಅಡ್ಡ ಮಾರ್ಗದ ಮೂಲಕ ಅದನ್ನು ಪರಿಹರಿಸಲು ಕೈ ಹಾಕಿದೆ. ಕೊರೊನಾ ಸಾಂಕ್ರಾಮಿಕದಂತಹ ಸಂದರ್ಭದಲ್ಲಿ ಈ ತೆರನಾದ ಯೋಜನೆಗಳನ್ನು ಕೈಗೊಳ್ಳುವುದರ ಹಿಂದೆ ದುರುದ್ದೇಶಗಳಿವೆ. ಒಂದುವೇಳೆ ಇದು ಜಾರಿಯಾದದ್ದೇ ಆದಲ್ಲಿ ಭಾರೀ ಪ್ರಮಾಣದ ಜೈವಿಕ ಅಸಮತೋಲನಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಪ್ರಕಾರ ಈ ಯೋಜನೆಗಾಗಿ 6,000ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಈ ಯೋಜನೆಯು ಹೆಬ್ಬಾಳ-ನಾಗಾವರ ಕಣಿವೆ ಯೋಜನೆಯ ಭಾಗವಾಗಿದ್ದು, ಇದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ಚಿಕ್ಕಬಳ್ಳಾಪುರ ಭಾಗದ 65ಕ್ಕೂ ಹೆಚ್ಚು ಕೆರೆ ಹಾಗೂ ಟ್ಯಾಂಕ್​ಗಳಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರು ತುಂಬಿಸುವ ಉದ್ದೇಶ ಹೊಂದಿದೆ.

ಈ ಯೋಜನೆಯು ನಾಲ್ಕು ಹಳ್ಳಿಗಳನ್ನು ಒಳಗೊಳ್ಳಲಿದ್ದು, ಸಿಂಗನಾಯಕನಹಳ್ಳಿ ಅಮಾನಿಕೆರೆ ಗ್ರಾಮದ ಸರ್ವೆ ನಂಬರ್ 33, ನಾಗದಾಸನಹಳ್ಳಿ ಗ್ರಾಮದ ಸರ್ವೆ ನಂಬರ್ 39, ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 12, ಅದ್ದಿಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 7ನ್ನು ಆಕ್ರಮಿಸಿಕೊಳ್ಳಲಿದೆ. ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ ಗುರುತಿಸಲಾದ ಪ್ರದೇಶಗಳಲ್ಲಿ ಕಳೆದ ಫೆಬ್ರವರಿಯಲ್ಲೇ ಪರಿಶೀಲನೆ ನಡೆದಿದ್ದು, ಕೆರೆ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿರುವ ಸುಮಾರು 6,316ಮರಗಳನ್ನು ಕೆಡಗುವುದೇ ಸೂಕ್ತ ಎಂದು ಯೋಚಿಸಲಾಗಿದೆ.

ಈ ಕೆರೆಯಂಗಳದಲ್ಲಿ ಸ್ವಾಭಾವಿಕವಾಗಿ ವಿವಿಧ ಜಾತಿಯ ಗಿಡ, ಮರಗಳು ಬೇರೂರಿದ್ದು ಜಾಲಿ (ಒಟ್ಟು 4,026), ನೇರಳೆ (168), ಬೇವು (8), ಸಿಹಿ ಹುಣಸೆ (9), ಹೊಂಗೆ (560), ಶಿವಾನಿ (10), ತೊರೆ ಮತ್ತಿ (24), ನೀಲಗಿರಿ, ಅಕೇಶಿಯಾ (940), ಇತರೆ (21) ಮುಂತಾದ ಮರಗಳು ಬೆಳೆದು ನಿಂತು ಅನೇಕ ಜೀವಿಗಳಿಗೆ ಮನೆಯಾಗಿದೆ. ಇದರಲ್ಲಿ ವಿವಿಧ ಜಾತಿಯ 6,316 ಮರಗಳ ತೆರವಿಗೆ ಸಣ್ಣ ನೀರಾವರಿ ಇಲಾಖೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಮರಗಳನ್ನು ಕಟಾವು ಮಾಡಿದರೆ 403.211 ಘನ ಮೀ. ನಾಟಾ ಹಾಗೂ 3,46,915 ಕೆ.ಜಿ ಸೌದೆ ಸಿಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಮರಗಳ ತೆರವಿಗೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯು ಸಾರ್ವಜನಿಕರಿಂದ ಇದೇ 14ನೇ ತಾರೀಖು ಸಲಹೆ, ಸೂಚನೆ, ಆಕ್ಷೇಪಣೆಗಳನ್ನೂ ಆಹ್ವಾನಿಸಿದ್ದು 10 ದಿನಗಳ ಕಾಲಾವಕಾಶ ನೀಡಲಾಗಿದೆ.

ಮರಗಳ ತೆರವಿನ ಬಗ್ಗೆ ಸಾರ್ವಜನಿಕರಿಂದ ಬರುವ ಅಭಿಪ್ರಾಯಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು. ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕೆಂದರೆ ಹೂಳು ತೆಗೆಯುವುದು ಅನಿವಾರ್ಯ. ಈ ಸಂದರ್ಭದಲ್ಲಿ ಮರಗಳನ್ನು ತೆರವುಗೊಳಿಸಲೇಬೇಕಾಗುತ್ತದೆ. ಆದರೆ, ಅವುಗಳನ್ನು ಸ್ಥಳಾಂತರ ಮಾಡಿ ಬೇರೆ ಕಡೆ ನಾಟಿ ಮಾಡುವ ಸಾಧ್ಯತೆ ಬಗ್ಗೆ ಇನ್ನಷ್ಟೇ ಪರಿಶೀಲನೆ ಮಾಡಬೇಕಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌.ರವಿಶಂಕರ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೇ, ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿ ಕೆರೆಯ ಅಂಗಳದಲ್ಲಿ ಸಸಿಗಳನ್ನು ಬೆಳೆಸಲಾಗಿದೆ. ಹೀಗಾಗಿ, ಕೆರೆ ಅಭಿವೃದ್ಧಿ ಕಾಮಗಾರಿಗೆ ತೆರವುಗೊಳಿಸಬೇಕಾಗುವ ಮರಗಳ ಸಂಖ್ಯೆ ಹೆಚ್ಚು ಎಂಬಂತೆ ಕಾಣುತ್ತದೆ. ಕೆರೆಯಲ್ಲಿ ನೀರಿನ ಆಶ್ರಯ ಇರುವುದರಿಂದ ಮರಗಳು ಹುಲುಸಾಗಿ ಬೆಳೆದಿವೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಪರಿಸರ ಪ್ರೇಮಿಗಳು ಹಾಗೂ ಸಾಮಾಜಿಕ ಹೋರಾಟಗಾರರು ಇದನ್ನು ಪ್ರಕೃತಿಯ ನಾಶವೆಂದು ಕರೆದಿದ್ದು, ಈ ಯೋಜನೆಗೆ ಬಗ್ಗೆ ಮರು ಪರಿಶೀಲಿಸಲು ಆಗ್ರಹಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಹಸಿರು ಕಳೆದುಕೊಳ್ಳುವುದು ಸೂಕ್ತವಲ್ಲ. ಈಗ ಈ ಪ್ರದೇಶವನ್ನು ನಂಬಿ ಬದುಕುತ್ತಿರುವ ಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿ ಹೆಸರಲ್ಲಿ ಸರ್ವನಾಶ ಮಾಡಿದಂತೆ ಆಗುತ್ತದೆ. ಇಲ್ಲಿ ರಾಷ್ಟ್ರಪಕ್ಷಿ ನವಿಲು, ಮೊಲ, ನರಿ ಸೇರಿದಂತೆ ಅನೇಕ ಪಕ್ಷಿ, ಪ್ರಾಣಿಗಳು ನೆಲೆಸಿವೆ ಎಂಬುದನ್ನು ಗಮನಿಸಬೇಕು ಎಂದು ಪರಿಸರ ಹೋರಾಟಗಾರ ವಿಜಯ್​ ನಿಶಾಂತ್ ಒತ್ತಾಯಿಸಿದ್ದಾರೆ.

ಮರಗಳನ್ನು ಕಡಿಯದೇ ಕೆರೆಯನ್ನು ಉಳಿಸುವುದು ಸಾಧ್ಯವಿದೆ. ಇದಕ್ಕಾಗಿ ಸ್ವಲ್ಪ ಸಮಯಾವಕಾಶ ತೆಗೆದುಕೊಂಡು ತಜ್ಞರ ಜತೆ ಸೂಕ್ತ ಚರ್ಚೆ ನಡೆಸಲು ಆಡಳಿತ ವ್ಯವಸ್ಥೆ ಮನಸ್ಸು ಮಾಡಬೇಕು. 30 ವರ್ಷಗಳ ನಂತರ ಏಕಾಏಕಿ ಕೆರೆ ಅಭಿವೃದ್ಧಿ ಮಾಡುವ ಬಗ್ಗೆ ಎಚ್ಚೆತ್ತುಕೊಂಡು 6 ಸಾವಿರ ಮರಗಳಿಗೆ ಕೊಡಲಿಯೇಟು ಹಾಕುವುದನ್ನು ಖಂಡಿತಾ ಒಪ್ಪಲಾಗುವುದಿಲ್ಲ. ಕಾಡು, ಕೆರೆ ಎರಡನ್ನೂ ಉಳಿಸುವತ್ತ ಗಮನ ನೀಡಿ. ಕೆರೆಯೆಂದರೆ ನೀರು ಸಂಗ್ರಹಿಸುವ ತೊಟ್ಟಿ, ಅದರ ಅಭಿವೃದ್ಧಿಯೆಂದರೆ ನಡಿಗೆ ಪಥ ನಿರ್ಮಾಣ ಎಂಬ ಮನೋಭಾವವನ್ನು ಮೊದಲು ತ್ಯಜಿಸಬೇಕು. ಎಲ್ಲವನ್ನೂ ಮನುಷ್ಯ ಕೇಂದ್ರಿತವಾಗಿ ಆಲೋಚಿಸಿ ಪರಿಸರ ವ್ಯವಸ್ಥೆಗೆ ಧಕ್ಕೆ ತರಬಾರದು ಎಂದು ಕೆರೆ ಪುನಶ್ಚೇತನ ತಜ್ಞ ವಿ.ರಾಮಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಮರ ತೆರವು ಪ್ರಕ್ರಿಯೆ ಬಗ್ಗೆ ಸಲಹೆ, ಸೂಚನೆ, ಆಕ್ಷೇಪಗಳಿದ್ದರೆ ಈ ವಿಳಾಸವನ್ನು ಸಂಪರ್ಕಿಸಬಹುದು: ಬೆಂಗಳೂರು ನಗರ ಜಿಲ್ಲೆಯ ಉಪ ಅರಣ್ಯಸಂರಕ್ಷಣಾಧಿಕಾರಿ ಕಚೇರಿ, ಅರಣ್ಯ ಭವನ ಸಂಕೀರ್ಣ, ಮಲ್ಲೇಶ್ವರ 18ನೇ ಅಡ್ಡರಸ್ತೆ. ಬೆಂಗಳೂರು-560003. ಸಂಪರ್ಕ: 080-23343464 ಇಮೇಲ್‌ ವಿಳಾಸ: dcfurban82@yahoo.co.in

ಇದನ್ನೂ ಓದಿ: ಧಾರವಾಡ ಮಂದಿ ಸರ್ಕಾರವನ್ನೇ ಬದಿಗೊತ್ತಿ, ಸ್ವಂತ ಖರ್ಚಿಂದಲೇ ಕೆರೆ ಅಭಿವೃದ್ಧಿ ಮಾಡಿಬಿಟ್ರು! 

Lake Conservation: ಕೆರೆ ಬಳಕೆದಾರರ ಸಂಘಕ್ಕೆ ಉತ್ತೇಜನ ನೀಡಿದ್ದು ಈ ಮೂರು ಪರಿಕಲ್ಪನೆಗಳು: ಮದನ ಗೋಪಾಲ್